ನೀನಿಲ್ಲದ ಒಂದೊಂದು ದಿನವೂ ಆಗಿಹುದು ಯುಗವು…ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಲೇಖನಿಯಲ್ಲಿ ಸುಂದರ ಗಜಲ್ ನ್ನು ತಪ್ಪದೆ ಮುಂದೆ ಓದಿ…
ನೀನಿಲ್ಲದ ಬಾಳಲ್ಲಿ ಮನಸೆಲ್ಲವೂ ನೋವಿನ ತಾಣ
ಹೃದಯ ಗಾಯ ಮಾಸುವ ಇಲಾಜು ತರಲಿ ಎಲ್ಲಿಂದ
ಅಳುವ ಮನಸಿಗೆ ಸಾಂತ್ವನ ಇಲ್ಲದ ಬದುಕೀಗ ಒಣ
ಬೆಂಗಾಡು ಬಾಳು ಚಿಗುರಿಸಲು ಜೀವಜಲ ತರಲಿ ಎಲ್ಲಿಂದ
ಜೀವನದ ಪ್ರತಿಕ್ಷಣವೂ ಹಾಡಿದೆ ಶೋಕ ಗೀತೆಯನು
ಮರೆಯಲದನು ನಿನ್ನ ಮಧುರ ಗೀತೆಯ ತರಲಿ ಎಲ್ಲಿಂದ
ನೀನಿಲ್ಲದ ಒಂದೊಂದು ದಿನವೂ ಆಗಿಹುದು ಯುಗವು
ದಿನ ದೂಡಲು ನಿನ್ನ ಜೊತೆಯ ಕ್ಷಣಗಳನು ತರಲಿ ಎಲ್ಲಿಂದ
ನಿನ್ನ ಮಾತುಗಳನ ಕೇಳದೆ ಬಾಡಿಹುದು ‘ಮಲ್ಲಿಗೆ’ ಮನ
ಚೇತನಗೊಳಿಸಲು ಜೀವಾಮೃತವನು ತರಲಿ ಎಲ್ಲಿಂದ.
- ಮಲ್ಲಿಕಾರ್ಜುನ ಶೆಲ್ಲಿಕೇರಿ
