ಒಂದು ರಾತ್ರಿ ಇಬ್ರಾಹಿಂ ಒಂದು ಕನಸು ಕಂಡರು. ಇಬ್ರಾಹಿಂ ನೀವು ನನ್ನ ಮೇಲೆ ವಿಶ್ವಾಸ ಇಟ್ಟಿರುವಿರಾದರೆ ನನ್ನ ಆಜ್ಞೆಯಂತೆ ಈ ಮಗುವನ್ನೂ ಮತ್ತು ಅದರ ತಾಯಿಯನ್ನು ಯಾರೂ ಹಾಯದ ದೂರ ಮರುಳುಗಾಡಿನಲ್ಲಿ ಬಿಟ್ಟು ಬರಬೇಕು” ಎಂದು ಆ ದೇವವಾಣಿ ಉಲಿಯಿತು ಮುಂದೇನಾಯಿತು ತಪ್ಪದೆ ಮುಂದೆ ಓದಿ….
ಜಗತ್ತಿನಾದ್ಯಂತ ಮುಸಲ್ಮಾನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುವ ಹಬ್ಬ ಬಕ್ರೀದ ಹಬ್ಬ. ಇದನ್ನು ತ್ಯಾಗ ಬಲಿದಾನದ ಹಬ್ಬ ಎಂದು ಕರೆಯುಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಮನಕಲುಕುವ ಇತಿಹಾಸವಿದೆ. ಈ ಲೇಖನದಲ್ಲಿ ಬಕ್ರೀದ್ ಹಬ್ಬ ಆಚರಣೆಯಲ್ಲಿ ಬಂದ ಇತಿಹಾಸವನ್ನು ವಿವರಿಸಲಿಚ್ಛಿಸುತ್ತೇನೆ.
ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ ಈ ಮೂರೂ ಧರ್ಮಗಳಿಗೆ ಮೂಲ ಪುರುಷ ಪ್ರವಾದಿ ಇಬ್ರಾಹಿಂ ಆಗಿದ್ದಾರೆ. ಅಂತೆಯೇ ಈ ಧರ್ಮಗಳನ್ನು ಅಬ್ರಾಹ್ಮಿಕ್ ಧರ್ಮಗಳೆಂದು ಕರೆಯುತ್ತಾರೆ. ಪ್ರವಾದಿ ಇಬ್ರಾಹಿಂ ಮತ್ತು ಅವರ ಪತ್ನಿ ಸಾರಾ ಈಜಿಪ್ತನಲ್ಲಿ ವಾಸವಾಗಿದ್ದರು. ಅವರಿಗೆ ಹಲವು ವರ್ಷಗಳ ವರೆಗೂ ಮಕ್ಕಳಾಗಿರಲಿಲ್ಲ. ಮಾತೆ ಸಾರಾರವರು ತನ್ನ ಗಂಡನ ವಂಶ ಮುಂದುವರೆಯಲೆಂದು ಹಾಜಿರಾ ಎಂಬ ಕನ್ಯೆಯೊಂದಿಗೆ ಇಬ್ರಾಹಿಮರ ಮದುವೆ ಮಾಡಿಸಿದರು. ಆಗಲೂ ಇಬ್ರಾಹಿಮರಿಗೆ ಸಂತಾನ ಭಾಗ್ಯ ವುಂಟಾಗಲಿಲ್ಲ. ತನಗೊಂದು ವಂಶೋದ್ಧಾರಕ ಮಗನನ್ನು ದಯಪಾಲಿಸುವಂತೆ ಇಬ್ರಾಹಿಮರು ಅಲ್ಲಾಹನಲ್ಲಿ ನಿರಂತರ ಮೊರೆಯಿಡುತ್ತಿದ್ದರು.
ಹೀಗೆ ಅವರಿಗೆ ಎಂಬತ್ತು ವರ್ಷ ವಯಸ್ಸಾಯಿತು. ಒಂದು ದಿನ ಹಗಲಿನಲ್ಲಿ ಇಬ್ಬರು ದೇವಚರರು ಇಬ್ರಾಹಿಮರ ಬಳಿ ಬಂದು ” ಪ್ರವಾದಿಯವರೇ ನಿಮಗೊಂದು ಶುಭವಾರ್ತೆಯಿದೆ. ನಿಮ್ಮ ದೇವನು ನಿಮ್ಮ ಪ್ರಾರ್ಥನೆಯನ್ನು ಆಲಿಸಿದ್ದಾನೆ. ನಿಮಗೊಂದು ಗಂಡು ಮಗು ಜನಿಸಲಿದೆ. ಇನ್ನು ಕಳವಳ ಬೇಡ. ಸಂತಸ ಪಡಿರಿ ” ಎಂಬ ಸುವಾರ್ತೆಯನಿತ್ತರು. ಇಬ್ರಾಹಿಮರು ಅವರನ್ನು ಉದ್ದೇಶಿಸಿ “ನೀವು ನನ್ನನ್ನು ಅಪಹಾಸ್ಯ ಮಾಡುತ್ತಿಲ್ಲವಲ್ಲವೇ! ನನಗೀಗ ಎಂಬತ್ತರ ವಯಸ್ಸು. ನನ್ನ ಮಡದಿಗೂ ಮುಪ್ಪು. ಈ ವಯಸ್ಸಿನಲ್ಲಿ ಮಗುವೇ”! ಎಂದು ಕೇಳಿದರು. ದೇವತೆಗಳು “ಇದು ನಿಮ್ಮ ಪ್ರಭುವಿನ ಇಚ್ಛೆ. ಹಾಗೆಯೇ ಆಗುವುದು” ಎನ್ನುತ್ತ ಕಾಣೆಯಾದರು. ಮರು ವರ್ಷವೇ ಇಬ್ರಾಹಿಂ ಮತ್ತು ಹಾಜರಾ ಒಂದು ಗಂಡು ಸಂತಾನ ಪಡೆದರು. ಮಗುವಿಗೆ ಇಸ್ಮಾಯಿಲ್ ಎಂದು ನಾಮಕರಣ ಮಾಡಲಾಯಿತು. ಪ್ರವಾದಿ ಇಬ್ರಾಹಿಂ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಸಲುಗೆಯಿಂದ ಬದುಕತೊಡಗಿದರು.
ಒಂದು ರಾತ್ರಿ ಇಬ್ರಾಹಿಂ ಒಂದು ಕನಸು ಕಂಡರು. ಅವರ ಪ್ರಭು ಅವರೊಂದಿಗೆ ಮಾತಾಡಿದನು. “ಇಬ್ರಾಹಿಂ ನೀವು ನನ್ನ ಮೇಲೆ ವಿಶ್ವಾಸ ಇಟ್ಟಿರುವಿರಾದರೆ ನನ್ನ ಆಜ್ಞೆಯಂತೆ ಈ ಮಗುವನ್ನೂ ಮತ್ತು ಅದರ ತಾಯಿಯನ್ನು ಯಾರೂ ಹಾಯದ ದೂರ ಮರುಳುಗಾಡಿನಲ್ಲಿ ಬಿಟ್ಟು ಬರಬೇಕು” ಎಂದು ಆ ದೇವವಾಣಿ ಉಲಿಯಿತು. ಇಬ್ರಾಹಿಂ ಬೆಳಿಗ್ಗೆ ತನ್ನ ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಹೋಗಿ ಅರೇಬಿಯಾದ ಮರಳುಗಾಡಿನಲ್ಲಿ ಬಿಟ್ಟು ತಾವು ಹೊರಡಲು ಅನುವಾದರು. ಮಾತೆ ಹಾಜಿರಾ ಸುತ್ತಮುತ್ತ ಕಣ್ಣು ಹಾಯಿಸಿದರು. ಒಂದು ನರಪಿಳ್ಳೆಯೂ ಇಲ್ಲ. ದೃಷ್ಟಿ ಹೋದಷ್ಟು ದೂರ ಬರೀ ಮರಳು, ನೀರವ. ಅವರು ದುಗುಡದಿಂದ ಗಂಡನೆದುರು ನಿಂತು ಈ ಏಕಾಂತದಲ್ಲಿ ನಮ್ಮಿಬ್ಬರನ್ನೇ ಬಿಟ್ಟು ತಾವು ಎಲ್ಲಿಗೆ ಹೋಗುತ್ತಿರುವಿರಿ? ಎಂದು ಪ್ರಶ್ನಿಸಿದರು. ಇಬ್ರಾಹಿಮರು ಉತ್ತರಿಸಲಿಲ್ಲ. ಭಾರವಾದ ಮನಸ್ಸಿನೊಂದಿಗೆ ಸುಮ್ಮನೆ ನಿಂತುಕೊಂಡಿದ್ದರು.
ಹಾಜಿರಾ ತುಂಬಾ ಸಹನಾಮಯಿಯೂ ದೂರದೃಷ್ಟಿ ಹೊಂದಿದ್ದ ಮಹಿಳೆಯೂ ಆಗಿದ್ದರು. ಇದೆಲ್ಲ ಅಲ್ಲಾಹನ ಇಚ್ಛೆಯಾಗಿದ್ದರೆ ನಾನು ತಡೆಯಲಾರೆ ಎನುತ್ತ ದಾರಿಬಿಟ್ಟು ಪಕ್ಕ ಸರಿದು ನಿಂತುಕೊಂಡರು. ಇಬ್ರಾಹಿಂ ತನ್ನ ಮಗುವನ್ನೂ ಪ್ರೀತಿಯ ಪತ್ನಿ ಹಾಜಿರಾರವರನ್ನು ಒಮ್ಮೆ ದಿಟ್ಟಿಸಿ ಅಲ್ಲಿಂದ ಹೊರಟುಹೋದರು.
ಸ್ವಲ್ಪ ಮುಂದೆ ಬಂದು ಅವರು ದೇವನಿಗೆ ನಮಿಸಿ “ಯಾ ಅಲ್ಲಾಹ್, ನಿನ್ನನ್ನು ನಂಬಿ ಆ ಅಬಲೆ ಮಡದಿಯನ್ನೂ ಮತ್ತು ಎಳೆಗೂಸನ್ನೂ ಬಿಟ್ಟು ಹೋಗುತ್ತಿದ್ದೇನೆ. ಅವರನ್ನು ನಿನ್ನ ಕೃಪೆಯಲ್ಲಿರಿಸು. ಈ ಪ್ರದೇಶವನ್ನು ಹಸಿರು ತೋಟಗಳಿಂದ ಸಮೃದ್ಧಗೊಳಿಸು. ನನ್ನ ಸಂತಾನವನ್ನು ಅನುಗ್ರಹಿಸು. ನಿಸ್ಸಂದೇಹವಾಗಿ ನೀನು ದಯಾಮಯಿಯೂ ಕರುಣಾಮಯಿಯೂ ಆಗಿರುವೆ” ಹೀಗೆಂದು ಪ್ರಾರ್ಥಿಸಿ ತಮ್ಮ ದಾರಿನೇರಕ್ಕೆ ನಡೆದರು.
ಇತ್ತ ಮಗು ಇಸ್ಮಾಯಿಲ್ ಬಾಯಾರಿ ಅಳತೊಡಗಿತು. ಹಾಜಿರಾ ಮಗುವಿಗೆ ನಿರುಣಿಸಲು ಸುತ್ತಮುತ್ತ ನೀರಿಗಾಗಿ ಓಡಾಡತೊಡಗಿದರು. ಅವರು ಒಮ್ಮೆ ಸಫಾ ದಿಬ್ಬದ ಮೇಲೆಯೂ ಮತ್ತೊಮ್ಮೆ ಮರ್ವಾ ದಿಬ್ಬದ ಮೇಲೆಯೂ ನೀರಿಗಾಗಿ ಹುಡುಕಾಡಿ ಓಡೋಡಿ ಕಂಗೆಟ್ಟರು. ಕೊನೆಗೂ ನೀರು ಕಾಣದೆ ಹತಾಶೆಯಿಂದ ಮಗುವಿನ ಬಳಿ ಮರಳಿದರು. ಆಗಲೇ ಪವಾಡವೊಂದು ನಡೆದಿತ್ತು. ಮಗು ಇಸ್ಮಾಯಿಲ್ ನೆಲಕ್ಕೆ ಕಾಲು ಬಡಿಯುತ್ತ ಅಳುತ್ತಿತ್ತು. ಅದೇ ಸ್ಥಳದಿಂದ ನೀರು ಚಿಮ್ಮಿತು. ಮಾತೆ ಹಾಜಿರಾ ದೇವನಿಗೆ ಧನ್ಯತೆ ಅರ್ಪಿಸಿ ಮಗುವಿಗೆ ನೀರು ಕುಡಿಸಿ ತಾನೂ ಕುಡಿದು ದಣಿವಾರಿಸಿಕೊಂಡರು. (ಆ ನೀರು ಉಕ್ಕಿದ ಸ್ಥಳವೇ ಝಮ್ ಝಮ್ ಕೊಳ. ಅದು ಈಗಲೂ ಇದೆ. ಹಜ್ ಯಾತ್ರಿಕರು ಅದರ ನೀರನ್ನು ಪವಿತ್ರ ಜಲವೆಂದು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮಾತೆ ಹಾಜಿರಾ ಓಡಾಡಿದ ಆ ದಿಬ್ಬಗಳ ಏಳು ಸುತ್ತು ಓಡಾಡುವುದು ಹಜ್ ಯಾತ್ರೆಯ ಪ್ರಮುಖ ಅಂಗ. ಪ್ರತಿ ಯಾತ್ರಾರ್ಥಿಯು ಅದನ್ನು ನಿರ್ವಹಿಸಲೇಬೇಕು) ಈಕಡೆ ಮಾತೆ ಸಾರಾ ಅವರ ಪವಿತ್ರ ದೇಹದಿಂದಲೂ ಇಬ್ರಾಹಿಂ ಒಂದು ಗಂಡು ಸಂತಾನವನ್ನು ಪಡೆದರು. ಈ ಮಗುವಿಗೆ ಇಸಾಕ್ ಎಂದು ನಾಮಕರಣ ಮಾಡಿಲಾಯಿತು. ಹೀಗೆ ದಿನಗಳು ಉರುಳಿದವು. ಹದಿಮೂರು ವರ್ಷಗಳ ತರುವಾಯ, ಒಂದು ದಿನ ಇಬ್ರಾಹಿಮರು ದೇವನ ಆಜ್ಞೆಯಂತೆ ಮತ್ತೇ ತನ್ನ ಮಡದಿ ಮತ್ತು ಮಗುವನ್ನು ಕಾಣಲು ಬಂದರು. ಆ ಪ್ರದೇಶ ಈಗ ಹಸಿರಿನಿಂದ ಸಮೃದ್ಧವಾಗಿತ್ತು. ಖರ್ಜೂರದ ಮರಗಳು ಹಣ್ಣುಗಳಿಂದ ನಳನಳಿಸುತ್ತಿದ್ದವು. ಇಬ್ರಾಹಿಂ ಅದನ್ನೆಲ್ಲಾ ಕಂಡು ಸಂತಸದಿಂದ ದೇವನಿಗೆ ಕೃತಜ್ಞತೆ ಅರ್ಪಿಸಿದರು. ತನ್ನ ಮಗು ಮತ್ತು ಪತ್ನಿಯನ್ನು ಕಂಡು ಪ್ರಫುಲ್ಲರಾದರು. ಅಲ್ಲೇ ಕೆಲವು ದಿನ ಉಳಿದುಕೊಂಡರು.
ಒಂದು ರಾತ್ರಿ ಇಬ್ರಾಹಿಮರು ಕನಸು ಕಂಡರು. ಆ ಕನಸಿನಲ್ಲಿ ಅವರು ತನ್ನ ಮಗನನ್ನು ದೇವನಿಗೆ ಬಲಿ ಅರ್ಪಿಸುತ್ತಿದ್ದಾರೆ. ಬೆಳಕು ಹರಿದಾಗ ಅವರು ವಿಹ್ವಲಿತರಾದರು. ಮನಶ್ಶಾಂತಿಗಾಗಿ ನೂರು ಒಂಟೆಗಳನ್ನು ದೇವನಿಗೆ ಬಲಿ ಅರ್ಪಿಸಿದರು. ಎರಡನೇ ರಾತ್ರಿ ಮತ್ತದೇ ಕನಸು ಕಂಡರು. ಬೆಳಿಗ್ಗೆದ್ದು ಇನ್ನೂರು ಒಂಟೆಗಳ ಬಲಿ ಅರ್ಪಿಸಿದರು. ಮೂರನೇ ರಾತ್ರಿ ಮತ್ತದೇ ಕನಸು. ಅಂದು ದೇವವಾಣಿಯು “ಇಬ್ರಾಹಿಂ ನಿಮಗೆ ಅತ್ಯಂತ ಪ್ರೀಯವಾದ ವಸ್ತುವನ್ನು ನನಗೆ ಬಲಿ ಅರ್ಪಿಸಿರಿ” ಎಂದು ಉಲಿಯಿತು.
ಇಬ್ರಾಹಿಂ ಗಾಬರಿಗೊಂಡು ಎದ್ದರು. ದೇವನು ತನ್ನ ಮಗನ ಬಲಿ ಬೇಡುತ್ತಿದ್ದಾನೆ ಎಂಬುದು ಹಗಲಿನ ಬೆಳಕಿನಂತೆ ಅವರಿಗೆ ಸ್ಪಷ್ಟವಾಗಿತ್ತು. ಬದುಕಿನುದ್ದ ದೇವನಿಗೆ ಬೇಡಿಕೊಂಡು ಪಡೆದ ಮುಪ್ಪಿನ ಆಸರೆಗೋಲು ಆ ಮಗು. ಅದನ್ನು ಅರ್ಪಿಸುವುದೇ ಎಂದು ಚಡಪಡಿಸಿದರು. ಆಗಲಿ ಎಲ್ಲ ಅವನ ಇಚ್ಛೆ. ಲೋಕದ ಅನುಗ್ರಹಗಳೆಲ್ಲ ಅವನ ಅಮಾನತ್ತು, ಅವನಿಗೇ ಸಲ್ಲಬೇಕಾದ ಅಮಾನತ್ತು. ನನ್ನದೇನಿದೆ ಎಂದುಕೊಂಡು ತಮ್ಮ ಮಡದಿ ಹಾಜಿರಾರನ್ನು ಕರೆದು “ಮಿತ್ರನ ಮನೆಗೆ ಔತಣಕ್ಕೆ ಹೋಗುತ್ತಿದ್ದೇನೆ, ನಿನ್ನ ಮಗನನ್ನು ಸಿದ್ದಗೊಳಿಸು” ಎಂದರು. ಹಾಜಿರಾ ಮಗುವಿಗೆ ಒಳ್ಳೆ ಬಟ್ಟೆ ತೊಡಿಸಿ ತಲೆಗೆ ಎಣ್ಣೆ ಸವರಿ ಕೂದಲು ಬಾಚಿ ಅಲಂಕರಿಸಿದರು.
ತಂದೆ ಮಗ ಹೊರಡಲು ಅನುವಾದರು. ಇದನ್ನು ಕಂಡು ಶೈತಾನ್ ತಳಮಳಗೊಂಡನು. ಅವನು ಇಬ್ರಾಹಿಮರ ಎದುರು ಪ್ರತ್ಯಕ್ಷನಾಗಿ ನೀವು ಇಂತಹ ಕೆಲಸ ಮಾಡುವುದೇ? ಕನಸು ನೆರವೇರಿಸಲು ಮಗುವಿನ ಬಲಿಯೇ? ನಿಮ್ಮ ಇರಾದೆಯನ್ನು ಬದಲಿಸಿಬಿಡಿ ಎಂದನು. ಇಬ್ರಾಹಿಂ ನೆಲದ ಮೇಲೆ ಬಿದ್ದ ಕಲ್ಲುಗಳನ್ನು ಎತ್ತಿ ಅವನತ್ತ ಎಸೆದು ತೊಲಗಾಚೆ ದುಷ್ಟ ಶೈತಾನ್. ನನ್ನ ಮಗ ಆ ದೇವನ ಆಸ್ತಿ. ಅವನಿಗೇ ಅರ್ಪಿಸುತ್ತಿದ್ದೇನೆ” ಎಂದು ಓಡಿಸಿದರು. ಅವನು ಇಸ್ಮಾಯಿಲ್ ಬಳಿ ಬಂದು ನಿನಗೆ ಬಲಿ ಅರ್ಪಿಸುವಂತೆ ದೇವನು ಹೇಳಿದ್ದಾನಂತೆ. ಎಂತಹ ನಿರ್ದಯಿ ದೇವನು ಆತ. ಅಯ್ಯೋ ಪಾಪ ನಿನ್ನ ಪಾಡೇನು ಎನ್ನುತ್ತ ಚಡಪಡಿಸಿದನು. ಇಸ್ಮಾಯಿಲ್ ಶೈತಾನನಿಗೆ ಶಪಿಸುತ್ತ, ದುಷ್ಟ ಶಕ್ತಿಯೇ ತೊಲಗಾಚೆ. ಈ ಇಸ್ಮಾಯಿಲನಿಗೆ ಒಂದು ಜೀವವಿದೆ. ನನ್ನ ರೋಮರೋಮದಲ್ಲಿ ಜೀವ ಇದ್ದಿದ್ದರೆ ಆ ಜೀವಗಳನ್ನೆಲ್ಲ ದೇವನಿಗೆ ಅರ್ಪಿಸಿ ಧನ್ಯನಾಗುತ್ತಿದ್ದೆ ಎಂದು ಒಂದೆರಡು ಕಲ್ಲು ಎತ್ತಿಕೊಂಡು ಶೈತಾನನತ್ತ ಎಸೆದರು. ಶೈತಾನ್ ಈಗ ಮಾತೆ ಹಾಜಿರಾ ರವರ ಬಳಿಬಂದು ಅಯ್ಯೋ ನಿನ್ನ ಗಂಡ ನಿನ್ನ ಮಗನನ್ನು ಅಲ್ಲಾಹನಿಗೆ ಬಲಿ ಅರ್ಪಿಸಲು ಕರೆದುಕೊಂಡು ಹೋಗುತ್ತಿದ್ದಾನೆ. ಬೇಗನೆ ತಡೆ, ಇಲ್ಲವಾದರೆ ಸಮಯ ಮಿಂಚಿ ಹೋದೀತು ಎನ್ನತ್ತ ಅವಸರಿಸಿದನು. ಮಾತೆ ಹಾಜಿರಾ ಅಯ್ಯೋ ದುರಾತ್ಮ ಶೈತಾನ್, ನೀನು ಹೇಳುತ್ತಿರುವುದು ಸತ್ಯವೇ ಆಗಿದ್ದರೆ ನನ್ನ ಉತ್ತರ ಕೇಳು, ನಾನು ಒಂದೇ ಇಸ್ಮಾಯಿಲನನ್ನು ಪಡೆದಿರುವೆ, ನೂರು ಇಸ್ಮಾಯಿಲರಿದ್ದರೂ ಅವರನ್ನೆಲ್ಲ ನಗುನಗುತ್ತಾ ದೇವನಿಗೆ ಅರ್ಪಿಸುತ್ತಿದ್ದೆ, ತೊಲಗಾಚೆ ಎನ್ನುತ್ತಾ ಕೆಲವು ಕಲ್ಲುಗಳನ್ನೆತ್ತಿಕೊಂಡು ಶೈತಾನನತ್ತ ಎಸೆದರು. (ಹೀಗೆ ಅವು ಒಟ್ಟು ಏಳು ಕಲ್ಲುಗಳಾದವು. ಆ ಕರ್ಮದ ಪ್ರತೀಕವಾಗಿ ಹಜ್ ಯಾತ್ರೆ ಮಾಡುವ ಪ್ರತಿ ಯಾತ್ರಾರ್ಥಿಯೂ ಶೈತಾನನಿಗೆ ಏಳು ಕಲ್ಲು ಹೊಡೆಯುವುದು ಕಡ್ಡಾಯಗೊಳಿಸಿದೆ, ಆ ಸ್ಥಳ ಕಾಬಾ ಭವನದ ಅಣತಿ ದೂರದಲ್ಲಿದೆ)
ಈಗ ತಾಯಿಗೂ ಮಗುವಿಗೂ ಸತ್ಯ ಏನೆಂಬುದು ಸ್ಪಷ್ಟವಾಗಿತ್ತು. ಆದ್ರೆ ಅವರಾರು ಏನನ್ನೂ ಮಾತಾಡಲಿಲ್ಲ. ದುಃಖಿಸಲೂ ಇಲ್ಲ. ಪ್ರವಾದಿ ಇಬ್ರಾಹಿಂ ಒಂದು ಹಗ್ಗವನ್ನು ಬೇಡಿ ಪಡೆದುಕೊಂಡು ಮಗನ ಜೊತೆ ಮೀನಾ ಕಣಿವೆಗೆ ತಲುಪಿದರು. ಅಲ್ಲಿ ಮಗನನ್ನು ಉದ್ದೇಶಿಸಿ ಮಗುವೇ ನಿನ್ನ ಬಲಿ ಅರ್ಪಿಸಲು ನಿನ್ನನ್ನು ಇಲ್ಲಿಗೆ ಕರೆತಂದಿದ್ದೇನೆ. ಅಲ್ಲಾಹನ ಆಜ್ಞೆಯಾಗಿದೆ. ನಿನ್ನ ಅಭ್ಯಂತರ ಏನಾದರೂ ಇದೆಯೇ? ಎಂದು ಕೇಳಿದರು. ಮುಂದೆ ಪ್ರವಾದಿಯಾಗಲಿರುವ ಆ ಹುಡುಗ ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವಂತೆ “ಅಪ್ಪಾಜಿ ನಿಮ್ಮ ದೇವನು ನಿಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸಿರಿ. ದೇವನು ಇಚ್ಛೆಸಿದರೆ ನನ್ನನ್ನು ನೀವು ಸಹನಶೀಲರಲ್ಲಿ ಕಾಣುವಿರಿ. ನಿಮ್ಮ ಕಣ್ಣಿಗೆ ಬಟ್ಟೆ ಸುತ್ತಿಕೊಳ್ಳಿರಿ. ನನ್ನ ಕತ್ತು ಕೊಯ್ಯುವಾಗ ನನ್ನ ಮುಗ್ಧ ಮುಖ ನಿಮ್ಮನ್ನು ತಡೆಯದಿರಲಿ” ಎಂದು ನಿರಾತಂಕದಿಂದ ನುಡಿದನು.
ಪ್ರವಾದಿ ಮಗನನ್ನು ಚುಂಬಿಸಿ ಆಲಂಗಿಸಿಕೊಂಡರು. ನಂತರ ಒಂದು ಕಲ್ಲಿನ ಮೇಲೆ ಅವನನ್ನು ಕಟ್ಟಿ ಮಲಗಿಸಿದರು. ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಾಕುವಿನಿಂದ ಹುಡುಗನ ನಾಜೂಕು ಕತ್ತು ಕೊಯ್ಯಲು ಮುಂದಾದರು. ಚಾಕು ನಡೆಯಲೊಲ್ಲದು. ಅವರು ಅಲ್ಲಾಹನಿಗೆ ಮೊರೆಯಿಟ್ಟರು. ಪ್ರಭು ನಿನ್ನ ಇಚ್ಛೆ ನೆರವೇರಿಸಲು ನನ್ನ ಮಗನನ್ನು ನಿನಗೆ ಅರ್ಪಿಸುತ್ತಿದ್ದೇನೆ. ನಮ್ಮಿಂದಾದ ತಪ್ಪುಗಳನ್ನು ಮನ್ನಿಸು ಮತ್ತು ಇವನನ್ನು ಸ್ವೀಕರಿಸು ಎಂದು ಪ್ರಾರ್ಥಿಸಿದರು. ಮತ್ತೊಮ್ಮೆ ಹುಡುಗನ ಕತ್ತು ಬಿಗಿ ಹಿಡಿದು ಕೊಯ್ದರು. ಈ ಸಲ ಕತ್ತು ಕೊಯ್ಯಲ್ಪಟ್ಟಿತು. ಇಬ್ರಾಹಿಂ ಸಂತಸದಿಂದ ಕಣ್ಣಿನ ಬಟ್ಟೆ ಸರಿಸಿ ನೋಡಿದರು. ಅಲ್ಲಿ ಹುಡುಗ ಇರಲಿಲ್ಲ. ಅವನ ಸ್ಥಳದಲ್ಲಿ ಒಂದು ಟಗರು ಬಲಿಯಾಗಿತ್ತು. ಹುಡುಗ ಪಕ್ಕದಲ್ಲಿ ಕುಳಿತುಕೊಂಡು ಮುಗುಳ್ನಗೆ ಬೀರುತ್ತಿದ್ದ. (ಮೀನಾದ ಕಣಿವೆಯಲ್ಲಿ ಹಜ್ ಯಾತ್ರಿಕರು ಸಮ್ಮತ ಜಾನುವಾರುಗಳ ಬಲಿ ಕೊಡುವುದೂ ಹಜ್ ನ ಮತ್ತೊಂದು ಪ್ರಮುಖ ಅಂಗವಾಗಿದೆ)
ಪ್ರವಾದಿ ತಮ್ಮ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಗ ಜಯಘೋಷಗಳು ಮೊಳಗಿದವು. ದೇವವಾಣಿ ಉಲಿಯಿತು ” ಇಬ್ರಾಹಿಂ ನೀವು ನನ್ನ ಆಪ್ತ ಪ್ರವಾದಿ ಎಂಬುದನ್ನು ಸಾಬೀತು ಪಡಿಸಿದ್ದೀರಿ. ನಿಮ್ಮ ಮಗುವಿನ ಬಲಿ ನಾನು ಬಯಸಿರಲಿಲ್ಲ. ಇದು ನಿಮ್ಮ ಧರ್ಮನಿಷ್ಠೆಯ ಪರೀಕ್ಷೆಯಾಗಿತ್ತು . ನಿಮ್ಮ ವಿಧೇಯತೆ ನಾವು ಮೆಚ್ಚಿಕೊಂಡಿದ್ದೇವೆ. ಇನ್ನು ಈ ಲೋಕ ಇರುವವರೆಗೆ ನಿಮ್ಮ ಕರ್ಮ ಮುಂದುವರೆಯುತ್ತದೆ.
ಅಲ್ಲಾಹನ ಮೇಲೆ ವಿಶ್ವಾಸ ಇಟ್ಟವರು ವರ್ಷಕ್ಕೊಮ್ಮೆ ಈ ಮಾಹೆಯಲ್ಲಿ ಹಜ್ ಯಾತ್ರೆ ಮಾಡಲಿ. ಬಲಿ ಅರ್ಪಿಸಲಿ. ನಿಮ್ಮ ದೇವನಿಗೆ ನೀವು ಅರ್ಪಿಸುವ ರಕ್ತವೂ ಮುಟ್ಟುವುದಿಲ್ಲ, ಮಾಂಸವೂ ಮುಟ್ಟುವುದಿಲ್ಲ. ಆದರೆ ನಿಮ್ಮ ಧರ್ಮನಿಷ್ಠೆ ಮುಟ್ಟಿತ್ತದೆ. ಇನ್ನು ಸಾಮರ್ಥ್ಯ ವಿರುವ ಪ್ರತಿಯೊಬ್ಬನು ಯಾವುದೇ ದೋಷವಿಲ್ಲದ, ಗಟ್ಟಿಮುಟ್ಟಾದ ಸಮ್ಮತ ಜಾನುವಾರನ್ನು ನನ್ನ ಮಾರ್ಗದಲ್ಲಿ ಬಲಿ ಅರ್ಪಿಸಲಿ. ಇದರಿಂದ ನಿಮ್ಮ ಹೃದಯಗಳು ನಿಷ್ಕಲ್ಮಶಗೊಳ್ಳುತ್ತವೆ. ಜಿಪುಣತನ ದೂರವಾಗಿ ಉದಾರತೆ ಗಟ್ಟಿಗೊಳ್ಳುತ್ತದೆ, ದೇವನ ಇಚ್ಛೆಯ ಎದುರು ಶರಣಾಗುವ ಉತ್ಸಾಹ ಹೆಚ್ಚುತ್ತದೆ. ತ್ಯಾಗ, ವಿಧೇಯತೆ, ನಂಬಿಕೆ, ನಿಸ್ವಾರ್ಥತೆ ಮತ್ತು ಔದಾರ್ಯತೆ ಬೆಳೆಯುತ್ತದೆ ” ಎಂದಿತು ಆ ವಾಣಿ.
ಇಬ್ರಾಹಿಂ ದೇವನಿಗೆ ಧನ್ಯತೆ ಅರ್ಪಿಸಿ ಮಗನನ್ನು ಕರೆದುಕೊಂಡು ಮನೆಗೆ ಮರಳಿದರು. ಅಂದಿನಿಂದ ಮಾತೆ ಹಾಜಿರಾರವರ ತ್ಯಾಗ ಮತ್ತು ಇಬ್ರಾಹಿಮರ ಬಲಿದಾನದ ಸವಿನೆನಪಿಗಾಗಿ ಬಕ್ರೀದ ಹಬ್ಬ ಆಚರಿಸುವ ಪರಂಪರೆ ಮುಸ್ಲಿಮರಲ್ಲಿ ಸಾಗಿ ಬಂದಿತು.
ಆಕರ :
1. ಪವಿತ್ರ ಕುರಾನ್
2. ತಫ್ಸೀರ್ ಇಬ್ನ ಕಸೀರ್
- ಇಮ್ತಿಯಾಜ್ ಖಾನ್
