‘ಓ ಬಾಲ್ಯವೇ ಮತ್ತೆ ಬಾರೆಯಾ’ ಕವನ – ಶಿವದೇವಿ ಅವನೀಶಚಂದ್ರ

ಬಯಲೇ ಇಲ್ಲದ ಶಾಲೆಯಲಿ ಎಷ್ಟು ಕಲಿತರೆ ಏನು… ಬಂದೀಖಾನೆ ಅರಮನೆಯೇ ಆದರೂ ಎಂದಾದರೂ ರುಚಿಸುವುದೇನು?…ನಿವೃತ್ತ ಶಿಕ್ಷಕರು ಹಾಗೂ ಲೇಖಕರು ಆದ ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಂದಿತ್ತು ಬಾಲ್ಯದಲಿ
ಬಯಸಿದ್ದು ಆಡುವ ಆಟ
ತಪ್ಪು ಮಾಡಿದರೂ
ಕ್ಷಮೆಗೆ ಅರ್ಹ

ಮುಗ್ಧರೆಂಬುವ ರಕ್ಷೆ
ಸಿಟ್ಟಿಲ್ಲದಾ ಶಿಕ್ಷೆ
ಸಂತೋಷವೇ ದೀಕ್ಷೆ
ಬಿಗುವಿಲ್ಲದಾ ಕಕ್ಷೆ

ಆಡಿದೆವು ಮನದಣಿಯೆ ಮಕ್ಕಳಾಟ,ಮದುವೆಯಾಟ
ನಕ್ಕು ಹಾರೈಸಿದರು ಹಿರಿಯರು
ತಪ್ಪೆಂದು ಗಣಿಸದೆ

ಇಂದಿನಾಟಕೆ ಅದನು ಪರಿಗಣಿಸಲುಂಟೆ
ಹಕ್ಕಿಯಂತೆ ನಭದಲಿ
ವಿಹರಿಸಲುಂಟೆ

ಸೋತಾಗ ಬಿದ್ದೆದ್ದು
ಗುದ್ದಾಡಿ ಎಗರಾಡಿ
ಮತ್ತೆ ಬೆಸೆಯುತಿರೆ
ಸ್ನೇಹತಂತು

ಬಯಲಾಲಯದಿ
ಕಲಿತ ಪಾಠವೇ ಹಿರಿದು
ತಾರತಮ್ಯದ ಸೋಂಕು
ಸುಳಿಯದಂತೆ

ಒಂದಾಗಿ,ಪಂಗಡದಲಿ
ಗೆಲ್ಲುವಾಟದ ತಂತ್ರ
ಗುರಿಗೆ ಲಗ್ಗೆಯಿಡುವ
ಏಕಾಗ್ರತೆಯ ಮಂತ್ರ

ಹಲವು ಪಟ್ಟುಗಳಿಲ್ಲಿ
ಕೆಲವು ಮಟ್ಟುಗಳು ಇಲ್ಲಿ
ತಪ್ಪಿಸಿಕೊಳ್ಳುವ ಜಾಣ್ಮೆಗೆ
ತನ್ನದೇ ಮೆದುಳು

ಬಯಲೇ ಇಲ್ಲದ ಶಾಲೆಯಲಿ
ಎಷ್ಟು ಕಲಿತರೆ ಏನು
ಬಂದೀಖಾನೆ ಅರಮನೆಯೇ ಆದರೂ
ಎಂದಾದರೂ ರುಚಿಸುವುದೇನು

ಮರಳು ಮನೆಯೇ ಇರಲಿ
ಎಲೆಯ ಗುಡಿಸಲೇ ಇರಲಿ
ನಿದ್ರಿಸುವ ಸಂಕಷ್ಟ ಇಲ್ಲದಂತೆ
ಆಶೆಗಳ ಪಾಶದಲ್ಲಿ ಸಿಲುಕದಂತೆ

ಎಲೆ ಹಣ್ಣು ಕಾಯಿಗಳೇ
ಭೂರಿ ಭೋಜನವಾಗಿ
ಎಷ್ಟು ಸುಖವಡಗಿತ್ತು
ಆ ನಿರ್ಮಲ ಪ್ರೀತಿಯಲ್ಲಿ..!

ಬಾ ಬಾಲ್ಯ ಮತ್ತೊಮ್ಮೆ
ಆಡಬೇಕು ನೋವ ಮರೆತು
ಈ ಮೋಜಿನಾಟವ
ಅನಿಯಂತ್ರಿತ
ಸ್ವಚ್ಛಂದ ಕಲಿಕೆಯ ಬದುಕಿನಾಟವ…..


  • ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading