ಎಮ್ಮೆಗಳಲ್ಲಿ ಮತ್ತು ಸ್ಥಳೀಯ ಜಾನುವಾರುಗಳಲ್ಲಿ ಶರೀರದ ತಾಪಮಾನ 99-101 ಡಿಗ್ರಿ ಫ್ಯಾರನ್ಹಿಟ್ ಮಾತ್ರ ಇರುತ್ತದೆ. ಇದಕ್ಕಿಂತ ಜಾಸ್ತಿ ಇದ್ದಾಗ ಇದು ಜ್ವರ ಎಂದು ಪರಿಗಣಿಸಲ್ಪಡುತ್ತದೆ. ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರು ಪಶುಗಳಲ್ಲಿ ಜ್ವರದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಮ್ಮನೆ ಹಸುವಿಗೆ ಜ್ವರ. ಏನೂ ತಿಂತಾನೇ ಇಲ್ಲ. ಮೈಯೆಲ್ಲಾ ಸುಡ್ತಿದೆ. ಏನು ಮಾಡಬೇಕೋ ಗೊತ್ತಾಗ್ತಿಲ್ಲ” ಎಂಬುದು ಅನೇಕ ಗೋಪಾಲಕರ ಅಳಲು. ಹಾಗಿದ್ದರೆ ಏನಿದು ಜ್ವರ ? ಯಾಕೆ ಇದು ಬರುತ್ತದೆ? ಪರಿಹಾರವೇನು ಎಂಬುದು ತಿಳಿಯಬೇಕಲ್ಲವೇ?
ಜ್ವರ ಎಂದರೇನು?
ಪಶುವಿನ ತಾಪಮಾನ ಸಾಮಾನ್ಯವಾಗಿ 100-101 ಡಿಗ್ರಿ ಫ್ಯಾರನ್ಹಿಟ್ ಇರುವುದು ಸಹಜ. ಬೇಸಿಗೆಯಲ್ಲಿ ವಾತಾವರಣದ ತಾಪಮಾನ ಜಾಸ್ತಿಯಿದ್ದಾಗ ಇದು ಕೆಲವೊಮ್ಮೆ 101-103 ಡಿಗ್ರಿ ಫ್ಯಾರನ್ಹಿಟ್ ಸಹ ಇರಬಹುದು. ಎಮ್ಮೆಗಳಲ್ಲಿ ಮತ್ತು ಸ್ಥಳೀಯ ಜಾನುವಾರುಗಳಲ್ಲಿ ಶರೀರದ ತಾಪಮಾನ 99-101 ಡಿಗ್ರಿ ಫ್ಯಾರನ್ಹಿಟ್ ಮಾತ್ರ ಇರುತ್ತದೆ. ಇದಕ್ಕಿಂತ ಜಾಸ್ತಿ ಇದ್ದಾಗ ಇದು ಜ್ವರ ಎಂದು ಪರಿಗಣಿಸಲ್ಪಡುತ್ತದೆ.
ಬ್ಯಾಕ್ಟಿರಿಯಾ ಅಥವಾ ವೈರಾಣುಗಳು ಇಲ್ಲವೇ ರಕ್ತ ಪರೋಪಜೀವಿಗಳ ಕಾಯಿಲೆಯಿದ್ದಾಗ ಶರೀರದ ರೋಗನಿರೋಧಕ ಕಣಗಳು ಇವುಗಳನ್ನು ಬಾಹ್ಯ ವಸ್ತುಗಳೆಂದು ಪರಿಗಣಿಸಿ ಅವುಗಳ ಮೇಲೆ ಯುದ್ಧ ಸಾರುತ್ತವೆ. ಆಗ ಬಿಡುಗಡೆಯಾಗುವ ವಿವಿಧ ರಾಸಾಯನಿಕಗಳ ಸಮ್ಮಿಶ್ರದಿಂದ ಈ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವಾಗ ಶರೀರದ ತಾಪಮಾನ ಸ್ವಾಭಾವಿಕವಾಗಿಯೇ ಏರುತ್ತದೆ.
ತಾಪಮಾನ ಏರಿದಾಗ ಸಾಮಾನ್ಯವಾಗಿಯೇ ಸೂಕ್ಷ್ಮಾಣುಗಳು ನಿಷ್ಕಿçಯಗೊಳ್ಳಲು ಪ್ರಾರಂಭವಾಗುತ್ತವೆ. ಇದು ಒಂದು ಅವಶ್ಯಕ ಪ್ರಕ್ರಿಯೆಯಾದರೂ ಸಹ ಶರೀರದ ತಾಪಮಾನ ಜಾಸ್ತಿಯಾದಾಗ ಶರೀರದಲ್ಲಿನ ವಿವಿಧ ಕಿಣ್ವಗಳು, ಕೆಲವೊಂದು ಹಾರ್ಮೋನುಗಳು, ಶರೀರದ ಜೀವಕೋಶಗಳ ಸಹಜ ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ. ಕಾರಣ ಶರೀರದ ತಾಪಮಾನ ಜಾಸ್ತಿಯಾದಾಗ ಅದು ಜೀವಕ್ಕೇ ಮಾರಕವಾಗಿ ಬಿಡುವ ಸಾಧ್ಯತೆ ಇದೆ.
ಲಕ್ಷಣಗಳು:
ಜ್ವರದ ಲಕ್ಷಣಗಳು ಯಾರಿಗೆ ತಿಳಿದಿಲ್ಲ? ಶರೀರದ ತಾಪಮಾನವು 101-103 ಡಿಗ್ರಿ ಫ್ಯಾರನ್ಹಿಟ್ಕ್ಕಿಂತ ಜಾಸ್ತಿಯಾಗುವುದು ಅತ್ಯಂತ ಸಾಮಾನ್ಯ ಲಕ್ಷಣ. ಪಶುವು ಮೇವು ತಿನ್ನುವುದನ್ನು ಮತ್ತು ನೀರು ಕುಡಿಯುವುದನ್ನು ಬಿಡುತ್ತದೆ. ಅದರ ಶ್ವಾಸೋಚ್ಚಾಸಗಳು ಜಾಸ್ತಿಯಾಗುತ್ತದೆ. ಕೆಲವೊಮ್ಮೆ ಬಾಯಿಯಿಂದ ಜೊಲ್ಲು ಸುರಿಯಬಹುದು. ಜಾನುವಾರು ನಿಶ್ಯಕ್ತಿಯಿಂದ ಏಳಲೂ ಆಗದೇ ನೆಲ ಹಿಡಿಯಬಹುದು. ಕೆಲವೊಮ್ಮೆ ಬೇಧಿ ಅಥವಾ ಮಲಬದ್ಧತೆ ಎರಡೂ ಆಗಬಹುದು. ಜ್ವರದ ನಿಖರ ಕಾರಣ ಪತ್ತೆ ಮಾಡಿ ಚಿಕಿತ್ಸೆ ಸೂಕ್ತ ಚಿಕಿತ್ಸೆ ತಜ್ಞ ಪಶುವೈದ್ಯರಿಂದ ದೊರಕದಿದ್ದರೆ ಪಶು ಮರಣವನ್ನಪುವ ಸಾಧ್ಯತೆ ಇದೆ.
ಪತ್ತೆ ಹಚ್ಚುವುದು ಹೇಗೆ?
ಸಾಮಾನ್ಯವಾಗಿ ನಿಯಮಿತವಾಗಿ ಪಶುವನ್ನು ದಿನವೂ ಗಮನಿಸುತ್ತಾ ಇರುವವರಿಗೆ ಅದರ ಚರ್ಯೆಗಳನ್ನು ಗಮನಿಸುತ್ತಾ ಇರುವವರಿಗೆ ಅದಕ್ಕೆ ಜ್ವರ ಬಂದಿರುವುದು ಗೊತ್ತಾಗಿ ಬಿಡುತ್ತದೆ. ಮೈ ಬಿಸಿಯಾಗಿರುವುದು, ಕಿವಿಯ ಬುಡವನ್ನು ಹಿಡಿದಾಗ ಬೆಚ್ಚಗೇ ಅನಿಸುವುದು, ಹಾಲಿನ ಇಳುವರಿ ಇದ್ದಕ್ಕಿದ್ದ ಹಾಗೇ ಕಡಿಮೆಯಾಗುವುದು ಇತ್ಯಾದಿಗಳು ಶರೀರದ ತಾಪಮಾನ ಏರಿರುವುದರ ಲಕ್ಷಣಗಳು. ಕೆಚ್ಚಲು ಬಾವು ಇತ್ಯಾದಿಗಳ ಪ್ರಾರಂಭಿಕ ಹಂತದಲ್ಲಿಯೂ ಸಹ ತೀವ್ರವಾದ ಜ್ವರವಿರುವುದರಿಂದ ಕೆಚ್ಚಲನ್ನೂ ಸಹ ಗಮನಿಸುತ್ತಾ ಇರುವುದು ಒಳ್ಳೆಯದು.
ಪ್ರಥಮ ಚಿಕಿತ್ಸೆ
ಯಾವುದೇ ಪಶುವಿಗೆ ಜ್ವರ ಬಂದಾಗ ಅದನ್ನು ತಣ್ಣನೆಯ ವಾತಾವಾರಣದಲ್ಲಿ ನೆರಳಿನಲ್ಲಿ ಇರಿಸುವುದು ಬಹಳ ಮುಖ್ಯ. ಅದನ್ನು ಕಟ್ಟಿದ ಸ್ಥಲದಲ್ಲಿ ಸಾಕಷ್ಟು ಗಾಳಿ, ಬೆಳಕು, ನೀರು ಮತ್ತು ಆಹಾರದ ಲಭ್ಯತೆ ಇರಲೇಬೇಕು. ಜ್ವರವಿದ್ದಾಗ ಬಾಯಿರುಚಿ ಕಡಿಮೆಯಾಗುವುದರಿಂದ ಜಾನುವಾರಿಗೆ ಅತ್ಯಂತ ಪ್ರಿಯವಾದ ಹಸಿರು ಮೇವು, ಹಿಂಡಿ ಇತ್ಯಾದಿಗಳನ್ನು ಮುಂದೆ ಇಡಬೇಕು. ತಾಳ್ಮೆಯಿಂದ ಅದರ ಮುಂದೆಯೇ ನಿಂತು ಬಾಯಿಗೆ ಹಸಿರು ಹುಲ್ಲು ಅಥವಾ ದಾಸವಾಳದ ಗಿಡದ ಮೆತ್ತನೆಯ ಎಲೆಗಳನ್ನು ಬಾಯಿ ತೆಗೆಸಿ ತಿನ್ನಿಸಬೇಕು. ಜ್ವರ ಇದ್ದಾಗ ಪಚನ ಕ್ರಿಯೆ ಸಂಪೂರ್ಣವಾಗಿ ನಿಂತು ಹೋಗಿ ಅದರದ ಮೆಲುಕು ಚೀಲದಲ್ಲಿನ ಆಮ್ಲತೆ ಜಾಸ್ತಿಯಾಗಿ ಅದರ ಚಲನೆ ಸಂಪೂರ್ಣ ನಿಂತೇ ಹೋಗಬಹುದು. ಇದರಿಂದ ಮೇವು ತಿನ್ನದಿರುವಿಕೆಯ ಪ್ರಮಾಣ ಜಾಸ್ತಿಯಾಗಬಹುದು. ಅದಲ್ಲದೇ ಉದರದಲ್ಲಿನ ಕೋಟ್ಯಾಂತರ ಸೂಕ್ಷಾ÷್ಮಣುಗಳು ನಿಷ್ಕಿçಯೆಯಾಗಿ ಈ ಪ್ರಕ್ರಿಯಿಯೇ ನಿಂತು ಹೋಗಬಹುದು. ಜ್ವರದ ಪ್ರಮಾಣ ಜಾಸ್ತಿಯಾಗದಂತೆ ಶರೀರದ ಮೇಲೆ ಬಟ್ಟೆ ಹಾಕಿ ಅದರ ಮೇಲೆ ತಣ್ಣನೆಯ ನೀರನ್ನು ಹಾಕುತ್ತಾ ಇರುವುದೂ ಸಹ ಜ್ವರ ಇಳಿಸುವುದರಲ್ಲಿ ಸಹಕಾರಿ.
ಹೇಗೆ ಹಿಂದಿನ ಕಾಲದ ದ್ವಿಚಕ್ರವಾಹನಗಳು ಕಿಕ್ ನೀಡದರೆ ಮಾತ್ರ ಶುರುವಾಗುತ್ತಿದ್ದವೋ ಹಾಗೆಯೇ ಪಶುವಿನ ಮೆಲುಕು ಚೀಲವು ಕ್ರಿಯಾಶೀಲಗೊಳಿಸಲು ಆಗಾಗ ಮೆಲುಕಾಡಿಸಲು ಸಹಕಾರಿಯಾಗುವಂತೆ ಹಸಿರು ಹುಲ್ಲನ್ನು ಒಂದಿಷ್ಟು ಬಲವಂತವಾಗಿ ಬಾಯಿಗೆ ಹಾಕಿ ತಿನ್ನಿಸಲೇ ಬೇಕು. ಆದರೆ ಅದಕ್ಕೆ ಶಕ್ತಿ ಬರಲೆಂದು ಅನ್ನ, ಬೆಲ್ಲ, ಸಕ್ಕರೆ, ಹಣ್ಣುಗಳು ಇತ್ಯಾದಿ ಕೊಡಲೇಬಾರದು. ಇವೆಲ್ಲಾ ಪಶುವಿನ ಆಹಾರಗಳಲ್ಲ. ಇವೆಲ್ಲಾ ತಿನ್ನಿಸಿದರೆ ಆಮ್ಲತೆ ಜಾಸ್ತಿಯಾಗಿ ಹಾನಿಯಾಗುವ ಸಾಧ್ಯತೆಯೇ ಜಾಸ್ತಿ. ಆದಷ್ಟು ಶೀಘ್ರ ತಜ್ಞ ಪಶುವೈದ್ಯರನ್ನು ಕರೆದು ಅಗತ್ಯ ಚಿಕಿತ್ಸೆ ಮಾಡಿಸುವುದು ಅತ್ಯಂತ ಅಗತ್ಯದ ವಿಷಯ.
ತಡೆಗಟ್ಟುವಿಕೆ:
ಪಶುವಿಗೆ ಜ್ವರ ಬರದಂತೆ ತಡೆಗಟ್ಟುವುದು ಕಾಯಿಲೆಗಳನ್ನು ತಡೆಗಟ್ಟುವುದೂ ಸಹ ಒಂದೇ. ನಿಖರವಾದ ಸಮಯದಲ್ಲಿ ಲಸಿಕೆ ಹಾಕಿಸುವುದು, ಸ್ವಚ್ಚತೆ ಕಾಪಾಡಿಕೊಳ್ಳುವುದು, ಡಿಜಿಟಲ್ ಥರ್ಮಾಮೀಟರುಗಳನ್ನು ತರಿಸಿಕೊಂಡು ಅಗಾಗ್ಗೆ ಜ್ವರ ಪರೀಕ್ಷೆ ಮಾಡುತ್ತಾ ಇರುವುದು ಉತ್ತಮ ಹೈನುಗಾರರ ಜಾಣತನ.
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
