ಆ ದಿನ ಮತ್ತೆ ಮರುಕಳಿಸಿತು : ಪ್ರೊ.ರೂಪೇಶ್ ಪುತ್ತೂರು

ಈ ಸಂಸ್ಥೆಯಲ್ಲಿ ಯಾರನ್ನು ಕೆಲಸದಿಂದ ತಗೆದಿಲ್ಲ ಅಥವಾ ಯಾರನ್ನು ಕೂಡಾ ಬಿಟ್ಟು ಹೋಗಿ ಅಂದಿಲ್ಲ ನಿಮ್ಮಗೆಲ್ಲ ಇಂತಹ ಒಳ್ಳೆಯ ಸಂಸ್ಥೆಗಳು ಸಿಗಲಿ ಎನ್ನುವುದು ನನ್ನ ಆಶಯ ಎಂದ ಮುಖ್ಯ ಅಥಿತಿಗಳ ಮಾತಿನ ಹಿಂದೆ ಮತ್ತೊಂದು ಅರ್ಥವಿತ್ತೇ ? ಪ್ರೊ. ರೂಪೇಶ್ ಪುತ್ತೂರು ಅವರ ಈ ಲೇಖನವನ್ನು ಪೂರ್ತಿ ಓದಿ…

2000ನೇ ಇಸವಿ, ಬಿ ಎಡ್ ನ್ನು ಒಂದು ಖಾಸಗಿ ಸಂಜೆ ಕಾಲೇಜಿನಲ್ಲಿ ಕೋರ್ಸ್ ಮುಗಿಸಿದ್ದೆ. ಅಂದು ಸೆಂಡ್ ಆಫ್ ಫಂಕ್ಷನ್. ನಾವು ಸಂಜೆ ಕಾಲೇಜು, ಹಗಲು ಕಾಲೇಜು, ಟೀಚರ್ಸ್ ಟ್ರೈನಿಂಗ್ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ನೆರೆದಿದ್ದ ಒಂದು ಕಾರ್ಯಕ್ರಮ. ಕಾಲೇಜಿನ ಹಿರಿಯರಲ್ಲಿ ಇಬ್ಬರು ಪ್ರಮುಖರು, ಪ್ರಾಂಶುಪಾಲರು , ಅತಿಥಿ ಒಬ್ಬರು. ಅತಿಥಿಗಳ ಭಾಷಣದ ನಂತರ ಕಾಲೇಜಿನ ಪ್ರಮುಖರಲ್ಲಿ ಹಿರಿಯರೊಬ್ಬರು ಭಾಷಣಕ್ಕೆ ತೊಡಗಿದರು. ಕಾಲೇಜಿನ ಪ್ರಾರಂಭ, ಅದರ ಕಟ್ಟಡ ಮುಂತಾದ ಕಥೆ ಹೇಳಿ ಕೊನೆಗೆ ನುಡಿದುದು

” ನಿಮಗೆಲ್ಲಾ ಈ ಸಂಸ್ಥೆಯಂತಹ ಒಳ್ಳೆಯ ಸಂಸ್ಥೆಯಲ್ಲಿ ನಿಮಗೆಲ್ಲ ಕೆಲಸ ಸಿಗಲಿ… ನಮ್ಮ ಸಂಸ್ಥೆಯಲ್ಲಿ ಯಾವತ್ತೂ ಯಾರನ್ನೂ ನಾವು ಬಿಟ್ಟು ಹೋಗಿ ಎನ್ನಲಿಲ್ಲ. ಕೆಲಸದಿಂದ ಕಿತ್ತು ಹಾಕಲೂ ಇಲ್ಲ ಇಂತಹ ಸಂಸ್ಥೆಯಲ್ಲಿ ನಿಮಗೆ ಕೆಲಸ ಸಿಗಲಿ” ಎಂದು ಹಾರೈಸಿ ಕೂತರು.

ಫೋಟೋ ಕೃಪೆ : google 

ನಂತರ ಆ ಕಾಲೇಜಿನ ಇನ್ನೊಬ್ಬ ಪ್ರಮುಖರಾದ ಕಾರ್ಯದರ್ಶಿಗಳು

” ಇಷ್ಟು ಹೊತ್ತು ನೀವು ಕೇಳಿಸಿಕೊಂಡ ವಿಷಯದಿಂದಲೇ ನಾನು ನನ್ನ ಭಾಷಣ ಮುಂದುವರಿಸುತ್ತೇನೆ. ನಮ್ಮ ಸಂಸ್ಥೆಯ ಹಿರಿಯರೊಬ್ಬರು ನಮ್ಮ ಸಂಸ್ಥೆಯಲ್ಲಿ ಯಾವತ್ತೂ ಯಾರನ್ನೂ ನಾವು ಬಿಟ್ಟು ಹೋಗಿ ಎನ್ನಲಿಲ್ಲ, ಕೆಲಸದಿಂದ ಕಿತ್ತು ಹಾಕಲೂ ಇಲ್ಲ ಇಂತಹ ಸಂಸ್ಥೆಯಲ್ಲಿ ನಿಮಗೆ ಕೆಲಸ ಸಿಗಲಿ ಎಂದು ನಿಮ್ಮನ್ನು ಹಾರೈಸಿದ್ದು ಕೇಳಿಸಿಕೊಂಡೆ. ಇಂತಹ ಸಂಸ್ಥೆ ನಿಮಗೆ ಸಿಕ್ಕರೆ ತುಂಬಾ ಸಂತೋಷ. ಆದರೆ ಈ ರೀತಿ ಹೇಳಿ ಸ್ವಾಗತ ಕೋರುವ ಗರಿಷ್ಟ ಹಲವಾರು ಕಂಪನಿ /ಸಂಸ್ಥೆ ನಿಮ್ಮನ್ನು ಕೆಲಸಕ್ಕೆ ಎಪೊಂಯನ್ಮೆಂಟ್ ಮಾಡುತ್ತಾರೆ. ಸ್ವಾಗತ ಕೋರುವಾಗ ನೀವು ಕೊನೆಯವರೆಗೂ ಇಲ್ಲೇ ಕೆಲಸ ಮಾಡಿ , ರಿಟಾರ್ಯಮೆಂಟ್ ಇಲ್ಲೇ ಪಡೆಯಬೇಕು ಎಂದು ಸೇರಿಸಿ ನುಡಿಯವವರೂ ನಿಮಗೆ ಕಾಣ ಸಿಗುತ್ತಾರೆ. ಇಂತಹ ಜನ ನಿಮಗೆ ಜೀವನದಲ್ಲಿ ಸಿಗದಿರಲಿ. ಸತ್ಯ ಅವರು ನುಡಿದಂತೆ ಎಂದೂ ನಿಮ್ಮನ್ನು ಬಿಟ್ಟು ಹೋಗಿ ಎನ್ನಲ್ಲ, ನಾಳೆಯಿಂದ ಬರಬೇಡಿ ಎಂದೂ ಆಜ್ಞಾಪಿಸುವುದಿಲ್ಲ. ಆದರೆ, ನಿಮ್ಮನ್ನು ಅವರಿಗೆ ಹಿಡಿಸದಿದ್ದರೆ, ಅವರ ಚಮಚಾಗಳಿಗೆ ಹಿಡಿಸದಿದ್ದರೆ, ಅವರ ಕಸ್ಟಮರ್ಸ್ ಗಳಿಗೆ ಹಿಡಿಸದಿದ್ದರೆ, ನೀವು ನೀವಾಗಿಯೇ ಸಾಕಪ್ಪಾ ಸಾಕು ಎಂದು ಓಡಿ ಹೋಗುವ ಟಾರ್ಚರ್ ಅವರು ನಿಮಗೆ ಗೊತ್ತಿಲ್ಲದೇ ಕೊಟ್ಟೇ ಕೊಡುತ್ತಾರೆ. ಇಲ್ಲವೇ ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸಿ, ನೀವು ಮಾಡದೇ ಇದ್ದ ತಪ್ಪನ್ನು ನಿಮ್ಮ ಮೇಲೆ ಆರೋಪ ಮಾಡಿ, ನೀವಾಗಿಯೇ ಬಿಟ್ಟು ಅಥವಾ ಓಡಿ ಹೋಗುವಂತೆ ಮಾಡುತ್ತಾರೆ. ಆದ್ದರಿಂದ ಸರ್ಕಾರಿ ಕೆಲಸ ನಿಮಗೆ ಸಿಗಲಿ ಎಂದು ನಾನು ಹಾರೈಸುತ್ತೇನೆ. ಒಂದು ವೇಳೆ ಖಾಸಗೀ ಕೆಲಸ ಸಿಗುವುದಾದರೆ ನೀವು ತುಂಬಾ ಜಾಗರೂಕತೆಯಿಂದ ನಿಮ್ಮ ಆತ್ಮವಿಶ್ವಾಸ ನಷ್ಟ ಆಗದಂತೆ ನಿಮ್ಮನ್ನು ನೀವು ಕಾಪಾಡಿ. ಕಡಿಮೆ ಪ್ರಮಾಣದ ಬೆರಳೆಣಿಕೆಯ ಕೆಲವೊಂದು ಸಂಸ್ಥೆಗಳು ಕೆಲಸಗಾರರನ್ನು ಪ್ರೋತ್ಸಾಹಿಸಿ, ಯಾವುದೇ ಕಷ್ಟದಲ್ಲಿ , ನಿಮ್ಮ ಆತ್ಮಸ್ಥೈರ್ಯ ಕುಗ್ಗಿಸದೆ ಜೊತೆಗಿರಿಸುವ ಸಂಸ್ಥೆಗಳೂ ಇವೆ. ಅಂತಹಾ ಸಂಸ್ಥೆಗಳಲ್ಲಿಯಾದರೂ ನಿಮಗೆ ಕೆಲಸ ದೊರೆಯಲಿ”… ಎಂಬ ಅವರ ನುಡಿಗಳ ಅರ್ಥ ನನ್ನ ಗಮನಕ್ಕೆ ಬಂದಿದ್ದು ಕೊರೋನಾ ಕಾಲದಲ್ಲಿ. ಅಂದು ಹಲವಾರು ಸಂಸ್ಥೆಗಳು ತಮ್ಮ ಕೆಲಸಗಾರರನ್ನು ಬೀದಿಗೆ ಎಸೆದದ್ದು ಕಂಡಿದ್ದೆ. ಬರೇ ಕೆಲವೇ ಕೆಲವು ಸಂಸ್ಥೆಗಳು ಕೆಲಸಗಾರರನ್ನು ಜೊತೆಗಿರಿಸಿದ್ದೂ ಕಂಡಿದ್ದೆ.

ಕೊರೋನಾ ಕಾಲದ ನಂತರ, ಈ ಹತ್ತಿರದ ಕೆಲವು ವರುಷದಲ್ಲಿ ನನ್ನ ಕೆಲವೊಂದು ಹಳೇಯ ವಿದ್ಯಾರ್ಥಿಗಳು, ( Software Engineers) ಸಿಕ್ಕಾಗ, ಅವರ ಮಾತುಗಳೂ ಹೀಗೇ ಇತ್ತು. ” ಸಾರ್ ಒಳ್ಳೆಯ ಕಂಪನಿಯಲ್ಲಿದ್ದೆ. ಜಂಪ್ ಆಗಿ ಬೇರೆ ಕಂಪನಿಗೆ ಹೋದೆ. ಅಲ್ಲಿ ಸೇರಿದ ಒಂದು ವರ್ಷದಲ್ಲಿ ಪರ್ಫೋಮೆನ್ಸ್ ಸರಿ ಇಲ್ಲ ಎಂದು ಟರ್ಮಿನೇಟ್ ಮಾಡಿದ್ರು” ಎಂಬ ಮಾತು ಸರಿಸುಮಾರು ಸಾಮಾನ್ಯವಾಗಿದೆ.

ವಿದೇಶದಿಂದ ಕೆಲಸ ಕಳೆದುಕೊಂಡು ಬಂದ ನನ್ನ ಮೂರು ಜನ ಹಳೆಯ ವಿದ್ಯಾರ್ಥಿಗಳು ಇಂದು ಸಿಕ್ಕಿ ಅವರ ದುಃಖ ಮಾತನಾಡಿದಾಗ ನನಗೆ ಯಾಕೋ ತುಂಬಾ ಬೇಸರವಾಯಿತು. ಇಂದು ಅವರೆಲ್ಲರೂ ಮಗು ಕುಟುಂಬ ಹೆಂಡತಿ ಇರುವವರು. ಒಂದು ಹೋಟೆಲಿಗೆ ಕರ್ಕೊಂಡು ಹೋಗಿ ಚಹಾ ಕಾಫಿ ಕುಡಿಸಲು ನೋಡಿದರೆ, ನನ್ನ ದೈನೀಯತೆಯಿಂದ ” ಏನೂ ಬೇಡ ಸಾರ್ … ಎಲ್ಲಾದರೂ ಏನಾದರೂ ಕೆಲಸ ಇದ್ದರೆ ಇನ್ಫೋರ್ಮ್ ಮಾಡಿ ಸಾರ್” ಎಂದು ಭಿನ್ನಹಿಸುತ್ತಲೇ ಇದ್ದರು.

ಅವರಲ್ಲಿ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದೆ. ದೂರ ನಡೆಯುತ್ತಾ ಹೋದಂತೆ ಹಿಂತಿರುಗಿ ನೋಡುತ್ತಿದ್ದರು. ಅವರ ಆ ನೋಟ ನನಗೆ ತುಂಬಾ ನೋವು ಉಂಟು ಮಾಡಿದಾಗ, ಈ ಬಿ ಎಡ್ ಪದವಿಯ ಬಿಳ್ಕೊಡುಗೆಯ ಆ ದಿನ ನೆನಪಾಯಿತು.

ನಿಮ್ಮವ ನಲ್ಲ
ರೂಪು


  • ರೂಪೇಶ್ ಪುತ್ತೂರು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading