‘ಪಿ.ಎಚ್. ಸಿ ಕವಲುಗುಡ್ಡ 24/7’ ಕೃತಿ ಪರಿಚಯ

ಡಾ. ಲಕ್ಷ್ಮಣ ವಿ.ಎ ರವರು ವೃತ್ತಿಯಿಂದ ವೈದ್ಯರಾಗಿದ್ದು, ಇವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದು ‘ಅಪ್ಪನ ಅಂಗಿ’, ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’, ‘ಮಿಲ್ಟ್ರಿ ಟ್ರಂಕು’ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಅವರ ಪಿ.ಎಚ್. ಸಿ ಕವಲುಗುಡ್ಡ 24/7 ಕೃತಿಯ ಕುರಿತು ಮಮತಾ ವೆಂಕಟೇಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಪಿ.ಎಚ್. ಸಿ ಕವಲುಗುಡ್ಡ 24/7
ಲೇಖಕರು : ಡಾ.ಲಕ್ಷ್ಮಣ ವಿ.ಎ.
ಪ್ರಕಾಶಕರು : ಲಕ್ಷ್ಮೀ ಮುದ್ರಣಾಲಯ
ಪ್ರಥಮ ಮುದ್ರಣ : ೨೦೨೪
ಪುಟಗಳು : ೨೧೬
ಬೆಲೆ : ೨೫೦ ರೂಪಾಯಿಗಳು.

ವೈದ್ಯ ವೃತ್ತಿಯಲ್ಲಿರುವ ಇವರ ಅನುಭವಗಳ ಬುತ್ತಿ ಈ ಕೃತಿಯನ್ನು ಬರೆಯುವುದರಲ್ಲಿ ಸಾಕಷ್ಟು ಕೊಡುಗೆ ನೀಡಿರುವುದು ಸುಲಭವಾಗಿ ವೇದ್ಯವಾಗುತ್ತದೆ. ಕೆಲವೇ ವರ್ಷಗಳ ಹಿಂದೆ ಮನುಕುಲವನ್ನು ಅಕ್ಷರಶಃ ನೆಲ ಕಚ್ಚುವಂತೆ ಮಾಡಿ ಬದುಕಿಷ್ಟೇನೇ…?? ಎನಿಸಿ ಬಿಡುವಷ್ಟು ಹಣಿದು ಹಾಕಿದ ಮಹಾಮಾರಿ ಕೋವಿಡ್ ರಣತಾಂಡವವವಾಡುತ್ತಿದ್ದ ಸಂದರ್ಭದಲ್ಲಿ ವೈದ್ಯನೊಬ್ಬ ಎದುರಿಸಿದಂತಹ ಸಂಘರ್ಷಗಳು, ಸಂದಿಗ್ಧಗಳು, ತುಮುಲಗಳು, ಎಡರು ತೊಡರುಗಳು, ಘರ್ಷಣೆಗಳು ಎಲ್ಲದರ ಹಸಿಹಸಿ ಅಭಿವ್ಯಕ್ತಿಯ ಕಥಾನಕವೇ ಈ ಕೃತಿ.

ಕೋವಿಡ್ ನ ಸಂದರ್ಭದಲ್ಲಿ ಸಾಕಷ್ಟು ದಿನ ಆಸ್ಪತ್ರೆಯಲ್ಲಿ ಕಳೆಯಬೇಕಾದ ಪರಿಸ್ಥಿತಿಯಲ್ಲಿ ದಿನವೂ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳು ಅನುಭವಿಸುತ್ತಿದ್ದಂತಹ ಯಾತನೆ, ಸಂಕಟಗಳನ್ನು ಕಣ್ಣಾರೆ ಕಂಡು ಅವರ ಬಗ್ಗೆ ಇನ್ನಿಲ್ಲದಂತೆ ಗೌರವ ಮೂಡಿಸಿದ ನೆನಪುಗಳು ಈ ಕೃತಿಯನ್ನು ಓದಿದಾಗ ಮತ್ತೆ ಮರುಕಳಿಸಿದವು.

ಸದಾಕಾಲ ಕೋವಿಡ್ ರೋಗಿಗಳೊಂದಿಗೆ ಕಳೆಯಬೇಕಾದಂತಹ ಅನಿವಾರ್ಯತೆಯಿಂದಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರಿಂದ ದೂರವಾಗಿ ಅಸ್ಪೃಶ್ಯರಾಗಿ ಬದುಕಬೇಕಾದ ಪರಿಸ್ಥಿತಿಯಿದ್ದ ಸಮಯದಲ್ಲಿಯೂ ಅದೆಲ್ಲವನ್ನು ಪಕ್ಕಕ್ಕಿಟ್ಟು ತಮ್ಮ ವೃತ್ತಿಗೆ ಗೌರವ ಸಲ್ಲಿಸಿದ ಅದೆಷ್ಟೋ ಜನ “ವೈದ್ಯೋ ನಾರಾಯಣೋ ಹರಿ” ಎನ್ನುವ ಮಾತನ್ನು ಅಕ್ಷರಶಃ ಸತ್ಯವಾಗಿಸಿದವರು.

ವೈದ್ಯರು ಮತ್ತವರ ಸಿಬ್ಬಂದಿ ಕೋವಿಡ್ ವಿರುದ್ಧದ ಸೈನಿಕರೇ ಆಗಿದ್ದ ಭಯಾನಕ ಅವಧಿಯದು…!! ಸಾವು ನೋವುಗಳ ಮಧ್ಯೆಯೂ ಮಾನವೀಯತೆಯೇ ದೊಡ್ಡದು ಎನ್ನುವಂತೆ ಬದುಕಿದ ಕೆಲವರು ತಮ್ಮ ಜೀವವನ್ನೇ ಪಣವಾಗಿ ಇಟ್ಟು ರೋಗಿಗಳಿಗೆ ಎಲ್ಲಾ ರೀತಿಯಲ್ಲಿ ನೆರವಾದರೆ ಇದನ್ನೇ ಹಣದ ಸಂಪಾದನೆಗೆ ಮಾರ್ಗವಾಗಿಸಿಕೊಂಡ ಅದೆಷ್ಟೋ ಜನ ಸ್ವಾರ್ಥಿಗಳನ್ನು ಸಹ ಕಣ್ಣಾರೆ ಕಂಡು ಬಿಟ್ಟಿದ್ದೇನೆ.

ಕೋವಿಡ್ ಗೆ ಬಳಸುವ ಸರ್ಕಾರಿ ಕೋಟಾದಲ್ಲಿ ಸಿಗದೇ ಹೋಗುವ ಜೀವರಕ್ಷಕ ಇಂಜೆಕ್ಷನ್ ಗಳು ಕಾಳಸಂತೆಯಲ್ಲಿ ಎಷ್ಟು ಬೇಕಾದರೂ ಸಿಗುವುದನ್ನು ಕಂಡು ಬೆರಗಾಗಿ ಕಣ್ಣೀರಾಗಿದ್ದೇನೆ.
ಮನುಷ್ಯನ ಜೀವಕ್ಕೆ ಇಷ್ಟು ಬೆಲೆ ಇದೆ ಎಂದು ಗೊತ್ತಾಗಿದ್ದು ಆಗಲೇ. ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ ಎಂದು ಗೊತ್ತಾಗಿದ್ದು ಸಹ ಆಗಲೇ.. ಇದೆಲ್ಲಾ ವೈರುಧ್ಯಗಳ ನಡುವೆಯೂ ಮೂರನೇ ಅಲೆ ಪ್ರಭಾವಕಾರಿಯಾಗಿರುತ್ತದೆ ಎಂದು ಆಸ್ಪತ್ರೆಯನ್ನು ಬಡಾಯಿಸಿ ಅದು ವಿಫಲವಾದಾಗ ನೊಂದ ಸ್ವಾರ್ಥದ ಪರಮಾವಧಿಯನ್ನು ಕಂಡು ಬೆಚ್ಚಿಬಿದ್ದಿದ್ದೇನೆ.
ತಮ್ಮ ಜೀವಕ್ಕೆ ಜೀವವಾದವರನ್ನು ಸಹ ಮುಟ್ಟಲಾರದೆ, ನೋಡಲಾರದೆ ನರಳಿಬಿಟ್ಟಂತಹವರನ್ನು ಕಂಡು ಕಂಗಾಲಾಗಿದ್ದೇನೆ.

ಇವೆಲ್ಲಾ ಕಹಿ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳದಂತೆ ಮನದಾಳದಲ್ಲಿ ಹೂತು ಹಾಕಿದ್ದರೂ ಸಹ ಮತ್ತೆ ಮತ್ತೆ ಮರುಕಳಿಸಿ ಸತಾಯಿಸುವ ಸಂದರ್ಭದಲ್ಲಿಯೇ ಓದಿದ ಈ ಕೃತಿ ಅವೆಲ್ಲದರ ಮೇಲೆ ಮತ್ತೆ ಬೆಂಕಿ ಚೆಲ್ಲಿದಂತೆ ಕಾಡುತ್ತಿದೆ. ಕವಲುಗುಡ್ಡ ಎನ್ನುವ ಪಿ.ಎಚ್‌.ಸಿಗೆ ವೈದ್ಯನಾಗಿ ಬರುವಂತಹ ಸುಹಾಸ್ ಕೋವಿಡ್ ನ ಎಲ್ಲಾ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳಿಗೆ,ಸಂದರ್ಭಗಳಿಗೆ ಎದೆಯೊಡ್ಡಿ ನಿಲ್ಲಬೇಕಾದ ಸಂದರ್ಭದಲ್ಲಿ ಎದುರಿಸಿದ ಒಳಗುದಿಗಳನ್ನು ಲೇಖಕರು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತ ಹೋಗುತ್ತಾರೆ.

ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಬೇಕಾದಷ್ಟು ಕಾಯಿದೆ ಮಾಡಬಹುದಾದರೂ ರಣರಂಗದಲ್ಲಿ ವೈರಿಗಳನ್ನು ಎದುರಿಸಿದಂತೆ ಎದುರಿಸಲೇಬೇಕಾದಂತಹ ಕೋವಿಡ್ ನಂತಹ ಮಾರಕ ಕಾಯಿಲೆಯ ಅರಿವಿಲ್ಲದೆ ತೆಗೆದುಕೊಳ್ಳುವಂತಹ ನಿರ್ಣಯಗಳು ಅದೆಷ್ಟು ಮೂರ್ಖತನದ್ದಾಗಿದ್ದವು ಎನ್ನುವುದು ಮತ್ತೆ ಆಲೋಚನೆಗೆ ದೂಡುತ್ತವೆ. ಹಿಂದೆ ಮುಂದೆ ಯೋಚನೆ ಮಾಡದೆ ನಿಶ್ಚಯಿಸಿದ ಟಾರ್ಗೆಟ್ ಗಳು ವೈದ್ಯಕೀಯ ಸಿಬ್ಬಂದಿಯ ಮೇಲೆ ಎಂತಹ ಒತ್ತಡ ಬೀರುತ್ತಿದ್ದವು ಎನ್ನುವುದನ್ನು ಅರಿತಾಗ ಅವರ ಬಗ್ಗೆ ಗೌರವ ಮತ್ತು ಕನಿಕರ ಏಕಕಾಲದಲ್ಲಿ ಮೂಡುತ್ತದೆ.

ಪಿಪಿಇ ಕಿಟ್ ನ್ನು ಗಂಟೆಗಟ್ಟಲೆ ಧರಿಸಬೇಕಾದ ಸಂಕಷ್ಟಕರ ಪರಿಸ್ಥಿತಿಯ ಚಿತ್ರಣ ಕಣ್ತುಂಬುವಂತಾಗುತ್ತದೆ. ಅಷ್ಟರವರೆಗೆ ಯಾರು ಸಹ ಮೂಸಿ ನೋಡದೆ ಇದ್ದಂತಹ ಸ್ಯಾನಿಟೈಝೆರ್ಗಳು ಮತ್ತು ಮಾಸ್ಕ್ ಗಳ ಬೆಲೆ ಗಗನಕ್ಕೇರುವುದರ ಮೂಲಕ “ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ” ಎನ್ನುವಂತಹ ಗಾದೆಯನ್ನು ನೆನಪಿಗೆ ತರುತ್ತದೆ.

ಕಣ್ಣಿಗೆ ಕಾಣದಂತಹ ಕ್ಷುದ್ರ ಜೀವಿಯೊಂದು ಈ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನುವುದನ್ನು ನಂಬಲಿಕ್ಕೆ ಸಿದ್ಧವಿಲ್ಲದ ಹಳ್ಳಿಯ ಅಮಾಯಕ ಜನತೆಗೆ ಅದರ ದುಷ್ಪರಿಣಾಮಗಳನ್ನು ಮನದಟ್ಟು ಮಾಡಿ ಕೋವಿಡ್ ಟೆಸ್ಟಿಂಗ್ ಗಳಿಗೆ ಒಪ್ಪಿಸಲೇಬೇಕಾದ ಅನಿವಾರ್ಯತೆಯನ್ನು ಎದುರಿಸುವುದು ಎಷ್ಟು ಕಷ್ಟ ಎನ್ನುವುದು ಈ ಕೃತಿಯನ್ನು ಓದಿದಾಗ ಅರಿವಾಗುತ್ತದೆ.
“ಕೋವಿಡ್ ಪಾಸಿಟಿವ್ ” ಎಂಬ ಶಬ್ಧ ಹುಟ್ಟು ಹಾಕಿದ ಎಷ್ಟೆಷ್ಟೋ ದುರ್ಭರ ನೆಗೆಟಿವ್ ಸನ್ನಿವೇಶಗಳಿಗೆ ಕಾದಂಬರಿ ಸಾಕ್ಷೀಭೂತವಾಗಿ ನಿಲ್ಲುತ್ತದೆ. ಜನ ಹುಳಗಳಂತೆ ಬಿದ್ದು ಸಾಯುತ್ತಿದ್ದ ಸಂದರ್ಭದಲ್ಲಿಯೂ ತಮ್ಮದೇ ಸ್ವಾರ್ಥವನ್ನು ಸಾಧಿಸುವ ಭ್ರಷ್ಟ ರಾಜಕಾರಣಿಗಳ ರೂಪಕವಾಗಿ ಕಾಣುವ ಮಲ್ಲಿಕಾರ್ಜುನಯ್ಯ ಮತ್ತು ಜಯರಾಜ್ ನಂತಹ ದುಷ್ಟ ಕ್ರಿಮಿಗಳು ಆ ಸಂದರ್ಭದಲ್ಲಿ ಸುಹಾಸ್ ನ ಬದುಕನ್ನು ನಿಗಿನಿಗಿಸುವ ಅಗ್ನಿ ದಿವ್ಯಕ್ಕಿಳಿಯುವಂತೆ ಮಾಡಿಬಿಟ್ಟಿದ್ದು ನೋವು ತರಿಸುತ್ತದೆ.

ಹಗಲಿರುಳು ಕೋವಿಡ್ ರೋಗಿಗಳ ಸಂಪರ್ಕದಲ್ಲಿದ್ದ ಸುಹಾಸ್ ನ ನೆರಳನ್ನು ಕಂಡರೂ ಹೆದರುವಂತಹ ಪರಿಸ್ಥಿತಿಯಲ್ಲಿದ್ದ ನಳಿನಿ ಅದೆಷ್ಟೋ ಜನ ವೈದ್ಯರ ಪತ್ನಿಯರ ಪ್ರತಿರೂಪವಾಗಿ ಕಾಣುತ್ತಾಳೆ. ಓದುಗರ ಮರುಕಕ್ಕೂ ಪಾತ್ರವಾಗುತ್ತಾಳೆ.

ನಿಜಕ್ಕೂ ಕೋವಿಡ್ ಆ ಮಟ್ಟಿಗೆ ಹೆದರಿಕೆ ಹುಟ್ಟಿಸಿದ್ದು ಹೌದು . ಸುಹಾಸ್ ನ ಜೊತೆಗಿದ್ದು ಸಹ ಅವನ ಬೆನ್ನಿಗಿರಿಯುವ ರವಿ ಮೊದಲಾದವರ ಕುತಂತ್ರಕ್ಕೆ ಅವನು ಬಲಿಯಾಗಬೇಕಾಗುವ ಸಂದರ್ಭದಲ್ಲಿಯೂ ಅಕ್ರಮಗಳನ್ನು ನಡೆಸಿ ತಮ್ಮದೇ ಸ್ವಾರ್ಥವನ್ನು ನೋಡಿಕೊಳ್ಳುವ ಮೇಲಧಿಕಾರಿಗಳು. ಜನರ ಸಾವನ್ನು ಸಹ ಟಿಆರ್‌ಪಿಗೆ ಬಳಸಿಕೊಳ್ಳುವ ಟಿವಿ ಚಾನಲ್ ಗಳು.
ಕೋವಿಡ್ ಟೆಸ್ಟ್ ಮತ್ತು ರಿಪೋರ್ಟ್, ವ್ಯಾಕ್ಸಿನ್ ಎಲ್ಲವನ್ನೂ ಹಣ ಸಂಪಾದಿಸುವ ದಂಧೆಯಾಗಿಯೇ ಕಾಣುವಂತಹ ಭ್ರಷ್ಟ ಅಧಿಕಾರಿಗಳು, ನೌಕರರು.

ಎಲ್ಲರೂ ಸಹ ಕೋವಿಡ್ ಸಂದರ್ಭದಲ್ಲಿ ಸಾಧ್ಯವಾದಷ್ಟು ಕಬಳಿಸುವ ಹುಕಿಗೆ ಬಿದ್ದವರೇ. ಹಾಗಾಗಿಯೇ ಅಸಹ್ಯವನ್ನೂ ಹುಟ್ಟಿಸುತ್ತಾರೆ. ಇದೆಲ್ಲದರ ಮಧ್ಯೆಯೂ ಬಡತನದಲ್ಲಿದ್ದೂ ವಿಜಿಯಂತಹ ಮಂದಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು ಎಷ್ಟೋ ಮಂದಿ ರೋಗಿಗಳ ಪಾಲಿಗೆ ದೇವರಾದದ್ದು ಹೌದು. ಹೂವು ಮಾರುವ ತಾಯಿಯನ್ನು ಪದೇಪದೇ ನೆನಪಿಸಿಕೊಳ್ಳುವ,ಕಷ್ಟದಲ್ಲಿಯೇ ವೈದ್ಯ ವೃತ್ತಿಗೆ ಕಾಲಿಟ್ಟ ಸುಹಾಸ್, ಜನಸೇವೆ ಮಾಡುವುದೇ ಅದೃಷ್ಟವೆಂದು ಭಾವಿಸಿ ಪ್ರಾಣವನ್ನೇ ಪಣವಾಗಿಟ್ಟು ಸೇವೆ ಮಾಡಿದ ಪರಿಣಾಮ ದೊರಕಿದ ಪ್ರತಿಫಲ ಮನಸ್ಸನ್ನು ಭಾರವಾಗಿಸುತ್ತದೆ.

ವೈದ್ಯರಾಗಿರುವ ಲೇಖಕರು ತಮ್ಮ ಅನುಭವಕ್ಕೆ ದಕ್ಕಿದ ಕೋವಿಡ್ ನ ಅನಾಹುತಗಳು,ಅಪಸವ್ಯಗಳು ಮತ್ತು ಹಳವಂಡಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನೀವೂ ಒಮ್ಮೆ ಓದಿ ನೋಡಿ.


  • ಮಮತಾ ವೆಂಕಟೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading