‘ಚೈತ್ರದ ಸಿರಿ’ ಕವನ – ಅನುಸೂಯ ಯತೀಶ್

‘ಪಕ್ಷಿಗಳ ಕಲರವದ ಸಂಗೀತೋತ್ಸವ… ಬರೆಯುವ ಕೈಗಳಿಗೆ ಕವಿತೋತ್ಸವ’… ಕವಿಯತ್ರಿ ಅನುಸೂಯ ಯತೀಶ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ… 

ಮಾಮರದಲಿ ಕೋಗಿಲೆಯ ಸವಿಗಾನ
ಶುಭಕೃತ ನಾಮ ಸಂವತ್ಸರದ ಋತುಗಾನ
ತರುಲತೆಗಳಲಿ ಚೈತ್ರದ ಸಿರಿಗಾನ
ಜಗಕೆಲ್ಲ ಹೊಸ ಜೀವಕಳೆಯ ಧ್ಯಾನ

ಘಮಘಮ ಕಂಪನು ಬೀರುತ
ವಿಧವಿಧ ಸುಮಗಳ ಚೆಲ್ಲುತ
ಧರೆಯ ತುಂಬೆಲ್ಲ ಮೂಡಿದೆ ಚಿತ್ತಾರ
ವರ್ಣಿಸಲಸದಳ ಭೂರಮೆಯ ವೈಯಾರ

ಪಕ್ಷಿಗಳ ಕಲರವದ ಸಂಗೀತೋತ್ಸವ
ಬರೆಯುವ ಕೈಗಳಿಗೆ ಕವಿತೋತ್ಸವ
ಪ್ರೇಮಿಗಳ ಮನದಿ ವಸಂತೋತ್ಸವ
ಹೃದಯಗಳ ಮಿಲನ ಮಹೋತ್ಸವ

ಧರೆಯ ತುಂಬೆಲ್ಲ ಭಾಸ್ಕರನ ಹೊನ್ನಕಿರಣ
ನವೋಲ್ಲಾಸದ ಪ್ರಕೃತಿಯ ಪರಿಭ್ರಮಣ
ನವ ಮನ್ವಂತರವ ಸ್ವಾಗತಿಸೋಣ ಸಂಭ್ರಮದಿ
ಬೇವು ಬೆಲ್ಲಗಳ ಸಮಾನ ಸಂಗಮದಿ

ಚಿತ್ತದೊಳಗಿನ ರಾಗ ದ್ವೇಷಗಳ ದಬ್ಬುತ
ಪ್ರೀತಿ ಪ್ರೇಮ ಸ್ನೇಹ ವಾತ್ಸಲ್ಯಗಳ ತಬ್ಬುತ
ಸುಳ್ಳಿನ ಪಥವ ತ್ಯಜಿಸೆ ಸುಂದರ ಜೀವನ
ಸತ್ಯ ಶಾಂತಿ ಮಾರ್ಗದಿ ನಡೆವುದೆ ಪಾವನ

ಹಣ್ಣೆಲೆ ಉದುರಿ ಹಸಿರೆಲೆ ಚಿಗುರಿದೆ ಮರದಲಿ
ನವಜೀವನಕ್ಕೆ ನಾಂದಿ ಹಾಡಿದೆ ಜಗದಲಿ
ಮನದ ಮಲಿನವ ತೊಳೆಯಬೇಕಿದೆ ಬಂಧುಗಳೆ
ಶುಭ್ರ ಭಾವವ ಧರಿಸಬೇಕಿದೆ ಜನಗಳೆ


  • ಅನುಸೂಯ ಯತೀಶ್ – ಶಿಕ್ಷಕಿ, ಮಾಗಡಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading