ಪ್ರೀತಿ, ವಾತ್ಸಲ್ಯಕ್ಕೆ ಸರಿ ಸಾಟಿ ಯಾರು?

ಪ್ರಾಣಿಗಳಲ್ಲೂ ಪ್ರೀತಿ, ವಾತ್ಸಲ್ಯ ಇರುತ್ತೆ ಅಂತ ಕಣ್ಣಾರೆ ನೋಡಿದಮೇಲೆ ಲೇಖಕಿ ಅನುಸೂಯ ಯತೀಶ್ ಅವರು ಪ್ರಾಣಿ ಪ್ರೀತಿಯ ಕುರಿತು ಲೇಖನವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಈ ನಾಯಿ ಥರ ಆಡುತೀಯಾ ಅನ್ನುತ್ತಾರೆ. ಆದರೇ ಅವು ಎಷ್ಟೋ ವಿಷಯಗಳಲ್ಲಿ ನಮಗಿಂತ ಮೇಲು. ಇದನ್ನು ನೋಡಿ ಹಾಗೆ ಮುಂದೆ ಹೋಗದೇ, ಒಮ್ಮೆ ಓದಿ ಬಿಡಿ. ಪ್ರಾಣಿಗಳ ಪ್ರೇಮಕ್ಕೆ ಮನುಷ್ಯ ಸಾಟಿಯಾಗಲಾರ ಎನಿಸುತ್ತದೆ. ಈ ಚಿತ್ರದಲ್ಲಿ ಇರುವ ಬಿಳಿ ಮುಖದ ನಾಯಿ ನಮ್ಮ ‌ಮನೆ Constraction ಮಾಡುವಾಗ ಗ್ರೌಂಡ್ ಫ್ಲೋರ್ ಪಾರ್ಕಿಂಗ್ ನಲ್ಲಿ ಇನ್ನೇನು ಗ್ರಾನೈಟ್ ಹಾಕಬೇಕು ಎನ್ನುವಾಗ ಅಲ್ಲಿ ಬಂದು ಬರೋಬ್ಬರಿ ಏಳು ಮರಿಗಳಿಗೆ ಜನ್ಮ ನೀಡಿತ್ತು.ಆಗ ಕೆಲಸದವರು ಪಕ್ಕಕ್ಕೆ ಎತ್ತಿ ಬಿಟ್ಟು ಪ್ಲೋರಿಂಗ್ ಮಾಡೋಣ ಸರ್ ಅಂದರು. ಯತೀಶ್ ಗೆ ಪ್ರಾಣಿಗಳು ಅಂದ್ರೇ ಬಾರಿ ಕಕ್ಕುಲಾತಿ. ಬೇಡ ಬಿಡಿ ಈಗತಾನೇ ಮರಿ ಹಾಕಿದೆ. ಹೊರಗೆ ಹಾಕಿದರೇ ಪಾಪ ಏನಾದರೂ ಆದಾವು. ಹದಿನೈದು ದಿನ ಬಿಟ್ಟು ಗ್ರಾನೈಟ್ ಹಾಕಿದರಾಯಿತು ಎಂದು ಆ ಕೆಲಸ ನಿಲ್ಲಿಸಿದರು. ಪ್ರತಿದಿನ ಬೆಳಿಗ್ಗೆ ಸಂಜೆ ಎರಡು ಟೈಮ್ ಬಿಸ್ಕತ್ತು ಬ್ರೆಡ್ ತಗೊಂಡು ಹೋಗಿ ಹಾಕುತ್ತಿದ್ದರು. ಅವರಿಗೆ ಅದೆಷ್ಟು ಒಗ್ಗಿಕೊಂಡಿದ್ದೋ ಎಂದರೇ ಅವರ ಬೈಕ್ ಸೌಂಡ್ ಕೇಳಿದರೇ ಸಾಕು ಓಡಿಬಂದು ಯತೀಶ್ ಮೇಯನ್ನೆಲ್ಲಾ ನೆಕ್ಕುತ್ತಾ ನಿಲ್ಲುತ್ತಿತ್ತು. ಒಂದು ವೇಳೆ ಬಿಸ್ಕೇಟ್ ಮರೆತು ಹೋದರೇ ಪಕ್ಕದ ಅಂಗಡಿಯಿಂದ ಆದರೂ ತಂದು ಹಾಕಬೇಕಿತ್ತು. ಅಂತೂ ಹದಿನೈದು ದಿನಗಳ ಕಳೆದವು. ಮರಿಗಳು ಸ್ವಲ್ಪ ದೊಡ್ಡದಾದವು. ಆಗ ಶೆಡ್ ಗೆ ಟಾರ್ಫಾಲ್ ಹಾಸಿ ಅಲ್ಲಿಗೆ ಶಿಫ್ಟ್ ಮಾಡಿದರು. ಆಗ ನಾಯಿ ಇರಲಿಲ್ಲ. ಅದು ಊಟ ಹುಡುಕಿ ಹೋಗಿತ್ತು. ಬಂದಾಗ‌ ಅಲ್ಲಿದ್ದ ಕೆಲಸವರು ಯಾರು ಮರಿಯನ್ನು ತೋರಿಸಬೇಡಿ ಹೇಗೆ ಹುಡುಕುತ್ತೇ ನೋಡೋಣ ಅಂದರು.ಅದು ಬಂತು. ನಾನು ಕುತೂಹಲದಿಂದ ಅದನ್ನೇ ನೋಡುತ್ತಿದ್ದೆ. ಆದರೇ ಅಚ್ಚರಿಯಾಯಿತು. ಅದು ಮರಿಗಳು ಇದ್ದ ಪಾರ್ಕಿಂಗ್ ಕಡೆ ಹೋಗದೆ ಶೆಡ್ ಕಡೆಗೆ ಹೆಜ್ಜೆ ಹಾಕಿತು. ವಾಸನೆ ಗ್ರಹಿಸಿ ಅವು ತನ್ನ ಮರಿಗಳನ್ನು ಹುಡುಕುವ ರೀತಿ ನಿಜಕ್ಕೂ ಸೋಜಿಗ.‌

ಸ್ವಲ್ಪ ದೊಡ್ಡವಾದವು. ಮರಿಗಳ ಜೊತೆಗೆ ಹೊರಗೆ ಓಡಾಡುತ್ತಿತ್ತು. ಒಮ್ಮೆ ಮೋರಿಯ ಬಳಿ ಹೋಗಿವೆ. ಜಾರಿ ಮೋರಿಯೊಳಗೆ ಬಿದ್ದಿವೆ. ಅದೇನು ಋಣಾನುಬಂದವೋ ಗೊತ್ತಿಲ್ಲ. ಯತೀಶ್ ವಾಕ್ ಹೋಗುವಾಗ ನೋಡಿದ್ದಾರೆ. ಆ ತಾಯಿ ನಾಯಿ ಆ ಮೋರಿ ಸುತ್ತ ಮರಿಗಳು ಬಿದ್ದಿರುವುದನ್ನು ನೋಡಿ ಪರದಾಡುತ್ತಿತ್ತಂತೆ.

ಇವರನ್ನು ಕಂಡ ತಕ್ಷಣ ಓಡಿಬಂದು ಇವರನ್ನು ನೆಕ್ಕಿ ಮತ್ತೇ ಹೋಗಿ ಆ ಮೋರಿ ನೋಡುತ್ತಿತ್ತಂತೆ. ಮೂರ್ನಾಲ್ಕು ಬಾರಿ ಹಾಗೇ ಮಾಡಿದಾಗ ಯತೀಶ್ ಗೆ ಅನುಮಾನ ಬಂದು ಅಲ್ಲಿ ಹೋಗಿ ನೋಡಿದರೇ ನಾಲ್ಕು ಮರಿಗಳು ಮೋರಿಯಲ್ಲಿ ಒದ್ದಾಡುತ್ತಿದ್ದವಂತೆ. ಆಗ ಇವರು ಮೋರಿಗೆ ಇಳಿದು ಆ ಮರಿಗಳನ್ನು ‌ಎತ್ತಿ ಹೊರಗೆ ಬಿಟ್ಟು ವಾಕ್ ಮಾಡಲು ಸಮಯ ಇಲ್ಲ ಅಂತ ಮನೆಗೆ ವಾಪಸ್ ಬಂದು ಶಾಲೆಗೆ ತಯಾರಾದರು. ಆಗ ಮೊಬೈಲ್ ನೋಡಿಕೊಂಡರು. ಮೊಬೈಲ್ ಇಲ್ಲ. ಏನಾಯಿತು ಎಂದು ನೆನಪು ಮಾಡಿಕು ನೆನಪಾಗಲಿಲ್ಲ. ಆ ದಿನಗಳಲ್ಲಿ ಮೊಬೈಲ್ ತುಂಬಾ ಮುಖ್ಯ ಆಗಿತ್ತು. ಮನೆ ಕಟ್ಟುತ್ತಿದ್ದದ್ದರಿಂದ ಎಲ್ಲಾ ವರ್ಕರ್ಸ್ ನಂಬರ್ ಅದರಲ್ಲೇ ಇದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಆನ್ ಲೈನ್ ಟ್ರಾನ್ಜಾಕ್ಷನ್ ಕೂಡ ಬೇಕಿತ್ತು. ಆಗ ನನ್ನ ಮೊಬೈಲ್ ತಗೊಂಡು ರಿಂಗ್ ಮಾಡಿದರೆ ಫೋನ್ ರಿಂಗ್ ಆಗುತ್ತಿದೆ. ಆದರೇ ಯಾರು ರಿಸೀವ್ ಮಾಡುತ್ತಿಲ್ಲ. ಬಹುಶಃ ನಾಯಿಮರಿ ಎತ್ತುವಾಗ ಮೋರಿಗೆ ಬಿದ್ದಿರಬಹುದು ಎನಿಸಿತು. ಕೂಡಲೇ ಆ ಜಾಗಕ್ಕೆ ಹೋಗಿ ನೋಡಿದೆವು. ಆದರೇ ಅಲ್ಲೆಲ್ಲೂ ಕಾಣಲಿಲ್ಲ.

ಸ್ವಲ್ಪ ಆತಂಕ ಹೆಚ್ಚಾಯಿತು. ಮನೆಗೆ ಬಂದು ಮತ್ತೇ ಡಯಲ್ ಮಾಡಿದರೇ ಆ ಕಡೆಯಿಂದ ಹೆಣ್ಣು ಮಗಳೊಬ್ಬಳು ರಿಸೀವ್ ಮಾಡಿ ಹಲೋ ಸರ್ ಯಾರು ನೀವು ಅಂದರು. ನಾನು ಯತೀಶ್ ಅಂತ. ಇದು ನನ್ನ ಮೊಬೈಲ್ ಬೆಳಿಗ್ಗೆ ಕಳೆದುಕೊಂಡಿರುವೆ.

ನೀವು ಯಾರು? ಎಂದರು. ಆಗ ಅವರು ಸರ್ ನನ್ನ ಮಗ ಬೆಳಿಗ್ಗೆ ಆ ಮೋರಿ ಬಳಿ ನಾಯಿಗೆ ಬಿಸ್ಕೇಟ್ ಹಾಕಲು ಹೋಗಿದ್ದನು. ಅಲ್ಲಿ ಮೋರಿಯಲ್ಲಿ ಈ ಮೊಬೈಲ್ ಬಿದ್ದಿತ್ತಂತೆ. ಮನೆಗೆ ತಂದು ಅವರ ಅಪ್ಪನ ಬಳಿ ಕೊಟ್ಟನು. ಅವರು ಕಾಲ್ ಮಾಡಲು ಟ್ರೈ ಮಾಡಿದರು. ಮೊಬೈಲ್ ಲಾಕ್ ಆಗಿತ್ತು. ಸೋ ನಿಮ್ಮ ಕಡೆಯಿಂದ ಕಾಲ್ ಬರುತ್ತೇ ಆಗ ಅವರಿಗೆ ಹೇಳಿ ಕೊಡಿ ಅಂತ ನಮ್ಮ ಯಜಮಾನರು ಹೊರಗೆ ಹೋದರು ಅಂದರು. ಮಗ ಟ್ಯೂಷನ್ ಹೋಗಿದಾನೆ. ಪೋನ್ ಬಿದ್ದಾಗ ಮ್ಯೂಟ್ ಆಗಿದೆ. ನೀವು ಕಾಲ್ ಮಾಡಿದರೇ ಸೌಂಡ್ ಕೇಳಲಿಲ್ಲ. ಈಗ ಗೊತ್ತಾಯ್ತು. ಬನ್ನಿ ಸರ್ ಪೋನ್ ತಗೊಂಡೋಗಿ ಅಂದಾಗ ನಿಜಕ್ಕೂ ನಂಬಲಾಗಲಿಲ್ಲ. ಈಗಲೂ ಇಂತಹ ಪ್ರಾಮಾಣಿಕ ಜನರು ಇದ್ದಾರಲ್ಲ ಎಂದು ಹೆಮ್ಮೆ ಎನಿಸಿತು ಕೂಡ. ಸರಿ ಅವರು ಹೇಳಿದ ವಿಳಾಸಕ್ಕೆ ಹೋದೆವು. ಆ ಮನೆ ಮಾಜಿ ಸೈನಿಕರ ಮನೆ.

ಅವರು ಮನೆಗೆ ಹೋದಾಗ ಆತ್ಮೀಯವಾಗಿ ಮಾತನಾಡಿಸಿ ಮೊಬೈಲ್ ಕೊಟ್ಟು ಕಳಿಸಿದರು. ಅವರು ಮಗನನ್ನು ಬೆಳೆಸಿರುವ ರೀತಿಗೆ ಖುಷಿ ಆಯ್ತು. ಇಂತಹ ಜೀವಗಳು ಅಕ್ಷಯವಾಗಲಿ. ಆಗ ಯತೀಶ್ ಹೇಳಿದರು ನೋಡು ಬೆಳಿಗ್ಗೆ ಮೋರಿ ಕೆಸರಲ್ಲಿ ಬಟ್ಟೆ ಕೊಳೆ ಮಾಡಿಕೊಂಡು ಬಂದಿದ್ದೀರಿ ಅಂತ ರೇಗಿದೆ. ಈಗ ನೋಡು, ನಾವು ಒಬ್ಬರಿಗೆ ಒಂದು ರೀತಿ ಸಹಾಯ ಮಾಡಿದರೇ ನಮಗೆ ಇನ್ಯಾರೋ ಮತ್ತೊಂದು ರೀತಿಯಲ್ಲಿ ಸಹಾಯ ಮಾಡುತ್ತಾರೆ ಅಂದರು.

ಅದು ಹಾಗಿರಲಿ. ಈ ಫೋಟೋದಲ್ಲಿ ಎರಡು ನಾಯಿಗಳಿವೆ ಗಮನಿಸಿ. ಬಿಳಿ ಮುಖದ ನಾಯಿ ಮರಿಗಳನ್ನು ಹೆತ್ತಮ್ಮ. ಮತ್ತೊಂದು ನಾಯಿ ಸಾಕು ತಾಯಿ. ಹೆತ್ತ ನಾಯಿ ಊಟ ಹುಡುಕಿಕೊಂಡು ಹೊರಗೆ ಹೋದರೇ ಮತ್ತೊಂದು ನಾಯಿ ಬಂದು ಆ ಏಳು ಮರಿಗಳಿಗೆ ಹಾಲು ಕುಡಿಸುತ್ತದೆ. ಬಿಸಿಲು ಹೆಚ್ಚಾಗಿರುವುದರಿಂದ ನಮ್ಮ ಮನೆಯ ಹೊರಗೆ ನೆರಳಿನಲ್ಲೇ ದಿನವೂ ಮಲಗುತ್ತವೆ. ಮಕ್ಕಳು ಬೇರೆ ನಾಯಿ ಹಾಲು ಕೊಡುವುದನ್ನು ಹೇಳಿದರು ನಾನು ನಂಬಲಿಲ್ಲ. ಒಮ್ಮೆ ನನ್ನ ಕಣ್ಣಿಗೂ ಬಿತ್ತು. ಆಗ ಈ ಪೋಟೋ ತಗೊಂಡೆ. ನಿಜಕ್ಕೂ ಮನುಷ್ಯನನ್ನು ಮೀರಿದ ಪ್ರೀತಿ ಪ್ರಾಣಿಗಳದು. ನಾವು ನಮ್ಮದು ಎನ್ನುವ ಸ್ವಾರ್ಥ ತುಂಬಿದ ನಾವು ಇದನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎನಿಸಿತು.


  • ಅನುಸೂಯ ಯತೀಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading