ಡೊಳ್ಳು ಮತ್ತು ಮಂತ್ರ : ಆನಂದ ಝಂಜರವಾಡ



‘ಭಕ್ತಿ ಕಂಪಿತ’ ನಮ್ಮ ಕೂಡಲ ಸಂಗಮದೇವ – ಎನ್ನುವ ಬಸವಣ್ಣನವರ ವಚನವನ್ನು ಮೂಲಾಧಾರವಾಗಿಸಿಕೊಂಡು, ಆನಂದ ಝಂಜರವಾಡ ಅವರು ಬರೆದ ಡೊಳ್ಳು ಮತ್ತು ಮಂತ್ರ ನಾಟಕದ ಪುಸ್ತಕ ಪರಿಚಯವನ್ನು ರಘುನಾಥ್ ಕೃಷ್ಣಮಾಚಾರ್  ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಹದಿನೈದನೆಯ ಶತಮಾನದ ವೇಳೆಗೆ ಮತ್ತೊಮ್ಮೆ ಜಡಗೊಳ್ಳತೊಡಗಿದ ವೈದಿಕ ಧರ್ಮಕ್ಕೆ ತನ್ನ ಪರುಷ ಸ್ಪರ್ಶದಿಂದ ಮತ್ತೆ ಅದನ್ನು ಚಲನಶೀಲಗೊಳಿಸಿದ ಕನಕನ ವ್ಯಕಿತ್ವದ ವಿಕಾಸದ ಹೆಜ್ಜೆ ಗುರುತುಗಳನ್ನು ಶೋಧಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ ಈ ನಾಟಕದ ಕೇಂದ್ರ ವಸ್ತು.

 

ಇಲ್ಲಿ ಜಡಗೊಂಡ ವೈದಿಕ ಧರ್ಮದ ಸಂಕೇತವಾಗಿ ಆನಂದತೀರ್ಥರಿಂದ ಪ್ರಾರಂಭಗೊಂಡ ಅವರ ಶಿಷ್ಯ ಸಮುದಾಯದ ಕೃಷ್ಣ ಮಂದಿರ ನಿರ್ಮಾಣವಿದ್ದರೆ, ಅವರಿಗೆ ಸಾಧನವಾಗಿ ಒದಗಿ ಬರುವ ಕುರುಬ ಸಮುದಾಯವಿದೆ. ಅವರಿಂದ ಕಟ್ಟಲಾದ ಆ ಮಂದಿರಕ್ಕೆ ಅವರಿಗಾಗಲಿ, ಅವರ ಸಮುದಾಯದ ಪ್ರತಿನಿಧಿಸುವ ಕನಕನಿಗಾಗಲಿ ಪ್ರವೇಶವಿಲ್ಲ. ಇದರಿಂದ ಕುಪಿತಗೊಂಡು ಅವರು ಮರಳಿದರೆ, ಕನಕ ತನ್ನ ಭಕ್ತಿ ಕಂಪಿತ – ತನುವು ನಿನ್ನದು ಮನವು ನಿನ್ನದು – ಎಂಬ ಕೀರ್ತನೆಯನ್ನು ತನ್ಮಯತೆಯಿಂದ ಹಾಡತೊಡಗಿದಾಗ, ಭೂಮಿ ಕಂಪಿಸಿ ಕಟ್ಟಿದ ಗೋಡೆ ಜರಿದು ಬೀಳುತ್ತದೆ. ಅದು ಬಿದ್ದು ಅವನ ಕಾಲಿಗೆ ಗಾಯವಾಗಿ ನೆತ್ತರು ಹರಿಯುತ್ತಿದ್ದರೂ ಅದರ ಪರಿವೆಯಿಲ್ಲದೆ ಹಾಡುತ್ತಿದ್ದ ಅವನಿಗೆ ಕೃಷ್ಣದರ್ಶನವಾಗುತ್ತದೆ ‌ . ಅದನ್ನು ನೋಡಿದ ವಾದಿರಾಜರು ತಮ್ಮ ಸೆರಗನ್ನು ಬಿಚ್ಚಿ ಪಟ್ಟಿ ಕಟ್ಟುತ್ತಾರೆ.

‘ಕಟ್ಟಿದ ಗೋಡೆಗಳ ಕೆಡವಲೆಬೇಕು’ ಎಂಬ ಸಾರ್ವಕಾಲಿಕ ಸಂದೇಶದೊಂದಿಗೆ ನಾಟಕ ಕೊನೆಗೊಳ್ಳುವುದು ಅರ್ಥಪೂರ್ಣವಾಗಿದೆ. ಆದ್ದರಿಂದ ಇದು ಹದಿನೈದನೆಯ ಶತಮಾನಕ್ಕೆ ಮಾತ್ರವಲ್ಲ ಇಂದಿಗೂ ಅನ್ವಯಿಸುತ್ತದೆ ಎನ್ನುವುದು ಈ ನಾಟಕವನ್ನು ಸಮಕಾಲೀನವಾಗಿಸಿದೆ. ಕನಕನ ಸುತ್ತ ಹಬ್ಬಿದ ಐತಿಹ್ಯವನ್ನು ಮುರಿದು ಹೊಸದಾಗಿ ನಿರ್ಮಿಸಿದ ಶ್ರೇಯಸ್ಸು ನಾಟಕಕಾರರದು.

ಜಡಗೊಂಡ ವೈದಿಕ ಧರ್ಮದ ಸಂಕೇತವಾಗಿ ಶೀರ್ಷಿಕೆಯ ಮಂತ್ರ ಅವರಿಗೆ ಮುಗ್ದ ಸಮುದಾಯದ ಸಾಧನವಾಗಿ ಬಿಟ್ಟಿರುವ ಕುರುಬ ಸಮುದಾಯದ ಅಸ್ಮಿತೆಯ ಸಂಕೇತವಾಗಿ ಡೊಳ್ಳು ಬಂದಿದೆ. ಇವೆರಡೂ ಇಂದು ವಿಸಂಕೇತಗೊಳ್ಳಬೇಕಾದ ಅನಿವಾರ್ಯತೆಯನ್ನು ನಾಟಕದ ಶೀರ್ಷಿಕೆಯ ಮೂಲಕ ಲೇಖಕರು ಧ್ವನಿ ಪೂರ್ಣಗೊಳಿಸಿದ್ದಾರೆ. ಅಲ್ಲಲ್ಲಿ ತಾತ್ವಿಕ ಪರಿಕಲ್ಪನೆಗಳನ್ನು ಇಡಿ ಇಡಿಯಾಗಿ ಬಳಸಿರುವುದು, ಅದರ ಪರಿಚಯ ಇಲ್ಲದವರಿಗೆ ಸಂವಹನ ಶೀಲತೆಗೆ ತೊಡಕನ್ನು ಉಂಟು ಮಾಡುತ್ತವೆ. ಅಲ್ಲದೇ ಹಲವಾರು ಮುದ್ರಣ ದೋಷಗಳು ಉಳಿದುಕೊಂಡಿವೆ. ಕೃತಿಯ ಸಾಧನೆಯ ಮುಂದೆ ಮೇಲಿನ ಮಿತಿಗಳು ಗೌಣ. ಪುಸ್ತಕವನ್ನು ನನ್ನ ಸಂಗಾತಿ ಗಿರಿಜಾಗೆ ಕಳಿಸುವ ಮೂಲಕ ಓದಲು ಅನುವು ಮಾಡಿಕೊಟ್ಟ ಲೇಖಕರಿಗೆ ಅಭಿನಂದನ ಮತ್ತು ಕೃತಜ್ಞತೆ.


  • ರಘುನಾಥ್ ಕೃಷ್ಣಮಾಚಾರ್   (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading