ಅಪೂರ್ವ ಛಾಯಾಗ್ರಾಹಕರೆಂದೇ ಖ್ಯಾತರಾಗಿದ್ದ ಕೆ. ಪಿ. ಟಿ. ಸಿ. ಎಲ್. ನಿವೃತ್ತ ಇಂಜಿನಿಯರ್ ಶ್ರೀ ಎ.ಎನ್.ಮುಕುಂದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ .
ಸುಂದರ ಫೋಟೋಗಳನ್ನುತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯುವುದರಲ್ಲಿ ಎತ್ತಿದ ಕೈ. ದಾವಣಗೆರೆಯ ಹರಿಹರದಲ್ಲಿ 1955ರಲ್ಲಿ ಜನಿಸಿದ ಇವರು ನಂತರ ದಿನಗಳಲ್ಲಿ ಕೆ.ಪಿ.ಟಿ.ಸಿ.ಎಲ್.ನಲ್ಲಿ 30 ವರ್ಷ ಸೇವೆಸಲ್ಲಿಸಿದ್ದರು. ೨೦೦೮ ರಲ್ಲಿ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನ ಹುಳಿಮಾವುನಲ್ಲಿ ವಾಸಿಸುತ್ತಿದ್ದರು.
ಶ್ರೀ ಎ.ಎನ್.ಮುಕುಂದ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಫೋಟೋಗಳು :
ಫೋಟೋ ಕೃಪೆ : ಅಂತರ್ಜಾಲ
ಎ.ಎನ್. ಮುಕುಂದರ ‘ಮುಖಮುದ್ರೆ’ ಕೃತಿಯಲ್ಲಿ ಸುಮಾರು ಕನ್ನಡ ಸಾಹಿತ್ಯ ಲೋಕದ 50 ಮಂದಿ ಅಗ್ರಮಾನ್ಯ ಲೇಖಕರ ಸುಂದರ ಭಾವಚಿತ್ರಗಳಿವೆ ಮತ್ತು ಅವರ ಕುರಿತಾದ ಕೆಲವು ಮಾಹಿತಿಗಳು, ಲೇಖಕರೊಂದಿಗಿನ ಅನುಭವವನ್ನು ಇದರಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನು ಎಸ್. ದಿವಾಕರ್ ಅವರು ಬೆನ್ನುಡಿಯನ್ನು ಗಿರೀಶ್ ಕಾಸರವಳ್ಳಿಯವರ ಬರೆದಿದ್ದಾರೆ.
ಅವರ ಕ್ಯಾಮೆರಾ ಕಣ್ಣುಗಳಲ್ಲಿ ಕ್ಲಿಕ್ಕಿಸಿದ ಸಾಹಿತಿಗಳ, ಸಂಗೀತಗಾರರ, ರಾಜಕಾರಣಿಗಳ, ಮಕ್ಕಳ ಭಾವಚಿತ್ರಗಳು ರಾಜ್ಯದ ಪ್ರತಿಷ್ಠಿತ ಆಂಗ್ಲ ಹಾಗೂ ಕನ್ನಡ ನಿಯತಕಾಲಿಕೆಗಳಲ್ಲಿ, ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಂಡಿದೆ.
ಕೋವಿಡ್ ನಿಂದ ಬಳಲುತ್ತಿದ್ದ ಅವರು ಇಂದು ಅಪಾರ ಅಭಿಮಾನಿಗಳು, ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಸ್ಥರಿಗೆ ಆ ಭಗವಂತ ನೋವನ್ನು ಭರಿಸುವ ಶಕ್ತಿ ನೀಡಲಿ..
- ಆಕೃತಿ ನ್ಯೂಸ್