‘ನಿನಗಿರುವ ಭಾಗ್ಯ ಎನಗಿಲ್ಲ ಪುರುಷ!’ -ಕವನ

ಗೊಂದಲದ ಗೂಡಲಿ ನೊಂದುಬೆಂದಿರುವ ಎನ್ನ ಮನವನೊಮ್ಮೆ ಇಣುಕಿ ನೋಡಲಾರೆಯೇಕೆ?…ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನಿನಗಿರುವ ಭಾಗ್ಯ
ಎನಗಿಲ್ಲ ಪುರುಷ!
ತಾಯಿಗರ್ಭದಿ ತಿರುಗಿದ
ಹಚ್ಚಹಸಿರು ತುಂಬಿದ
ಹೊಲ ಗದ್ದೆಗಳು!
ದೇಕಿ ತೆವಳಿದ
ಕಟ್ಟೆ ಅಂಗಳಗಳು!
ಎಗರಿ ಕುಣಿದ
ಬಾಲ್ಯದಾಟಗಳು!
ನಾಚಿ ನಲಿದ
ಯೌವನದ ಮಜಲುಗಳು!
ಊರುಗೋಲಿನ
ವೃದ್ಧಾಪ್ಯದ ದಿನಗಳು
ಎಲ್ಲವು ನಿನ್ನೂರಲ್ಲಿಯೇ!

ನನ್ನದೋ….ನನ್ನದೋ
ಅಲೆಮಾರಿ ಜೀವನ!
ತುತ್ತನಿಟ್ಟ ಹೆತ್ತವರು
ಹೊತ್ತುತಿರುಗಿದ
ಒಡಹುಟ್ಟಿದವರು
ಗಲ್ಲಿಯಲೆಲ್ಲರೊಂದಾಗಿ
ಕುಣಿದು ಕುಪ್ಪಳಿಸಿದ
ಗೆಳೆಯ ಗೆಳತಿಯರು
ಇರುವ ಊರನು
ತೊರಿಬೇಕು ನಿನ್ನ ನಂಬಿ!
ಉಳಿದರ್ಧ ಜೀವನ
ನಾ ಕಾಣದ, ನನ್ನದಲ್ಲದ
ನಿನ್ನೂರಲ್ಲಿ!!!!!!

ಮೂಕಮನದ ನನ್ನ
ವೇದನೆ ಯಾರಿಗೆ ಹೇಳಲಿ?
ಸುಖವ ನೀಡುವ
ತನುವನಷ್ಟೆ ಬಯಸಿ
ಪೀಡಿಸಿ,ಮೋಹಿಸಿ
ಮುದ್ದಿಸುವ ನಿನಗೋ!
ಆ ಕ್ಷಣದ ಮಮತೆ ತೋರಿ
ನಿತ್ಯ ಚಾಕರಿ ಮಾಡಿಸುವ
ಕುಟುಂಬದ ಇತರರಿಗೋ!
ತೊರೆದುಬಂದ ಎನ್ನ
ಹಾಲುಂಡತವರಿಗೋ!
ದಾರಿ ತೋಚದಾಗಿದೆ !
ಗೊಂದಲದ ಗೂಡಲಿ
ನೊಂದುಬೆಂದಿರುವ
ಎನ್ನ ಮನವನೊಮ್ಮೆ
ಇಣುಕಿ ನೋಡಲಾರೆಯೇಕೆ?


  • ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading