ಎಲ್ಲರೂ ಸವಿಯಬಹುದಾದ ‘ಎಲ್ಲರ ಮನೆ ದೋಸೆ…’!

ನಿಜ ಜೀವನದ ನಿದರ್ಶನಗಳನ್ನು ಪುಟ್ಟ ಪುಟ್ಟ ಕಥೆಯ ರೂಪದಲ್ಲಿ ಹೊಸೆದು ಅದರೊಳಗೆ ಒಂದು ಸದ್ವಿಚಾರದ ಸಿಹಿಗುಳಿಗೆಯನ್ನು ಅಡಗಿಸಿಟ್ಟಿರುವ‌ಂಥ ಸಂರಚನೆಯ ಬರಹವೆ ಡಾ. ವಿರೂಪಾಕ್ಷ ದೇವರಮನೆ ಅವರ ‘ಎಲ್ಲರ ಮನೆ ದೋಸೆ’… ಈ ಕೃತಿಯ ಕುರಿತು ಸಂದೇಶ ಎಚ್ ನಾಯ್ಕ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಎಲ್ಲರ ಮನೆ ದೋಸೆ….
ಲೇಖಕರು : ಡಾ. ವಿರೂಪಾಕ್ಷ ದೇವರಮನೆ
ಪ್ರಕಾಶನ : ಸಾವಣ್ಣ ಪ್ರಕಾಶನ
ಬೆಲೆ : ೧೦೮ .೦೦

ವ್ಯಕ್ತಿತ್ವಕ್ಕೆ ವಿಕಸನಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು ಆಗಿಂದಾಗ್ಗೆ ಬಿಡುಗಡೆಯಾಗಿ ಓದುಗರನ್ನು ಸೆಳೆಯುತ್ತಲೇ ಇರುತ್ತವೆ. ಹಾಗೆಯೇ ಕಥೆಗಳಿಗೂ ದೊಡ್ಡ ಮಟ್ಟದ ಓದುಗ ವರ್ಗವಿದೆ ಮತ್ತು ಕಥೆಗಾರರ ಸಂಖ್ಯೆಯೂ ಹೆಚ್ಚಿದೆ. ಇವೆರಡರ ಒಂದು ಅಚ್ಚುಕಟ್ಟಾದ ಸಂಯೋಗವೇ “ಎಲ್ಲರ ಮನೆ ದೋಸೆ….” ಎಂಬ ವಿಭಿನ್ನವಾದ ಶೀರ್ಷಿಕೆಯ ಈ ಕೃತಿ. ಇಲ್ಲಿ ಕಥೆಯಂಥ ಹಲವಾರು ಬರಹಗಳಿವೆ, ಅವುಗಳ ಆಳದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹಲವು‌ ತತ್ವಗಳ‌ ಸಾರವಿದೆ. ಆದಾಗ್ಯೂ‌ ಪ್ರತೀ‌‌ ಕಥೆಯು ಎರಡು ಪುಟಗಳನ್ನು ಮೀರುವುದಿಲ್ಲ. ಚಿಕ್ಕ ಚಿಕ್ಕ ಕಥೆಗಳನ್ನೊಳಗೊಂಡಿರುವ ಈ ಪುಸ್ತಕವನ್ನು ಬರೆದವರು, “ಮಕ್ಕಳತ್ರ ಮಾತಾಡಿ”, “ನೀನಿಲ್ಲದೇ ನನಗೇನಿದೆ!” ಇತ್ಯಾದಿ ಜನಪ್ರಿಯ ಪುಸ್ತಕಗಳನ್ನು ಬರೆದಿರುವ ಖ್ಯಾತ ಲೇಖಕರಾದ “ಡಾ. ವಿರೂಪಾಕ್ಷ ದೇವರಮನೆ”.

ಈ ಪುಸ್ತಕದ ಶೀರ್ಷಿಕೆಯನ್ನೊಮ್ಮೆ ನಾವು‌ ಗಮನಿಸಲೇಬೇಕು! ಅದು “ಎಲ್ಲರ ಮನೆ ದೋಸೆ…..” ಎಂದು. ಅಲ್ಲೊಂದು ಅಪೂರ್ಣತೆಯ ಭಾವ ಸಣ್ಣಗೆ‌ ನಮ್ಮನ್ನು ಕಾಡುತ್ತದೆ. ಆ ದೋಸೆಗಳು ತೂತೋ, ರುಚಿಯೋ, ಸೀದು ಹೋಗಿದ್ದೋ,‌‌ ತೂತೇ ಇಲ್ಲದ್ದೋ.. ಹೀಗೆ ಹಲವಾರು ಆಯ್ಕೆಗಳನ್ನು ಓದುಗರಿಗೆ ಮುಕ್ತವಾಗಿರಿಸಿದ್ದು, ಅವರು ಅಲ್ಲಿನ ಕಥೆಗಳನ್ನು ಓದುತ್ತಾ ಓದುತ್ತಾ ಆ ಮೂಲಕ ಅದಕ್ಕೆ ಉತ್ತರ‌ ಕಂಡುಕೊಳ್ಳುವ ಅವಕಾಶವಿದೆ. ಅಲ್ಲಿ ಕಂಡುಕೊಳ್ಳುವ ಉತ್ತರವು ಶೀರ್ಷಿಕೆಗೂ ಹಾಗೂ ಆ ಪುಸ್ತಕದ ಓದಿಗೂ‌ ಒಂದು ಪರಿಪೂರ್ಣತೆಯನ್ನು ಒದಗಿಸುತ್ತದೆ. ಚಿಕ್ಕ ಚಿಕ್ಕ ಕಥೆಗಳಾಗಿರುವುದರಿಂದ ಓದು ಒತ್ತಡದಾಯಕವೆನಿಸದೇ ತುಂಬಾ ಸರಾಗ ಹಾಗೂ‌ ನಿರಾಳವಾಗಿ ಸಾಗುತ್ತದೆ.

 

ಆದರೆ ಇಲ್ಲಿನ ಕಥೆಗಳನ್ನು ಒಂದೇ ಸಮನೇ ಓದಿ ಮುಗಿಸಿದರೆ ಪ್ರಾಯಶಃ‌ ಆ ಓದು ಸ್ವಾರಸ್ಯಪೂರ್ಣವಾಗಲಿಕ್ಕಿಲ್ಲ. ಅದರ ಬದಲಿಗೆ ಒಂದೊಂದೇ ಕಥೆಯನ್ನು ಓದಿ, ಅದನ್ನು ಮತ್ತೆ‌ ಮತ್ತೆ ಮೆಲುಕು ಹಾಕುತ್ತಾ, ಅದರ ವಿವಿಧ ಆಯಾಮಗಳನ್ನು‌ ನಮ್ಮೊಳಗೆ ಹಾಗೂ‌ ನಮ್ಮ ಸುತ್ತಮುತ್ತಲಿನ ಜೀವಂತ ಉದಾಹರಣೆಗಳೊಂದಿಗೆ ತಾಳೆ ಹಾಕುತ್ತಾ ಮುಂದುವರಿದರೆ ಒಂದೊಂದು ಕಥೆಯೂ ಹಲವಾರು‌‌ ಒಳನೋಟ ಹಾಗೂ‌ ದೃಷ್ಟಿಕೋನಗಳನ್ನು ಸ್ಪುರಿಸುತ್ತದೆ. ಅವರವರೇ ಸ್ವತಃ ಕಂಡುಕೊಳ್ಳುವುದರಿಂದ ಅಲ್ಲೆಲ್ಲೂ ಯಾವುದೇ ಗೊಂದಲಕ್ಕೇ ಆಸ್ಪದವೇ ಇಲ್ಲ!

‘ವ್ಯಕ್ತಿತ್ವ ವಿಕಸನ’ ಎಂದ ಕೂಡಲೇ ಬಹುತೇಕರಿಗೆ ದೊಡ್ಡ ಮಟ್ಟಿನ ತತ್ವ, ಪ್ರವಚನ, ಕಂಡು ಕೇಳರಿಯದ ಉದಾಹರಣೆಗಳು, ಒಣ ವಿವರಣೆಗಳೇ ಕಣ್ಣಮುಂದೆ ಬರುತ್ತವೆ. ಆದರೆ ಈ ಪುಸ್ತಕ ಅದಕ್ಕೆ ಅತೀತವಾದುದು. ಇಲ್ಲೆಲ್ಲೂ ಅಂಥ ಬಿಟ್ಟಿ ಸಲಹೆಗಳಿಗೆ‌ ಜಾಗವೇ ಇಲ್ಲಿ. ಈ‌ ಪುಸ್ತಕದ ಉಪಶೀರ್ಷಿಕೆಯಲ್ಲಿ ಇರುವಂತೆ ‘ನಮ್ ನಿಮ್ ಕಥೆಗಳು’ – ಅಂದರೆ ಇದರಲ್ಲಿ ಬರುವ‌ ಪ್ರತಿಯೊಂದು ಕಥೆಯೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ನಿಮ್ಮ ಜೀವನ ಘಟನಾವಳಿಗಳ ಜೊತೆಗೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ಬೆಸೆದುಕೊಂಡಿದ್ದು, ಓದುತ್ತಾ ಹೋದಂತೆ ಇದು‌ ನಮ್ಮದೇ ಕಥೆಯಲ್ಲವೇ? ಎಂಬ ಭಾವನೆಯನ್ನು ಮೂಡಿಸುತ್ತದೆ. ಒಟ್ಟಾರೆಯಾಗಿ‌ ಜೋಗಿಯವರ‌ು ಮುನ್ನುಡಿಯಲ್ಲಿ ಹೇಳಿದಂತೆ, ಇವುಗಳು “ಏನನ್ನೂ ಹೇಳದೇ ಎಲ್ಲವನ್ನೂ‌ ಹೇಳುವ ಕಥೆಗಳು!”

ನಿಜ ಜೀವನದ ನಿದರ್ಶನಗಳನ್ನು ಪುಟ್ಟ ಪುಟ್ಟ ಕಥೆಯ ರೂಪದಲ್ಲಿ ಹೊಸೆದು ಅದರೊಳಗೆ ಒಂದು ಸದ್ವಿಚಾರದ ಸಿಹಿಗುಳಿಗೆಯನ್ನು ಅಡಗಿಸಿಟ್ಟಿರುವ‌ಂಥ ಸಂರಚನೆಯ ಬರಹಗಳಿವು. ಈ ಬರಹಗಳಲ್ಲಿ ಸಂವಹನದ ಪ್ರಾಮುಖ್ಯತೆ, ಕೌಟುಂಬಿಕ ಬದುಕಿನ ಅರ್ಥ-ವ್ಯಾಪ್ತಿ-ವೈಶಿಷ್ಟ್ಯತೆ, ಆಧುನಿಕತೆಯ ಪ್ರಭಾವ, ಒತ್ತಡ, ಶಿಕ್ಷಣದ ನಿಜಾರ್ಥ, ಅವಳು-ಅವನ ನಡುವಿನ ವಿಚಾರಗಳು, ವೈಜ್ಞಾನಿಕ ದೃಷ್ಟಿಕೋನ ಪ್ರಸ್ತುತತೆ, ಹೀಗೆ ಹತ್ತು‌ ಹಲವು ಮಹತ್ವಪೂರ್ಣ ಹಾಗೂ ವೈವಿಧ್ಯಮಯ ವಿಚಾರಗಳೆಡೆಗೆ ಬೆಳಕು ಚೆಲ್ಲುವ ಅರ್ಥಪೂರ್ಣ ಬರಹಗಳಿವೆ. ಮನೆಕೆಲಸದವಳಿಂದ ಹಿಡಿದು ಸೋಷಿಯಲ್‌ ಮೀಡಿಯಾ ಸ್ವಾಮಿ‌ ಹಾಗೂ ಸೆಗಣಿಯಿಂದ ಹಿಡಿದು ಪ್ರಶಸ್ತಿಗಳವರೆಗೆ – ಹೀಗೆ ಹತ್ತು ಹಲವು ವಿಷಯ ವಸ್ತುಗಳ ಸುತ್ತ‌ ಹೆಣೆಯಲ್ಪಟ್ಟ ಈ ಕಥಾ‌ಮಾಲಿಕೆಯಲ್ಲಿನ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಹಾಗೂ ವಿಶಿಷ್ಟ. ಆದರೆ ಅವೆಲ್ಲವೂ‌ ಸರಳ, ಸಂಕ್ಷಿಪ್ತ ಆದಾಗ್ಯೂ ಅತ್ಯಂತ ಅರ್ಥಪೂರ್ಣ!


  • ಸಂದೇಶ ಎಚ್ ನಾಯ್ಕ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading