ಸಸ್ಯಹಾರವೂ ಕೂಡಾ ಜೇಬಿಗೆ ಕಹಿ

ಮಾಂಸಹಾರಿ ಊಟವನ್ನು ‘ಖಾರ’ದ ಊಟ ಅಂತಲೂ, ಸಸ್ಯಹಾರಿ ಊಟವನ್ನು ‘ಸಿಹಿ’ ಊಟ ಅಂತಲೂ ಕರೆಯುವುದು ಒಂದು ಸಾಮಾನ್ಯ ರೂಢಿ. ಆದರೆ ತರಕಾರಿ ಬೆಲೆಯೂ ಇನ್ನಿಲ್ಲದಂತೆ ಏರುವುದರಿಂದ ಅದನ್ನೀಗ ಸಿಹಿ ಅಡುಗೆ ಎನ್ನಲು ಹಿಂಜರಿಯುವಂತಾಗಿದೆ. ಬೆಲೆಯ ಹಿನ್ನೆಯಲ್ಲಿ ನೋಡುವುದಾದರೆ ಸಸ್ಯಹಾರವೂ ಕೂಡಾ ಜೇಬಿಗೆ ಕಹಿ, ಖಾರ ಎಲ್ಲವೂ ಆಗಿ ಪರಿಣಮಿಸುತ್ತದೆ. ಅದೇ ರೀತಿಯಲ್ಲಿ ಸಸ್ಯಹಾರಕ್ಕೂ ಹಾಹಾಕಾರ ಎಂದೆನ್ನಬಹುದು.

‘ಕಾಯಿಪಲ್ಲೆ’ – ಹೀಗೊಂದು ಹೆಸರನ್ನು ತರಕಾರಿಗೆ ಅದ್ಯಾವ ಪುಣ್ಯಾತ್ಮ ಇಟ್ಟನೋ? ಆ ಪದದಲ್ಲಿ ಅಡಗಿರುವ ‘ಕಾಯಿ’ ಎಂಬ ಪದ ಹೊರಹೊಮ್ಮಿಸುವ ಇನ್ನೊಂದು ಅರ್ಥವಾದ ‘ಕಾಯುವಿಕೆ’ ಎನ್ನುವ ಕ್ರಿಯೆ ತರಕಾರಿಯ ವಿಷಯದಲ್ಲಿ ಬೇರೆ ಬೇರೆ ಕಾರಣಗಳಿಗೆ ನಿಜವೇ ಆಗಿದೆ. ಇದೇನಿದು ಪದಾರ್ಥ ತಯಾರಿಸಲು ಬಳಸುವ ಕಾಯಿಪಲ್ಲೆಯ ವಿಷಯ ಹೇಳುವಾಗ ಪದ, ಅರ್ಥ ಎಲ್ಲಾ ಅಂದುಕೊಂಡು…‌ ಎಂದು ನೀವ್ಯಾರೂ ಮೂಗು ಮುರಿಯದಿರಿ. ತರಕಾರಿಯನ್ನು ಬೇಕಾಬಿಟ್ಟಿಯಾಗಿ ಬುಟ್ಟಿಗೆ ತುಂಬಿಸಿಕೊಂಡು ಬಂದರೆ ಮನೆಯಾಕೆಯಿಂದ “ಯಾಕೆ? ಏನು? ಇದೇನು ಬಿಟ್ಟಿ ಸಿಕ್ಕೀತೇ?” ಎಂಬಿತ್ಯಾದಿ ಪ್ರಶ್ನಾ ಬಾಣಗಳಿಗೆ ಗುರಿಯಾಗಬೇಕಾಗುತ್ತದೆ. ಇವುಗಳಿಂದ ಪಾರಾಗಬೇಕು ಎಂದರೆ ಬೇಕಾದ ಗಾತ್ರ, ಬಣ್ಣ, ಆಕಾರ, ತಾಜಾತನ ಇನ್ನಿತ್ಯಾದಿ ಅಂಶಗಳ ಆಧಾರದಲ್ಲಿ ಅವುಗಳನ್ನು ಆರಿಸಿ, ಖರೀದಿಸಿ ತರಬೇಕಾದ್ದು ಅವಶ್ಯ. ಹಾಗೆ ಮಾಡಬೇಕು ಅಂದರೆ ನಿಶ್ಚಿತವಾಗಿಯೂ ‘ಕಾಯು’ವುದು ಅನಿವಾರ್ಯ.

ಅದರಾಚೆ, “ಯಾಕ್ರೀ ತರಕಾರಿ ತರೋದು ಇಷ್ಟೊಂದು ಲೇಟು?” ಎಂದೇನಾದರೂ ಆಕೆ ಉರಿಮುಖಿಯಾದರೆ, ಅದಕ್ಕೆ ಎಲ್ಲಾ ತರಕಾರಿಗಳ ದರವೂ ಏರುಮುಖಿ ಆಗಿರುವುದೇ ಕಾರಣ ಎನ್ನಬಹುದು. ‘ಅದು ಹೇಗೆ?’ ಎಂದರೆ, ಬೆಲೆ ವಿಪರೀತ ಆಗಿರುವುದರಿಂದ ಅವುಗಳಲ್ಲೇ ಕೊಂಚ ಕೈಗೆಟುಕುವಂಥದ್ದನ್ನೇ ಒಂದೊಂದಾಗಿ ಹುಡುಕಿ, ತೂಗಿ, ಭಾಗಿ, ಅಳೆದು ಕೊನೆಗೂ ವ್ಯಾಪಾರ ಕುದುರಿಸಬೇಕಾಗುತ್ತದೆ. ಅಂದ ಮೇಲೆ ‘ವಿಳಂಬ’ಸೂತ್ರ ಸಹಜ!

ಫೋಟೋ ಕೃಪೆ : google

‘ತರಕಾರಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳುತ್ತಾರೆ. ಆದರೆ ಎಷ್ಟೋ ಸಲ ಈ ಮಾತು ಅರ್ಧ ಸತ್ಯವಷ್ಟೇ ಎನಿಸುತ್ತದೆ. ಅದು ಹೇಗೆಂದರೆ, ನೋಡಿ ಆಗಾಗ ತರಕಾರಿಗಳ ಬೆಲೆ ಗಗನಕ್ಕೇರುತ್ತಿರುತ್ತದೆ. ಅವುಗಳನ್ನು ಖರೀದಿಸುವುದೆಂದರೆ ಅಷ್ಟು ಸುಲಭದ ಬಾಬತ್ತಲ್ಲ. ಹತ್ತು ಇಪ್ಪತ್ತಕ್ಕೆ ಸಿಗುವ ಹಲವು ತರಕಾರಿಗಳ ದರ ಅಷ್ಟು ಸುಲಭಕ್ಕೆ ಹತ್ತಿರಕ್ಕೆ ಎಟುಕದಂಥ ರುಪಾಯಿ ನೂರು, ಇನ್ನೂರು ಎನ್ನುತ್ತಾ ಏಕಾಏಕಿ ಸೆಂಚುರಿ ಕ್ಲಬ್‌ಗೆ ತೇರ್ಗಡೆ ಹೊಂದುತ್ತವೆ. ಅಂಥ ಸ್ಥಿತಿಯಲ್ಲಿ, ಅಷ್ಟೊಂದು ಹಣ ವ್ಯಯಿಸಿ ತರಕಾರಿ ಕೊಳ್ಳುವುದು ಎಂದರೆ ಅದು ನಿಜಕ್ಕೂ, ಖರೀದಿ ಮಾಡುವವರ ಆರೋಗ್ಯಕ್ಕೆ ಹಾನಿಕರವೇ ಸರಿ. ಒಂದು ಆರ್ಥಿಕ ಆರೋಗ್ಯ ಹದಗೆಡಬಹುದು ಇಲ್ಲವೇ ಅವುಗಳ ದರವನ್ನೆಲ್ಲ ನೋಡಿ ಬಿ.ಪಿ ಏರುಪೇರಾಗಬಹುದು, ಒತ್ತಡ ಉಂಟಾಗಬಹುದು, ಸಣ್ಣಗೆ ಆಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ. ತನ್ಮೂಲಕ ತರಕಾರಿಯೂ ಅಪಾಯಕಾರಿ ಆಗಿ ಪರಿಣಮಿಸುತ್ತದೆ. ಮಾಂಸ ತಿನ್ನದ, ತರಕಾರಿ (ವೆಜ್) ಮಾತ್ರ ತಿನ್ನುವವರನ್ನು ಶಾಖಾಹಾರಿಗಳು ಎಂದೂ ಕೂಡಾ ಕರೆಯುತ್ತಾರೆ. ಅದೇ ಆಗಾಗ್ಗೆ ಹೆಚ್ಚುವ ತರಕಾರಿಗಳ ಬೆಲೆಯನ್ನು ಕಂಡು ಸಣ್ಣಗೆ ಶಾಕ್‌ಗೆ ಒಳಗಾಗುವುದನ್ನು ನೋಡುತ್ತಿದ್ದರೆ, ಅಂಥವರನ್ನು ‘ಶಾಕ್’ಹಾರಿಗಳು ಎಂದು ಕರೆದರೂ ಸರಿಹೋಗುತ್ತದೆ ಅಲ್ಲವೇ?!

ಮಾಂಸಹಾರಿ ಊಟವನ್ನು ‘ಖಾರ’ದ ಊಟ ಅಂತಲೂ, ಸಸ್ಯಹಾರಿ ಊಟವನ್ನು ‘ಸಿಹಿ’ ಊಟ ಅಂತಲೂ ಕರೆಯುವುದು ಒಂದು ಸಾಮಾನ್ಯ ರೂಢಿ. ಆದರೆ ತರಕಾರಿ ಬೆಲೆಯೂ ಇನ್ನಿಲ್ಲದಂತೆ ಏರುವುದರಿಂದ ಅದನ್ನೀಗ ಸಿಹಿ ಅಡುಗೆ ಎನ್ನಲು ಹಿಂಜರಿಯುವಂತಾಗಿದೆ. ಬೆಲೆಯ ಹಿನ್ನೆಯಲ್ಲಿ ನೋಡುವುದಾದರೆ ಸಸ್ಯಹಾರವೂ ಕೂಡಾ ಜೇಬಿಗೆ ಕಹಿ, ಖಾರ ಎಲ್ಲವೂ ಆಗಿ ಪರಿಣಮಿಸುತ್ತದೆ. ಅದೇ ರೀತಿಯಲ್ಲಿ ಸಸ್ಯಹಾರಕ್ಕೂ ಹಾಹಾಕಾರ ಎಂದೆನ್ನಬಹುದು. ‘ನಾನ್’ ಎನ್ನುವುದಕ್ಕೆ ಇಲ್ಲ ಎಂಬ ಅರ್ಥವಿದೆ. ಅದರಂತೆ ನಾನ್‌ವೆಜ್ ಎಂದಾಕ್ಷಣ ಮಾಂಸಾಹಾರ ಎಂದು ತಿಳಿಯಬೇಕಿಲ್ಲ. ತರಕಾರಿ ಇಲ್ಲದ ಎಂದರೆ ಕಾಳು, ಸ್ಥಳೀಯವಾಗಿ ದೊರಕುವ ಸೊಪ್ಪು, ಕಾಯಿ ಇತ್ಯಾದಿಗಳ ಬಳಕೆ ಹೆಚ್ಚಿರುವುದು ಎಂದೂ ಅರ್ಥೈಸಿಕೊಳ್ಳಲಡ್ಡಿಯಿಲ್ಲ. ಹೀಗೇ ತರಕಾರಿ ದರ ಏರುತ್ತಲೇ ಹೋದರೆ ಬಹುಶಃ ಮುಂದೊಂದು ದಿನ ತರಕಾರಿ ಖರೀದಿಗೂ ಸರಕಾರಿ ಸಬ್ಸಿಡಿ ನೀಡಬೇಕೆಂಬ ಆಗ್ರಹ ಕೇಳಿಬಂದರೂ ಬರಬಹುದು!

ವಿವಿಧ ಬಗೆಯ ಮಾಂಸ ಹಾಗೂ ತರಕಾರಿಗಳ ಕುರಿತಂತೆ ಶ್ರೇಷ್ಠ, ನಿಕೃಷ್ಟದಿಂದ ಹಿಡಿದು ದೇಹಕ್ಕೆ ಪೂರಕ, ಮಾರಕ ಎನ್ನುವುದರವರೆಗೆ ತರಹೇವಾರಿ ಚರ್ಚೆ, ವ್ಯಾಖ್ಯಾನ, ಪರ-ವಿರೋಧ ಅಭಿಪ್ರಾಯಗಳು ವಿವಿಧ ಸಂದರ್ಭಗಳಲ್ಲಿ ಕೇಳಿಬರುತ್ತಲೇ ಇರುತ್ತವೆ. ತರ ತರದ ತರಕಾರಿಗಳ ಬಗ್ಗೆ ಅವುಗಳ ರೂಪು, ಬಣ್ಣ, ಆಕಾರ, ಗಾತ್ರ ಇನ್ನಿತ್ಯಾದಿ ಸ್ವರೂಪಗಳ ಕುರಿತಂತೆ ನಾವೆಲ್ಲರೂ ಒಂದಿಲ್ಲೊಂದು ವಿವರಣೆಯನ್ನು ಕೇಳಿಕೊಂಡೇ ಬಂದವರು. ಅಂಥ ಶಿಶುಗೀತೆಗಳ ಪೈಕಿ ‘ಬೇಕೇ ಬೇಕೇ ತರಕಾರಿ, ತರತರವಾಗಿಹ ತರಕಾರಿ’ ಹಾಡೂ ಒಂದು. ಅದನ್ನೇ ಬೆಲೆ ಹೆಚ್ಚಳದ ಸಂದರ್ಭದಲ್ಲಿ, ‘ಬೇಕೇ ಬೇಕೇ ತರಕಾರಿ, ತರ ತರ ನಡುಗಿಸೋ ತರಕಾರಿ’ ಎಂದು ಬದಲಿಸಿಕೊಂಡು ಹಾಡುವುದೇ ಸೂಕ್ತ. ಅದೇ ಧಾಟಿಯಲ್ಲಿ ಆ ಸಂದರ್ಭದಲ್ಲಿ ತರಕಾರಿಗಳ ಕುರಿತಾದ ವಿವರಣೆ, ವ್ಯಾಖ್ಯಾನವೂ ಬದಲಾಗುತ್ತದೆ.

ಫೋಟೋ ಕೃಪೆ : google

‘ಲೇಡೀಸ್ ಫಿಂಗರ್’ ಎಂಬ ಮೋಹಕ ಹೆಸರು ಬೆಂಡೆಗೆ. ಸರಳವಾಗಿ ಅದನ್ನು ಬೆರಳನು ಹೋಲುವ ತರಕಾರಿ ಎಂದೂ ಹೇಳುತ್ತಾರೆ. ಹಾಗೆಂದು ಅದನ್ನು ಮುಟ್ಟಲು ಹೋದರೆ, ಅದು ಬೆರಳನ್ನೇ ಕಚ್ಚುತ್ತದೆ ಎಂದೆನ್ನಬಹುದು. ಹಾಗಿರುತ್ತದೆ ಅದರ ರೇಟ್. ಅಂಥ ಸಂದರ್ಭಗಳಲ್ಲಿ ಅದನ್ನ ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ಕೊಂಡುಕೊಳ್ಳುತ್ತಾರೇನೋ. ಇನ್ನು ಪಡುವಲಕಾಯಿಯಂತೂ ಖುದ್ದು ಹಾವಂತೆ ಕಚ್ಚುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂಥಾ ಹವಾಲ್ದಾರರ ಸಂತತಿಯವರಾದರೂ ಹಾವಂತೆ ಇರುವ ಈ ಪಡುವಲಕಾಯಿ ಕೊಳ್ಳಲು ಹಿಂದೇಟು ಹಾಕಬಹುದು. ಟೊಮೇಟೊ ಅಂತೂ ಬಿಡಿ. ಅದರ ಹೆಸರಲ್ಲೇ ‘ಏಟು’ ಎಂದು ಕೇಳಿಸುವ ಪದವೊಂದರ ಅಪಭ್ರಂಶ ರೂಪವೊಂದು ಹೊಕ್ಕಿಕೊಂಡಿದೆ. ಅದಕ್ಕೆ ತಕ್ಕಂತೆ ಅದು ಗ್ರಾಹಕರ ಮೇಲೆ ರೇಟಿನ ಏಟಿನ ರುಚಿಯನ್ನು ತೋರಿಸುತ್ತಲೇ ಇರುತ್ತದೆ. ಅದರ ಮೈಬಣ್ಣದ ಕೆಂಪಿನ ರೀತಿಯಲ್ಲೇ ಆಗಾಗ ಜನರ ಮೇಲೆಯೂ ಕೆಂಗಣ್ಣು ಬೀರುವ ಈ ಟೊಮೇಟೋ ಹಣ್ಣನ್ನು ಖರೀದಿಸಲು ಬೇಕಾಗುವ ಹಣವನ್ನು ಹೊಂದಿಸಲು ಸಾಲದ ಮೊರೆ ಹೋದರೂ ಕಡಿಮೆಯೇ ಬಿಡಿ. ‘ನನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳದವರಂತೆ, ಕೊಳೆಸಿ ಯಾರ್ಯಾರದೋ ಮೇಲೆ ಎಸೆದು ಅಪಮಾನಿಸುವಿರಲ್ಲ (ಟೊಮೇಟೋವನ್ನು), ಎಲ್ಲಿ ಈಗ ಹಾಗೆ ಮಾಡಿ ನೋಡೋಣ…’ ಎಂದು ಜನರಿಗೆ ಸವಾಲು ಎಸೆಯಲು ಅವುಗಳಿಗೆ ಇದೊಳ್ಳೆಯ ಅವಕಾಶ.

ಹಿರಿ ಹಿರಿ ಹಿಗ್ಗದೇ, ಕಿರಿ ಕಿರಿ ಎನಿಸಿ ಕುಗ್ಗುವಂತೆ ಮಾಡುವಲ್ಲಿ ದುಬಾರಿ ಹೀರೆಕಾಯಿಯ ಪಾತ್ರ ಹಿರೀದು. ಜೇಬಿನಲ್ಲಿರುವ ಕಾಸನ್ನು ಹೀರಿ ಹಾಕುವುದರಲ್ಲಿ ಅದೂ ಕೂಡಾ ಹಿಂದೆ ಬೀಳದು. ಹಿಂದಿಯಲ್ಲಿ ಹೀರಾ ಎಂದ ವಜ್ರ ಎಂದರ್ಥ. ಈ ಹೀರೆ ಕೊಳ್ಳಲು ಆ ಹೀರಾವನ್ನೇ (ಇದ್ದವರು) ಅಡವಿಟ್ಟರೂ ಸಾಲದು ಬಿಡಿ. ಹಣ ನೀಡಿ ಆಲೂಗಡ್ಡೆ ಖರೀದಿಸುವುದು ಎಷ್ಟು ಕಷ್ಟ ಎಂದರೆ ಅದಕ್ಕಿಂತ ಸ್ಥಳೀಯವಾಗಿ ಸಿಗುವ ಗಡ್ಡೆ ಗೆಣಸು ತಿಂದು ಬದುಕುವುದೇ ಚೆಂದಿತ್ತೇನೋ ಅನಿಸುತ್ತದೆ. ಕ್ಯಾಬೇಜ್‌ನ ತರಬೇಕು ಎಂದರೆ ಮನೆಯಲ್ಲಿ ಇರುವ ಚಿನ್ನ, ಬೆಳ್ಳಿ, ಸೈಟ್ ಯಾವುದನ್ನು ಮಾರಲಿ – ‘ಕ್ಯಾ ಬೇಚ್‌ನಾ?’ ಎಂಬ ಪ್ರಶ್ನೆಯೊಂದು ಖಂಡಿತವಾಗಿಯೂ ಮೂಡದೇ ಇರಲಾರದು. ಕೆಲವೊಮ್ಮೆ ಇದು ಕೋಸು ಅಲ್ಲ, ಬರೀ ಕಾಸು ಎಂಬ ಅನುಮಾನವೂ ಮೂಡುತ್ತದೆ. ಖರೀದಿಯ ಹಿಗ್ಗನ್ನೇ ಹಿಂಡಿ ಹಿಪ್ಪೆ ಮಾಡುವ ನುಗ್ಗೆ ಕಾಯಿಯನ್ನಂತೂ ಖರೀದಿಸಲು ಮುನ್ನುಗ್ಗುವ ಆರ್ಥಿಕ ಪ್ರಾಬಲ್ಯ ಹೊಂದಿರುವವರು ತೀರಾ ಕಡಿಮೆ. ಡ್ರಮ್‌’ಸ್ಟಿಕ್’ ಎಂಬ ಕೋಲನ್ನು ಹೋಲುವ ಈ ತರಕಾರಿ ಬೆಲೆಯೇರಿಕೆಯ ಏಟಿನ ಕೋಲಾಹಲವನ್ನು ಕೊಳ್ಳುವವರ ಮೇಲೆ ಹೂಡದೇ ಇರಲಾರದು.

ಕ್ಯಾರೆಟ್ ಕೊಳ್ಳಬೇಕು ಎಂದೆನಿಸಿದರೂ, ‘ಕ್ಯಾ.. ರೇಟ್’ ಎಂದು ಕೇಳಿದ್ದಕ್ಕೆ ಬರುವ ಉತ್ತರಕ್ಕೇ ದೂರ ಸರಿದು ನಿಲ್ಲುವಷ್ಟೂ ಗಾಜರ್ ಗಾಬರಿ ಹುಟ್ಟಿಸುವುದು ನಿಶ್ಚಿತ. ಬಹಳ ರುಚಿಯಾದ ತರಕಾರಿ ಎಂದು ‘ಬೀನ್ಸ್’ ಕೊಳ್ಳೋಣವೆಂದರೆ ಸಿಂಗಲ್, ಡಬಲ್ ಯಾವುದೇ ಆಗಿದ್ದರೂ ಡಬಲ್ ಆದಾಯವೇ ಬೇಕು. ಅಂದ ಮೇಲೆ ಕಿಸೆಯಲ್ಲಿ ಕಡಿಮೆ ಹಣವಿಟ್ಟುಕೊಂಡು ಹುರುಳಿಕಾಯಿ ತೆಗೆದುಕೊಳ್ಳಲು ಯತ್ನಿಸುವುದು ಹುರುಳಿಲ್ಲದ ಆಲೋಚನೆಯೇ ಸರಿ. ಗೋಲಾಕಾರದ ನಿಂಬೆಯೂ ಕೂಡಾ ಜನರನ್ನು ಗೋಳುಹೊಯ್ದುಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಅದನ್ನು ಹಿಂಡುವ ಮುನ್ನವೇ ಬೆಲೆಯ ಮೂಲಕ ಅದುವೇ ಜನರನ್ನು ಒಂದು ಹಂತಕ್ಕೆ ಹಿಂಡುತ್ತದೆ. ಬದನೆಯ ಬೆಲೆ ಕೇಳಿ ವದನ ಕಪ್ಪಿಟ್ಟರೆ ಅಚ್ಚರಿಯೇ ಇಲ್ಲ. ಹಾಗಲದ ಕಹಿ ಅದನ್ನು ತಿನ್ನುವುದಕ್ಕೂ ಮುನ್ನವೇ ಅನುಭವಕ್ಕೆ ಬಂದರೆ ಆಶ್ಚರ್ಯವಿಲ್ಲ. ಮನಸೂರೆಗೊಳ್ಳುವಂತಿರುವ ಸೋರೆಕಾಯಿ ತರಬೇಕೆಂದರೆ ಹಣವನ್ನು ಯಾವ್ಯಾವ ಮೂಲದಿಂದ ಸೂರೆಗೈಯ್ಯುವುದಪ್ಪಾ ಎಂಬ ಯೋಚನೆ ಎದ್ದುನಿಂತು ಸೋರೆಗೆ ಸಾರಿ ಹೇಳಿ ಸಾರಿಗೆ ಅನ್ಯ ಆಯ್ಕೆ ನೋಡಿಕೊಳ್ಳುವ ಸಾಧ್ಯತೆಯೇ ಹೆಚ್ಚು.

ನೀರುಳ್ಳಿ ಗ್ರಾಹಕರಲ್ಲಿ ಕಣ್ಣೀರು ತರಿಸಿ ಅದು ಕಣ್ಣೀರುಳ್ಳಿ ಎನಿಸಿಕೊಳ್ಳುವುದು ಇಂದು ನಿನ್ನೆಯ ಘಟನೆಯಲ್ಲ. ಆನಿಯನ್ ಹೋಗಿ ಅದು ‘ಮನಿ’ಯನ್ ಆಗಿರುವುದೇ ಹೆಚ್ಚು. ನೀರು ಕುಡಿದಾದರೂ ಹೊಟ್ಟೆ ತುಂಬಿಸಿಕೊಳ್ಳುವೆವೇ ಹೊರತು, ಈರುಳ್ಳಿ ಹಾಕಿದ ಅಡುಗೆ ಮಾಡಲ್ಲ ಎಂದು‌ ಶಪಥ ಮಾಡುವಷ್ಟೂ ಅದು ದುಬಾರಿಯಾಗುತ್ತಿರುತ್ತದೆ. ಚಿನ್ನ, ಬೆಳ್ಳಿಯನ್ನೇ ಸರಿಗಟ್ಟುವಂತೆ ಬೆಳ್ಳುಳ್ಳಿ ತಾನೂ ಕೂಡಾ ಭಾರೀ ಬೆಲೆಬಾಳುವವನೇ ಎಂದು ಆಗಾಗ ಸಾಬೀತುಪಡಿಸುವಲ್ಲಿ ಹಿಂದೆ ಬೀಳದು. ಸುವರ್ಣಗಡ್ಡೆಯಂತೂ ಹೆಸರಲ್ಲೇ ಸುವರ್ಣ ಅರ್ಥಾತ್ ಬಂಗಾರ ಇಟ್ಟುಕೊಂಡ ಮೇಲೆ, ಅದು ಬಂಗಾರದ ಬೆಲೆಗೆ ಒಂದು ಪೈಪೋಟಿ ನೀಡದೇ ಇರುತ್ತದೆಯೇ? ಒಟ್ಟಾರೆ ಇವುಗಳ ಬೆಲೆಯನ್ನೆಲ್ಲಾ ಗಮನಿಸಿದ ಮೇಲೆ, ತರ ತರ ತರಕಾರಿಗಳು ಭಯ, ಚಿಂತೆ, ಆಕ್ರೋಶ ಇನ್ನಿತ್ಯಾದಿ ತರಹೇವಾರಿ ಭಾವಗಳನ್ನು ತರುತ್ತಿರುವುದಂತೂ ಸುಳ್ಳಲ್ಲ. ಅದಕ್ಕೆ, “ಅಯ್ಯೋ ತರಕಾರಿ, ಬೆಲೆ ಇಳಿಸಿಕೊಂಡು ಆಗಪ್ಪಾ ತುಸು ಉಪಕಾರಿ…” ಎಂದೆನ್ನದೆ ವಿಧಿಯಿಲ್ಲ.

*ಓವರ್‌ಡೋಸ್:* ತರಕಾರಿಗಳ ಬೆಲೆ ಏರಿಳಿತದ ರೀತಿಯನ್ನು ಒಂದೇ ಮಾತಲ್ಲಿ ಹೇಳುವುದಾದರೆ – ‘ಒಂದೋ ಬುಟ್ಟಿ ತುಂಬಾ ತರಕಾರಿ, ಇಲ್ಲ ತುಟ್ಟಿ ತುಂಬಾ ತರಕಾರಿ’!


  • ಸಂದೇಶ್ ಎಚ್ ನಾಯ್ಕ್ – ಅಂಕಣಕಾರರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW