‘ಮಿತಿ’ ಕೃತಿ ಪರಿಚಯ – ರಶ್ಮಿ ಉಳಿಯಾರು

ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಕೃತಿ ಮೊದಲ ಕಾದಂಬರಿಯಾಗಿದ್ದು, ಇದೊಂದು ಸಾಮಾಜಿಕ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಲೇಖಕರು ತಮ್ಮ ಅಭಿಪ್ರಾಯಗಳನ್ನು ಪಾತ್ರಗಳ ಮೂಲಕ ಹೇಳಿಸುತ್ತಾರೆಯೋ ಎಂದನ್ನಿಸುತ್ತದೆ. ರಶ್ಮಿ ಉಳಿಯಾರು ಅವರು ಮಿತಿ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಿತಿ
ಲೇಖಕರು : ಧೀರಜ್ ಪೊಯ್ಯೆಕಂಡ
ಪ್ರಕಾಶಕರು : ದೇವಕಿ ಪ್ರಕಾಶನ (೨೦೨೦)
ಬೆಲೆ : ೧೮೦.೦೦
ಪುಟಗಳು :೧೯೧ 
ಲಭ್ಯತೆ: ಹರಿವು ಬುಕ್ಸ್ ಆನ್ಲೈನ್, ಕನ್ನಡಪುಸ್ತಕ.ನೆಟ್, ಸ್ನೇಹ ಬುಕ್ ಹೌಸ್, ಶ್ರೀನಗರ.

ಇದು ಲೇಖಕರ ಮೊದಲ ಪ್ರಕಟಿತ ಕಾದಂಬರಿ. ಈ ಹಿಂದೆ ಅವರ ಸಸ್ಪೆನ್ಸ್ ಥ್ರಿಲ್ಲರ್ ‘ಪರಾಶರ’ ಓದಿ ಪರಿಚಯ ಬರೆದಿದ್ದೆ. ಹಾಗೆಯೇ ಅವರ ಇತ್ತೀಚೆಗೆ ಪ್ರಕಟವಾದ ಪೊಲಿಟಿಕಲ್ ಥ್ರಿಲ್ಲರ್ ‘2035’ ಅನ್ನು ಪ್ರತಿಲಿಪಿಯಲ್ಲಿ ಓದಿದ್ದೆ. ಮೂರೂ ಸಹ ವಿಭಿನ್ನ ಮತ್ತು ವಿಶಿಷ್ಟವಾದ ಕಥಾವಸ್ತುಗಳು.

ಪ್ರಸ್ತುತ ಮಿತಿ ಒಂದು ಸಾಮಾಜಿಕ ಕಾದಂಬರಿ. ಇದರಲ್ಲಿ ಹಲವಾರು ಪಾತ್ರಗಳಿವೆ. ಸುಮಾರು ನಾಲ್ಕು ಹಿರಿಯ ದಂಪತಿಗಳು ಮತ್ತು ಮೂರು ಕಿರಿಯ ಜೋಡಿಗಳಿವೆ. ಮೊದಲು ಒಂದಿಷ್ಟು ಗೊಂದಲವೆನಿಸಿದರೂ ಐವತ್ತು ಅರವತ್ತು ಪುಟಗಳ ನಂತರ ಎಲ್ಲವೂ ಸ್ಪಷ್ಟವಾಗಿ ಅರ್ಥವಾಗುತ್ತಾ ಹೋಗುತ್ತದೆ. ಹೇಗೆ ಒಂದು ಪಾತ್ರವು ಮತ್ತೊಂದರೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನುವುದನ್ನು ತುಂಬಾ ಚೆನ್ನಾಗಿ ಅಲ್ಲಲ್ಲಿ ಫ್ಲಾಶ್ಬ್ಯಾಕ್ ತಂತ್ರದ ಮೂಲಕ ಹೇಳುತ್ತಾ ಸಾಗಿದ್ದಾರೆ. ಇದು ಅವರ ಪರಾಶರ ಕಾದಂಬರಿಯಲ್ಲೂ ಗುರುತಿಸಲ್ಪಡುವ ಶೈಲಿ. ನೇರ ನಿರೂಪಣೆ ಮಾಡದೇ ಪತ್ತೇದಾರಿ ಶೈಲಿಯನ್ನು ಅಳವಡಿಸಿದ್ದು ಓದುಗರ ಕುತೂಹಲವನ್ನು ಕೆರಳಿಸುತ್ತದೆ.

ಲೇಖಕರ ಬರವಣಿಗೆಯಲ್ಲಿ ನನಗೆ ಹಿಡಿಸುವ ಸಂಗತಿಯೆಂದರೆ ಬದುಕಿನ ಬಗ್ಗೆ ಬರೆಯುವ ನಿಷ್ಠುರ ಆದರೆ ಅರ್ಥಪೂರ್ಣ ಸಾಲುಗಳು. ಬಹುಶಃ ಲೇಖಕರು ತಮ್ಮ ಅಭಿಪ್ರಾಯಗಳನ್ನು ಪಾತ್ರಗಳ ಮೂಲಕ ಹೇಳಿಸುತ್ತಾರೆಯೋ ಎಂದನ್ನಿಸುತ್ತದೆ. ಈ ಕಾದಂಬರಿಯಲ್ಲೂ ಅಷ್ಟೇ. ಪ್ರೇಮಿಗಳು ಇದ್ದರೂ ಭಾವುಕತೆಗಿಂತ ಇಲ್ಲಿ ವಾಸ್ತವಿಕತೆಗೆ ಹೆಚ್ಚು ಮಹತ್ವ. ರಮ್ಯವಾದ ಅಥವಾ ಕಾಲ್ಪನಿಕವಾದ ಸಲ್ಲಾಪಗಳಿಲ್ಲ. ಅಷ್ಟೇ ಅಲ್ಲದೇ ಪಾತ್ರಗಳ ಮನೋಮಂಥನದ ಸಾಲುಗಳು ಯೋಚಿಸುವಂತೆ ಮಾಡುತ್ತವೆ. ನನಗಿಷ್ಟವಾದ ಕೆಲವು ಸಾಲುಗಳನ್ನು ಮತ್ತೆ ಮನನ ಮಾಡಿಕೊಳ್ಳಲು ಹೈ ಲೈಟ್ ಮಾಡಿಟ್ಟುಕೊಂಡಿದ್ದೇನೆ.ಉದಾಹರಣೆಗೆ;

“ನಂಬಿಕೆ ಎನ್ನುವುದು ಕಣ್ಣ ಮುಂದೆ ಕಾಣುವ ನಡವಳಿಕೆಗಳನ್ನು ನಾವು ಯಾವ ರೀತಿಯಲ್ಲಿ ಗ್ರಹಿಸುತ್ತೇವೆ ಅನ್ನುವುದರ ಆಧಾರದಲ್ಲಿ ಹುಟ್ಟಿಕೊಳ್ಳುತ್ತದೆಯೇ ಹೊರತು ಕಣ್ಣಿಗೆ ಕಾಣದ ವಾಸ್ತವದ ತಳಹದಿಯಲ್ಲಿ ಹುಟ್ಟಿಕೊಳ್ಳುವುದಿಲ್ಲ. ನಂಬಿಕೆ ಎನ್ನುವುದು ಯಾವತ್ತೂ ನಂಬಲರ್ಹವಲ್ಲ!”

“ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಒಂದು ದಿನ ಬಾಲಿಶವಾಗಿ ಕಂಡಾಗ ನಾವು ಬೆಳೆದಿದ್ದೇವೆ ಎಂದೇ ಅರ್ಥ.”

ಹಾಗೆ ನೋಡಿದರೆ ಇದರಲ್ಲಿ ಇಂತಹವರೇ ನಾಯಕ ಅಥವಾ ನಾಯಕಿ ಎಂದು ಹೆಸರಿಸಲು ಸಾಧ್ಯವಾಗದಾದರೂ ಪ್ರಮುಖ ಪಾತ್ರವೆನಿಸಿದ ದೃಷ್ಟಿಯಿಂದ ಅಂತರ್ಮುಖಿಯಾದ ಆದಿತ್ಯ ಹಾಗೂ ಬದುಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಉಳ್ಳ ಮಧುಮಿತಾ ಕಥಾನಾಯಕ ಹಾಗೂ ನಾಯಕಿ ಎನ್ನಬಹುದು. ಆದರೆ ಇವರಿಬ್ಬರು ವರ್ತಮಾನದಲ್ಲಿ ಜೋಡಿಗಳಲ್ಲ.

ಮನೆಯ ಹಿರಿಯ ಮಗನೋ ಮಗಳೋ ಸಮಾಜದ ದೃಷ್ಟಿಯಿಂದ ಅನುಚಿತವಾದ ಕೆಲಸ ಮಾಡಿದರೆ ಅದರ ಭಾರವನ್ನು ಹೊತ್ತುಕೊಂಡು ನೋಯಬೇಕಾದವರು ಮತ್ತುಳಿದ ಮಕ್ಕಳು. ಅವರ ಆಸೆ ಆಕಾಂಕ್ಷೆಗಳಿಗೆ ಮಿತಿ ಹೇರಲಾಗುತ್ತದೆ. ಇಲ್ಲಿನ ಆದಿತ್ಯನ ಅವಸ್ಥೆಯೂ ಅದುವೇ. ಆದರೆ ಇದು ಅವನು ಸ್ವಯಂ ತಾನೇ ತನ್ನ ಮೇಲೆ ಹೇರಿಕೊಂಡ ಮಿತಿ. ಜಗತ್ತಿಗೆ ತಾನು ತೋರ್ಪಡಿಸುವ ಬಿಂಬವನ್ನೇ ಸತ್ಯವೆಂದು ಸದಾ ಸಾಬೀತುಪಡಿಸುವ ಹೆಣಗುವ ಅವನ ವರ್ತನೆಗಳು. ಆದರೆ ಒಳ ಮನಸ್ಸು ಎಲ್ಲರಂತೆಯೇ. ಈ ದ್ವಿಮುಖ ಸ್ವಭಾವದಿಂದ ಮಾತು ಬಹಳ ಕಡಿಮೆ. ಅಲ್ಲದೇ ಅವನೊಳಗು ಒಂದು ಅಗ್ನಿ ಪರ್ವತ. ಅಸಲಿಗೆ ಅವನು ಮನ ಬಿಚ್ಚಿ ಮಾತಾಡುವುದು ಕಾದಂಬರಿಯ ಕೊನೆಯ ಭಾಗದಲ್ಲಷ್ಟೇ.

ಇಲ್ಲಿ ಮಗಳು ಮತ್ತು ಮಗನ ಮೇಲೆ ಜೀವವಿಟ್ಟುಕೊಂಡ ಅಪ್ಪಂದಿರು ಇದ್ದಾರೆ. ಹೆತ್ತವರಿಗೋಸ್ಕರ ತನ್ನ ಪ್ರೇಮ ಹುಟ್ಟುವ ಮೊದಲೇ ಉಸಿರು ಕಟ್ಟಿಸಿದ ಪ್ರೇಮಿ ಇದ್ದಾನೆ. ಪ್ರೀತಿಯ ಅಮಲಲ್ಲಿ ಮನೆ, ಹೆತ್ತವರು ಮತ್ತು ನೈತಿಕತೆಯ ಮಿತಿಯನ್ನು ದಾಟಿ ಪ್ರಿಯಕರನನ್ನು ವಿವಾಹವಾದ ಪ್ರೇಯಸಿ ಇದ್ದಾಳೆ. ವಿವಾಹಿತನಾದರೂ ಮಡದಿಗೆ ನಂಬಿಕೆದ್ರೋಹವೆಸಗುವ ಪತಿ ಇದ್ದಾನೆ. ಅವನು ತನ್ನೆಲ್ಲ ಮಿತಿ ಮೀರಿದರೂ ತನ್ನ ಅಮ್ಮನ ಮಾತುಗಳಿಗೆ ಗೌರವ ಕೊಟ್ಟು ಸಂಘರ್ಷಕ್ಕಿಂತ ಹೊಂದಾಣಿಕೆಯಲ್ಲಿ ನೆಮ್ಮದಿಯಿದೆ ಎಂದು ತನ್ನದೇ ಪ್ರಯತ್ನದಿಂದ ಬಾಳನ್ನು ನೇರಗೊಳಿಸಿಕೊಂಡ ಹೆಣ್ಣಿದ್ದಾಳೆ. ತನಗೆ ಮಗಳು ಹುಟ್ಟಿದಾಗ ತಾನು ತನ್ನ ಹೆತ್ತವರಿಗೆ ಮಾಡಿದ ನೋವಿನ ‌ನೆನಪುಗಳಿಂದ ಖಿನ್ನತೆಗೆ ಜಾರಿದ ಮಗನಿದ್ದಾನೆ. ಹೆತ್ತವರನ್ನು ಧಿಕ್ಕರಿಸಿ ತನಗ್ಯಾರೂ ಬೇಡ, ಎಲ್ಲವೂ ದಕ್ಕಿತು, ಬದುಕಲ್ಲಿ ತೃಪ್ತೆ ಅಂದುಕೊಳ್ಳುವ ಹೊತ್ತಿಗೆ ಕಂಗಾಲಾದ ಅವನ ಹೆಂಡತಿಯಿದ್ದಾಳೆ. ಜೀವನವೆಂಬ ಸಾಗರದಲ್ಲಿ ಏನೇ ಆದರೂ ಕುಟುಂಬ ಮತ್ತು ನಮ್ಮವರು ಎನ್ನುವುದು ಯಾವತ್ತಿಗಿದ್ದರೂ ನಮ್ಮ ಆಸರೆ ಮತ್ತು ಮಿತಿ ಎನ್ನುವುದು ಚೆನ್ನಾಗಿ ಚಿತ್ರಿತವಾಗಿದೆ.

ಪ್ರೇಮ ಹೇಗಿರಬೇಕು ಎನ್ನುವುದಕ್ಕೆ ಚಿನ್ಮಯಿ ಉದಾಹರಣೆಯಾದರೆ ಹೇಗಿರಬಾರದು ಎನ್ನುವುದಕ್ಕೆ ನಿಧಿ. ಹೆತ್ತವರ ಒಪ್ಪಿಗೆ ದೊರೆತ ಮೇಲಷ್ಟೇ ಇಷ್ಟಪಟ್ಟವರ ಬಳಿ ಹೇಳುವೆ ಎನ್ನುವ ಆ ಗುಣಕ್ಕೆ ಚಿನ್ಮಯಿಯ ತಂದೆ ಮನಸೋತದ್ದು ಅರ್ಥಪೂರ್ಣ. ಇಲ್ಲಿ ಕೇವಲ ತಂದೆ ಮಕ್ಕಳ ಬಾಂಧವ್ಯ ಮಾತ್ರವಲ್ಲ, ಮಾಗಿದ ದಂಪತಿಗಳ ನಡುವಿನ ಕಾಳಜಿ ಹಾಗೂ ಪ್ರೀತಿ ಸಹ ಸುಂದರವಾಗಿ ಮೂಡಿ ಬಂದಿದೆ.

ಮಂಗಳೂರಿನ ಪರಿಸರ, ತಣ್ಣೀರುಬಾವಿ ಬೀಚ್ ಮತ್ತು ಸಂಭಾಷಣೆಗಳಲ್ಲಿ ನಮ್ಮ ಕರಾವಳಿ ಕನ್ನಡದ ಬಳಕೆ ಕಥೆಯನ್ನು ಆಪ್ತವನ್ನಾಗಿ ಮಾಡುತ್ತದೆ. ಆದರೂ ಅಲ್ಲಲ್ಲಿ ಭಾಷೆ ಒಂದಿಷ್ಟು ಬೆಂಗಳೂರು ಕನ್ನಡದಂತೆ ಬದಲಾಗುತ್ತದೆ. ಆದಷ್ಟು ಬೇಗ ಎರಡನೇ ಮುದ್ರಣ ಕಾಣಲಿ ಮತ್ತು ಮರುಮುದ್ರಣದಲ್ಲಿ ಪೂರ್ಣ ಕರಾವಳಿ ಕನ್ನಡವೇ ಇರಲಿ ಎನ್ನುವುದು ನನ್ನ ಹಾರೈಕೆ. ಈ ಕಾದಂಬರಿಯ ಘಟನೆಗಳು ಕಾಲ್ಪನಿಕ ಎಂದು ಅನ್ನಿಸುವುದಿಲ್ಲ. ನಮ್ಮ ಸುತ್ತಲಿನ ಸಮಾಜದಲ್ಲಿ ಅಲ್ಲಲ್ಲಿ ಬಿಡಿ ಬಿಡಿಯಾಗಿ ನಡೆದ ಘಟನೆಗಳನ್ನು ಪೋಣಿಸಿದಂತಿದೆ. ಕಾದಂಬರಿಯಲ್ಲಿ ಬರುವ ಮಧುಮಿತಾಳ ತಂದೆಯ ಮದ್ಯಪಾನದ ಚಟ ಹಾಗೂ ಅದು ಕೊನೆಗೊಂಡ ರೀತಿ ಉತ್ಕಟವಾಗಿ ನಿರೂಪಿಸಲ್ಪಟ್ಟಿದೆ. ಕುಡುಕನೊಬ್ಬನ ಚಟದಿಂದ ಸಂಸಾರ ಯಾವ ರೀತಿಯಲ್ಲಿ ಬವಣೆಪಡುತ್ತದೆ ಎನ್ನುವುದು ಆರ್ದ್ರಗೊಳಿಸುವ ವಿಷಯ. ವೈಯಕ್ತಿಕವಾಗಿ ನನಗೆ ಆದಿತ್ಯನ ಪಾತ್ರವನ್ನು ಕಟೆದ ರೀತಿ ಬಹಳ ಇಷ್ಟವಾಯಿತು. ಒಂದು ರೀತಿಯ ಸಂಕೀರ್ಣವಾದ ಮನೋಭಾವದ,‌ತನ್ನ ಇಷ್ಟಾನಿಷ್ಟಗಳನ್ನು ಅಥವಾ ಭಾವನೆಗಳನ್ನು ಬಯಲು ಮಾಡದ ಅವನನ್ನು ಮಧುಮಿತಾ ಬದಲಾಯಿಸುವ ಪರಿ ಮತ್ತು ಮಧುಮಿತಾ ಅವಳದೇ ಹದಗೆಟ್ಟ ಬಾಳನ್ನು ಜಾಣ್ಮೆಯಿಂದ ಸರಿಪಡಿಸಿಕೊಂಡ ರೀತಿ ಮಾದರಿ.

ಒಟ್ಟಿನಲ್ಲಿ ಕಾದಂಬರಿ ಹಲವಾರು ಕವಲುಗಳ ಮೂಲಕ ಸಾಗಿ, ಓದುಗರಲ್ಲಿ ಹತ್ತಾರು ಚಿಂತನೆಗಳನ್ನು, ಭಾವನೆಗಳನ್ನು ಮೂಡಿಸಿ ಕೊನೆಗೆ ಒಂದೇ ನದಿಯಾಗುತ್ತದೆ. ಹಾಗಾಗುವಾಗ ಒಂದು ಉತ್ತಮ ಓದಿನ ಅನುಭವ ನೀಡುವುದು ಸಂತಸದ ವಿಷಯ. ನೀವೂ ಓದಿ ನೋಡಿ.


  • ರಶ್ಮಿ ಉಳಿಯಾರು

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW