ಭಾರತದಲ್ಲಿ ಹುಟ್ಟುವುದು ಎರಡೇ ಮಹಾಕಾವ್ಯಗಳು. ಬೇರೆ ಬೇರೆ ರೂಪದಲ್ಲಿ ಎಂಬ ಮಾತು ಇದೆ. ವೈ.ಕೆ.ಸಂಧ್ಯಾಶರ್ಮ ಅವರ ‘ನೃತ್ಯ ಸರಸ್ವತಿ’ ಈ ಐತಿಹಾಸಿಕ ಕಾದಂಬರಿ ಕೂಡ ಹೊರತಲ್ಲ.ಈ ಮಾತನ್ನು ಸ್ಪಷ್ಟಪಡಿಸುವ ಹೊಣೆಗಾರಿಕೆ ನನ್ನ ಮೇಲೆ ಇದೆ. ತಪ್ಪದೆ ಮುಂದೆ ಓದಿ…
ಪುಸ್ತಕ : ನೃತ್ಯ ಸರಸ್ವತಿ
ಲೇಖಕರು : ವೈ.ಕೆ.ಸಂಧ್ಯಾಶರ್ಮ
ಪ್ರಕಾಶನ : ಅಭಿನವ ಪ್ರಕಾಶನ
ಬೆಲೆ : 200.00
ಪುಟ : ೨೧೬
ಖರೀದಿಗಾಗಿ : 080 654469
ಈ ಕಾದಂಬರಿಯಲ್ಲಿ ಎರಡು ಭಾಗಗಳು ಇವೆ. ಮೊದಲ ಮತ್ತು ಕಾದಂಬರಿಯ ಹೆಚ್ಚಿನ ಭಾಗ ರಾಮಾಯಣದ ವಿನ್ಯಾಸಕ್ಕೆ ಋಣಿಯಾಗಿದೆ. ಎರಡನೇ ಕೊನೆಯ ಭಾಗ ಮಹಾಭಾರತದ ಕುರುಕ್ಷೇತ್ರ ಯುದ್ದದ ಪಡಿಯಚ್ಚಾಗಿದೆ.


ಬೋಕಿಮಯ್ಯನೆಂಬ ಶಾಸನಾಧಾರಿತ ವಿಷ್ಣುವರ್ಧನನ ಗೆಳೆಯ ಇಲ್ಲಿನ ಘಟನೆಗಳಿಗೆ ಸಾಕ್ಷಿಯಾದ.ಶಾಂತಲಾಳ ನಿರ್ಗಮನದ ನಂತರ ಅವನು ಕೂಡ ನಿರ್ಗರ್ಮಿಸುತ್ತಾನೆ. ಶಾಂತಲಾ ತನ್ನ ಪ್ರತಿಭೆ ಮತ್ತು ಅತಿ ಔದಾರ್ಯಕ್ಕೆ ತಾನೇ ಬಲಿಯಾಗಿ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಾಳೆ. ಹೊಯ್ಸಳ ಸಾಮ್ರಾಜ್ಯದ ಮಹಾರಾಣಿಯಾಗಿ ಮೆರೆದ ಅವಳು, ಎಲ್ಲವನ್ನೂ ಬಿಟ್ಟು ಕೊಟ್ಟು ಸಾಮಾನ್ಯಳಾಗಿ ತನ್ನ ತವರಿಗೆ ಮರಳಿದ ಸಂನಿವೇಶ ಹೃದಯ ವಿದ್ರಾವಕವಾಗಿದೆ. ಅವಳ ವೈಯಕ್ತಿಕ ಬದುಕು ಹೀಗೆ ದುರಂತದಲ್ಲಿ ಪರ್ಯವಸಾನಗೊಂಡರೂ ಅವಳ ನೇತೃತ್ವದಲ್ಲಿ ಅಂದು ನಿರ್ಮಾಣ ಮಾಡಿದ ದೇಗುಲಗಳು ಹೊಯ್ಸಳ ಶೈಲಿಯ ಕಲಾ ಸ್ಮಾರಕಗಳಾಗಿ ಉಳಿದುಕೊಂಡಿದೆ.ಮತ್ತು ಅವಳ ಹೆಸರು ಚಿರಸ್ಥಾಯಿಯಾಗಿದೆ.

ಜೈನನಾದ ಬಿಟ್ಟಿದೇವ ಹಿಂಸಾತ್ಮಕ ಯುದ್ಧದಲ್ಲಿ ಪಾಲ್ಗೊಳ್ಳಲು ಹಿಂಜರಿದು,ಅದರ ತೊಳಲಾಟದಿಂದ ತಪ್ಪಿಸಿಕೊಳ್ಳಲು ರಾಮಾನುಜರಿಂದ ವೈಷ್ಣವನಾದ ಎಂಬ ಊಹೆಯನ್ನು ಇಲ್ಲಿ ಲೇಖಕಿ ಕಾಣಿಸಿದ್ದು ಅದು ಚರ್ಚಾಸ್ಪದ. ಐತಿಹಾಸಿಕ ಕಾದಂಬರಿಯ ಶೈಲಿಯಲ್ಲಿ ಇದರ ನಿರೂಪಣೆ ಇರುವುದು ವಸ್ತುವಿಗೆ ತಕ್ಕುದಾಗಿದೆ.ಆದರೂ ಅದರ ನಡುವೆ ‘ ತರಲೆ’ ಎನ್ನುವ ಇಂದಿನ ಆಡು ಭಾಷೆಯ ಬಳಕೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿಸುತ್ತದೆ.
ಇಲ್ಲಿಯವರೆಗೂ ಶಾಂತಲಾ ಕುರಿತು ಬಂದಿರುವ ಕಾದಂಬರಿಗಳಿಗಿಂತ ಇದು ಹೇಗೆ ಭಿನ್ನ ಎಂದು ಮುನ್ನುಡಿ ಬರೆದ ಹಂಪನಾ ತೋರಿಸಿದ್ದಾರೆ. ಮನೆಗೆ ಬಂದು ಅವರ ಈ ಕಾದಂಬರಿ ಕೊಟ್ಟು ಓದಲು ಅವಕಾಶ ಕಲ್ಪಿಸಿದ ಲೇಖಕಿಗೆ ವಂದನೆ, ಅಭಿನಂದನೆಗಳು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
