‘ಚೌಚೌ ಬಾತ್’ ಅಂಕಣ (ಭಾಗ – ೭)

ಹಳ್ಳಿಯಲ್ಲಿ ಯಾರಾದರೂ ಬಾಣಂತಿಯರಿಗೆ ಎದೆ ಹಾಲು ಬೀಳದಿದ್ದರೆ ” ಹಾಲ್ಮೂಲಂಗಿ ಸೊಪ್ಪು, ತಬಾಕ್ಸಿ ಸೊಪ್ಪು, ನುಗ್ಗೆ ಸೊಪ್ಪು ಸಾರು ಮಾಡಿ ಕೊಡ್ರೇ ಅವಳಿಗೆ, ಈ ಬೆರಕೆ ಸೊಪ್ಪಿನ ಮುಂದೆ ಯಾವ ಟಾನಿಕೂ ಕೆಲಸ ಮಾಡಲ್ಲ ” ಎಂದು ಅನುಭವಿ ವೈದ್ಯೆಯಂತೆ ಅಜ್ಜಿ ಸಲಹೆ ಕೊಡುತ್ತಿದ್ದಳು. ಸರ್ವ ಮಂಗಳ ಜಯರಾಮ್ ಅವರು ‘ಚೌಚೌ ಬಾತ್’ ಅಂಕಣದಲ್ಲಿ ‘ಬೆರಕೆ ಸೊಪ್ಪು’, ತಪ್ಪದೆ ಮುಂದೆ ಓದಿ…

ಹಿರೇಬಿದನೂರಿನ ರಂಗಣ್ಣನಿಗೆ ದಿನವೂ ಸೊಪ್ಪು ಮಾರುವುದೇ ಕಾಯಕ. ಸೊಪ್ಪಮ್ಮ ….ಸೊಪ್ಪು ಮೆಂತ್ಯ ಸೊಪ್ಪು… ಪಾಲಕ್ ಸೊಪ್ಪು… ದಂಟಿನ ಸೊಪ್ಪು …ಅಂತ ಕೂಗುತ್ತಾ, ಬೀದಿ ಬೀದಿ ಅಲೆಯುತ್ತಾನೆ. ಹಿರೇಬಿದನೂರಿಗೂ ನಮ್ಮ ಗೌರಿಬಿದನೂರಿಗೂ ಅಂತ ದೂರ ಏನಿಲ್ಲ ಒಂದು ಅರ್ಧ ಕಿಲೋಮೀಟರ್ ಅಂತರ ಇರಬಹುದಷ್ಟೇ. ಅದು ಈಗ ಅದು ಗೌರಿಬಿದನೂರಿಗೆ ಸೇರಿದೆ ಎಂಬಷ್ಟು ಬೆಳೆದಿದೆ. ಸೊಪ್ಪು ಮಾರಲು ಸೈಕಲ್ ನಲ್ಲಿ ಬರುವ ರಂಗಣ್ಣನ ಬಳಿ ಸೊಪ್ಪು ತಾಜಾ ಆಗಿರುವುದಲ್ಲದೆ ಬೆಲೆಯೂ ಕಡಿಮೆ. ಬೇರೆಯವರ ಬಳಿ ಸೊಪ್ಪು ಕೊಂಡರೆ ಒಂದು ಕಟ್ಟಿಗೆ ಇಪ್ಪತ್ತು ರೂಪಾಯಿಯಾದರೂ ಕೊಡಬೇಕು. ಆದರೆ ರಂಗಣ್ಣನಿಗೆ ಹತ್ತು ರೂಪಾಯಿ ಕೊಟ್ಟರೆ ಸಾಕು ಸುಮಾರಾಗಿ ದೊಡ್ಡ ಕಟ್ಟನ್ನೇ ಕೊಡುತ್ತಾನೆ.

ಈ ಕಟ್ಟು ತಗಳಮ್ಮಯ್ಯ ….ಸಾರು ರುಚಿಯಾಗಿರ್ತೈತೆ ಅಂತ ಅದಾವುದೋ ಮಿಶ್ರ ಸೊಪ್ಪುಗಳ ಕಟ್ಟನ್ನು ಕೊಡುತ್ತಾನೆ. ಇದು ಯಾವ ಸೊಪ್ಪು ರಂಗಣ್ಣ ಅಂತ ಕೇಳಿದರೆ…..ಬೆರ್ಕೆ ಸೊಪ್ಪು ಕಣಮ್ಮಯ್ಯ. ಎಲ್ಲಾ ಪಾಸೆನೂ (ಸೊಪ್ಪಿನ ಎಸಳು) ಎರಡೆರಡು ಸೇರಿಸಿ ಕಟ್ಟಿದೀನಿ, ಅದಿಕ್ಕೆ ಇದನ್ನ ಬೆರಕೆ ಸೊಪ್ಪು ಅಂತ ಕರಿಯೋದು “ಅಂದ. “ಆದರೆ ರಂಗಣ್ಣ ಇದರಲ್ಲಿ ಯಾವ ಸಾರು ಮಾಡೋದು ಅಂತ ಗೊತ್ತಾಗುತ್ತಿಲ್ಲ.ಬಸ್ಸಾರು ಮಾಡೋದ ಹುಳಿ ಸೊಪ್ಪು ಮಾಡುವುದಾ” ಎಂದು ಕೇಳಿದೆ.ಯಾವುದಾದರು ಮಾಡಮ್ಮಯ್ಯ ಸಾರು ಫಸ್ಟ್ ಕ್ಲಾಸ್ ಆಗಿರುತ್ತದೆ. ಈಗ ಹೆಚ್ಚಾಗಿ ಎಲ್ರೂ ಅದನ್ನೇ ತಕಂಬದು. ಬರೇ ಒಂದೇ ತರದ ಸೊಪ್ಪಾದ್ರೆ ಏನ್ ರುಚಿ ಇರ್ತೈತೆ ಹೇಳು ಬೆರಕೆ ಸೊಪ್ಪಾದ್ರೆ ರುಚಿನೂ ಬೆರಕೆ ಇರ್ತೈತೆ. ಅಂದ್ರೆ ರುಚಿ ಜಾಸ್ತಿ, ಅದಕ್ಕೆ ನಾನು ಬೆರಕೆ ಸೊಪ್ಪನ್ನು ಜಾಸ್ತಿ ಮಾರೋದು. ಒಂದು ಗಂಟೆ ಅಡ್ಡಾಡಿದರೆ ಸಾಕು…ಬುಟ್ಟಿ ಎಲ್ಲಾ ಖಾಲಿ ಆಗೋಯ್ತದೆ… ಅಂತಾನೆ ರಂಗಣ್ಣ.

ಬೆರಕೆ ಸೊಪ್ಪು ಅಂದ ಕೂಡಲೇ ನನಗೆ ನಮ್ಮ ಅಪ್ಪ ಹೇಳುತ್ತಿದ್ದ ಮಾತುಗಳು ನೆನಪಾಗುತ್ತವೆ.ನಮ್ಮ ಅಜ್ಜಿ (ಅಪ್ಪನ ಅಮ್ಮ)ದಿನವೂ ಹೊಲದಲ್ಲಿ ನಾಲ್ಕೈದು ರೀತಿಯ ಸೊಪ್ಪುಗಳನ್ನು ಕಿತ್ತು ತಂದು ತೊಳೆದು ಹೆಚ್ಚಿ ಉಪ್ಪು ಹಾಕಿ ಬೇಯಿಸಿ ತಿನ್ನುತ್ತಿದ್ದಳಂತೆ. ಮನೆಯಲ್ಲಿ ಎಂತದ್ದೆ ಸಾಂಬಾರು ಮಾಡಿದರೂ ಊಟಕ್ಕೆ ನೆಂಚಿಕೆಯಾಗಿ ಬೆರಕೆ ಸೊಪ್ಪಿನ ಪಲ್ಯ ಇರಬೇಕಿತ್ತಂತೆ ನಮ್ಮ ಅಜ್ಜಿಗೆ.

ನಮ್ಮ ನಂಜಮ್ಮಜ್ಜಿ ಹೇಳುತ್ತಿದ್ದಳಂತೆ,” ನಮ್ಮ ಕಾಲ್ದಾಗೆ ಹಿಟ್ಟು ಸೊಪ್ಪು ಬಿಟ್ರೆ ಏನೂ ಇರ್ತಿರ್ಲಿಲ್ಲ ತಿಂಬಾಕೆ. ದಿನಾ ಸೊಪ್ಪಿನ ಸಾರೆ ಮಾಡ್ತಾ ಇದ್ದಿದ್ದು ,ಬ್ಯಾಸಿಗೆಗೆ ಮಾತ್ರ ಕಾಳು ಕಡಿ ಹಾಕಿ ಸಾರು ಮಾಡ್ತಾ ಇದ್ವಿ. ಹಾಗಲಕಾಯಿ, ಚಿಗಟೆಕಾಯಿ, ಕುಂಬಳಕಾಯಿ,ಪಟ್ಲಕಾಯಿ ಬಿಟ್ರೆ ಯಾವ ತರಕಾರಿನೂ ನಮಗೆ ಗೊತ್ತಿರಲಿಲ್ಲ. ಅಷ್ಟಕ್ಕೂ ಇವನ್ನೆಲ್ಲಾ ನಾವೇ ನಮ್ಮ ನಮ್ಮ ಹಿತ್ತಲಾಗೆ ಬೆಳಿತ್ತಿದ್ವಿ,ದುಡ್ಡು ಕೊಟ್ಟು ಯಾವತ್ತೂ ಯಾರು ಕೊಂಡುಕೊಳ್ಳುತ್ತಿರಲಿಲ್ಲ.ನಾವು ಬೆಳೆದಿದ್ದು ಬೇರೆಯವರಿಗೆ ಕೊಡ್ತಿದ್ವಿ…. ಅವರು ಬೆಳೆದಿದ್ದು ನಮ್ಗೆ ಕೊಡೋರು. ದುಡ್ಡು ಕಾಸಿನ ವ್ಯವಹಾರ ಇಲ್ವೆ ಇಲ್ಲ. ಅಷ್ಟಕ್ಕೂ ಈ ತರಕಾರಿನಾಗೆಲ್ಲ ಯಾತುರ್ದು ಐತೆ ಬಿಡು, ಹದವಾಗಿ ಮಳೆ ಬಂದು ಹೊಲದಲ್ಲಿ ಚಿಗುರೋ ಹೊನೆಗೊನೆ ಸೊಪ್ಪು, ಅಣ್ಣೆ ಸೊಪ್ಪು, ಗೊರ್ಜಿ ಸೊಪ್ಪು, ಬಳೆ ಒಡಕಿನ ಸೊಪ್ಪು, ಕಿರ್ಕ ಸಾಲೆ ಸೊಪ್ಪು, ಕುಂಬಳದ ಕುಡಿ ,ಬೋದಗೀರು ಸೊಪ್ಪು, ಗಣಿಕೆ ಸೊಪ್ಪು, ಗಂಟಕ, ದಂಟಿನ ಸೊಪ್ಪು, ಒಂದೆಲಗ ,ಬಸಳೆ ಸೊಪ್ಪು, ಪುಂಡಿ ಸೊಪ್ಪು,ಮೆಂತ್ಯೆಸೊಪ್ಪು, ಕಳ್ಳೇ ಸೊಪ್ಪು ಎಲ್ಲ ಒಂದೊಂದು ಕುಡಿ( ಎಸಳು) ಕೊಯ್ಕಂಬಂದು ಮಸ್ಸೊಪ್ಪು ಮಾಡಿ ಬಿಸಿ ಬಿಸಿ ರಾಗಿ ಮುದ್ದೆ ಮ್ಯಾಲೆ ಒಂದರ್ಧ ಮಿಳ್ಳೆ ತುಪ್ಪ ಹುಯ್ಕೊಂಡು ತಿಂಬ್ತಾ ಇದ್ರೆ ಎರಡು ಮುದ್ದೆ ಸಲೀಸಾಗಿ ಒಳೀಕೋಯ್ತವೆ ” ಅಂತ ಅಜ್ಜಿ ಹೇಳುತ್ತಿದ್ದ ಮಾತುಗಳನ್ನು ಅಪ್ಪ ಅವಾಗಾವಾಗ ನೆನಪಿಸಿಕೊಳ್ತಾಯಿದ್ರು.

ನಮ್ಮ ಅಜ್ಜಿಯನ್ನು ನಾನೂ ನೋಡಿದ್ದೆ. ಬೆಳಿಗ್ಗೆ ಹನ್ನೆರಡು ಗಂಟೆಗೆ ಒಂದು ಮುದ್ದೆ ಸಾರು ತಿಂದರೆ ಮತ್ತೆ ರಾತ್ರಿಗೆ ಊಟ ಮಾಡ್ತಾ ಇದ್ದಿದ್ದು. ದಿನಕ್ಕೆ ಎರಡೇ ಹೊತ್ತು ಊಟ. ಮಧ್ಯದಲ್ಲಿ ಯಾವ ತಿಂಡಿ ಪದಾರ್ಥಗಳನ್ನು ಮುಟ್ಟುತ್ತಿರಲಿಲ್ಲ. ಕಾಫಿ, ಟೀ ಮಾತ್ರ ಚಂಬುಗಟ್ಟಲೆ ಕುಡಿಯೊಳು. ಬೆರಕೆ ಸೊಪ್ಪಿನ ನಾರು ಬೇರು ತಿಂದು ತಿಂದು ಬೇರಿನಂತೆ ಸಣ್ಣಗೆ ಉದ್ದಕ್ಕೆ ಇದ್ದಳು. ತೊಂಬತ್ತು ವರ್ಷದ ಮೇಲೇ ಬದುಕಿದ್ದಳು. ಸಾಯೋವಾಗ ಕೂಡ ಒಂದು ತಲೆ ಕೂದಲು ಕೂಡ ಬೆಳ್ಳಗಾಗಿರಲಿಲ್ಲ. ಕಣ್ಣು ಕೂಡ ಮಂಜಾಗಿರಲಿಲ್ಲ.ಒಂದು ಹಲ್ಲು ಕೂಡ ಉದುರಿರಲಿಲ್ಲ. ಅಷ್ಟೊಂದು ಗಟ್ಟಿಮುಟ್ಟಾಗಿದ್ದಳು ನಮ್ಮ ಅಜ್ಜಿ. ಖಾಯಿಲೆ ಎಂದು ಯಾವತ್ತೂ ಆಸ್ಪತ್ರೆಗೆ ಹೋದವಳೇ ಅಲ್ಲ.

ಹಳ್ಳಿಯಲ್ಲಿ ಯಾರಾದರೂ ಬಾಣಂತಿಯರಿಗೆ ಎದೆ ಹಾಲು ಬೀಳದಿದ್ದರೆ ” ಹಾಲ್ಮೂಲಂಗಿ ಸೊಪ್ಪು, ತಬಾಕ್ಸಿ ಸೊಪ್ಪು, ನುಗ್ಗೆ ಸೊಪ್ಪು ಸಾರು ಮಾಡಿ ಕೊಡ್ರೇ ಅವಳಿಗೆ …..ಈ ಬೆರಕೆ ಸೊಪ್ಪಿನ ಮುಂದೆ ಯಾವ ಟಾನಿಕೂ ಕೆಲಸ ಮಾಡಲ್ಲ ” ಎಂದು ಅನುಭವಿ ವೈದ್ಯೆಯಂತೆ ಅಜ್ಜಿ ಸಲಹೆ ಕೊಡುತ್ತಿದ್ದಳು.

ನಮ್ಮ ಅಜ್ಜಿಗೆ ಒಟ್ಟು ಹನ್ನೊಂದು ಜನ ಮಕ್ಕಳು. ಹನ್ನೊಂದು ಜನರಲ್ಲಿ ಮೂವರು ಮಕ್ಕಳು ಏನೋ ಖಾಯಿಲೆ ಬಂದು ಮರಣ ಹೊಂದಿದರಂತೆ ಇನ್ನು ಉಳಿದಂತೆ ಎಂಟು ಜನ ಮಕ್ಕಳಲ್ಲಿ ಐದು ಜನ ಗಂಡು ಮಕ್ಕಳು ಪಂಚ ಪಾಂಡವರಂತೆ, ಮೂವರು ಹೆಣ್ಣು ಮಕ್ಕಳು. ನಮ್ಮ ಅಪ್ಪ ಮನೆಗೆ ಎರಡನೇ ಹಿರಿಮಗ.ಒಬ್ಬ ಅಣ್ಣ ಮೂವರು ತಮ್ಮಂದಿರು. ಮೂವರು ಅಕ್ಕಂದಿರು .ಇಷ್ಟು ಜನ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ್ದರೂ ಒಂದು ದಿನವೂ ಅಜ್ಜಿ ಸೊಂಟ ನೋವು ಎಂದು ಕೂರುತ್ತಿರಲಿಲ್ಲ ಹೊಲದಲ್ಲಿ ಬಗ್ಗಿ ಎದ್ದು ಯಾವಾಗಲೂ ಏನಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು ಅಷ್ಟು ವಯಸ್ಸಾದರೂ ಉತ್ಸಾಹ ಮಾತ್ರ ಕುಂದಿರಲಿಲ್ಲ.ಬದುಕಿನ ಜಂಜಡದಲ್ಲಿ ನೊಂದು ಬೆಂದು ಬಸವಳಿದು ಮಾಗಿದ ಅನುಭವದ ಮೂರ್ತಿ ಯಾಗಿದ್ದಳು.

ರಂಗಣ್ಣನ ಬೆರಕೆ ಸೊಪ್ಪಿನಿಂದ ಇಷ್ಟೆಲ್ಲಾ ಪುರಾಣ ಹೇಳಬೇಕಾಯಿತು. ಮಳೆಗಾಲದಲ್ಲಿ ನೈಸರ್ಗಿಕವಾಗಿ ಹೊಲದಲ್ಲಿ ಬೆಳೆಯೋ ಬೆರಕೆ ಸೊಪ್ಪು ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ತರೋ ಸೊಪ್ಪಿಗಿಂತಲೂ ರುಚಿಯೂ ಹೆಚ್ಚು, ಪೌಷ್ಟಕಾಂಶವೂ ಅಧಿಕ. ಆರೋಗ್ಯವು ಹೆಚ್ಚು. ಮಳೆರಾಯ ಭೂಮಿ ತಾಯಿಯನ್ನು ತೋಯಿಸುತ್ತಿದ್ದಂತೆ ಹೊಲದ ಬದಿಯಲ್ಲಿ, ಬೇಲಿಯಲ್ಲಿ , ಬೆಟ್ಟ ಗುಡ್ಡ, ಕಲ್ಲಿನ ಸಂದು ಗೊಂದಿಗಳಲ್ಲಿ, ದಾರಿಯ ಅಕ್ಕಪಕ್ಕದಲ್ಲಿ, ಎಲ್ಲೆಂದರಲ್ಲಿ ನೂರಾರು ಜಾತಿಯ ಸೊಪ್ಪುಗಳು ಹುಟ್ಟುತ್ತವೆ , ಯಾರೋ ಬೀಜವನ್ನು ಚೆಲ್ಲಿದ್ದಾರೆನೋ ಎಂಬಂತೆ ಒತ್ತೊತ್ತಾಗಿ ಸೊಪ್ಪಿನ ಚಿಕ್ಕ ಚಿಕ್ಕ ಸಸ್ಯಗಳು ಜಮೆಯಾಗುತ್ತವೆ. ಹಾಗೆ ಹುಟ್ಟಿದ ಸೊಪ್ಪಿನ ಎಸಳನ್ನು ಕುಡಿ ಕುಡಿಯಾಗಿ ಚಿವುಟಿಕೊಳ್ಳಬೇಕು. ಬೇರು ಸಹಿತ ಕೀಳಬಾರದು.ಏಕೆಂದರೆ ಬೇರು ಬಿಟ್ಟಿದ್ದರೆ ಸೊಪ್ಪು ಮತ್ತೆ ಚಿಗುರುತ್ತದೆ.

ಬೆರಕೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಹಲವಾರು ಉಪಯೋಗಗಳಿವೆ :

* ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಮಲಬದ್ಧತೆ ನಿವಾರಣೆ ಯಾಗುತ್ತದೆ .

*ಹಸಿವು ಹೆಚ್ಚಾಗಿ ಶರೀರದಲ್ಲಿ ಲವಲವಿಕೆ ಉಂಟಾಗುತ್ತದೆ

*ಬೊಜ್ಜು ಕರಗುತ್ತದೆ.

*ಬೆರಕೆ ಸೊಪ್ಪಿನಲ್ಲಿ ಅಧಿಕ ನಾರಿನಂಶ ಇರುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ .

*ಬೆರಕೆ ಸೊಪ್ಪು ತಿಂದರೆ ಚುರುಕು ಹೆಚ್ಚು .

* ರಕ್ತ ಶುದ್ಧಿಯಾಗುತ್ತದೆ.

ನೋಡಿ ಬೆರಕೆ ಸೊಪ್ಪು ತಿನ್ನುವುದರಿಂದ ಇಷ್ಟೆಲ್ಲಾ ಅನುಕೂಲಗಳಿವೆ, ಮತ್ತೇಕೆ ತಡ ನೀವೂ ಬೆರಕೆ ಸೊಪ್ಪನ್ನು ಆಹಾರದಲ್ಲಿ ಬಳಸುತ್ತೀರಲ್ಲವೇ… ಬೆರಕೆ ಸೊಪ್ಪು ಆರೋಗ್ಯಕರವೂ ಹೌದು ರುಚಿಯು ಹೆಚ್ಚು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading