ಭರತ್ ಜೈನ್ ಎಂಬ ಮುಂಬೈ ನಿವಾಸಿ ಇಡೀ ವಿಶ್ವದಲ್ಲೇ ಶ್ರೀಮಂತ ಭಿಕ್ಷುಕನಂತೆ. ಈತನ ಪ್ರತಿ ತಿಂಗಳ ಆದಾಯ 75000 ರೂಪಾಯಿ, ದಿನದ ಎಂಟು ಹತ್ತು ಗಂಟೆಗೆ ಸರಾಸರಿ 2000 ದಿಂದ 2500 ವರೆಗೂ ಭಿಕ್ಷಾಟನೆಯಿಂದ ಸಂಪಾದಿಸುತ್ತಾನೆ ಅಂತೆ. ಸರ್ವ ಮಂಗಳ ಜಯರಾಮ್ ಅವರು ‘ಚೌಚೌ ಬಾತ್’ ಅಂಕಣದಲ್ಲಿ ‘ಕಾಸ್ಟ್ಲಿ ಭಿಕ್ಷುಕರು’, ತಪ್ಪದೆ ಮುಂದೆ ಓದಿ…
ಮೊನ್ನೆ ಸಂಜೆ ನಾನು ಡ್ಯೂಟಿ ಮುಗಿಸಿ ಶಾಲೆಯಿಂದ ಹೊರ ಬರುತ್ತಿದ್ದೆ. ಇದ್ದಕ್ಕಿದ್ದಂತೆ ಮಗಳಿಂದ ಫೋನ್ ಕಾಲ್ “ಮಮ್ಮಿ ನೀನು ಬರುವಾಗ ಚಾಕ್ಲೆಟ್ ಕೇಕ್ ,ಬನಾನ ಚಿಪ್ಸ್ ತಗೊಂಡು ಬಾ” ಅಂದಳು. ಸರಿ ಆಯ್ತು ಎಂದೆ. ನಮ್ಮ ಯಜಮಾನರು ಶಾಲಾ ಗೇಟ್ ಬಳಿ ನನಗಾಗಿ ಕಾಯುತ್ತಿದ್ದರು. ಗಾಡಿ ಕೇಕ್ ವರ್ಲ್ಡ್ ಕಡೆಗೆ ತಿರುಗಿಸಿ ಎಂದೆ. ಅಲ್ಲಿ ಬೇಕರಿಯಲ್ಲಿ ಮಗಳ ಲಿಸ್ಟ್ನಂತೆ ಆರ್ಡರ್ ಮಾಡಿದೆ. ಕೇಕ್ ವರ್ಲ್ಡ್ ನಲ್ಲಿ ಯಾವಾಗಲೂ ತುಂಬಾನೇ ರಶ್. ಬೇಗ ಏನನ್ನು ಕೊಡುವುದಿಲ್ಲ. ನಾನು ಹಾಗೆ ಸುಮ್ಮನೆ ನಿಂತು ಸುತ್ತಮುತ್ತ ಕಣ್ಣಾಡಿಸಿದೆ.ಅಲ್ಲೆ ಬೇಕರಿಯ ಬಾಗಿಲಿನ ಸ್ವಲ್ಪ ಆಚೆ ಒಬ್ಬಳು ಭಿಕ್ಷುಕಿ ನಿಂತಿದ್ದಳು. ನಾನು ಅವಳ ಕಡೆ ನೋಡಿದ್ದೆ ತಡ ಭಿಕ್ಷೆ ಯಾಚಿಸಿದಳು. ನಾನು ಬ್ಯಾಗ್ ನಲ್ಲಿದ್ದ ಪರ್ಸನ್ನು ತಡಕಾಡಿ ಐದು ರೂಪಾಯಿ ನಾಣ್ಯ ಹುಡುಕಿ ಕೊಡಲು ಮುಂದಾದೆ. ಆದರೆ ಅವಳು ಬೇಡ ಎಂದು ಸನ್ನೆ ಮಾಡಿದಳು ಐದು ರೂಪಾಯಿ ನಾಣ್ಯ ಸಾಲದೇನೋ ಅಂದುಕೊಂಡು ಹತ್ತು ರೂಪಾಯಿ ನೋಟನ್ನು ಕೊಡಲು ಹೋದೆ . ಆಕೆ ಅದನ್ನೂ ಸ್ವೀಕರಿಸಲಿಲ್ಲ . ಏನು ಬೇಕೆಂದು ಕೇಳಿದೆ. ಕೇಕು ಬನ್ನು ಗಳಿದ್ದ ಟ್ರೇ ಕಡೆಗೆ ಕೈ ತೋರಿಸಿದಳು. ನಾನು ಒಂದು ಬನ್ ಕೊಡಿ ಎಂದು ಬೇಕರಿ ಯವನಿಗೆ ಹೇಳಿದೆ. ಅವಳು ಅಲ್ಲಿಂದಲೇ ಅದು ಬೇಡ ಎಂದು ಸನ್ನೆ ಮಾಡಿದಳು. ಏನು ಬೇಕು ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದಲ್ಲಿದ್ದ ಪಪ್ಸ್ ಕಡೆಗೆ ಕೈ ತೋರಿಸಿದಳು.ಫಪ್ಸ್ ಕೊಡಲು ಹೇಳಿದೆ.ಆಗ ಅವಳು ಪಕ್ಕದಲ್ಲಿ ಇದ್ದ ಎಗ್ ಫಪ್ಸ್ ಕಡೆಗೆ ಕೈ ಮಾಡಿ ತೋರಿಸಿದಳು .ಉಸ್ಸಪ್ಪಾ….. ಬೇಸ್ತು ಬಿದ್ದಿದ್ದೆ ನಾನು. ಆಗ ಬೇಕರಿಯವನು…. ಅವಳು ಸಾಮಾನ್ಯದವಳಲ್ಲ ಮೇಡಂ……. ಕಾಸ್ಟ್ಲಿ ಭಿಕ್ಷುಕಿ. ದಿನಾ ಇಲ್ಲಿ ನಿಂತು ಹೋಗಿ ಬರುವವರನ್ನು ಕಾಡಿ ಬೇಡಿ ತನಗೆ ಬೇಕಾದನ್ನು ಪಡೆದು ತಿನ್ನುತ್ತಾಳೆ ಅವಳು. ದುಡ್ಡು ತಗೊಳಲ್ಲ , ಹೊಟ್ಟೆಗೆ ಏನಾದರೂ ತಿನ್ನಲು ಬೇಕು ಅವಳಿಗೆ ಏನಾದರೂ ಅಲ್ಲ ಅವಳು ಬಯಸಿದ್ದೆ ಆಗಬೇಕು ಎಂದು ಹೇಳಿದ.ಅಂತೂ ಇಂತೂ ಅವಳು ಬಯಸಿದ ಎಗ್ ಫಪ್ಸ್ ಕೊಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಫೋಟೋ ಕೃಪೆ : google
ಭಿಕ್ಷುಕರೂ ಈಗ ಅಪ್ಡೇಟ್ ಆಗಿದ್ದರೆ ಅನಿಸಿತು. ಒಂದು ಕಾಲದಲ್ಲಿ ಭಿಕ್ಷುಕರಿಗೆ ಐದು ಪೈಸೆಯನ್ನೋ ಹತ್ತು ಪೈಸೆಯನ್ನೋ ಕೊಟ್ಟರೆ ಮಹಾ ಪ್ರಸಾದ ಎಂಬಂತೆ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು. ಅಷ್ಟು ಹಣಕ್ಕೆ ಆ ಕಾಲದಲ್ಲಿ ನಿಜಕ್ಕೂ ತುಂಬಾ ಬೆಲೆ ಇತ್ತು. ಒಂದು ರೂಪಾಯಿ ನಾಣ್ಯ ನಾವು ಒಂದು ದಿನ ಪೂರ್ತಿ ಖರ್ಚು ಮಾಡುವಷ್ಟು ಹಣ ಆಗಿತ್ತು. ಈಗ ಹತ್ತು ರೂಪಾಯಿ ಕೊಟ್ಟರೂ ಏನು ಬರುವುದಿಲ್ಲ. ಪಾಪ ಭಿಕ್ಷಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತದೆಯಲ್ಲವೇ. ಒಂದು ಕಾಲದಲ್ಲಿ ರಾತ್ರಿ ಮಾಡಿ ಉಳಿದ ತಂಗಳನ್ನ ಸಾಂಬಾರು ಕೊಟ್ಟರೆ ತುಂಬಾ ಖುಷಿಯಿಂದ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ತಂಗಳನ್ನ ತಿನ್ನುವವರು ಯಾರು ಇಲ್ಲ. ಚಿಂದಿ ಆಯುವವರು, ಮಹಿಳೆಯರು,ಚಿಕ್ಕ ಮಕ್ಕಳು ಮನೆ ಮುಂದೆ ಬಂದು ಅಮ್ಮಾ ತಾಯಿ ಅಂದಾಗ ಊಟ ಕೊಡಲು ಹೋದರೆ ನಿರಾಕರಿ ಸುತ್ತಾರೆ. ಬದಲಿಗೆ ಅವರಿಗೆ ಹಣ ಬೇಕು. ಬಸ್ಸಿನಲ್ಲಿ ಕಿಟಕಿ ಬಳಿ ಬಂದು ನೆನ್ನೆಯಿಂದ ಊಟ ಮಾಡಿಲ್ಲಮ್ಮ ಹತ್ತು ರೂಪಾಯಿ ಕೊಡಿ ಎಂದು ಮುಲಾಜಿಲ್ಲದೆ ಕೇಳುತ್ತಾರೆ. ಅಂದರೆ ನಾವು ಈಗ ಕೊಡಬೇಕಾದ ಭಿಕ್ಷೆಯ ಮೊತ್ತ ಕನಿಷ್ಠ ಹತ್ತು ರೂಪಾಯಿ ಆದರೂ ಇರಬೇಕು ಎಂದರ್ಥ.
ಮನೆ ಮುಂದೆ ಭಿಕ್ಷೆಗೆ ಬರುವ ಅಮ್ಮ ತಾಯಿಗಳು ನಾವು ಕೊಡುವ ತಂಗಳನ್ನ ಸಾರನ್ನು ತಾವು ಸಾಕಿದ ಹಂದಿಗಳಿಗೆ ಹಾಕಿ ಬೆಳೆಸುತ್ತಾರೆ. ಈ ರೀತಿ ಭಿಕ್ಷಾನ್ನ ಹಾಕಿ ಹಾಕಿ ಕೊಬ್ಬಿಸಿ ಹಂದಿ ಬೆಳೆಸಿ ಅವುಗಳನ್ನು ಮಾರಿ ಹಣ ಮಾಡಿಕೊಳ್ಳುತ್ತಾರೆ. ಏಕ್ ದಿನ್ ಕಾ ಸುಲ್ತಾನ್ ಎಂಬಂತೆ ಬದುಕಿ ಒಂದೇ ದಿನ ಮಸ್ತ್ ಮಜಾ ಮಾಡುತ್ತಾರೆ.ಒಟ್ಟಿನಲ್ಲಿ ಪ್ರಪಂಚದಲ್ಲಿ ಅವರಿಗಿರುವಷ್ಟು ನೆಮ್ಮದಿ ಸುಖ ಯಾರಿಗೂ ಇಲ್ಲ. ಸೈಟ್ ಕೊಳ್ಳುವ, ಮನೆ ಕಟ್ಟುವ,ಮಕ್ಕಳನ್ನು ಓದಿಸಿ, ಬೆಳೆಸುವ , ದಿನಸಿ ಹೊಂದಿಸುವ, ಭವಿಷ್ಯದ ಜೀವನಕ್ಕೆ ಹಣ ಕೂಡಿಡುವ ಯಾವ ಮಹತ್ತರ ಜವಾಬ್ದಾರಿಗಳು ಅವರಿಗೆ ಇರುವುದಿಲ್ಲ. ಅವತ್ತಿನ ಮಳೆ ಅವತ್ತಿನ ಗಾಳಿ ಅಷ್ಟೇ. ಹೀಗೆ ಹತ್ತಾರು ವರ್ಷಗಳ ಕಾಲ ಬದುಕಿ ಬಿಡುತ್ತಾರೆ. ತೆರೆದ ಬಯಲಿಗೆ ಸುರಿಯುವ ಮಳೆಗೆ ಕೊರೆಯುವ ಚಳಿಗೆ ಮೈ ಒಡ್ಡಿದರು ಯಾವುದೇ ಖಾಯಿಲೆ ಕಸಾಲೆ ಅವರನ್ನು ಬಾಧಿಸುವುದಿಲ್ಲ ಅವರು ನಿತ್ಯ ನಿರಂತರ ಉತ್ಸಾಹಿಗಳಾಗಿಯೇ ಇರುತ್ತಾರೆ. ಎಲ್ಲೆಂದರಲ್ಲಿ ನೀರು ಕುಡಿದು ಯಾವುದೋ ಆಹಾರ ತಿಂದು ಬದುಕಿಬಿಡುತ್ತಾರೆ. ಆ ಕಾಲದಿಂದ ಈ ಕಾಲದವರೆಗೂ ಭಿಕ್ಷುಕರದ್ದೆಲ್ಲ ಇದೇ ಕಥೆ.ಇರುವುದರಲ್ಲೇ ನೆಮ್ಮದಿ ಕಂಡುಕೊಳ್ಳುತ್ತಾರೆ. ಅವರು ಯಾವುದಕ್ಕೂ ಚಿಂತಿಸುವುದಿಲ್ಲ.
ದೊಡ್ಡ ಬಂಗಲೆ, ನಾಲ್ಕೈದು ಸೈಟು, ಕಾರು, ಬ್ಯಾಂಕ್ ಬ್ಯಾಲೆನ್ಸ್ ಎಲ್ಲ ಇದ್ದರೂ ಶ್ರೀಮಂತರಿಗೆ ನೆಮ್ಮದಿ ಮರೀಚಿಕೆ. ರಾತ್ರಿಯಾದರೆ ಕಣ್ಣಿಗೆ ಕಣ್ಣು ಹತ್ತುವುದಿಲ್ಲ. ತಾವು ಕೂಡಿಟ್ಟ ಹಣ ಸಂಪತ್ತನ್ನು ಕಾಯುವುದೇ ಅವರಿಗೆ ಕೆಲಸ. ಹಾಸಿಗೆಯಲ್ಲಿ ನಿದ್ದೆ ಹತ್ತದೆ ಹೊರಳಾಡುವುದೇ ಆಗುತ್ತದೆ. ಬಿಕ್ಷುಕರಾದರೆ ಒಂದು ಮರದ ಕೆಳಗೋ, ಮೋರಿಯ ಪಕ್ಕದಲ್ಲೋ, ಅಷ್ಟೇ ಏಕೆ ಸಂತೆಯಲ್ಲೇ ನಿದ್ರೆ ಮಾಡಿ ಬಿಡುತ್ತಾರೆ . ಒಂದು ರೀತಿಯಲ್ಲಿ ನೋಡಿದರೆ ಅವರದ್ದೇ ಸುಖ ಜೀವನ.

ಫೋಟೋ ಕೃಪೆ : goole
ಆದರೂ ಈಗೀಗ ಭಿಕ್ಷುಕರೂ ತಮ್ಮ ಜೀವನ ಶೈಲಿಯನ್ನು ಸ್ವಲ್ಪ ಉತ್ತಮಪಡಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಏನಂದರೆ ಅದನ್ನು ತಿನ್ನುವುದಿಲ್ಲ ,ತಮ್ಮ ಆಯ್ಕೆಯಂತೆ ಅದನ್ನು ಕೇಳಿ ಪಡೆದು ತಿನ್ನುತ್ತಾರೆ, ಎಲ್ಲೆಂದರಲ್ಲಿ ಮಲಗುವುದಿಲ್ಲ. ಹರಕಲು ಬಟ್ಟೆ ಮುರಕಲು ಗುಡಿಸಲು ಆದರೂ ಭಿಕ್ಷುಕರಿಗೆ ಒಂದು ನೆಲೆ ಇರುತ್ತದೆ. ಅದು ತಾತ್ಕಾಲಿಕ ಗುಡಿಸಲಾದರೂ ಅವರೇನೂ ಚಿಂತಿಸುವುದಿಲ್ಲ. ಆ ಮುರುಕಲು ಗುಡಿಸಲನ್ನೇ ಒಪ್ಪವಾಗಿ ಜೋಡಿಸಿಕೊಳ್ಳುತ್ತಾರೆ. ಗುಡಿಸಲಲ್ಲಿ ಕರೆಂಟ್ ಇಲ್ಲದಿದ್ದರೆ ಏನಂತೆ ಸಂಜೆ ಬೆಳಕಿರುವಾಗಲೇ ಅಲ್ಲೇ ಒಂದೆರಡು ಕಲ್ಲುಗಳನ್ನು ಜೋಡಿಸಿ ಒಲೆ ಹಚ್ಚಿ ತಮಗೆ ಬೇಕಾದ್ದನ್ನು ಮಾಡಿಕೊಂಡು ತಿಂದು ಕತ್ತಲಾಗುವ ವೇಳೆಗೆ ಮೈ ಕೈ ನೋವಿಗೆ ಮದಿರೆಯ ಮುಲಾಮು ಸೇವಿಸಿ ನಶೆಯಲ್ಲಿ ತೇಲುತ್ತಾ ನೆಲಕ್ಕೆ ತಲೆ ಹಾಕಿ ನಿಶ್ಚಿಂತೆಯಿಂದ ಮಲಗುತ್ತಾರೆ. ಬೆಳಗ್ಗೆ ಎದ್ದರೆ ಮತ್ತದೇ ಕಾಯಕ ಚಿಂದಿ ಆಯುವುದೋ, ಪಿನ್ನಿ, ಪೀಪಿ ಮಾರುವುದೋ, ತಲೆ ಕೂದಲನ್ನು ಕೊಳ್ಳುವ ಕಾಯಕವನ್ನೋ ಮಾಡಿ ಹೊಟ್ಟೆ ಹೊರೆಯುತ್ತಾರೆ. ಆಗಾಗ ಅವಕಾಶ ಸಿಕ್ಕಾಗ ಭಿಕ್ಷೆಯನ್ನು ಬೇಡುತ್ತಾರೆ. ಬಂದ ಹಣದಲ್ಲಿ ಉತ್ತಮ ಊಟಕ್ಕೂ, ರಾತ್ರಿ ತೀರ್ಥ ಸೇವನೆಗೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ, ಒಟ್ಟಿನಲ್ಲಿ ಅವರದ್ದು ಚಂದದ ಜೀವನ.
ಏನಾದರೂ ಆಗಲಿ ಪಾಪ ಅವರು ನಮ್ಮಂತೆ ಮನುಷ್ಯರೇ ಅಲ್ಲವೇ…. ಅವರಿಗೂ ಆಸೆ ಆಕಾಂಕ್ಷೆಗಳು ಇರುತ್ತವೆಯಲ್ಲವೇ. ಎಷ್ಟು ದಿನ ಅಂತ ಅವರು ಅದೇ ತಂಗಳನ್ನ ಸಾರು ತಿಂದು ಬದುಕುತ್ತಾರೆ. ಅದೇ ಹಳಸಿದ ಅನ್ನ ತಿಂದು ತಿಂದು ನಾಲಿಗೆ ಜಡ್ಡು ಹತ್ತಿರುತ್ತದೆಯಲ್ಲವೇ ? ನಮ್ಮಂತೆ ಅವರಲ್ಲೂ ಹೊಸ ಪೀಳಿಗೆಯ ಉದಯವಾಗಿರುತ್ತದೆಯಲ್ಲವೇ.ವಿಭಿನ್ನ ಆಲೋಚನೆ, ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಅವರೂ ಬಯಸುತ್ತಾರಲ್ಲವೇ… ಹಾಗಾಗಿ ನಾವು ಕೂಡ ಅವರ ಅಭಿರುಚಿಗೆ ತಕ್ಕಂತಹ ಆಹಾರ ನೀಡಬೇಕೆಂಬುದು ಅವರ ಬಯಕೆ. ಅವರ ಬೇಡಿಕೆಗೆ ತಕ್ಕಂತೆ ಭಿಕ್ಷೆಯನ್ನೂ ಕೊಡಬೇಕಾಗುತ್ತದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅವರೂ ಅಪ್ಡೇಟ್ ಆಗಿದ್ದಾರೆ.

ಅಂದಹಾಗೆ ಕಾಸ್ಟಲಿ ಭಿಕ್ಷುಕರು ಎಂದ ಕೂಡಲೇ ಇನ್ನೊಂದು ವಿಚಾರ ನೆನಪಾಗುತ್ತಿದೆ. ಭರತ್ ಜೈನ್ ಎಂಬ ಮುಂಬೈ ನಿವಾಸಿ ಇಡೀ ವಿಶ್ವದಲ್ಲೇ ಶ್ರೀಮಂತ ಭಿಕ್ಷುಕನಂತೆ. ಈತನ ಪ್ರತಿ ತಿಂಗಳ ಆದಾಯ 75000 ರೂಪಾಯಿ, ದಿನದ ಎಂಟು ಹತ್ತು ಗಂಟೆಗೆ ಸರಾಸರಿ 2000 ದಿಂದ 2500 ವರೆಗೂ ಭಿಕ್ಷಾಟನೆಯಿಂದ ಸಂಪಾದನೆ, ಎರಡು 1ಬಿ.ಎಚ್.ಕೆ.ಅಪಾರ್ಟ್ಮೆಂಟ್ (80 ಲಕ್ಷ), ಒಂದು ಶಾಪ್ ನಿಂದ ಪ್ರತಿ ತಿಂಗಳು ಹತ್ತು ಸಾವಿರ ಬಾಡಿಗೆ ಬರುತ್ತದೆಯಂತೆ. ಒಟ್ಟಾರೆ ಈತನ ಇತ್ತೀಚಿನ ಆಸ್ತಿ ಸುಮಾರು 7.5 ಕೋಟಿ ಎಂದು ಹಿಂದುಸ್ಥಾನ್ ಟೈಮ್ಸ್ ಸೇರಿದಂತೆ ಹಲವಾರು ಪತ್ರಿಕೆಗಳು ವರದಿ ಮಾಡಿವೆ. ಇದು ಆಶ್ಚರ್ಯವೆನಿಸಿದರೂ ಸತ್ಯ ಸಂಗತಿ. ಇನ್ನೂ ಎಂಥಾ ವಿಪರ್ಯಾಸವೆನಿಸುವ ಘಟನೆಗಳು ಸಂಭವಿಸುತ್ತವೆಯೋ ಕಾದು ನೋಡಬೇಕು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ಸರ್ವಮಂಗಳ ಜಯರಾಮ್ – ಗೌರಿಬಿದನೂರು
