ಕವಿಯತ್ರಿ ರಶ್ಮಿಪ್ರಸಾದ್ (ರಾಶಿ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮೊದಲ ನೋಟದಲ್ಲೇ ನಿನ್ನಯ ತುಂಟ ನಯನ
ಬರೆಯಿತೆದೆಯ ಮೇಲೆ ಮಧುರ ಪ್ರೇಮ ಕವನ.!
ನಿನ್ನ ನಗೆಮೊಗದಿ ಹೊಳೆವ ಕಂಗಳ ಕೋಲ್ಮಿಂಚು
ದಿಗ್ಗನೆ ಬೆಳಕಾಗಿಸಿತು ನನ್ನ ಹೃನ್ಮನಗಳ ಇಂಚಿಂಚು.!
ಕಣ್ಣಂಚಿನಲ್ಲಿ ಮೂಡಿದ ಆ ಒಲವ ಕಾಮನಬಿಲ್ಲು
ಹರಿಸಿತು ಅನುರಾಗದ ನವರಂಗು ನರನರದಲ್ಲು.!
ಪ್ರಪ್ರಥಮ ನೋಟದಲ್ಲೆ ಅದೆಂತಹ ಪ್ರೇಮಪುಳಕ
ಕದ್ದು ಕದ್ದು ನೋಡಬೇಕೆನಿಸುವ ನವಿರು ತವಕ.!
ನನ್ನ-ನಿನ್ನ ಕಂಗಳು ಬೆಸೆದ ಬೆರೆತ ಆ ಅನನ್ಯ ಕ್ಷಣ
ನೆನೆದರಿಂದೂ ನವೋಲ್ಲಾಸದಿ ಕುಣಿವುದು ಕಣಕಣ.!
ನಿನ್ನಾ ಕುಡಿನೋಟದ ಮೋಹನ ಮುರಳಿ ಮೋಡಿ
ನನ್ನಯ ಜೀವ-ಭಾವ ಬದಲಿಸಿದ ಮಹಾಗಾರುಡಿ.!
- ರಶ್ಮಿಪ್ರಸಾದ್ (ರಾಶಿ)
