‘ಆರೋಹಣ’ ಪುಸ್ತಕ ಪರಿಚಯ – ಸಂದೇಶ್ ಎಚ್ ನಾಯ್ಕ್

ಶಿಕ್ಷಣವೂ ಒಂದು ದಂಧೆಯಂತೆ ಬೆಳೆದು ನಿಂತಿರುವ ಪರಿಯನ್ನು ‘ಆರೋಹಣ’ ಕಾದಂಬರಿ ಅತ್ಯಂತ ಸಶಕ್ತವಾಗಿ ತೆರೆದಿಟ್ಟಿದೆ. ವಿದ್ಯಾರ್ಥಿಗಳನ್ನು ಅಂಕಗಳ ಗಳಿಕೆಯಲ್ಲಿ ತೊಡಗಿಸಿ, ತಮ್ಮ ತಮ್ಮ ಸಂಸ್ಥೆಯ ಹೆಸರಿಗೆ ಪ್ರತಿಷ್ಠೆಯ ಗರಿ ತೊಟ್ಟುಕೊಳ್ಳುವ ಹಪಾಹಪಿ ಹಾಗೂ ಅದಕ್ಕಾಗಿ ಯಾವ ಕೃತ್ಯಕ್ಕೂ ಹಿಂದೇಟು ಹಾಕದ ಶಿಕ್ಷಣದ ವಾಣಿಜ್ಯೀಕರಣದ ಕರಾಳ ಮುಖವನ್ನು ಈ ಕಾದಂಬರಿ ತೋರಿಸುತ್ತದೆ. ಸಂದೇಶ್ ಎಚ್ ನಾಯ್ಕ್ ಅವರು ವಿವೇಕಾನಂದ ಕಾಮತ್ ಅವರ ಆರೋಹಣ ಕಾದಂಬರಿ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿ – ಆರೋಹಣ
ಲೇಖಕರು – ವಿವೇಕಾನಂದ ಕಾಮತ್
ಪ್ರಕಾಶನ – ವೀರಲೋಕ ಬುಕ್ಸ್ ಪ್ರೈ.ಲಿ
ಬೆಲೆ – ₹ 175
ಪುಟಗಳು – 154

ಒಂದೆಡೆ ನೈತಿಕ ಮೌಲ್ಯ ಹಾಗೂ ಆದರ್ಶ. ಮತ್ತೊಂದೆಡೆ ಸದಾ ಲಾಭ-ನಷ್ಟಗಳನ್ನೇ ಅಳೆದು ತೂಗುವ ವ್ಯಾವಹಾರಿಕತೆ. ಇವೆರಡರ ನಡುವೆ ಯಾವುದು ಬದುಕಿಗೆ ನಿಜವಾದ ಪರಿಪೂರ್ಣತೆ ಒದಗಿಸುವಂಥದ್ದು? – ಹೀಗೊಂದು ಜಿಜ್ಞಾಸೆಯನ್ನು ಬದುಕು ಆಗಾಗ ನಮ್ಮ ಮುಂದೆ ಒಡ್ಡುತ್ತಲೇ ಇರುತ್ತದೆ. ಆ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳಬೇಕೆಂದರೆ ಅದಕ್ಕೆ ಬದುಕಿನ ಅನುಭವಗಳು, ಬದಲಾಗುವ ಮನಃಸ್ಥಿತಿ, ಕಾಲಘಟ್ಟ, ಸಮಾಜದ ಸ್ವರೂಪ ಇತ್ಯಾದಿ ಸುಳುಹುಗಳ ಸಹಾಯ ಬೇಕೇ ಬೇಕು. ಏನೇ ಆದರೂ ಈ ಸಂಗತಿಗಳಲ್ಲಿನ ಪಲ್ಲಟ ಮನುಷ್ಯರ ಮನೋಧೋರಣೆಯನ್ನು ಪ್ರಭಾವಿಸುವುದಂತೂ ಸತ್ಯ.

ಆದರ್ಶಗಳನ್ನೇ ಆರಾಧಿಸಿಕೊಂಡು, ಮೌಲ್ಯಗಳನ್ನೇ ಉಸಿರಾಡುವವರು ಇರುವಂತೆ ವ್ಯಾವಹಾರಿಕತೆಯ ಅತಿರೇಕವನ್ನೇ ಆವಾಹಿಸಿಕೊಂಡು ಬದುಕುವವರೂ ಕಾಣಸಿಗುತ್ತಾರೆ. ಅದಕ್ಕೆ ತಕ್ಕುದಾದ ನಿಲುವು, ನಿಯಮ, ಆಸಕ್ತಿ, ಮನಃಸ್ಥಿತಿಗಳನ್ನು ಬೆಳೆಸಿಕೊಂಡು ಹಾಯಾಗಿ ಇರುತ್ತಾರೆ. ಸರಿ-ತಪ್ಪುಗಳೆಂಬ ವಿಮರ್ಶೆಗಳಾಚೆ ಅವರವರ ಆ ನಿಲುವುಗಳ ಬಗ್ಗೆ ಹಾಗೊಂದು ನಿಖರತೆ ಅವರಲ್ಲಿರುತ್ತದೆ. ಆ ತತ್ವಗಳನ್ನು ಪಾಲಿಸಿಕೊಂಡು ಬಂದವರ ನಡುವೆ ತಲೆಮಾರಿನ ಅಂತರವಿದ್ದು, ಅವರು ಪರಸ್ಪರ ಎದುರಾದರೆ ಏನಾಗಬಹುದು? ಅದರಲ್ಲೂ ಒಂದೇ ಮನೆಯೊಳಗೆ ವಾಸಿಸುವ ತಂದೆ-ಮಗ ಸಂಬಂಧದ ನಡುವೆ ಇಂಥದ್ದೊಂದು ತಿಕ್ಕಾಟ ಹುಟ್ಟಿಕೊಂಡರೆ ಅದರ ಪರಿಣಾಮವೇನು? ಕೊನೆಗೂ ಗೆಲುವು ಯಾರದ್ದು? ಅದು ನಿಜಕ್ಕೂ ಗೆಲುವೋ ಅಥವಾ ಸೋಲೋ? ಇಂಥ ವಾಸ್ತವಕ್ಕೆ ಹತ್ತಿರವಾದ ಹಲವು ಸಂಗತಿಗಳ ಚುಕ್ಕೆಗಳ ಮೇಲೆ ಮೂಡಿದ ಕಥಾಹಂದರವುಳ್ಳ ಕಾದಂಬರಿಯೇ ವಿವೇಕಾನಂದ ಕಾಮತ್‌ರವ ‘ಆರೋಹಣ’.

ಶಿಕ್ಷಣವೂ ಒಂದು ದಂಧೆಯಂತೆ ಬೆಳೆದು ನಿಂತು, ಆವರಿಸಿರುವ ಪರಿಯನ್ನು ಕಾದಂಬರಿ ಅತ್ಯಂತ ಸಶಕ್ತವಾಗಿ ತೆರೆದಿಟ್ಟಿದೆ. ವಿದ್ಯಾರ್ಥಿಗಳನ್ನು ಅಂಕ, ರ್ಯಾಂಕ್‌ಗಳ ಗಳಿಕೆಗೆ ತೊಡಗಿಸಿ, ತಮ್ಮ ತಮ್ಮ ಸಂಸ್ಥೆಯ ಹೆಸರಿಗೆ ಪ್ರತಿಷ್ಠೆಯ ಗರಿ ತೊಟ್ಟುಕೊಳ್ಳುವ ಹಪಾಹಪಿ ಹಾಗೂ ಅದಕ್ಕಾಗಿ ಯಾವ ಕೃತ್ಯಕ್ಕೂ ಹಿಂದೇಟು ಹಾಕದ, ನಿವೃತ್ತ ಶಿಕ್ಷಕನ ಪುತ್ರ ವಾಸುವಿನ ಮನೋಧೋರಣೆ ಶಿಕ್ಷಣದ ವಾಣಿಜ್ಯೀಕರಣದ ಕರಾಳ ಮುಖವನ್ನು ದಾಖಲಿಸುವಂತಿದೆ. ಇದಕ್ಕೆಲ್ಲ ಒಗ್ಗಿಕೊಳ್ಳಲೊಪ್ಪದ ತಂದೆ ಮುಜುಗರದ ಮುದ್ದೆಯಾಗುತ್ತಾರೆ. ಇದಕ್ಕೆ ಪ್ರತಿರೋಧ ತೋರಿದ ತಂದೆಗೆ ‘ನಾವ್ಯಾರನ್ನೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ಇದು ಇರುವುದು ಹೀಗೇ!’ ಎಂದು ವಾಸು ಹೇಳುವಲ್ಲಿ, ನಮ್ಮ ಸಮಾಜದಲ್ಲಿ ನಡೆಯುವ ಅದೆಷ್ಟೋ ಕೆಲಸಗಳನ್ನು ‘ಈಗ ಇವೆಲ್ಲ ಕಾಮನ್’ ಎಂದೆನ್ನುವ ಮೂಲಕ ಅಮಾನವೀಯ, ಅನಧಿಕೃತ ಹಾಗೂ ಅನೈತಿಕ ಚಟುವಟಿಕೆಗಳಿಗೂ ಅಧಿಕೃತತೆಯ ಸ್ವ-ಮೊಹರನ್ನೊತ್ತುವ ಧಾವಂತ ಅನಾವರಣಗೊಳ್ಳುತ್ತದೆ.

ಕತೆಯು ಹಲವು ಸಮಕಾಲೀನ ಸಂಗತಿಗಳ ನೆಲೆಯಲ್ಲಿ ತೆರೆದುಕೊಳ್ಳುತ್ತದೆ. ಅವುಗಳ ಬಗ್ಗೆ ನಮ್ಮಲ್ಲಿ ಈಗಾಗಲೇ ಒಂದು ಪ್ರಜ್ಞೆ ಇರುವುದರಿಂದ ನಮ್ಮನ್ನು ಅದು ಇನ್ನಷ್ಟು ಕೈ ಜಗ್ಗುತ್ತದೆ. ಪ್ರಚಲಿತ ವಿಷಯವನ್ನು ಕಾದಂಬರಿಯೊಂದರ ವ್ಯಾಪ್ತಿಗೆ ಹೊಂದಿಸುವಾಗ ಅದು ಅಸಮರ್ಪಕ ಎನಿಸದ ರೀತಿಯಲ್ಲಿ ಸಹಜ ಕಲ್ಪನೆಗಳನ್ನು ಕಡೆದು ಪ್ರಸ್ತುತ ಪಡಿಸುವಲ್ಲಿ ಲೇಖಕರು ಬಳಸಿದ ಸರಳ, ಸರಾಗ ಭಾಷಾ ಪ್ರವಾಹ ಓದುಗರನ್ನು ಸೆಳೆಯುವಂತಿದೆ. ಏನು ಹೇಳಬೇಕೋ ಅವೆಲ್ಲವನ್ನೂ ಪಾತ್ರಗಳ ಮೂಲಕವೇ ಅಭಿವ್ಯಕ್ತಪಡಿಸಲಾಗಿದೆ.

ಕಾದಂಬರಿಯನ್ನು ಬಹುಮುಖ್ಯವಾಗಿ ಆವರಿಸಿಕೊಂಡಿರುವ ತಂದೆ-ಮಗ-ಮೊಮ್ಮಗ ಈ ಮೂರು ಪಾತ್ರಗಳು ಮೂರು ತಲೆಮಾರುಗಳ ಪ್ರತಿನಿಧಿಗಳಂತೆ ಕಾಣುತ್ತವೆ. ಈ ಪಾತ್ರಗಳ ದೃಷ್ಟಿಕೋನದ ಮಸೂರದ ಮೂಲಕ ಸೇವಾಮನೋಭಾವದ ಪ್ರಸ್ತುತತೆ, ಮೌಲ್ಯಗಳ ಏಳು-ಬೀಳು, ಪ್ರಚಾರ ಪ್ರಿಯತೆಯ ಗುಂಗು, ಹಣದ ವ್ಯಾಮೋಹ, ಬದಲಾದ ಶೈಕ್ಷಣಿಕ ವ್ಯವಸ್ಥೆ, ಆಯ್ಕೆಯ ಸ್ವಾತಂತ್ರ್ಯ, ಸಮರ್ಥನೆಯ ಅತಿರೇಕ ಇತ್ಯಾದಿ ಅಂಶಗಳು ಪರಿಶೋಧಿಸಲ್ಪಡುತ್ತವೆ. ಮೇಷ್ಟ್ರಾಗಿದ್ದ ತಂದೆ ರಾಘವೆಂದ್ರರ ವೃತ್ತಿಯನ್ನೇ ನೆಚ್ಚಿಕೊಂಡು ಬೆಳೆಯುವ ಮಗ, ಅದನ್ನು ಬೇರೆಯದೇ ಸ್ವರೂಪ ಹಾಗೂ ಆಯಾಮಕ್ಕೆ ಹೊರಳಿಸುತ್ತಾನೆ. ತಂದೆ ಪಾಲಿಸಿಕೊಂಡು ಬಂದಿದ್ದ ಬದುಕಿನ ತತ್ವಾದರ್ಶಕ್ಕೂ, ಮಗ ನೆಚ್ಚಿಕೊಂಡಿದ್ದ ವಾಣಿಜ್ಯಾತ್ಮಕ ನಿಲುವಿಗೂ ನಡುವೆ ಇರುವ ವೈರುಧ್ಯ ಢಾಳಾಗಿ ಗೋಚರಿಸುತ್ತದೆ.

ತಂದೆಯ ಧೋರಣೆಯನ್ನು ಬದಲಾಯಿಸಲು ಮಗ, ಹಾಗೂ ಮಗನ ಗ್ರಹಿಕೆಗಳನ್ನು ತಿದ್ದಲು ತಂದೆ ಒದ್ದಾಡುವ ಪರಿ ಇಂದಿನ ಸಮಾಜದಲ್ಲಿ ಎಲ್ಲೆಲ್ಲೂ ಕಾಣಿಸುವಂಥದ್ದೇ. ತನ್ನಿಂದ ಹಿಡಿಯಲಾರದಷ್ಟು ಭೌತಿಕ ಹಾಗೂ ಬೌದ್ಧಿಕವಾಗಿ ದೂರ ಸರಿದಿರುವ ಮಗನನ್ನು ನೆನೆಸಿಕೊಂಡಾಗಲೆಲ್ಲ, ಈ ನಾಗಾಲೋಟದ ಬದುಕಿನ ಹೆದ್ದೆರಯಲ್ಲಿ, ತಾನು ಅಪ್ರಸ್ತುತನಾದೆನೇ ಎಂಬ ಬೇಸರದ ಛಾಯೆ ತಂದೆಯ ಮನಸ್ಸನ್ನು ಕಾರ್ಮೋಡದಂತೆ ಆವರಿಸುತ್ತದೆ. ತಕರಾರುಗಳ ಪಟ್ಟಿ ಹಿಡಿದು ಮಗ ತನ್ನ ತಂದೆಯ ಮೇಲೆ ಆಕ್ಷೇಪ ಎತ್ತುತ್ತಿದ್ದರೆ ಅತ್ತ ಆತನ ಮಗನೂ ತನ್ನದೇ ಆದ ದೂರುಗಳ ಮೂಲಕ ಅಪಸ್ವರ ಹೊರಹಾಕಲು ಹವಣಿಸುತ್ತಿರುತ್ತಾನೆ. ಕೊನೆಗೂ ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಲೇಖಕರು ಕತೆಗೆ ಹಾಗೂ ಅದರ ಓದುಗರ‌ ವಿವೇಚನೆಗೇ ಮುಕ್ತವಾಗಿ ಬಿಟ್ಟಿದ್ದಾರೆಯೇ ಹೊರತು ಯಾವುದೋ ಸಿನಿಮೀಯ ತಿರುವನ್ನೋ, ರೋಚಕತೆಯನ್ನೋ ತುಂಬುವ ಪ್ರಯತ್ನ ಮಾಡಿಲ್ಲ.

‘ಸಿರಿವಂತರೆಲ್ಲರೂ ಸುಖವಾಗಿರುತ್ತಾರೆ’ ಎಂಬ ಭ್ರಮೆಯ ಪೋಷಾಕಿನೊಳಗಿದ್ದು ಮಾಡುವ ನಟನೆಯ ಅನಿವಾರ್ಯತೆಯ ಸಂಕೇತವಾಗಿ ‘ಮೀರಾ’ಳ ಪಾತ್ರವಿದೆ. ಖುದ್ದು ತನ್ನ ಗಂಡನಿಂದಲೇ ಉಪೇಕ್ಷೆಗೆ ಒಳಗಾಗಿ ತನ್ನ ಅಸ್ತಿತ್ವವನ್ನು ಮರೆತು ಬದುಕಿನೊಂದಿಗೆ ಹೆಜ್ಜೆ ಬದಲಿಸುತ್ತಿದ್ದರೂ ಎಲ್ಲೋ ಚಿಗಿತುಕೊಳ್ಳುವ ತನ್ನತನದ ತೊಳಲಾಟಗಳು ಮೂಲ ಕತೆಯಿಂದ ಕೊಂಚ ಭಿನ್ನವೆನಿಸಿದರೂ, ಇಂಥ ಕೌಟುಂಬಿಕ ಬೇಗುದಿಯಲ್ಲಿ ಬಳಲುವ ಮಹಿಳೆಯರನ್ನು ಧ್ವನಿಸುತ್ತದೆ. ತನ್ನ ಮನಸ್ಸಿಗಾದ ಕಲೆಯನ್ನು ಅಳಿಸುವ ಪ್ರಯತ್ನದಲ್ಲಿ ನಿತ್ಯ ತನ್ನೊಂದಿಗೆ ತಾನೇ ಹೋರಾಡುವ ಆಕೆ ತನ್ನ ಪತಿ ಹಾಗೂ ಮಾವನ ನಡುವಿನ ಅಸಮಾಧಾನಗಳನ್ನು ತಣಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಯನ್ನು ಸಂಭಾಳಿಸಿಕೊಂಡು ಸಾಗುವ ಹೆಚ್ಚಿನ ಮಹಿಳೆಯರ ನಿತ್ಯದ ಹೆಣಗಾಟ ಇದೇ ಅಲ್ಲವೇ?

ಕಾದಂಬರಿಯ ಕೆಲ ಭಾಗಗಳು ಯಾವುದೋ ವರ್ತಮಾನದ ಲೇಖನ, ಪತ್ರಿಕಾ ವರದಿ ಓದಿದಂತೆ ಭಾಸವಾಗುತ್ತದೆ. ಸಮಕಾಲೀನ ವಿಷಯವೊಂದರ ಸುತ್ತ ಕತೆ ಹೆಣೆಯುವಾಗಿನ ಈ ಸಂಭವನೀಯ ಮಿತಿಯ ಛಾಯೆ ಅಲ್ಲಲ್ಲಿ ಕಾಣಿಸಿದ್ದು, ಕತೆಯನ್ನು ಕೊಂಚ ಸೊರಗುವಂತೆ ಮಾಡಿದೆ. ಕೆಲವು ತಿರುವುಗಳು ಸುಲಭ ಊಹೆಗೆ ನಿಲುಕುವಂತಿವೆ. ಕಪ್ಪು ಹಣ ಅಡಗಿಸಿಡಲು ಮಾಡಿದ ತಂತ್ರಗಳಲ್ಲಿ ಲೇಖಕರು ಹಳೆಯ ಮಾದರಿಯನ್ನೇ ಆರಿಸಿಕೊಂಡಿದ್ದಾರೆ‌ ಎನಿಸಿತು. ರಾಘವೇಂದ್ರರು ಬೋಧಿಸಿದ ಶಾಲೆಯ ವಿವರಗಳು ಪ್ರಾಥಮಿಕ/ಪ್ರೌಢ ಶಾಲೆಯದ್ದು ಎನಿಸುತ್ತವೆ. ಶಾಲೆಯ ಮುಖ್ಯಸ್ಥರನ್ನು ಮುಖ್ಯೋಪಾಧ್ಯಾಯರು ಎನ್ನದೇ ಕಾಲೇಜುಗಳಿಗೆ ಇರುವಂತೆ ಪ್ರಾಂಶುಪಾಲರು ಎಂದು ಉಲ್ಲೇಖಿಸಿದ್ದು ಓದುಗರಲ್ಲಿ ಶಾಲೆಯೋ, ಕಾಲೇಜೋ ಎಂಬ ಅನುಮಾನ ಮೂಡಿಸುತ್ತದೆ. ತೀರಾ ಓದಿಗೆ ಭಂಗವೆನಿಸದಿದ್ದರೂ ಅಲ್ಲಲ್ಲಿ ಕಾಣಿಸುವ ಕೆಲವು ಪದ/ಅಕ್ಷರ ದೋಷಗಳನ್ನು‌ ತಿದ್ದಿದ್ದರೆ ಒಳಿತಿತ್ತು.

ಅರಿಯಲು, ತಿದ್ದಿಕೊಳ್ಳಲು ಇದ್ದ ಎಲ್ಲಾ ಅವಕಾಶಗಳನ್ನು ಧಿಕ್ಕರಿಸಿ ನಡೆದವರಿಗೆ ಪರಿಸ್ಥಿತಿಯೇ ತಕ್ಕ ಪಾಠ ಕಲಿಸುತ್ತದೆ ಎಂಬ ತತ್ವ ಕಥೆಯನ್ನು ಅಂತ್ಯಕ್ಕೊಯ್ಯುತ್ತದೆ. ಲೌಕಿಕ ಹಪಾಹಪಿಗೆ ಹೊಂದಿಕೊಳ್ಳಲೊಪ್ಪದ ನಿವೃತ್ತ ಶಿಕ್ಷಕ ರಾಘವೇಂದ್ರರ ಬದುಕು ಮತ್ತೆ ಅಂಥದ್ದೇ ಆರಂಭದ ಬಿಂದುವಿಗೆ ಬಂದು ನಿಲ್ಲುತ್ತದೆ. ಬಹುಪಾಲು ಮಗನ ಬದುಕೂ ಅಷ್ಟೇ! ತಾನೆಲ್ಲಿ ಎಡವಿದೆ ಎಂಬ ಆತ್ಮಾವಲೋಕನ ರಾಘವೇಂದ್ರರನ್ನು ಆಗಾಗ ಕಾಡುತ್ತದೆ. ಆದರೆ ವಾಸುವನ್ನು? ಸಮರ್ಥನೆಗಳೇ ಆತ್ಮಾವಲೋಕನವನ್ನು ಹಿಂದಕ್ಕಟ್ಟಿದರೆ ಬದುಕು ಅರಳಲಾರದು ಎಂಬ ನೀತಿಯನ್ನು ಕಾದಂಬರಿ ಅಲ್ಲಲ್ಲಿ ಸಾರುತ್ತದೆ. ಆದಾಗ್ಯೂ ‘ಇದೇ ತಪ್ಪು, ಇದೇ ಸರಿ’ ಎಂಬ ಸಿದ್ಧ ನಿಲುವಿಗೆ ಅದು ಎಲ್ಲೂ ಆತುಗೊಂಡಿಲ್ಲ.


  • ಸಂದೇಶ್ ಎಚ್ ನಾಯ್ಕ್ – ಹಕ್ಲಾಡಿ, ಕುಂದಾಪುರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading