ಫಲ್ಗುಣಿ ಒಂದು ವಿಶಾಲವಾದ ನದಿ. ಅಲ್ಲಿ ಗಂಗಾ ನದಿ ಉಕ್ಕಿ ಹರಿಯುತ್ತಿದೆ. ಇಲ್ಲಿ ಈ ನದಿಗೆ ಕಾಲಿರಿಸಿದರೆ ಮೊಣಕಾಲಿನಷ್ಟೂ ನೀರಿಲ್ಲ! ಇದೊಂದು ನಿಜಕ್ಕೂ ಬಹಳ ಆಶ್ಚರ್ಯವಲ್ಲವೇ? …ಹೆಚ್ಚಿನ ಮಾಹಿತಿಯನ್ನು ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಮೂಡಿ ಬಂದ ಫಲ್ಗುಣಿ ನದಿ ಮತ್ತು ಅದರ ಸುತ್ತಲಿನ ಕತೆಯನ್ನು ತಪ್ಪದೆ ಮುಂದೆ ಓದಿ..
ಗಂಟೆ ಆಗಲೇ ಮಧ್ಯಾಹ್ನ ಒಂದೂವರೆ. ಪೂಜಾ ಕೈಂಕರ್ಯ ಮುಗಿದು ಎಲ್ಲರೂ ವಿಷ್ಣು ದೇವಸ್ಥಾನದತ್ತ ಹೊರಡಲು ಅಣಿಯಾದರು. ಅವರವರು ಪೂಜೆ ಮಾಡಿದ ಪಿಂಡಗಳನ್ನು ಚಿಕ್ಕ ಹರಿವಾಣದಲ್ಲಿ ಹಾಕಿಕೊಂಡು ತಲೆಯ ಮೇಲಿಟ್ಟುಕೊಂಡು ಹೊರಟರೆ ಉಳಿದವರೆಲ್ಲ ಅವರ ಹಿಂದೆ.
ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿರುವ ಫಲ್ಗುಣಿ ನದಿಯ ದಡದಲ್ಲಿದೆ ಶ್ರೀ ವಿಷ್ಣು ದೇವಸ್ಥಾನ. ಹೋಗುವ ದಾರಿ ಕಿರಿದಾಗಿದೆ. ಅಕ್ಕ ಪಕ್ಕ ಸಾಲಾಗಿ ಅಂಗಡಿಗಳ ಮುಂಗಟ್ಟು. ವಿಪರೀತ ಜನ. ಮಳೆ ಸಂಪೂರ್ಣ ನಿಂತಿತ್ತು . ಆಗಲೇ ವಿಪರೀತ ಬಿಸಿಲಿನ ಝಳ.
ಫಲ್ಗುಣಿ ನದಿಗೆ ಹೋಗುವಾಗ ದೇವಸ್ಥಾನದ ಆವರಣದಲ್ಲಿರುವ ಬಾಗಿಲ ಮೂಲಕವೇ ಹೋಗಬೇಕು. ಹೆಚ್ಚು ಕಡಿಮೆ ನುಗ್ಗಿಕೊಂಡೇ ಹೋಗಿದ್ದಾಯಿತು. ವಿಶಾಲವಾದ ವಟ ವೃಕ್ಷ ದೇವಸ್ಥಾನದ ಪ್ರಾಂಗಣವನ್ನೆಲ್ಲ ಆವರಿಸಿ ತಂಪು ನೆರಳು ನೀಡಿದೆ. ಮುಂದೆ ನಾಲ್ಕಾರು ಮೆಟ್ಟಿಲು ಇಳಿದು ನದಿಯ ಉಸುಕಿನ ಮೇಲೆ ಸುಮಾರು ಅರ್ಧ ಕಿ.ಮೀ.ನಡೆಯಬೇಕು.
ಮೇಲೆ ಉರಿ ಬಿಸಿಲು ಕೆಳಗೆ ಕಾದು ಕೆಂಡವಾದ ಉಸುಕು. ಪಿಂಡ ಹೊತ್ತವರು ಬರಿ ಕಾಲಲಲ್ಲಿ ಬಂದಿದ್ದರಿಂದ ನಡೆಯಲು ತುಂಬಾ ಒದ್ದಾಡುತ್ತಿದ್ದರು. ದೂರದಲ್ಲಿ ಕಾಣುವ ನೀರನ್ನು ತಲುಪಲು ಓಡಿಕೊಂಡೇ ಹೋದರು ಹಲವರು. ನಾವು ಚಪ್ಪಲಿ ಹಾಕಿದ್ದರಿಂದ ಬಚಾವ್!

ಫೋಟೋ ಕೃಪೆ:google
ಈ ನದಿ ಗುಪ್ತ ಗಾಮಿನಿ. ಇದಕ್ಕೆ ಒಂದು ಕಥೆಯಿದೆ :
ಪುರಾಣ ಕಾಲದಲ್ಲಿ ಸೀತಾ ದೇವಿಯು ಈ ಪಿತೃಪಕ್ಷದಲ್ಲಿ ಮಾವನವರ ಪಿತೃ ಕಾರ್ಯ ಮಾಡಲು ಶ್ರೀರಾಮನಿಗೆ ಅರುಹುತ್ತಾಳೆ. ಹಾಗೂ ಈ ಕಾರ್ಯಕ್ಕೆ ಬೇಕಾದ ಸಾಮಾನುಗಳನ್ನು ತರಲು ಹೇಳುತ್ತಾಳೆ. ಶ್ರೀ ರಾಮನು ಆಯಿತು ನಾನು ಈ ಕಾರ್ಯ ಮಾಡುವೆನೆಂದು ಸಾಮಾನುಗಳನ್ನು ತರಲು ಹೋಗುತ್ತಾನೆ. ಎಷ್ಟು ಹೊತ್ತಾದರೂ ಬರಲಿಲ್ಲ. ಇತ್ತ ಅಶರೀರವಾಣಿಯಾಗುತ್ತದೆ; “ಸಮಯ ಮೀರುತ್ತಿದೆ. ಬೇಗನೆ ನಿನ್ನ ಮಾವನವರ ಕಾರ್ಯ ಮಾಡಿ ಮುಕ್ತಿ ಮಾರ್ಗ ಕಲ್ಪಿಸಿಕೊಡು” ಎಂದು.
ಸೀತಾದೇವಿಯು ತಡ ಮಾಡದೆ ಇನ್ನೂ ಕಾಯುತ್ತ ಕುಳಿತರೆ ಸಮಯ ಮೀರುವುದೆಂದು ಇರುವ ಅಕ್ಕಿಯನ್ನೇ ಅನ್ನ ಮಾಡಿ ಪಿಂಡ ಕಟ್ಟಿ ಪೂಜಿಸಿ ಫಲ್ಗುಣಿ ನದಿಯಲ್ಲಿ ಬಿಡುತ್ತಾಳೆ. ಇತ್ತ ಶ್ರೀರಾಮನು ಬಂದಾಗ ನಡೆದ ವಿಚಾರ ಹೇಳಲಾಗಿ ನಂಬುವುದಿಲ್ಲ. ಹೆಣ್ಣಾದ ನೀನು ಪಿಂಡ ಪ್ರಧಾನ ಮಾಡುವುದೆಂದರೇನು? ನಾನು ನಂಬುವುದಿಲ್ಲ ಎನ್ನುತ್ತಾನೆ.
ಆಗ ಸಾಕ್ಷಿಗಾಗಿ ಮನೆಯ ಮುಂದಿನ ತುಳಸಿ ಗಿಡಕ್ಕೆ ಹೇಳುತ್ತಾಳೆ. ಅವಳು ಹಿಂದೇಟು ಹಾಕಿದಾಗ ಕೋಪಗೊಂಡು ಬೆರೆಲ್ಲೂ ಕಾಣದ ನೀನು ಮನೆಯ ಮುಂದೆ ಇದ್ದರೂ ಮೊದಲ ಪೂಜೆಗೆ ನಿನ್ನ ನಿಷೇಧವಿರಲಿ ಎಂದು ಶಾಪ ಕೊಡುತ್ತಾಳೆ. ಅಂದಿನಿಂದ ವಿಘ್ನ ನಿವಾರಕ ಗಣೇಶನಿಗೆ ಪೂಜೆಗೆ ತುಳಸಿ ದಳ ಏರಿಸುವುದಿಲ್ಲ.
ಮುಂದಿನ ಸರದಿ ಒಂದು ಹಸು ಎದುರಾಗುತ್ತದೆ. ಹಸುವನ್ನು ಕೇಳಲಾಗಿ ಹಸು ಕೂಡಾ ಗೋಣು ಅಲ್ಲಾಡಿಸಿ ಮೇಯುತ್ತ ಮುಂದೆ ಸಾಗುತ್ತದೆ. ಕೋಪಗೊಂಡು ಮೇಯುವಾಗ ಸಿಕ್ಕದ್ದನ್ನು ತಿನ್ನುವ ನಿನಗೆ ನಿನ್ನ ಇಡೀ ದೇಹ ಪೂಜಿಸಲ್ಪಡುವಂತಹುದಾದರೂ ನಿನ್ನ ಮೂತಿಯನ್ನು ಮಾತ್ರ ಯಾರೂ ಪೂಜಿಸದಂತಾಗಲಿ ಎಂದು ಶಾಪ ಕೊಡುತ್ತಾಳೆ. ಅಂದಿನಿಂದ ಹಸುವಿನ ದೇಹದ ಪ್ರತಿಯೊಂದು ಭಾಗದಲ್ಲಿ ದೇವಾನುದೇವತೆಗಳು ಇರುವರೆಂದು ಪೂಜಿಸುತ್ತಾರೆ ಹೊರತೂ ಅದರ ಮೂತಿಯನ್ನು ಮಾತ್ರ ಯಾರೂ ಪೂಜಿಸುವುದಿಲ್ಲ.

ತದ ನಂತರ ಪೂಜೆ ಮಾಡಿಸಿದ ಬ್ರಾಹ್ಮಣನಲ್ಲಿಗೆ ಬಂದು ತಾನು ಪಿಂಡ ಪ್ರಧಾನ ಮಾಡಿ ನಿಮ್ಮ ಹತ್ತಿರ ಪೂಜೆ ಮಾಡಿಸಿದ ಬಗ್ಗೆ ವರದಿ ತನ್ನ ಗಂಡನಿಗೆ ಒಪ್ಪಿಸಿ ಎಂದು ಕೇಳಲಾಗಿ ಬ್ರಾಹ್ಮಣನೂ ನಿಜವನ್ನು ಹೇಳುವುದೇ ಇಲ್ಲ. ಕುಪಿತಗೊಂಡ ಸೀತಾ ದೇವಿ ಎಲಾ ಬ್ರಾಹ್ಮಣಾ? ಎಷ್ಟು ಆಸೆ ನಿನಗೆ? ಮತ್ತೆ ತನ್ನ ಗಂಡನ ಹತ್ತಿರ ಪೂಜೆ ಮಾಡಿಸುವ ಹವಣಿಕೆಯೇ? ಇರು ನಿನಗೆ ತಕ್ಕ ಶಾಸ್ತಿ ಎಂದರೆ; ನೀನು ಸದಾ ಬಡವನಾಗಿಯೇ ಇರು. ಪಿತೃ ಕಾರ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೇ ಜೀವನ ನಡೆಸು ಎಂದು ಅವನಿಗೂ ಶಾಪ ಕೊಟ್ಟುಬಿಡುತ್ತಾಳೆ.
ಇದರಿಂದಾಗಿ ಇಂದಿಗೂ ಅಲ್ಲಿಯ ಬ್ರಾಹ್ಮಣರು ಪೂಜೆ, ಪಿತೃಕಾರ್ಯ ಮಾಡುತ್ತಲೇ ಜೀವನ ನಡೆಸುತ್ತಿದ್ದಾರೆ. ಬಡತನ ಇಂದಿಗೂ ಕೊನೆಗೊಂಡಿಲ್ಲ. ಅಲ್ಲಿ ಇಲ್ಲಿ ಅಪವಾದಗಳು ಇರಬಹುದು. ಶ್ರೀಮಂತರೂ ಆಗಿರಬಹುದು. ಆದರೆ ಕಾಶಿಯ ಸುತ್ತ ಮುತ್ತಲಿನ ಕ್ಷೇತ್ರಗಳಲ್ಲಿ ಪೂಜೆ ಮಾಡುವ ಬ್ರಾಹ್ಮಣರು ತುಂಬಾ ಜನ ಇದ್ದಾರೆ. ಹೆಚ್ಚಿನವರು ಗೋಕರ್ಣದವರನ್ನೇ ಕಾಣಬಹುದು. ಇನ್ನೊಂದು ಇದು ಎಲ್ಲಾ ಬ್ರಾಹ್ಮಣರಿಗೆ ಅನ್ವಯಿಸುತ್ತದೊ ಇಲ್ಲವೊ ಗೊತ್ತಿಲ್ಲ!
ನಂತರ ಫಲ್ಗುಣಿ ನದಿಯ ತೀರಕ್ಕೆ ಶ್ರೀರಾಮನನ್ನು ಕರೆದುಕೊಂಡು ಬರುತ್ತಾಳೆ. ನದಿ ಮೈದುಂಬಿ ಹರಿಯುತ್ತಿದ್ದಾಳೆ. ನಯನಮನೋಹರವಾಗಿದೆ. ಸೀತಾ ದೇವಿ ಸಂತೋಷದಿಂದ ನದಿಯನ್ನು ಕುರಿತು ನಾನು ಪಿಂಡ ಪ್ರದಾನ ಮಾಡಿದ ಸತ್ಯ ನೀನಾದರೂ ಹೇಳು ಎಂದು ಕೇಳಿಕೊಳ್ಳುತ್ತಾಳೆ. ಆಗ ನದಿ ನನ್ನಲ್ಲಿ ಅದೆಷ್ಟು ಜನರು ಪಿಂಡ ಪ್ರಧಾನ ಮಾಡುತ್ತಾರೆ. ನಾನು ಯಾರೆಂದು ಹೇಳಲಿ ಎಂಬ ಹಾರಿಕೆಯ ಉತ್ತರ ಕೊಟ್ಟಾಗ ಸೀತೆ ಕೆಂಡಾಮಂಡಲವಾಗಿ ಇದುವರೆಗೆ ಮೈ ತುಂಬಿ ಎಲ್ಲರ ಕಣ್ಣಿಗೆ ಕಾಣುವ ನೀನು ಇಂದಿನಿಂದ ಯಾರ ಕಣ್ಣಿಗೂ ಕಾಣದೆ ಗುಪ್ತ ಗಾಮಿನಿಯಾಗಿ ಹರಿಯುತ್ತಿರು ಎಂದು ಅವಳಿಗೂ ಶಾಪ ಕೊಟ್ಟುಬಿಡುತ್ತಾಳೆ. ಅಂದಿನಿಂದ ಈ ನದಿ ಯಾರ ಕಣ್ಣಿಗೂ ಮೇಲೆ ಕಾಣುವುದಿಲ್ಲ.
ಈ ಸತ್ಯ ಅರಿಯಬೇಕಾದರೆ ಇಡೀ ನದಿಯ ದಡದ ಉಸುಕಿನಲ್ಲಿ ಎಲ್ಲಿ ಬೇಕಾದರೂ ಕೈಯಿಂದ ಮರಳನ್ನು ಅಗೆದರೆ ಕೆಳಗಡೆ ನೀರಿರುವುದು ಕಾಣುತ್ತದೆ. ನಾನು ಕೂಡಾ ಬಗ್ಗಿ ಸ್ವಲ್ಪ ಮರಳನ್ನು ತೆಗೆದೆ. ನೀರು ಉಕ್ಕಿದ್ದು ಕಂಡು ಆಶ್ಚರ್ಯವಾಯಿತು. ಹಾಗೆ ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ತಲಕಾಡಿನ ಕಥೆ ನೆನಪಾಯಿತು. ಇಲ್ಲೂ ಕೂಡಾ ಶಾಪಗೃಸ್ತ ಪ್ರದೇಶ ಇಂದಿಗೂ ಮರಳುಗಾಡಾಗಿದೆ.
ಕೊನೆಯಲ್ಲಿ ಗಯಾ ರಾಜನನ್ನೇ ಹೋಗಿ ಇರುವ ವಿಷಯ ಅರುಹಿ ನೀನಾದರೂ ಸತ್ಯವನ್ನು ಹೇಳೆಂದು ಸೀತಾದೇವಿ ಕೇಳಿದಾಗ ಗಯಾ ರಾಜನು ನಡೆದ ವಿಷಯವನ್ನು ಶ್ರೀ ರಾಮನಿಗೆ ಮನದಟ್ಟು ಮಾಡುತ್ತಾನೆ. ಇದರಿಂದ ಸಂತೋಷಗೊಂಡ ಸೀತಾದೇವಿ ಯಾರು ಗಯಾಕ್ಕೆ ಬಂದು ಪಿತೃ ಕಾರ್ಯ ಮಾಡಿ ಪಿಂಡ ಪ್ರಧಾನ ಮಾಡುತ್ತಾರೊ ಆ ಪಿತೃಗಳಿಗೆ ಮುಕ್ತಿ ಸಿಗಲಿ ಎಂದು ವರವನ್ನು ಕೊಡುತ್ತಾಳೆ. ಇದರಿಂದಾಗಿ ಯಾರು ಎಲ್ಲೇ ಪಿತೃ ಕಾರ್ಯ ಮಾಡಿದರೂ ಪಿತೃಗಳಿಗೆ ಮುಕ್ತಿ ಸಿಗುವುದಿಲ್ಲ. ಕೇವಲ ಗಯಾ ಕ್ಷೇತ್ರದಲ್ಲಿ ಪಿತೃ ಕಾರ್ಯ ಮಾಡಿದರೆ ಮಾತ್ರ ಮುಕ್ತಿ ಸಿಗುವುದರಿಂದ ಪ್ರತಿಯೊಬ್ಬರೂ ಈ ಕ್ಷೇತ್ರಕ್ಕೆ ಬಂದು ಪಿತೃ ಕಾರ್ಯ ಮಾಡಿ ಹೋಗುತ್ತಾರೆ. ಇದು ಇತಿಹಾಸದಲ್ಲಿಯ ಈ ಕ್ಷೇತ್ರದ ಕುರಿತಾದ ಕಥೆ.
ಇನ್ನು ಫಲ್ಗುಣಿ ನದಿಯ ನೀರು ಅತ್ಯಂತ ತಿಳಿಯಾಗಿದೆ. ಬಹಳ ವಿಶಾಲವಾದ ನದಿ ಇದು. ಕಣ್ಣು ಹಾಯಿಸಿದಷ್ಟೂ ದೂರ ಮರಳು. ದೂರದಲ್ಲಿ ನೀರು ಕಾಣುತ್ತದೆ. ಅಲ್ಲಿ ಗಂಗಾ ನದಿ ಉಕ್ಕಿ ಹರಿಯುತ್ತಿದೆ. ಇಲ್ಲಿ ಈ ನದಿಗೆ ಕಾಲಿರಿಸಿದರೆ ಮೊಣಕಾಲಿನಷ್ಟೂ ನೀರಿಲ್ಲ! ಇದೊಂದು ನಿಜಕ್ಕೂ ಬಹಳ ಆಶ್ಚರ್ಯವಲ್ಲವೇ? ಇಲ್ಲಿ ಅನೇಕರು ಸ್ನಾನ ಮಾಡುತ್ತಿದ್ದರು. ನಾವು ನೀರಿನ ಪ್ರೋಕ್ಷಣೆ ಮಾಡಿಕೊಂಡು ವಿಷ್ಣು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದೆವು.
*****
ಕ್ಷೇತ್ರಗಳ ದರ್ಶನ ಮಾಡಲು ಹೋಗುವುದೆಂದರೆ ಸುಮ್ನೇನಾ? ಎಷ್ಟೊಂದು ಮಾಹಿತಿ ತಿಳಿದುಕೊಂಡಿರಬೇಕು ಅಲ್ವಾ? ಹೋದಲ್ಲೆಲ್ಲ ಗೈಡ್ ನಮ್ಮೊಟ್ಟಿಗೆ ಇರಲು ಸಾಧ್ಯವೇ? ಊಹೂಂ. ಎಲ್ಲೂ ತಡಕಾಡಬೇಡಿ. ನಾನೇ ಸಂಪೂರ್ಣ ಮಾಹಿತಿ ಕೊಡ್ತೀನಿ (ಹೇಗೆ ಹೋಗಬೇಕು, ಎಷ್ಟು ದೂರ,ಅಲ್ಲಿಯ ಜನಜೀವನ ಇತ್ಯಾದಿ). ಅದೂ ದ್ವೀಪಗಳ ಊರು, ಪುಣ್ಯ ಕ್ಷೇತ್ರಗಳನ್ನು ಸ್ವತಃ ಸುತ್ತಾಡಿದ ಅನುಭವಗಳನ್ನು ಒಳಗೊಂಡ ಪುಸ್ತಕ ನಿಮ್ಮ ಮುಂದೆ ಶೀಘ್ರದಲ್ಲಿ
- ಗೀತಾ ಜಿ ಹೆಗಡೆ ಕಲ್ಮನೆ
