‘ಹೆಣ್ಣು ನಾನು!’ ಕವನ – ಪೀರಸಾಬ ನದಾಫ

ರಾಕ್ಷಸರ ಸಂಹರಿಸಿದ, ಚಾಮುಂಡಿ, ಕಾಳಿ, ದುರ್ಗೆ ನಾನು… ಹೆಣ್ಣು ನಾನು ಜಲದ ಕಣ್ಣು ನಾನು…ಪೀರಸಾಬ ನದಾಫ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಹೆಣ್ಣು ನಾನು, ಆದಿ ಜಲದ ಕಣ್ಣು ನಾನು
ಆದಿಮಾಯೆಯು ನಾನು, ಭಗವತಿ ನಾನು
ತ್ರಿಮೂರ್ಥಿಗಳಿಗೆ ಜನ್ಮವಿಟ್ಟವಳು ನಾನು
ಜಗನ್ಮಾತೆ, ಜಗದಂಬೆ, ಜಗದ ಮಣ್ಣು ನಾನು
ಜಲಜಾಕ್ಷಿ , ಮೀನಾಕ್ಷಿ, ಸೌಂದರ್ಯ ರೂಪಿಣಿ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಪಾರ್ವತಿ,ಗೌರಿ, ಅಂಬಾಭವಾನಿ ನಾನು
ಪರಶಿವನ ಓಂಕಾರದ ಹಿಂದಿನ ನಾದ ನಾನು
ಅವನ ಕೈಯೊಳಗಣ ತ್ರಿಸೂಲ,ಡಮರುಗ ನಾನು
ಬೋಳೆ ಶಿವನ ಭಕ್ತಿಯಿಂದ ಒಲೈಯಿಸಿ ಕಿರಾತನ ತೋರಿದ
ರಾಕ್ಷಸರ ಸಂಹರಿಸಿದ, ಚಾಮುಂಡಿ, ಕಾಳಿ, ದುರ್ಗೆ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಪರಬ್ರಹ್ಮನ ಸಂಗಾತಿ, ವಿದ್ಯಾದಿ ದೇವತೆ ನಾನು
ಪದರುಗುಟ್ಟುವ ನಾಲಿಗೆ ಮೇಲೆ,ಪದಗಳ ಇಟ್ಟವಳು ನಾನು
ಆದಿದೇವತೆಯು ನಾನು, ಶಾರದೆ, ಸರಸ್ವತಿಯು ನಾನು
ಮನೋಲೋಕಕ್ಕೆ ಮೂರ್ಥಸ್ವರೂಪವನ್ನಿಟ್ಟವಳು ನಾನು
ಸಂಗೀತ,ನೃತ್ಯ, ಕಲೆಗಳ ಆಗರ, ವೀಣಾಧರೆ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ನಾರಾಯಣನ ಹೃದಯ ಸ್ಥಲದ ನಾರಾಯಿಣಿ ನಾನು
ಲಕಲಕ ಹೊಳೆಯುವ ಕಾಂಚಾಣ,ಹೊನ್ನು ನಾನು
ಮನದ ಭದ್ರ ಪೆಟ್ಟಿಗೆಯೊಳಗಿಟ್ಟು ಆರಾಧಿಪ ಲಕುಮಿ ನಾನು
ಆರ್ಥಿಕತೆಯ ಹರಿಕಾರಳು ನಾನು, ಮಹಾಲಕ್ಷ್ಮಿಯು ನಾನು
ಸಂಸಾರ ಸುಭದ್ರತೆ ಕಾಪಾಡುವ ಅಷ್ಟಲಕ್ಷ್ಮಿಯು ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಜನಕ ರಾಜನ ಮಗಳು ಜಾನಕಿ ನಾನು
ಮಣ್ಣಿನಲಿ ದೊರೆತ ಮಣ್ಣ ಮಗಳು ನಾನು
ರಾಮನನು ಪರಮಪಾವನಗೊಳಿಸಿದ ಧೀಶಕ್ತಿ ನಾನು
ಪಾವಿತ್ರೆ ನಾನು,ಗಂಡಿನ ಸಂಶಯಕ್ಕೆ ಅಗ್ನಿಕುಂಡಕ್ಕರ್ಪಿಸಿ
ಮತ್ತೆ ಹುಟ್ಟಿ ಬಂದ ಸೀತೆ,ಲವಕುಶರ ಮಾತೆ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ದ್ರುಪದ ರಾಜನ ಮಗಳು ದ್ರೌಪದಿ ನಾನು
ಜರಿದ ದುರ್ಯೋಧನನ ತೊಡೆ ಮುರಿಸಿ
ಬಿಚ್ಚಿದ ಮುಡಿಗೆ ಅವನ ರಕುತವ ಬಳಿದು ತಲೆಬಾಚಿ
ಮುಡಿ ಕಟ್ಟಿದ ಛಲಗಾತಿ,ಪಂಚಪಾಂಡವರಿಗೆ ಸರತಿಯಲಿ
ಮೈ ಸುಖವ ನೀಡಿ, ದೇಹಕ್ಕಿಂತ ಮನಸ್ಸು ಮುಖ್ಯವೆಂದು ಸಾರಿದ ಪಾಂಚಾಲಿ ನಾನು,
ಹೆಣ್ಣು ನಾನು ಜಲದ ಕಣ್ಣು ನಾನು

ರುಕ್ಮಿಣಿಯು ನಾನು ರಾಧೆಯು ನಾನು
ಕೃಷ್ಣನ ಕೈಯಲ್ಲಿರುವ ಕೊಳಲು ನಾನು
ಸತಿಯು ನಾನು ಪ್ರೇಯೆಸಿಯು ನಾನು
ಕೊಳಲ ನಾದವು ನಾನು, ಬೀಜಾಂಕುರವು ನಾನು
ಪ್ರೀತಿ, ಪ್ರೇಮಾ, ಮಮತಾ,ಅನುರಾಧಾ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಮನೆ ಮನಗಳ ಕಾಯುವ ಕದ ನಾನು
ಹಾಗೇ ಅದಕಿಕ್ಕುವ ಅಗುಳಿ ನಾನು
ನಾನು ನನ್ನದೆಂದು ನನ್ನತನ ಕಾಯುವ
ಬಂಧುಬಳಗ ಸಲಹುವವ ಸಹಕಾರಣಿ ನಾನು
ಸಂಬಂಧಗಳ ಸೇತುವೆಯ ಬಂಧ ನಾನು
ಸಹಧರ್ಮಿಣಿ, ಸಾವಿತ್ರಿ, ಸುಲೋಚನೆ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಸುರತದಿ ಸುರಿದ ಬಿಂದುವ ಗರ್ಭದೊಳಗಿರಿಸಿ
ಸಮಾದಾನದಿ ಕರುಳು ಬಳ್ಳಿಯ ನೀಡಿ
ಸಲುಹುವವ ಸೃಷ್ಠಿಚೇತನ ನಾನು ಸಮಷ್ಠಿಯು ನಾನು
ಸಾಗರದ ತಡಿ ನಾನು, ಭೋರ್ಗರೆವ ಅಲೆಗಳ ತಣಿಸುವ
ಭಾವೋದ್ವೇಗದ ಭಾವನಾ,ಭೂರಮೆ ಭಾಗೀರಥಿ ನಾನು
ಹೆಣ್ಣು ನಾನು ಜಗದ ಕಣ್ಣು ನಾನು

ಕಗ್ಗತ್ತಲ ಕಳೆವ ಬೆಳಕು ನಾನು
ಕಿಬ್ಬೊಟ್ಟೆಯೊಳಡಗಿದ ಕಾಮಿಣಿ ನಾನು
ಮನೆ ಮನಗಳ ಬೆಳಗುವ ಜ್ಯೋತಿ ನಾನು
ಹಾಗೇ ಉರಿವ ಭೂ ಒಡಲ ಜ್ವಾಲಾಮುಖಿ ನಾನು
ದೀಪಾ, ರೂಪಾ, ಸಿಂಧೂ, ರಶ್ಮಿ ನಾನು
ಹೆಣ್ಣು ನಾನು ಜಲದ ಕಣ್ಣು ನಾನು

ಜರಿವ ಜಾರಿಣಿ ನಾನು, ಗಯ್ಯಾಳಿ, ಗಾಂಚಾಲಿ ನಾನು
ತಾಳಕ್ಕೆ ತಕ್ಕಂತೆ ಕುಣಿಯುವ ಕುಣಕಾಲಗಿತ್ತಿ ನಾನು
ಕುಲುಕುಲು ಹೊರಗೆ ಕುಲುಕಾಡಿದರೂ ಒಳಗೆ
ಮರಮರ ಮರುಗುವ ಮಮತಾಮಯಿ ನಾನು
ಮುಂಜಾನೆ ಮತ್ತೆ ಕೊಡವಿ ಏಳುವ ಭೂತಾಯಿ ನಾನು
ಹೆಣ್ಣು ನಾನು ಜಲದ ಕಣ್ಣು ನಾನು


  • ಪೀರಸಾಬ ನದಾಫ – ಭೂ ವಿಜ್ಞಾನ ವಿಭಾಗ ಕ ವಿ ವಿ ಧಾರವಾಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading