ಎಲ್ಲಾ ನೋವುಗಳನ್ನೂ ಬಲ್ಲೆ ಎಂದು ಎದೆಯುಬ್ಬಿಸುವವರೂ ಕೂಡಾ ಹಲ್ಲು ನೋವು ಎಂದರೆ ಒಂದರೆಕ್ಷಣ ಹಿಂದೆ ಸರಿಯುತ್ತಾರೆ. ಹಾಗಿರುತ್ತದೆ ಅದರ ತೀವ್ರತೆ. ಇಂಥ ಹಲ್ಲನ್ನು ದಾಳಿಂಬೆ ಬೀಜದಿಂದ ಹಿಡಿದು, ಹಾರೆಯವರೆಗೆ ತರಹೇವಾರಿ ವಸ್ತುಗಳಿಗೆ ಹೋಲಿಸಲಾಗುತ್ತದೆ. ಆದರೆ ಕಂಡ ಕಂಡವರ ಮುಂದೆ ಹಲ್ಲುಗಿಂಜುವ, ಹಲ್ಲುಕಿರಿಯುವವರು ಹಲ್ಲುಗಳನ್ನು ಇನ್ಯಾವುದಕ್ಕೆ ಹೋಲಿಸಬಹುದಪ್ಪ ಎನ್ನುವುದೇ ದೊಡ್ಡ ಪ್ರಶ್ನೆ – ಸಂದೇಶ ಎಚ್ ನಾಯಕ, ತಪ್ಪದೆ ಮುಂದೆ ಓದಿ…
“ಅಯ್ಯೋ ಸುಮ್ಮನೆ ಕಂಡವರ ಬಾಯಿಗೆ ಬೀಳೋದ್ಯಾಕೆ? ಅದಕ್ಕಿಂತ ನಮ್ಮ ನಮ್ಮ ಬಾಯಿಗೆ ಬೀಗ ಹಾಕಿಕೊಳ್ಳುವುದೇ ವಾಸಿ.” – ಹೀಗೆಂದು ಕೆಲವರು ಆಗಾಗ ಹೇಳುವುದನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಹೌದು ಹೀಗೆ ಬಾಯಿಗೆ ಬೀಳುವುದಿದೆಯಲ್ಲ ಅದು ಒಂದರ್ಥದಲ್ಲಿ ‘ಬಾವಿ’ಗೆ ಬೀಳುವುದಕ್ಕಿಂತಲೂ ತುಸು ಹೆಚ್ಚೇ ಅಪಾಯಕಾರಿ ಎಂದೂ ಅಂದುಕೊಳ್ಳಬಹುದು. ಇನ್ನು ಬಾಯಿಗೆ ಬಾವಿ ಎಂಬ ಹೋಲಿಕೆಯನ್ನೂ ಬಳಸುವುದು ಸರಿಯೇ ಇದೆ. ವಿವಿಧ ಆಹಾರ ಪದಾರ್ಥಗಳನ್ನು ಕೆಲವರು ತಿನ್ನುವ ಪರಿ ಹೇಗಿರುತ್ತೆಂದರೆ ಅವರು ಅದನ್ನು ಅಕ್ಷರಶಃ ಎಸೆಯುವವರಂತೆಯೇ ಬಾಯಿಗೆ ವರ್ಗಾಯಿಸುತ್ತಾರೆ. ಅದರಲ್ಲೂ ಕೆಲವರಂತೂ ನಿರ್ಭಾವುಕ ಮುಖಭಾವ ಹೊತ್ತು ಯಾಂತ್ರಿಕವಾಗಿ ಆಹಾರವನ್ನು ಹಾಗೆ ಎಸೆಯುವ ರೀತಿ ನೋಡುತ್ತಿದ್ದರೆ ಅದು ಪಾಳುಬಾವಿಗೆ ನಿರುಪಯುಕ್ತ ಕಸ-ಕಡ್ಡಿ ಎಸೆಯುವುದನ್ನು ನೆನಪಿಗೆ ತರಿಸುತ್ತದೆ. ಬಾಳೆಹಣ್ಣಿನ ಕುರಿತಂತೆ ‘ಅಂಗಿ ತೆಗೆದು, ಬಾವಿಗೆ ನೆಗೆದ’ ಎಂಬರ್ಥ ಬರುವ ರೀತಿಯಲ್ಲಿ ಗಾದೆಯೂ ಇದೆ. ಆ ಎಲ್ಲಾ ಕಾರಣಗಳಿಂದ ಬಾಯಿಯನ್ನು ಬಾವಿಗೆ ಹೋಲಿಸುವುದೇ ಆದರೆ ಅದರ ಸುತ್ತಲೂ ಇರುವ ಹಲ್ಲುಗಳನ್ನು ಬಾವಿಯ ಒಳಮೈಗೆ ಅಚ್ಚುಕಟ್ಟಾಗಿ ಕಟ್ಟಲ್ಪಟ್ಟಿರುವ ಕಲ್ಲುಗಳು ಎಂದೇ ಪರಿಗಣಿಸಬಹುದು. ತುಂಬಾ ಗಟ್ಟಿ ಸ್ಥಿತಿಯಲ್ಲಿರುವ, ಏನೇ ಸಿಕ್ಕರೂ ತನ್ನದೇ ಆದ ರೀತಿಯಲ್ಲಿ ಕುಟ್ಟಿ ಪುಡಿ ಮಾಡುವ ಸಾಮರ್ಥ್ಯ ಹೊಂದಿರುವ ಆ ಹಲ್ಲುಗಳನ್ನು ಕಲ್ಲಿಗೆ ಹೋಲಿಸುವುದು ಅಷ್ಟೇನೂ ಅಸಮರ್ಪಕ ಎಂದೆನಿಸದು ಬಿಡಿ.
ಕೆಲವರು ಮಾತನಾಡುವ ಈ ಶೈಲಿಯನ್ನು ನೀವು ಗಮನಿಸಿಯೇ ಇರುತ್ತೀರಿ. ಅದರಲ್ಲೂ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಮಾತನಾಡುವ ರಾಜಕಾರಣಿಗಳೇ ಈ ಶೈಲಿಯನ್ನು ಹೆಚ್ಚು ಅನುಕರಿಸುವಂಥದ್ದು. ಅವರು – ಮಾಡಿದಂತ , ನೀಡಿದಂತ, ನೋಡಿದಂತ, ಕೇಳಿದಂತ, ಹಾಡಿದಂತ, ಆಹ್ವಾನಿಸಿದಂತ ಎಂಬ ಪದಗಳನ್ನು ಹೇರಳವಾಗಿ ಉಪಯೋಗಿಸುವ ಮೂಲಕ ಮಾತು ಮಾತಿಗೂ ಈ ‘ದಂತ’ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ. ಅಂಥವರ ಮಾತು ಕೇಳುವಾಗ ಬಾಯಿ, ನಾಲಗೆ ಇತ್ಯಾದಿಗಳು ನೆನಪಾಗುವುದಕ್ಕಿಂತಲೂ ಹೆಚ್ಚು ‘ದಂತ’ದ್ದೇ ನೆನಪು ಬರುತ್ತದೆ. ಅಂದರೆ ಅಂಥವರ ಮಾತುಗಳಲ್ಲಿ ದಂತದ್ದೇ ಪ್ರಧಾನ ಪಾತ್ರ ಎಂದುಕೊಳ್ಳಬಹುದು. ಇದನ್ನೂ ಒಂದು ಬಗೆಯ ಕೃ’ದಂತ’ ಪ್ರಯೋಗ ಎಂದು ಹೇಳಿದರೆ ವ್ಯಾಕರಣಪ್ರಿಯರು ಗುರ್ರ್ ಎಂದಾರೇನೋ. ಹೀಗೆ ಮಾತಿನಲ್ಲಿ ಬಳಸಲಿ, ಬಿಡಲಿ ಮನುಷ್ಯರು ಎಂದ ಮೇಲೆ ‘ದಂತ’ದ ಆಲೋಚನೆ ನಿರಂತರವಾದುದೇ ಸೈ. ಏನು ಬರೀ ಮನುಷ್ಯರ ದಂತದ ಬಗ್ಗೆಯಷ್ಟೇ ಯೋಚಿಸುತ್ತಾರೆಯೇ? ಎಂದು ನೀವು ಪ್ರಶ್ನಿಸಬಹುದು. ನಿಜ ಮನುಷ್ಯರಷ್ಟೇ ಅಲ್ಲದೇ ಆನೆಯ ದಂತದ ವಿಚಾರದಲ್ಲೂ ಈ ಅಭಿಪ್ರಾಯ ಇನ್ನೂ ಸತ್ಯವೇ ಆಗಿದೆ. ಮನುಷ್ಯರ ದಂತವೋ ಆನೆ ದಂತದ ಗಾತ್ರ, ಬೆಲೆಯ ಮುಂದೆ ಯಾವುದರಲ್ಲೂ ಸರಿಸಮವಲ್ಲ ಬಿಡಿ.
ಯಾವುದೋ ಜಗಳ, ಮತ್ಯಾವುದೋ ವಾಗ್ವಾದದ ಸಂದರ್ಭದಲ್ಲಿ ಸಿಟ್ಟಿಗೆದ್ದು ‘ನಿನ್ನ ಹಲ್ಲು ಮುರಿಯುತ್ತೇನೆ ನೋಡು’ ಎಂದು ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಎದುರಾಳಿಗೆ ಬೆದರಿಕೆ ಹಾಕುತ್ತಾರೆ. ಈಗಿನ ದಿನಗಳಲ್ಲಿ ಇಂಥ ಮಾತುಗಳನ್ನಾಡುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ಈಗ ಹಲ್ಲು ಮುರಿಯುತ್ತೇನೆ ಎಂದು ಯಾರಾದರೂ ಹೇಳಿದರೆ, ‘ನೀವೇನು ಮುರಿಯೋದು? ನಾನೇ ಕಿತ್ತು ಕೈಲಿಟ್ಟುಕೊಳ್ಳುವೆ ನೋಡಿ’ ಎಂದು ಕೃತಕ ಹಲ್ಲು ಸೆಟ್ ಬಾಯಿಯಿಂದ ಹೊರತೆಗೆದು, ಬೊಚ್ಚು ನಗೆ ಬೀರುವ ಸಾಧ್ಯತೆಯೂ ಇಲ್ಲದಿಲ್ಲ. ಅಷ್ಟರಮಟ್ಟಿಗೆ ಈಗ ಕೃತಕ ಹಲ್ಲುಧಾರಿಗಳ ಸಂಖ್ಯೆ ಜಾಸ್ತಿಯಿದೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಅದೇನೆಂದರೆ ಮನುಷ್ಯರ ಬುದ್ಧಿ, ಕೈ, ಕಣ್ಣು, ಕಾಲು ಹೀಗೆ ಯಾವುದೇ ಅಂಗ ತಪ್ಪು ಮಾಡಿದರೂ ಅದರ ನೇರ ಪರಿಣಾಮ ಉಂಟಾಗುವುದೇ ಹಲ್ಲುಗಳ ಮೇಲೆಯೇ. ತಪ್ಪು ಏನೇ ಇರಲಿ. ಏಟು ಬೀಳುವ ಪರಿಸ್ಥಿತಿ ಉದ್ಭವವಾದರೆ, ಸಾಮಾನ್ಯವಾಗಿ ಆ ಏಟು ಬೀಳುವ ಮೊದಲ ಜಾಗವೇ ಕಪಾಳ. ಪರಿಣಾಮವೆಂಬಂತೆ ಹಲ್ಲುಗಳು ಉದುರಿ ಬೀಳುವಂತಾಗುತ್ತದೆ. ಈ ಮೂಲಕ ಹಲ್ಲುಗಳು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿವೆ. ಅದೂ ಕೂಡಾ ಅನ್ಯರ ತಪ್ಪಿಗೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯೇ ಹೌದು. ಇದೂ ಕೂಡಾ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂಬಂಥದ್ದೇ ತತ್ವವೇ ಆದರೂ ಈ ಬಗ್ಗೆ ಸಹಾನುಭೂತಿಯ ಗಮನ ಹರಿಸುವವರು ಬಹಳ ಕಡಿಮೆ.
ಬಹುಪಾಲು ನಾವು ತಿನ್ನುವ ಯಾವುದೇ ಆಹಾರವನ್ನು ಆಹಾ ಎಂದು ಆಸ್ವಾದಿಸುತ್ತಾ, ಅದರ ಕಣ ಕಣವನ್ನೂ ಸವಿದು, ಅದರಲ್ಲಡಗಿರುವ ರಸದ ಬಿಂದು ಬಿಂದುವನ್ನೂ ಹೀರಿ, ಚಪ್ಪರಿಸಿ ತಿನ್ನಬೇಕೆಂದರೆ ಅದಕ್ಕೆ ಬಹುಮುಖ್ಯವಾಗಿ ಇರಲೇಬೇಕಾದದ್ದು ಸೂಕ್ತ ಹಲ್ಲುಗಳು. ಬಹುತೇಕ ಪ್ರಾಣಿಗಳು ತಮ್ಮ ಬೇಟೆಯನ್ನಾಡಲು, ಆಹಾರವನ್ನು ಅರಸಿ ತಿನ್ನಲೂ ಸಹ ಹಲ್ಲುಗಳ ಸಹಾಯ ಬೇಕೇ ಬೇಕು. ಈ ಹಲ್ಲುಗಳನ್ನು ಬೇರೆ ಬೇರೆ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವವರೂ ಇದ್ದಾರೆ. ಬಾಟಲಿಯ ಮುಚ್ಚಳ ತೆಗೆಯಲು, ದಾರ ಕತ್ತರಿಸಲು, ವಿವಿಧ ಪಾಕೀಟುಗಳನ್ನು ಹರಿದು ತೆಗೆಯಲು, ಉಗುರು ತುಂಡರಿಸಲು ಹೀಗೆ ಗಟ್ಟಿಯಾದ ಏನೇನೋ ವಸ್ತುಗಳನ್ನು ಇದೇ ಹಲ್ಲುಗಳ ಸಹಾಯದಿಂದ ಕತ್ತರಿಸುವುದು, ಮುರಿಯುವುದನ್ನು ಲೀಲಾಜಾಲವಾಗಿ ಮಾಡಿ ಮುಗಿಸುತ್ತಾರೆ. ಇದನ್ನು ನೋಡುತ್ತಿದ್ದರೆ ‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ನುಡಿಯನ್ನು ಉಲ್ಲೇಖಿಸುತ್ತಾ, ‘ಅಯ್ಯೋ ಅವೆರಡಕ್ಕಿಂತಲೂ ಹಲ್ಲೇ ಹರಿತ’ ಎನ್ನುವುದೇ ಸರಿಯಾದುದು ಎಂದೆನಿಸುತ್ತದೆ.
‘ಹಲ್ಲು ಇರುವಾಗ ಕಡಲೆ ಇಲ್ಲ, ಕಡಲೆ ಇರುವಾಗ ಹಲ್ಲು ಇಲ್ಲ’ ಎಂಬಂಥ ಸಂದಿಗ್ಧತೆಯೊಂದು ಮನುಷ್ಯರಿಗೆ ಎದುರಾಗುತ್ತಲೇ ಇರುತ್ತದೆ. ಇದೊಂದು ದೊಡ್ಡ ಸಮಸ್ಯೆಯೇ ಹೌದು ಎಂದು ನಾವೆಲ್ಲರೂ ಪರಿಭಾವಿಸುವಲ್ಲಿ ಹಲ್ಲಿನ ಮಹತ್ವ ಎಂಥದ್ದು ಎನ್ನುವುದೂ ತಿಳಿಯುತ್ತದೆ. ಅದರೊಂದಿಗೆ ಜೀವನದಲ್ಲಿ ನಾವೆಲ್ಲ ಎದುರಿಸುವ ಸ್ಥಿತಿ ಯಾವ ಬಗೆಯದ್ದು ಎಂಬುವುದೂ ಕೂಡಾ ಅರಿವಾಗುತ್ತದೆ.
ಇನ್ನು ಎಲ್ಲಾ ನೋವುಗಳನ್ನೂ ಬಲ್ಲೆ ಎಂದು ಎದೆಯುಬ್ಬಿಸುವವರೂ ಕೂಡಾ ಹಲ್ಲು ನೋವು ಎಂದರೆ ಒಂದರೆಕ್ಷಣ ಹಿಂದೆ ಸರಿಯುತ್ತಾರೆ. ಹಾಗಿರುತ್ತದೆ ಅದರ ತೀವ್ರತೆ. ಇಂಥ ಹಲ್ಲನ್ನು ದಾಳಿಂಬೆ ಬೀಜದಿಂದ ಹಿಡಿದು, ಹಾರೆಯವರೆಗೆ ತರಹೇವಾರಿ ವಸ್ತುಗಳಿಗೆ ಹೋಲಿಸಲಾಗುತ್ತದೆ. ಆದರೆ ಕಂಡ ಕಂಡವರ ಮುಂದೆ ಹಲ್ಲುಗಿಂಜುವ, ಹಲ್ಲುಕಿರಿಯುವವರು ಹಲ್ಲುಗಳನ್ನು ಇನ್ಯಾವುದಕ್ಕೆ ಹೋಲಿಸಬಹುದಪ್ಪ ಎನ್ನುವುದೇ ದೊಡ್ಡ ಪ್ರಶ್ನೆ.
ಗದ್ದೆ, ತೋಟ, ಸೈಟ್, ಮನೆಯ ಸುತ್ತೆಲ್ಲಾ ವಿವಿಧ ಬಗೆಯ ಬೇಲಿಗಳನ್ನು ಹಾಕಲಾಗುತ್ತದೆ. ಅದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲ್ಲುಗಳಿಗೂ ಕೂಡಾ ಬೇಲಿ ಹಾಕುವ ಕಾರ್ಯ ಹೆಚ್ಚು ಪ್ರಚಲಿತದಲ್ಲಿದೆ. ಅದೂ ಕೂಡಾ ಭದ್ರವಾದ ತಂತಿ ಬೇಲಿಯೇ ಆಗಿರುತ್ತದೆ. ಹಲ್ಲಿನ ಉಬ್ಬು-ತಗ್ಗುಗಳನ್ನೆಲ್ಲಾ ತಿದ್ದಿ ತೀಡಿ ಒಪ್ಪವಾಗಿಸುವ ನಿಟ್ಟಿನಲ್ಲಿ ಈ ತಂತಿ ಬೇಲಿ ಬಲು ಉಪಯುಕ್ತ ಎಂದೇ ಹೇಳಬಹುದು. ಅದು ಹಲ್ಲುಗಳು ಓರೆ-ಕೋರೆಯಾಗಿ ಎತ್ತೆತ್ತಲೋ ಹೋಗದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ. ಯಾವುದೇ ಕೆಲಸವನ್ನು ಕೀಳು ಎಂದು ಪರಿಗಣಿಸಬಾರದು ಎನ್ನುವುದಾಗಿ ಎಲ್ಲರೂ ಹೇಳುತ್ತಾರೆ. ಆದರೂ ಕೆಲವು ಕೆಲಸಗಳನ್ನು ಜನರು ಕೀಳು ಎಂದು ಭಾವಿಸಿ ನಿರ್ಲಕ್ಷಿಸುವುದು ಕಂಡುಬರುತ್ತದೆ. ಆದರೆ ಅಸಲಿಗೆ ಹಲ್ಲು’ಕೀಳು’ವುದು ಎನ್ನುವುದರಲ್ಲಿ ‘ಕೀಳು’ ಎಂಬ ಪದ ಅಡಕವಾಗಿದ್ದರೂ ಬಹುಶಃ ಅದನ್ನು ಯಾರೂ ‘ಕೀಳು’ ಎಂದು ಪರಿಗಣಿಸಲಿಕ್ಕಿಲ್ಲ. ಹೀಗಾಗಿ ಬೇರೆ ಯಾರ ಮುಂದೆಯಾದರೂ ‘ಯಾರೂ ಏನೂ ಕಿತ್ಕೊಳ್ಳೋಕ್ ಆಗಲ್ಲ’ ಎಂದು ಚಾಲೆಂಜ್ ಹಾಕಬಹುದು. ಅದೇ ಡೆಂಟಿಸ್ಟ್‌ಗಳ ಮುಂದೆ ಹಾಗೇನಾದರೂ ಹೇಳಿದರೆ ಹಲ್ಲು ಕಿತ್ತು ಚಿಮ್ಮಟಿಗೆಯಲ್ಲಿ ಹಿಡಿದು ತೋರಿಸಿಯಾರು ಹುಷಾರ್.
ಹಲ್ಲುಗಳ ಪಾತ್ರ ಇನ್ನೂ ಎಲ್ಲೆಲ್ಲಿ ಇದೆಯೆಂದು ಯೋಚಿಸುವಾಗ ಫೋಟೊಗಳನ್ನು ಯಾವುದೇ ಕಾರಣಕ್ಕೂ ಬಿಡಲಾಗದು. ಯಾವುದೇ ವ್ಯಕ್ತಿ ಯಾ ವ್ಯಕ್ತಿಗಳ ಗುಂಪಿನ ಒಂದು ಫೋಟೊದ ಚೆಂದವನ್ನು ಪ್ರಭಾವಿಸುವ ಹಲವಾರು ಅಂಶಗಳಲ್ಲಿ ಅದರಲ್ಲಿರುವವರು ಹಲ್ಲು ಬಿಟ್ಟಿರುವ ರೀತಿ, ಪ್ರಮಾಣವೂ ಒಂದು. ಆದ್ದರಿಂದ ಫೋಟೊಗ್ರಾಫರ್‌ಗಳು ಸಾರುವ ‘ಹಲ್ಬಿಡಿ ಶಾಸನ’ವನ್ನು
ತಪ್ಪದೇ ಪಾಲಿಸುವ ಜನರೇ ಎಲ್ಲೆಡೆ ಕಾಣಸಿಗುತ್ತಾರೆ. ಅಂದರೆ ಮುಖ ನೋಡಿ ಮಣೆ ಹಾಕುವುದು ತಪ್ಪು. ಆದರೆ ಹಲ್ನೋಡಿ ಫೋಟೊ ತೆಗೆಯುವುದು ತಪ್ಪೇನಲ್ಲ.
ಓವರ್‌ಡೋಸ್: ಮನುಷ್ಯರು ನನ್ನ ಹುಳುಕುಗಳ ಬಗ್ಗೆ ತಲೆಕೆಡಿಸಿಕೊಂಡಷ್ಟು ಅವರು ತಮ್ಮ ತಮ್ಮೊಳಗಿನ ಹುಳುಕಿನ ಬಗ್ಗೆ ಗಮನ ಹರಿಸಿದ್ದರೆ ಈ ಸಮಾಜ ತುಂಬಾ ಸ್ವಸ್ಥವಾಗಿರುತ್ತಿತ್ತು ಎನ್ನುವುದು ಹಲ್ಲುಗಳ ಕೊಂಕುನುಡಿಯಂತೆ!
- ಸಂದೇಶ ಎಚ್ ನಾಯಕ