ಮನವೆಂಬ ದರ್ಪಣ

ಹದಿನಾರು ವರ್ಷಗಳ ಹಿಂದೆ ರತ್ನಾವತಿಯ ಮದುವೆಯನ್ನು ಸಂಜೀವನಿಗೆ ಮಾಡಿಕೊಟ್ಟಿತ್ತು. ಇಬ್ಬರ ಪ್ರೇಮದ ಸಂಕೇತವಾಗಿ ಗಂಡುಮಗು ಜನನವಾಯಿತು. ಮಗುವಿಗೆ ವರ್ಷ ತುಂಬಿದರೂ ಮಗುವಿನಲ್ಲಿ ಸಹಜವಾದ ಬೆಳವಣಿಗೆ ಕಾಣಲಿಲ್ಲ. ಇದು ಗಂಡ ಹೆಂಡಿರ ನಡುವಿನ ಜಗಳಕ್ಕೆ ಕಾರಣವಾಯಿತಾ?, ಇದನ್ನು ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರು ಹೇಗೆ ಬಗೆಹರಿಸಿದರು,ಅವರ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು’ ಅಂಕಣವನ್ನು ತಪ್ಪದೆ ಓದಿ…

ಆ ದಿನದ ಕೋರ್ಟ್ ಕಲಾಪಗಳನ್ನು ಮುಗಿಸಿ ನ್ಯಾಯಾಲಯದ ಸಂಬಂಧಿತ ಕ್ಲರ್ಕ್ ಮುಖಾಂತರ ನನ್ನ ಕೆಲಸದ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನನ್ನ ಗಾಡಿಯಲ್ಲಿ ಹೊರಟೆ. ಅಲ್ಲಿ ಇಲಾಖೆಯ C.D.P.O ಆಫೀಸರ್ ಬಹಳ ಆತ್ಮೀಯವಾಗಿ ಬರ ಮಾಡಿಕೊಂಡರು. ನನಗೆ ಮೊದಲೆ ಆ ಇಲಾಖೆಯ ಸದಸ್ಯರೆಲ್ಲರ ಪರಿಚಯವಿದ್ದುದರಿಂದ ಏನೂ ಸಮಸ್ಯೆ ಆಗಲಿಲ್ಲ. ನಾನು ಮಾಡ ಬೇಕಾದ ಕೆಲಸದ ಮಾಹಿತಿ ಪಡೆದು ಕರ್ತವ್ಯ ನಿರ್ವಹಿಸ ಬೇಕಿದ್ದ ಛೇಂಬರ್ನತ್ತ ನಡೆದೆ. ನನ್ನನ್ನೇ ಹಿಂಬಾಲಿಸಿ ಬಂದ ವನಿತಾ,
“ಮೇಡಂ ಇವಿಷ್ಟು ಫೈಲುಗಳಿಗೆ…ಕೌನ್ಸಿಲಿಂಗ್ ಇರೋದು, ನಾನು ಮುಂದಿನ ವಾರದಿಂದ ಡ್ಯೂಟಿಗೆ ಬರೋದಿಲ್ಲ. ಮೆಟರ್ನಿಟಿ ಲಿವ್ ಪಡೆದಿದ್ದೇನೆ. ನನ್ನ ಪರವಾಗಿ ಸ್ವಾತಿ ನಿಮಗೆ ಸಹಾಯ ಮಾಡುತ್ತಾಳೆ” ಎಂದು ಹೇಳಿ ಸ್ವಾತಿಯನ್ನು ಪರಿಚಯಿಸಿದಳು.

ಒಮ್ಮೆ ಎಲ್ಲಾ ಫೈಲುಗಳನ್ನು ಗಮನಿಸಿದ ನನಗೆ, ಅದರಲ್ಲಿ ಒಂದು ಕೇಸು ಬಹಳ ಕುತೂಹಲ ಮೂಡಿಸಿತು. ಅದನ್ನು ತೆಗೆದುಕೊಂಡು ಗಮನವಿಟ್ಟು ಓದಲು ಶುರು ಮಾಡಿದವಳಿಗೆ ದೂರು ಪ್ರತಿಯ ಜೊತೆಯಲ್ಲಿ ಇದ್ದ ಪೋಟೋಗಳನ್ನು ನೋಡಿ ಯಾಕೋ ಕಣ್ತುಂಬಿ ಬಂದವು. ಭಾವುಕಳಾಗಿದ್ದ ನನ್ನನ್ನು ಗಮನಿಸಿದ ಸ್ವಾತಿ, “ಮೇಡಂ ನೀವು ಆ ಫೋಟೋ ನೋಡಿಯೇ ಇಷ್ಟು ಬೇಸರದಲ್ಲಿದೀರಿ, ಇನ್ನೂ ನೇರ ನೋಡಿದ್ರೇ ಅಷ್ಟೇ… ಪಾಪ ನೋಡಲು ತುಂಬಾ ಕಷ್ಟವಾಗುತ್ತದೆ” ಎಂದಳು.

“ಸರಿ ಸ್ವಾತಿ, ಮುಂದಿನ ಶುಕ್ರವಾರ ದೂರುದಾರಳಾದ ರತ್ನಾವತಿ, ಅಪಾದಿತ ಸಂಜೀವರನ್ನು ಬರಲು ನೋಟಿಸ್ ಜೊತೆಗೆ.. ಖುದ್ದಾಗಿ ಪೋನ್ ಮಾಡಿ ಬರ ಹೇಳು” ಎಂದು ಸಾವರಿಸಿಕೊಂಡು ನುಡಿದು, ಆಗಲೇ ಸಮಯವಾಗಿದ್ದರಿಂದ…ನನ್ನ ಮನೆ ಕಡೆ ಹೊರಟೆ.

ಫೋಟೋ ಕೃಪೆ : google

ಕಾತುರದಿಂದ ಕಾಯುತ್ತಿದ್ದ ಆ ಶುಕ್ರವಾರ ಬಂದೇ ಬಿಟ್ಟಿತ್ತು. ಎಂದಿನಂತೆ ನಿಗದಿತ ಸಮಯಕ್ಕೆ ನನ್ನ ಛೇಂಬರ್ ಗೆ ಹೋಗಿ ಕುಳಿತವಳಿಗೆ ಸ್ವಾತಿ ಬಂದು ಆ ದಿನ ಕೌನ್ಸಿಲಿಂಗ್ ಮಾಡಬೇಕಿದ್ದ. ಎಲ್ಲ ಕೇಸುಗಳನ್ನು ಎತ್ತಿಟ್ಟಳು. ಸುಮಾರು ಒಂಭತ್ತು ಕೇಸುಗಳಲ್ಲಿ ಮಾತ್ರ ಪಾರ್ಟಿಗಳು ಬಂದಿದ್ದರಿಂದ ಉಳಿದವುಗಳನ್ನು ಬದಿಗಿಟ್ಟು ಒಂದೊಂದೇ ಕೇಸು ಕರೆಯಲು ಸ್ವಾತಿಗೆ ತಿಳಿಸಿದೆ.

“ಮೇಡಂ ಮೊದಲು ರತ್ನಾವತಿಯ ಕೇಸು ಕರೀಲಾ?” ಅಂದವಳಿಗೆ ಕಣ್ಣಲ್ಲಿ ಸನ್ನೆ ಮಾಡಿ ಕೊನೆಯಲ್ಲಿ ಕರೆಯುವಂತೆ ಸೂಚಿಸಿದೆ.

ಅದರಂತೆ ಎಲ್ಲ ಕೇಸುಗಳ ಅಹವಾಲು ಕೇಳಿ, ಅವರುಗಳಿಗೆ ಮುಂದಿನ ದಿನಾಂಕ ತಿಳಿಸಿ, ಕೊನೆಯಲ್ಲಿ ರತ್ನಾವತಿ ಕೇಸು ತೆಗೆದುಕೊಂಡು ಅವರನ್ನು ಕರೆಯಲು ಸ್ವಾತಿಗೆ ತಿಳಿಸಿದೆ.

“ನಮಸ್ತೆ ಮೇಡಂ”

ಅಂತ ಧ್ವನಿ ಬಂದ ಕಡೆಗೆ ತಿರುಗಿ ನೋಡಿದೆ. ಐದು ಅಡಿಗೂ ಕಡಿಮೆ ಇರುವ ಎಣ್ಣೆಗೆಂಪು ಬಣ್ಣ ನೀಳ ಜಡೆ, ಸಾಧಾರಣ ನೈಲಾನ್ ಸೀರೆ ಉಟ್ಟು ಲಕ್ಷಣವಾಗಿದ್ದ ರತ್ನಾವತಿ ನಿಂತಿದ್ದಳು. ಅವಳ ಜೊತೆಗೆ ಎಪ್ಪತ್ತು ವರ್ಷ ವಯಸ್ಸಿನ ವ್ಯಕ್ತಿಯೂ ಇದ್ದರು. ಅವಳನ್ನು ಕುಳಿತುಕೊಳ್ಳಲು ತನ್ನ ಮುಂದೆ ಇದ್ದ ಕುರ್ಚಿ ಕಡೆಗೆ ಕೈತೋರಿ., ಅವಳ ಕೇಸ್ ಪೈಲ್ ಕಡೆಗೆ ನೋಡುತ್ತಾ,

” ಹೇಳಿ ರತ್ನ ನಿಮ್ಮ ಸಮಸ್ಯೆ ಏನು” ಕೇಳಿದೆ.

ಆಗ ಆ ವಯಸ್ಸಾದ ವ್ಯಕ್ತಿ,

” ಮೇಡಂ, ನಾನು ಇವಳ ತಂದೆ ಚೆನ್ನಿಗಪ್ಪ ,ತಾಲೂಕು ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿದ್ದೇನೆ… ನಾನು ಹೇಳುತ್ತೇನೆ…” ಎಂದು ತಮ್ಮ ಮಗಳ ಪರವಾಗಿ ಎಲ್ಲವನ್ನೂ ಎಳೆ ಎಳೆಯಾಗಿ ತೆರಿದಿಟ್ಟರು…..

 

ಫೋಟೋ ಕೃಪೆ : google

“ಹದಿನಾರು ವರ್ಷಗಳ ಹಿಂದೆ ಶಿರಂಗಾಲದ ನಂಜಯ್ಯ, ದೇವಮ್ಮನ ಸಾಕುಮಗನಾದ ಸಂಜೀವನಿಗೆ ರತ್ನಾವತಿಯ ಜೊತೆ ವಿವಾಹ ಮಾಡಿಕೊಟ್ಟಿದ್ದರು.. ಹಾರಂಗಿ ಜಲಾಶಯದ ಇಲಾಖೆಯಲ್ಲಿ ಕೆಲಸ ಮಾಡುತಿದ್ದ ಸಂಜೀವ, ಮದುವೆ ಆಗಿ ಎರಡು ವರ್ಷಗಳ ನಂತರದಲ್ಲಿ ಒಂದು ಗಂಡುಮಗುವಿಗೆ ತಾಯಿಯಾದ ರತ್ನಾವತಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂತಸ ಬಹಳ ದಿನ ಉಳಿಯಲಿಲ್ಲ. ಮಗು ಬೆಳೆಯುತಿದ್ದಂತೆ ಮಗುವಿನಲ್ಲಿ ವ್ಯತ್ಯಾಸ ಕಾಣತೊಡಗಿತ್ತು. ಮಗುವಿಗೆ ನಡೆಯಲೂ ಶಕ್ತಿ ಬರದಂತೆ ಆಯಿತು. ಸೊಂಟದ ಬಲ ಕಡಿಮೆಯಾಯಿತು. ಎರಡು ಕಾಲುಗಳು ಸಂಪೂರ್ಣ ಸ್ವಾದೀನ ಕಳೆದುಕೊಂಡಿದ್ದವು. ಜೊತೆಗೆ ಸರಿಯಾಗಿ ಮಾತು ಬರಲಿಲ್ಲ. ಮಗುವಿಗೆ ಎರಡು ಮೂರು ವರ್ಷಗಳು ತುಂಬುವಷ್ಟರಲ್ಲಿ ಸಾಮಾನ್ಯ ಮಗುವಲ್ಲ ಇದು ವಿಕಲಚೇತನ ಮಗು ಎಂಬುದು ದಂಪತಿಗಳ ಅರಿವಿಗೆ ಬಂದಿತ್ತು. ಸುತ್ತದ ದೇವರಿಲ್ಲ, ತೋರಿಸದ ಆಸ್ಪತ್ರೆಯಿಲ್ಲ. ಆದರೆ ಮಗುವಿನ ದೇಹ ವಯೋಸಹಜವಾಗಿ ಬೆಳಿಯಿತೆ ಹೊರತು ಬೇರಾವ ಬದಲಾವಣೆಯೂ ಆಗಲಿಲ್ಲ. ಇಂತಹ ಸಮಯದಲ್ಲಿ ಸಂಜೀವ ಸರಿಯಾಗಿ ಕೆಲಸಕ್ಕೆ ಹೋಗದೆ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದ. ಮಗುವಿನ ಆರೈಕೆಗೆ ರತ್ನಾವತಿ ಗಂಡ ಸಾಕು ತಂದೆತಾಯಿರನ್ನೇ ಅವಲಂಬಿಸಿದ್ದಳು. ಮಗುವಿನ ಆರೈಕೆಗೆ ಜೊತೆಗೆ ಟೈಲರಿಂಗ್ ಮಾಡಲು ಶುರುಮಾಡಿದಳು. ಗಂಡನಿಗೆ ತನ್ನ ತಂದೆಯಿಂದ ಸಾಲ ತಂದು ಒಂದು ಪಿಕ್ ಆಪ್ ವಾಹನ ಕೊಡಿಸಿದಳು. ಸಂಸಾರ ನೌಕೆ ದಡ ಸೇರುತ್ತೆ ಅನ್ನುವಾಗ ಸಂಜೀವ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಇದರಿಂದ ಬೇಸತ್ತ ರತ್ನ ಬೇರೆ ಮನೆ ಮಾಡಿದ್ರೆ. ಗಂಡ ಸರಿಯಾಗಿ ಬರುತ್ತಾನೆ ಎಂದು ಭಾವಿಸಿ ಬೇರೆ ಮನೆ ಮಾಡಿದ್ಲು. ಹೆಂಡತಿ ವಿಕಲಚೇತನ ಮಗು ಇಬ್ಬರೆ ಇರುತ್ತಾರೆ ಅನ್ನುವ ಕಾರಣಕ್ಕೆ ಮನೆಗೆ ಬಂದ್ರು. ಪಕ್ಕದಲ್ಲಿ ಇದ್ದ ತಂದೆ ತಾಯಿಯ ಮನೆಯಲ್ಲಿ ಊಟ ಮಾಡುತ್ತಿದ್ದನು ಎಂಬ ಕಾರಣ ಗಂಡ ಹೆಂಡತಿ ಮಧ್ಯೆ ಜಗಳ ಜಾಸ್ತಿಯಾಗಿತ್ತು. ವಿಕಲಚೇತನ ಮಗುವಿನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಎಂಬುವುದು ರತ್ನಳ ಆರೋಪ. ಇದನೆಲ್ಲಾ ಕೇಳಿದ ನಾನು ಸಂಜೀವನನ್ನು ತನ್ನ ಛೇoಬರ್ ಬರ ಹೇಳಿದೆ.

ಒಳಗೆ ಬಂದ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಸಣ್ಣದಾಗಿ ಕಂಪಿಸಿ ಬಿಟ್ಟೆ!! ಆರಡಿಗಿಂತಲೂ ಎತ್ತರವಾದ ಕಡು ಕಪ್ಪು ಧಡೂತಿ ದೇಹ , ಕೆಂಡ ದುಂಡೆಯಂತೆ ಕೆಂಪಾಗಿ ಕಾಣುತ್ತಿದ್ದ ಕಣ್ಣುಗಳು. ‘ಅಬ್ಬಾ ಈತನಿಗೆ ನಾನು ಹೇಗೆ ಕೌನ್ಸಿಲಿಂಗ್ ಮಾಡ್ಲಿ..’ ಯೋಚಿಸಿದೆ.

“ಮೇಡಂ ” ಅಂತ ಕರೆದ ಸ್ವಾತಿ ಧ್ವನಿಗೆ ವಾಸ್ತವಕ್ಕೆ ಬಂದು ಸಂಜೀವನನ್ನು ಕೇಳಿದೆ, ಆಗ ಸಂಜೀವ

“ಮೇಡಂ ನಾನು ಸರಿಯಾಗಿ ಮನೆಗೆ ಹೋಗತ್ತೀನಿ, ಇಷ್ಟೇ ಸಮಯಕ್ಕೆ ಮನೆಗೆ ಬರಬೇಕು ಅಂದ್ರೆ ಆಗೋಲ್ಲ. ಗಾಡಿ ತೆಗೆದುಕೊಂಡು ಬಾಡಿಗೆಗೆ ಹೋಗುವುದರಿಂದ ಸರಿಯಾದ ಸಮಯಕ್ಕೆ ಮನೆಗೆ ಬಂದಿಲ್ಲ ಅಂದ್ರೆ ಬಾಯಿಗೆ ಬಂದಂತೆ ಬೈಯ್ಯುತ್ತಾಳೆ… ಸುಮ್ಮನೆ ಇಲ್ಲ ಸಲ್ಲದ ವಿಚಾರ ತೆಗೆದು ಹಿಂಸೆ ಮಾಡುತ್ತಾಳೆ. ಇದೇ ಕಾರಣಕ್ಕೆ ಅಪ್ಪನ ಮನೆಯಲ್ಲಿ ಒಟ್ಟಿಗೆ ಇದ್ದಾಗಲೂ ಮನೆಗೆ ಹೋಗಲು ಹಿಂದೇಟು ಹಾಕಿದ್ದೆ, ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಊಟ ಹಾಕಲ್ಲ…ನಾನು ಅಪ್ಪ- ಅಮ್ಮನ ಮನೆಗೆ ಹೋಗದೆ ಏನು ಮಾಡ್ಲಿ..?” ಅಂತ ಕಣ್ಣೀರು ಹಾಕಿದ.

ಅಷ್ಟು ದೊಡ್ಡ ದೇಹ ಕಣ್ಣೀರು ಹರಿಸುವಾಗ ಎಲ್ಲೋ ಏನೋ ತಪ್ಪಾಗುತ್ತಿದೆ ಅನಿಸಿ ಎಂದು ಮುಂದಿನ ದಿನಾಂಕ ತಿಳಿಸಿ ಮತ್ತೆ ಬರಹೇಳಿ ಕಳಿಸಿದೆ.

ಇದೇ ತರಹ ಎರಡು ಮೂರು ಸಿಟಿಂಗ್ ಕೌನ್ಸಿಲಿಂಗ್ ಮಾಡಿದ ಮೇಲೆ ತಿಳಿಯಿತು, ಗಂಡ ಕೆಲಸಕ್ಕೆ ಹೋದ ಮೇಲೆ ಹದಿನಾಲ್ಕು ವರ್ಷದ ವಿಕಲಚೇತನ ಮಗು ಶರತನನ್ನು ಎತ್ತಲು ರತ್ನಳಿಗೆ ಆಗುತ್ತಿರಲಿಲ್ಲ. ಜೊತೆಗೆ ವಯೋಸಹಜ ಬೆಳವಣಿಗೆ ಶರತನ ದೇಹದಲ್ಲಿ ಆದ್ದರಿಂದ ತಾಯಿ ಮುಟ್ಟಿ ಸ್ನಾನ ಮಾಡಿಸುವುದು ಅವನಿಗೆ ಸರಿ ಬರುತ್ತಿರಲಿಲ್ಲ. ಈ ಕಾರಣ ಅಮ್ಮನ ಮೇಲೆ ಸಿಕ್ಕಿದ ವಸ್ತುಗಳನ್ನು ಎಸೆದು ರಂಪಾಟ ಮಾಡುತ್ತಿದ್ದ. ಇದೆಲ್ಲದರ ಪರಿಣಾಮ ಸಂಜೀವ ಮನೆಗೆ ಬಂದ ತಕ್ಷಣವೇ ಜಗಳ ತೆಗೆಯುತ್ತಿದ್ದಳು. ಅದು ವಿಪರೀತಕ್ಕೆ ಹೋಗಿ ‘ನನಗೆ ಗಂಡ ಬೇಡ, ನನಗೂ ನನ್ನ ಮಗುವಿಗೆ ಜೀವಾನಾಂಶ ಕೊಡಲಿ’ ಅಂತ ದೂರು ನೀಡಿದ್ದಳು.

ಈ ಎಲ್ಲ ವಿಷಯಗಳನ್ನು ತಿಳಿದುಕೊಂಡ ಮೇಲೆ ಶರತನಿಗೋಸ್ಕರವಾದ್ರೂ ದಂಪತಿಗಳನ್ನು ಒಂದು ಮಾಡಬೇಕು ಎಂಬ ಹಠಕ್ಕೆ ಬಿದ್ದೆ. ದಂಪತಿಗಳಿಬ್ಬರನ್ನೂ ಕೂರಿಸಿ, ಜೀವಾನಾಂಶದಿಂದ ಈ ದೇವರ ಮಗುವನ್ನು ಇಟ್ಟುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ, ಬದಲಿಗೆ ಇಬ್ಬರು ಒಂದಾಗಿ ಬಾಳಿ ಎಂದು ತಿಳಿ ಹೇಳಿದಳು. ಜೊತೆಗೆ ಶರತನ್ನು…ಒಂಟಿ ಕೊಪ್ಪಲಿನಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸ್ವಾಸ್ಥ್ಯ ವಿಕಲಚೇತನರ ಶಾಲೆಗೆ ನಾನೇ ಖುದ್ದು ಹೋಗಿ ಸೇರಿಸಿದೆ. ಇದಾಗಿ ಕೆಲವು ತಿಂಗಳ ನಂತರ ರತ್ನಾವತಿ ಫೋನ್ ಮಾಡಿ ನಿಮ್ಮನ್ನು ನೋಡಲು ನಾನು, ಗಂಡ ಮತ್ತು ಮಗು ಬರುತ್ತೀವಿ, ಅಂದಾಗ ನನಗೆ ಆದ ಆನಂದ ಅಷ್ಟಿಷ್ಟಲ್ಲ.

ನನ್ನ ಕಛೇರಿಗೆ ಬಂದಾಗ ಚೆನ್ನಿಗಪ್ಪನವರು ಜೊತೆಗೆ ಇದ್ದರು. ರತ್ನಾವತಿ ಮುಖದಲ್ಲಿ ಖುಷಿಯಿತ್ತು. “ಮೇಡಂ ನೀವು ತಿಳಿಸಿ ಹೇಳದೆ ಇದ್ದಿದ್ದರೆ.. ಇಂತಹ ಮಗುವಿಟ್ಟುಕೊಂಡು ಪ್ರತಿದಿನ ಪೋಲಿಸ್ ಠಾಣೆ,ಕೋರ್ಟ್ ಕಛೇರಿ ಅಂತ ಅಲೆಯುತ್ತ ನಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೆವು. ನೀವು ನಮ್ಮ ಪಾಲಿಗೆ ಕಡುಕತ್ತಲಿನಲ್ಲಿ ಬೆಳಕು ನೀಡುವ ನಕ್ಷತ್ರದಂತೆ ಬಂದ್ರಿ.” ಅಂದಾಗ ಹಾಗೇನಿಲ್ಲ ರತ್ನ ನೀವಿಬ್ಬರೂ ಮುಕ್ತವಾಗಿ ನನ್ನ ಮುಂದೆ ಎಲ್ಲ ಸಮಸ್ಯೆಗಳನ್ನು ಹೇಳಿಕೊಂಡ್ರಿ..ಹೀಗೆ ಮುಕ್ತವಾಗಿ ಮಾತನಾಡುವುದರಿಂದ ನಿಮ್ಮಿಬ್ಬರ ತಪ್ಪುಗಳು ಅರ್ಥವಾದವು ನಾನು ಕನ್ನಡಿ ಮೇಲೆ ಕುಳಿತ ಧೂಳನ್ನು ಒರೆಸುವ ಕೆಲಸ ಮಾಡಿದೆ ಸ್ವಚ್ಛವಾದ ಕನ್ನಡಿಯಲ್ಲಿ ನಿಮ್ಮಿಬ್ಬರ ಮುಖ ನೋಡಿಕೊಂಡಿರಿ ಅಷ್ಟೆ ಅಂದೆ..

ಚೆನ್ನಿಗಪ್ಪನವರ ಮೊಗದಲ್ಲೂ ಸಂತೃಪ್ತಿ ಭಾವ ತುಂಬಿತ್ತು. ಶರತ್ ಕೂಡ ನನ್ನನ್ನು ನೋಡಿ “ಮಮ್..ಮಮ್..” ಅಂದಾಗ ನನ್ನ ಕಣ್ತುಂಬಿ ಬಂದು ಕಾನೂನು ಸಂಧಾನಕಾರಣಳಾಗಿದ್ದಕ್ಕೂ ಸಾರ್ಥಕವಾಯಿತು ಅನಿಸಿತು. ಇದೆ ಖುಷಿಯಲ್ಲಿ ಮನೆಗೆ ಬಂದು ಒಂದೇ ಉಸಿರಿಗೆ ನನ್ನವರಿಗೆ ಎಲ್ಲವನ್ನೂ ಹೇಳಿದಾಗ ನಿನ್ನ ಅಪ್ಪ,ಅಮ್ಮ ಲಾ ಓದಿಸಿದ್ದು ಒಳ್ಳೆಯದೇ ಆಯಿತು. ನಿನ್ನ ಹಾಗೆ ಕಾನೂನು ಕಲಿತವರು ಕಷ್ಟದಲ್ಲಿರುವರಿಗೆ ನಿಸ್ವಾರ್ಥದಿಂದ ಸಹಾಯ ಮಾಡಿದರೆ ಅದೆಷ್ಟೋ ಕುಟುಂಬಗಳು ಚೆನ್ನಾಗಿ ಇರುತ್ತವೆ ಅಂದಾಗ ಜಗತ್ತನ್ನೇ ಗೆದ್ದಷ್ಟು ಸಂತೋಷವಾಗಿತ್ತು ನನಗೆ.

ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು…ಹಿಂದಿನ ಸಂಚಿಕೆಗಳು :


  • ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW