“ಮೂರೂ ಬಿಟ್ಟವರು” ಕವನ – ಡಾ. ಅಶೋಕ ಕುಮಾರ

‘ಮಾತಲ್ಲೇ ಮನಸು ತಟ್ಟುವರು, ಮುಗ್ಧ ಹೆಣ್ಣುಗಳ ಮೈ ಮುಟ್ಟುವರು, ಮಾನ ಮರ್ಯಾದೆ ಮೂರು ಬಿಟ್ಟವರು’….. ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಮನದಲ್ಲಿ ಹಣದ ಚಿಂತೆ
ಎಗ್ಗಿಲ್ಲದೆ ನಡೆಯುತ್ತಿದೆ ಕಾಳಸಂತೆ
ಮನೆಯೊಳಗಡಗಿಸಿಟ್ಟರು ಕಂತೆ ಕಂತೆ.

ಹಿಡಿದರು ಅಡ್ಡ ದಾರಿ
ಬದುಕುವರು ಬಡವರ ರಕ್ತಹೀರಿ
ಕಳ್ಳ ಖದೀಮರೆಲ್ಲರು ಕತ್ತಲಲ್ಲಿ ಸೇರಿ.

ಕಪಟದಿ ತಟ್ಟುವರು ತೊಡೆ
ಎಳೆವರು ಮುಗ್ಧ ಹೆಣ್ಣುಗಳ ಜಡೆ
ತುಳಿದಂಗಾಡುವರು ವಿಷಹಾವಿನ ಹೆಡೆ.

ಲಗ್ಗೆಯಿಟ್ಟರು ಸಮೃದ್ಧ ಕಾಡಿಗೆ
ಕೀರ್ತಿ ತರುತ್ತೇನೆಂತಾರಿವರು ನಾಡಿಗೆ
ಕಾಡುಮೇಡಲ್ಲಿ ಮನೆಕಟ್ಟಿ ಕೀಳ್ತಾರೆ ಬಾಡಿಗೆ.

ಮೋಸ ವಂಚನೆಗೆ ಯ್ಯಾಮಾರಿ
ಬಡವರು ಹೊಲ ಮನೆಗಳ ಮಾರಿ
ಹೆಂಡತಿ ಮಕ್ಕಳು ನೊಂದು ಕೆರೆಬಾವಿ ಹಾರಿ.

ಬರುವರು ಐದೋರ್ಷಕ್ಕೊಂದು ಸಾರಿ
ಕೊಳ್ಳೆ ಹೊಡೆವರು ಕಳ್ಳ ಖದೀಮರು ಸೇರಿ
ದುಡಿವ ಬಡವರ ಬದುಕಿಗೆ ಕಟ್ಟುವರು ಗೋರಿ.

ಮಾತಲ್ಲೇ ಮನೆ ಕಟ್ಟುವರು
ವೇದಿಕೆ ಮೇಲೆ ಬೆನ್ನು ತಟ್ಟುವರು
ಮನೆಗೆ ಎಳೆತಂದು ಎದೆಯ ಮೆಟ್ಟುವರು.

ಮಾತಲ್ಲೇ ಮನಸು ತಟ್ಟುವರು
ಮುಗ್ಧ ಹೆಣ್ಣುಗಳ ಮೈ ಮುಟ್ಟುವರು
ಮಾನ ಮರ್ಯಾದೆ ಮೂರು ಬಿಟ್ಟವರು.

ತಮ್ಮೊಳಗೆ ಸಾಧಿಸುವರು ಹಗೆ
ಸುಳ್ಳಿನ ಕತೆಕಟ್ಟಿ ಹಾರಿಸುವರು ಕಾಗೆ
ಬೆಂಕಿಯಿಲ್ಲದೆ ಹರಿದಾಡುವುದಿಲ್ಲ ಹೊಗೆ.

ಕೈಯೊಡ್ಡುವರು ಜನರ ಮುಂದೆ
ಬೆನ್ನಿಗೆ ಚೂರಿ ಹಾಕುವರು ಹಿಂದೆ
ಇಂಥ ನೀಚರ ನಂಬುವುದು ಹೇಗೆ ತಂದೆ.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading