ಭಾರತದ ಪ್ರಥಮ ಪರಮವೀರ ಚಕ್ರ ಸ್ವೀಕರಿಸಿದ ಮೇಜರ್ ಸೋಮನಾಥ ಶರ್ಮಾ ಅವರ ಜನ್ಮದಿನ ಇಂದು. ಮೇಜರ್ ಸೋಮನಾಥ ಶರ್ಮಾ ಮತ್ತು ಅವರ ಸೈನಿಕರ ಸಾಹಸ ಮತ್ತು ತ್ಯಾಗದಿಂದಾಗಿ ಶ್ರೀನಗರ ಮತ್ತು ಕಾಶ್ಮೀರ ಇಂದು ಉಳಿದುಕೊಂಡಿತು. ಹುತಾತ್ಮ ಮೇಜರ್ ಸೋಮನಾಥ ಶರ್ಮಾ ಕುರಿತು ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಪ್ರಥಮ ಮತ್ತು ದ್ವಿತೀಯ ವಿಶ್ವಯುದ್ಧಗಳಲ್ಲಿ ಭಾರತೀಯ ಸೈನಿಕರು ಪ್ರದರ್ಶಿಸಿದ ಶೌರ್ಯ ಪರಾಕ್ರಮಗಳು ಪ್ರಪಂಚದೆಲ್ಲೆಡೆ ಮನೆಮಾತಾಗಿದ್ದು ಬ್ರಿಟಿಷ್ ಸರ್ಕಾರದ ವತಿಯಿಂದ ಅನೇಕ ಪದಕಗಳನ್ನು ಗಳಿಸಿದ್ದರು. ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ಸೈನಿಕರ ಸಾಹಸಗಳಿಗೆ ಪ್ರಶಂಸೆ ನೀಡಲು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಪದಕಗಳನ್ನು ನೀಡುವ ನಿಟ್ಟಿನಲ್ಲಿ ವಿಚಾರ ನಡೆದು ಆ ಪ್ರಶಸ್ತಿಗಳನ್ನು” ಚಕ್ರ” ಎಂದು ಕರೆಯಲಾಯಿತು. ಪರಮವೀರ, ಮಹಾವೀರ, ವೀರಚಕ್ರ ಹೀಗೆ. ಈ ಪದಕಗಳ ವಿನ್ಯಾಸ ರಚಿಸುವ ಕೆಲಸವನ್ನು ಸಾವಿತ್ರಿ ಬಾಯಿ ಖನೋಲ್ಕರ್ ಎನ್ನುವ ಹೆಸರಾಂತ ವಿನ್ಯಾಸಗಾರ್ತಿಯೊಬ್ಬರಿಗೆ ವಹಿಸಿಕೊಡಲಾಗಿತ್ತು. ವಿಸ್ಮಯಕಾರಿ ವಿಷಯವೆಂದರೆ ಸ್ವಾತಂತ್ರ ಭಾರತದ ಪ್ರಪ್ರಥಮ ಪರಮವೀರ ಚಕ್ರ ಪ್ರಶಸ್ತಿ ಅವರ ಕುಟುಂಬದವರೇ ಆದ ಒಬ್ಬ ಸೈನ್ಯಾಧಿಕಾರಿಗೆ ಸಿಗುತ್ತದೆ, ದುರಾದೃಷ್ಟವೆಂದರೆ ಇಪ್ಪತ್ತನಾಲ್ಕು ವರ್ಷಗಳ ಈ ವೀರ ಸೈನಿಕನಿಗೆ ದೇಶದ ಈ ಅತ್ಯುನ್ನತ ಪ್ರಶಸ್ತಿ ಮರಣೋತ್ತರವಾಗಿ ಸಿಗುತ್ತದೆ. ಕುಮಾವು ರೆಜಿಮೆಂಟಿನ ಮೇಜರ್ ಸೋಮನಾಥ್ ಶರ್ಮಾರವರ ಸಾಹಸಗಾಥೆ ಇದು.

ಫೋಟೋ ಕೃಪೆ : google
ಮೊದಲು ಒಂದಿಷ್ಟು ಕುಮಾವು ಪ್ರದೇಶದ ಬಗ್ಗೆ ತಿಳಿದುಕೊಳ್ಳೋಣ. ಉತ್ತರಾಖಾಂಡದ ಹಿಮಾಲಯದ ತಪ್ಪಲಿನಲ್ಲಿ ರಾಣಿಖೇತ್ ಎನ್ನುವ ಪ್ರದೇಶದಲ್ಲಿ ಭೂಸೈನ್ಯದ ಕುಮಾವೋ ರೆಜಿಮೆಂಟಿನ ಮುಖ್ಯಾಲಯವಿದೆ. ವಿಷ್ಣುವಿನ ಕೂರ್ಮಾವತಾರ ಇಲ್ಲೇ ನಡೆದದ್ದು ಎನ್ನುವ ಪ್ರತೀತಿ ಇದೆ ಹಾಗಾಗಿ ಐತಿಹಾಸಿಕವಾಗಿ ಈ ರಾಜ್ಯವನ್ನು ಕೂರ್ಮಾಂಚಲ ರಾಜ್ಯ ಎಂದು ಕರೆಯಲಾಗುತ್ತಿತ್ತು, ಕ್ರಮೇಣ ಇದು ಕುಮಾವೋ ಎಂದು ಮಾರ್ಪಾಡಾಯಿತು. ಶೂರತ್ವಕ್ಕೆ ಹೆಸರುವಾಸಿಯಾದ ಈ ಕುಮಾವಿಗಳು ದಾಳಿಕೋರ ಮುಸ್ಲೀಮರು ನುಸುಳದಂತೆ ಹೋರಾಡಿ ಪ್ರಾದೇಶಿಕ ಪರಿಶುದ್ಧತೆಯನ್ನು ಉಳಿಸಿಕೊಂಡ ಕೆಲವೇ ರಾಜ್ಯಗಳಲ್ಲಿ ಇದು ಒಂದು. ಈ ಕುಮಾವಿಗಳನ್ನು ಹೆದರಿಸಲಾಗದ ಬ್ರಿಟಿಷರು ಇವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
1917ರಲ್ಲಿ ಒಂದು ರೆಜಿಮೆಂಟಿನಿಂದ ಪ್ರಾರಂಭವಾದ ಈ ಕುಮಾವೋ ಈಗ ಹತ್ತೊಂಭತ್ತು ರೆಜಿಮೆಂಟುಗಳಾಗಿವೆ. ಎರಡು ಪರಮ ವೀರ ಚಕ್ರ ಪದವಿಗಳು ಸೇರಿದಂತೆ ಭಾರತೀಯ ಭೂಸೇನೆಯಲ್ಲೇ ಅತಿ ಹೆಚ್ಚು ಶೌರ್ಯ ಪ್ರಶಸ್ತಿಗಳಿಸಿದ ಹೆಗ್ಗಳಿಕೆ ಈ ಕುಮಾವೋ ರೆಜಿಮೆಂಟುಗಳದ್ದು. ಈ ರೆಜಿಮೆಂಟಿನಲ್ಲಿ ಕುಮಾವಿಗಳಲ್ಲದೆ ಆಸುಪಾಸು ರಾಜ್ಯಗಳ ಯಾದವರು ಮತ್ತು ಹರಿಯಾಣದ ಅಹೀರ್ ಎನ್ನುವ ಗೌಳಿಗ ಜನಾಂಗದವರೂ ಇದ್ದಾರೆ. ಮೇಜರ್ ಸೋಮನಾಥ ಶರ್ಮಾ ಈ ರೆಜಿಮೆಂಟಿನ ಒಬ್ಬ ಸಾಹಸೀ ಅಧಿಕಾರಿ. ಅಸಲಿಗೆ ಇವರ ವಂಶವೇ ಸಾಹಸಕ್ಕೆ ಹೆಸರಾದ ಸೈನಿಕರ ವಂಶ. ಎರಡನೇ ವಿಶ್ವಯುದ್ಧದಲ್ಲಿ ಬರ್ಮಾದಲ್ಲಿ ಕರ್ನಲ್ ಕೆ. ಎಸ್. ತಿಮ್ಮಯ್ಯನವರ ನೇತೃತ್ವದಲ್ಲಿ ಪಳಗಿದವರು ಮೇಜರ್ ಶರ್ಮಾ.
ಕಾಶ್ಮೀರದ ಸಮಸ್ಯೆ
ಪಾಕಿಸ್ತಾನಕ್ಕೆ ಸ್ವಾತಂತ್ರ ದೊರೆತ ದಿನದಿಂದಲೇ ನೂತನವಾಗಿ ರೂಪುಗೊಂಡ ಸೈನ್ಯದ ಕೆಲವು ಅಧಿಕಾರಿಗಳು ಕಾಶ್ಮೀರವನ್ನು ತನ್ನ ವಶಕ್ಕೆ ಸೆಳೆದುಕೊಳ್ಳುವ ಹುನ್ನಾರ ನಡೆಸಿದ್ದರು. ಆಗಿನ್ನೂ ಪಾಕಿಸ್ತಾನಿ ಸೈನ್ಯ ಬ್ರಿಟಿಷ್ ಅಧಿಕಾರಿಗಳ ನಿಯಂತ್ರಣದಲ್ಲಿತ್ತು, ಹಾಗಾಗಿ ಕಾಶ್ಮೀರದ ಮೇಲೆ ಸೈನ್ಯದ ಕಾರ್ಯಾಚರಣೆ ನಡೆಸುವ ಅನುಮತಿ ಸಿಗಲಾರದು ಎಂದು ಗ್ರಹಿಸಿ ಖೈಬರ್ ಪ್ರಾಂತ್ಯದ ಪಶ್ತೂನಿ, ಜಝೀರಿ ಬುಡಕಟ್ಟು ಜನಾಂಗದ ಯುವಕರನ್ನು ತಲಾ ಮೂರು ಸಾವಿರ ರೂಪಾಯಿಗಳಿಗೆ ಒಂದು ಆಳಿನಂತೆ ಗುತ್ತಿಗೆಗೆ ಪಡೆದು ಅವರಿಗೆ ತುರ್ತಾಗಿ ಒಂದಿಷ್ಟು ಸೈನ್ಯದ ತರಬೇತಿ ಕೊಡಲಾಯಿತು. ರಾಜಕೀಯವಾಗಿ ರಾಜಾ ಹರಿಸಿಂಗನ ಮೇಲೆ ಪಾಕಿಸ್ತಾನಕ್ಕೆ ಸೇರಿಕೊಳ್ಳುವಂತೆ ಒತ್ತಡವನ್ನೂ ಹೇರಲಾಗಿತ್ತು. ಹರಿಸಿಂಗ್ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಅಕ್ಟೋಬರ್ 23 ರಂದು ಈ ಪಶ್ತೂನಿಗಳನ್ನು ಕಾಶ್ಮೀರದ ಒಳಗೆ ನುಗ್ಗಿಸಿಯೇ ಬಿಟ್ಟರು ಪಾಕಿಸ್ತಾನದ ಸೈನ್ಯಾಧಿಕಾರಿಗಳು. ಇನ್ನು ತಡ ಮಾಡಿದರೆ ಮೂರೇ ದಿನಕ್ಕೆ ಶ್ರೀನಗರವನ್ನ ಆಕ್ರಮಿಸಿಕೊಂಡು ಬಿಡುತ್ತಾರೆ ಎಂದು ರಾಜಾ ಹರಿಸಿಂಗ್ ವಿಲೀನ ಪತ್ರಕ್ಕೆ ಸಹಿ ಹಾಕುತ್ತೇನೆ ಎಂದು ಸರ್ದಾರ್ ಪಟೇಲರಿಗೆ ತಿಳಿಸಿದರು. ಕೂಡಲೇ ಅಕ್ಟೋಬರ್ 26 ರಂದು ವಿ ಪಿ ಮೆನನ್ ಹರಿಸಿಂಗ್ ಅವರನ್ನು ಭೇಟಿ ಮಾಡಿ ವಿಲೀನ ಪತ್ರಕ್ಕೆ ಸಹಿ ಹಾಕುತ್ತಲೇ ಭಾರತೀಯ ವಾಯುಪಡೆಯ ವಿಮಾನಗಳು ಸೈನಿಕರನ್ನು ತುಂಬಿಸಿಕೊಂಡು ಶ್ರೀನಗರದ ವಾಯುನಿಲ್ದಾಣಕ್ಕೆ ಬಂದಿಳಿಯಲು ಪ್ರಾರಂಭಿಸಿದವು. ಇಲ್ಲಿಂದ ಪ್ರಾರಂಭವಾಗುತ್ತದೆ ಕಾಶ್ಮೀರವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡ ಮೊದಲನೆಯ ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ.

ಫೋಟೋ ಕೃಪೆ : google
27 ಅಕ್ಟೋಬರ್ 1947
ವಿಂಗ್ ಕಮಾಂಡರ್ ಕೆ. ಎಲ್. ಭಾಟಿಯಾ ಮೊಟ್ಟಮೊದಲ ಬಾರಿಗೆ ಶ್ರೀನಗರದ ವಾಯುನೆಲೆಯಲ್ಲಿ ತಮ್ಮ ಡಕೋಟಾ ವಿಮಾನವನ್ನು ಭೂಸ್ಪರ್ಷ ಮಾಡಿದರು. ಅವರ ವಿಮಾನದಲ್ಲಿ ಭಾರತೀಯ ಭೂಸೇನೆಯ ಸಿಖ್ ರೆಜಿಮೆಂಟಿನ ಲೆಫ್ಟಿನೆಂಟ್ ಕರ್ನಲ್ ಡಿ. ಆರ್. ರಾಯ್ ಅವರ ನೇತೃತ್ವದ ಸೈನ್ಯವಿತ್ತು. ಹಿಂದಿನ ದಿನ, ಅಂದರೆ 26 ಅಕ್ಟೋಬರ್ 1947 ರಂದು ಕಾಶ್ಮೀರದ ರಾಜ ಹರಿಸಿಂಗರು ಕಾಶ್ಮೀರ ದೇಶವನ್ನು ಭಾರತಕ್ಕೆ ಸೇರಿಕೊಳ್ಳುವ ವಿಲೀನ ಪತ್ರಕ್ಕೆ ಸಹಿ ಹಾಕಿ, ಕಾಶ್ಮೀರವನ್ನು ಅತಿಕ್ರಮಿಸಿ ದರೋಡೆ, ಲೂಟಿ, ಮಾನಹರಣ ಮತ್ತು ಅಮಾಯಕರ ಕಗ್ಗೊಲೆಗೈಯುತ್ತಿದ್ದ ಪಾಕಿಸ್ತಾನದ ಪಾಪಿಗಳಿಂದ ನನ್ನ ಸ್ವರ್ಗ ಸಮಾನ ಕಾಶ್ಮೀರವನ್ನು ರಕ್ಷಿಸಿ ಎಂದು ಭಾರತದ ಮೊರೆ ಹೋದರು.
ಕೂಡಲೇ ಕಾರ್ಯಗತವಾದ ಭಾರತೀಯ ವಾಯುಸೇನೆ, ಮರುದಿನವೇ ಬೆಳಿಗ್ಗೆ ಐದು ಗಂಟೆಯಿಂದ ಪ್ರಾರಂಭಿಸಿ ಸತತವಾಗಿ ಒಂದೇ ದಿನದಲ್ಲಿ ಇಪ್ಪತ್ತೆಂಟು ಸಲ ದೆಹಲಿಯಿಂದ ಕಾಶ್ಮೀರದ ಶ್ರೀನಗರಕ್ಕೆ ವಾಯುಯಾನ ನಡೆಸಿ ಭೂ ಸೈನಿಕರುಗಳನ್ನು ಮತ್ತು ಸೇನೆಗೆ ಬೇಕಾದ ಪರಿಕರಗಳನ್ನು ಸಾಗಿಸಿತು. ಇನ್ನೇನು ಶ್ರೀನಗರವನ್ನು ಆಕ್ರಮಿಸಿಕೊಂಡು ಬಿಡುತ್ತೇವೆ..ಎನ್ನುವ ಪಾಕಿಸ್ತಾನಿಗಳ ಹೊಂಚು ವಿಫಲವಾಯಿತು. ಹೀಗೆ 27 ಅಕ್ಟೋಬರಿನ ಬೆಳಗಿನಿಂದಲೇ ನಿರಂತರವಾಗಿ ಭಾರತೀಯ ಸೈನಿಕರನ್ನು ದೆಹಲಿಯಿಂದ ಶ್ರೀನಗರದ ವಾಯುನೆಲೆಗೆ ವಿಮಾನಗಳ ಮೂಲಕ ಇಳಿಸಲಾಯಿತು. ಕಾಶ್ಮೀರದೊಂದಿಗೆ ಭಾರತೀಯ ಸೈನ್ಯಕ್ಕೆ ಇದ್ದ ಏಕೈಕ ಸಂಪರ್ಕ ಮಾರ್ಗ ಶ್ರೀನಗರದ ವಾಯುನೆಲೆ ಮಾತ್ರ, ಹಾಗಾಗಿ ಹೇಗಾದರೂ ಮಾಡಿ ಈ ಸಂಪರ್ಕ ಮಾರ್ಗವನ್ನು ಉಳಿಸಿಕೊಳ್ಳುವುದು ಭಾರತದ ಸೈನ್ಯದ ಮೊದಲ ಉದ್ದೇಶವಾಗಿತ್ತು.
31 ಅಕ್ಟೋಬರರಂದು ಮೇಜರ್ ಸೋಮನಾಥ ಶರ್ಮಾ ತಮ್ಮ ಸೈನ್ಯದ ತಂಡದೊಂದಿಗೆ ಶ್ರೀನಗರದ ವಾಯುನೆಲೆಗೆ ಬಂದಿಳಿದರು. ದುರದೃಷ್ಟಕರ ಸಂಗತಿ ಏನೆಂದರೆ ಹಿಂದಿನ ದಿನ ಹಾಕಿ ಆಟ ಆಡುತ್ತಾ ಅವರ ಬಲಗೈ ಮುರಿದು ಅದಕ್ಕೆ ಪ್ಲಾಸ್ಟರ್ ಕಟ್ಟಲಾಗಿತ್ತು. ವೈದ್ಯರು ಮತ್ತು ಹಿರಿಯ ಅಧಿಕಾರಿಗಳ ಸಲಹೆಯನ್ನು ಕೇಳದೆ ತಮ್ಮ ಸೈನ್ಯ ತಂಡದ ನಾಯಕತ್ವ ವಹಿಸಿಕೊಂಡು ಬಂದಿದ್ದರು.

ಫೋಟೋ ಕೃಪೆ : google
3 ನವೆಂಬರ್ : ಗುಲ್ಮರ್ಗದ ಮಾರ್ಗವಾಗಿ ಪಾಕಿಸ್ತಾನಿಗಳು ಶ್ರೀನಗರದತ್ತ ಬರುತ್ತಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಲೇ ಸುಮಾರು ತೊಂಭತ್ತು ಸೈನಿಕರ ತಂಡವನ್ನು ಗುಲ್ಮರ್ಗ ಮತ್ತು ಶ್ರೀನಗರದ ನಡುವಿನ ಬಡಗಾಮ್ ಎನ್ನುವ ಹಳ್ಳಿಗೆ ಮೇಜರ್ ಸೋಮನಾಥ ಶರ್ಮಾ ರವರ ನಾಯಕತ್ವದಲ್ಲಿ ರವಾನಿಸಲಾಯಿತು. ಅಷ್ಟೊತ್ತಿಗಾಗಲೇ ಸುಮಾರು 500 ಪಾಕಿಸ್ತಾನಿ ಸೈನಿಕರು ಮತ್ತು ಅವರ ಜೊತೆ ಬಂದಿದ್ದ ದರೋಡೆಕೋರರು ಆಸುಪಾಸಿನ ಹಳ್ಳಿಯ ಮನೆಗಳಲ್ಲಿ ಹೊಕ್ಕು ಅಲ್ಲಿನ ಕಾಶ್ಮೀರಿಗಳಿಗೆ ಜೀವಬೆದರಿಕೆ ಹಾಕಿ ಸ್ಥಳೀಯರ ಮನೆಗಳಲ್ಲಿ ಅವಿತಿಟ್ಟುಕೊಂಡಿದ್ದರು. ಹಳ್ಳಿಯ ಮನೆಗಳಲ್ಲಿ ಹೊರಗಿನಿಂದ ಶಾಂತವಾಗಿ ಕಾಣುತ್ತಿದ್ದರೂ ಮೇಜರ್ ಸೋಮನಾಥರಿಗೆ ಅನುಮಾನ ಕಾಡುತ್ತಲೇ ಇತ್ತು. ಪಾಕಿಸ್ತಾನಿಗಳು ಯಾವ ದಿಕ್ಕಿನಿಂದ ಬಂದರೂ ಈ ಬಡಗಾಮ್ ಎನ್ನುವ ಹಳ್ಳಿ ಮುಖಾಂತರವೇ ಹಾದು ಶ್ರೀನಗರಕ್ಕೆ ಹೋಗಬೇಕು ಎನ್ನುವ ವಿಷಯ ಅರಿತಿದ್ದ ಶರ್ಮಾ ಅವರು ತಮ್ಮ ಸೈನ್ಯದ ತಂಡದೊಂದಿಗೆ ಗೋಡೆಯಂತೆ ನಿಂತು ಬಿಟ್ಟಿದ್ದರು.
ಎಲ್ಲಾ ಶಾಂತವಾಗಿದ್ದರೆ ವಾಪಾಸು ಬನ್ನಿ ಎನ್ನುವ ಆದೇಶ ಬ್ರಿಗೇಡ್ ಕಮಾಂಡರಿಂದ ಬಂದಿದ್ದರೂ ಶರ್ಮಾರವರು ಎಚ್ಚರಿಕೆಯಿಂದ ಸುತ್ತಲೂ ಗಮನಿಸುತ್ತಿದ್ದರು. ಭಾರತೀಯ ಸೈನಿಕರು ವಾಪಸ್ ಶ್ರೀನಗರಕ್ಕೆ ಮರಳಿ ಹೋಗುತ್ತಾರೆ ಎಂದುಕೊಂಡಿದ್ದ ಪಾಕಿಸ್ತಾನೀಯರು ಮಧ್ಯಾಹ್ನದೊಷ್ಟತ್ತಿಗೆ ಇವರ ಮೇಲೆ ಆಕ್ರಮಣ ಮಾಡಲು ತೀರ್ಮಾನಿಸಿದರು. ಇಲಿಗಳು ಬಿಲದಿಂದ ಹೊರಬಂದಂತೆ ಒಬ್ಬೊಬ್ಬರಾಗಿ ಹೊರಗೆ ಬಂದು ಹೊರವಲಯದಲ್ಲಿ ಜಮಾಯಿಸಿದರು. ಅಷ್ಟರಲ್ಲಿ ಭಾರತದ ಸೈನಿಕರು ಎಷ್ಟು ಜನರಿದ್ದಾರೆಂದು ಗೊತ್ತಾಗಿಬಿಟ್ಟಿತ್ತು… 90 ಭಾರತೀಯ ಸೈನಿಕರು ಮತ್ತು 500 ಜನ ಪಾಕಿಸ್ತಾನೀಯರು. ಮೂರು ದಿಕ್ಕಿನಿಂದ ದಾಳಿ ಮಾಡುತ್ತಾ ಗುಂಡಿನ ಮಳೆಗರಿಯುತ್ತಾ ಭಾರತೀಯ ಸೈನಿಕರ ಮೇಲೆ ಮುಗಿಬಿದ್ದರು. ಅಷ್ಟೇ ವೀರಾವೇಶದಿಂದ ಹೋರಾಡುತ್ತಿದ್ದ ಭಾರತೀಯ ಸೈನಿಕರನ್ನು ಹುರಿದುಂಬಿಸುತ್ತಾ, ಒಂದು ತುಕಡಿಯಿಂದ ಇನ್ನೊಂದು ತುಕಡಿಗೆ ಜಿಗಿದುಕೊಂಡು ಹೋಗುತ್ತಲೇ, ಎಡಗೈಯಿಂದಲೇ ಗುಂಡು ಹಾರಿಸುತ್ತಾ, ಸೈನಿಕರ ಬಂದೂಕುಗಳಿಗೆ ಗುಂಡು ತುಂಬಿ ಕೊಡುತ್ತಾ ಇರುವಾಗಲೇ ಫಿರಂಗಿಯ ಗುಂಡೊಂದಕ್ಕೆ ಬಲಿಯಾಗಿಬಿಟ್ಟರು. ಬ್ರಿಗೇಡ್ ಮುಖ್ಯಾಲಯಕ್ಕೆ ಇವರು ಕಳುಹಿಸಿದ ಕೊನೆಯ ಸಂದೇಶವೆಂದರೆ..
“ಶತ್ರುಗಳು ಕೇವಲ ಐವತ್ತು ಗಜ ದೂರದಲ್ಲಿದ್ದಾರೆ, ಭೀಕರ ಗುಂಡಿನ ದಾಳಿ ನಡೆಸುತ್ತಿದ್ದಾರೆ ಆದರೆ ನಾವು ಒಂದಿಂಚೂ ಇಲ್ಲಿಂದ ಹಿಂದೆ ಸರಿಯುವುದಿಲ್ಲಾ..ಕೊನೆಯ ಸೈನಿಕನ ಕೊನೆಯ ಗುಂಡು ಇರುವತನಕ..”
ಸುಬೇದಾರ್ ಪ್ರೇಮ್ ಸಿಂಗ್ ಮೆಹ್ತಾ ಸೇರಿದಂತೆ ಸುಮಾರು ಇಪ್ಪತ್ತು ಭಾರತೀಯ ಸೈನಿಕರೂ ಹುತಾತ್ಮರಾದರು. ಕೆಲವೇ ಗಂಟೆಗಳ ಕಾಲ ನಡೆದ ಈ ಯುದ್ಧದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಪಾಕೀಸ್ತಾನೀಯರು ಹತರಾದರು. ಕೂಡಲೇ ಬಡಗಾಮ್ ಹಳ್ಳಿಗೆ ಸೈನ್ಯದ ತಂಡಗಳನ್ನು ರವಾನಿಸಲಾಯಿತು. ಪಾಕಿಸ್ತಾನಿಗಳು ಓಡಿ ಹೋದರು. ಈ ಆರು ಗಂಟೆಗಳ ಸಮಯದಲ್ಲಿ ಇನ್ನೇನು ಶ್ರೀನಗರ ಕೈಬಿಟ್ಟು ಹೋಯಿತೇನೋ ಎನ್ನುವಷ್ಟರಲ್ಲಿ ಮೇಜರ್ ಸೋಮನಾಥ ಶರ್ಮಾ ಮತ್ತು ಅವರ ಸೈನಿಕರ ಸಾಹಸ ಮತ್ತು ತ್ಯಾಗದಿಂದಾಗಿ ಶ್ರೀನಗರ ಮತ್ತು ಕಾಶ್ಮೀರ ಉಳಿದುಕೊಂಡಿತು.
ಭಾರತದ ಪ್ರಥಮ ಪರಮವೀರ ಪ್ರಶಸ್ತಿಯೊಂದಿಗೆ ಮೇಜರ್ ಸೋಮನಾಥ ಶರ್ಮಾ ಅವರನ್ನು ಗೌರವಿಸಲಾಯಿತು.
- ವಿಂಗ್ ಕಮಾಂಡರ್ ಸುದರ್ಶನ
