ಕೆಂಪೇಗೌಡರ ಕನಸಿನ ನಗರಿ ಬೆಂಗಳೂರು

14 ಜನವರಿ 1538, ಸಂಕ್ರಾಂತಿ ಹಬ್ಬದ ದಿನ ಕೆಂಪೇಗೌಡರು ತಮ್ಮ ಕನಸಿನ ನಗರಿ ಬೆಂಗಳೂರನ್ನು ನಿರ್ಮಿಸಲು ಅಡಿಪಾಯ ಹಾಕಿದ ದಿನ. ಇನ್ನಷ್ಟು ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ವಿಂಗ್ ಕಮಾಂಡರ್ ಸುದರ್ಶನ ಅವರು, ತಪ್ಪದೆ ಮುಂದೆ ಓದಿ…

ಕೆಂಪೇಗೌಡರು ಮತ್ತು ಅವರ ಆಪ್ತಸ್ನೇಹಿತ ಗಿಡ್ಡೇಗೌಡರಿಗೆ, ಅಂದು ಹಕ್ಕ ಬುಕ್ಕರು ನಿರ್ಮಿಸಿದ ಸಮೃದ್ಧ ವಿಜಯನಗರದಿಂದ ಪ್ರೇರಿತರಾಗಿ ತಾವೂ ಒಂದು ಅಂತಹ ಗಂಡು ನಾಡನ್ನು ಕಟ್ಟುವ ಕನಸೊಂದು ಟಿಸಿಲೊಡೆಯಿತು. ಇಂತಹದೊಂದು ಹೊಸ ನಾಡೊಂದನ್ನು ಕಟ್ಟುವ ಕನಸು ಎಷ್ಟು ಪ್ರಭಲವಾಗಿ, ಹೆಮ್ಮರವಾಗಿ ಬೆಳೆಯಿತೆಂದರೆ, ತಮ್ಮದೊಂದು ನೀಲಿನಕಾಶೆಯೊಂದಿಗೆ ವಿಜಯನಗರವನ್ನು ತಲುಪಿಬಿಟ್ಟರು, ಅನುದಾನ ಮತ್ತು ಆಶೀರ್ವಾದ ಪಡೆಯಲು. ಇವರ ನೂತನ ನಗರ ನಿರ್ಮಾಣದ ವಿವರಣೆ ಕೇಳಿದ ವಿಜಯನಗರದರಸು ಅಚ್ಯುತರಾಯ ಎಷ್ಟು ಪ್ರಭಾವಿತರಾದರೆಂದರೆ ಅವರ ಊಳಿಗದಲ್ಲಿದ್ದ ಇನ್ನೂ ಆರು ಸಂಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಟ್ಟು ಜೊತೆಗೆ ಐವತ್ತು ಸಾವಿರ ಚಿನ್ನದ ವರಹಗಳ ಅನುದಾನವನ್ನೂ ದಯಪಾಲಿಸಿದರು. ಸಂಪಧ್ಭರಿತ ಮಹಾ ಸಾಮ್ರಾಜ್ಯವನ್ನು ಕಟ್ಟಿದ ಸವಿಸ್ತಾರ ಅನುಭವವಿದ್ದ ಅರಸರು ಹೇಳಿದ್ದಿಷ್ಟೇ…ನೀವು ಕಟ್ಟುವ ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಬೇಕು, ಜಲ ಸಂಪನ್ಮೂಲಕ್ಕೆ ಪ್ರಾಮುಖ್ಯತೆ ಕೊಡಬೇಕು ಮತ್ತು ಎಲ್ಲಕ್ಕೂ ಮಿಗಿಲಾಗಿ ಧಾರ್ಮಿಕ ಸಂಸ್ಥಾನಗಳು ಎಲ್ಲೆಡೆಯಲ್ಲೂ ಸ್ಥಾಪಿತಗೊಳ್ಳಬೇಕು.
“ಹಾಗೇ ಮಾಡುತ್ತೇವೆ ಪ್ರಭು” ಎಂದು ಕನಸುಗಳ ಮೂಟೆಯೊಂದಿಗೆ ಸೇರಿಕೊಂಡ ಚಿನ್ನದ ವರಾಹಗಳ ಮೂಟೆಯನ್ನೂ ಹೊತ್ತು ಯಲಹಂಕಕ್ಕೆ ಮರಳಿದರು, ಅದ್ಭುತ ನಗರವೊಂದನ್ನು ನಿರ್ಮಿಸಲು…

ಬೆಂಗಳೂರಿನ ಬಾಲ್ಯ

1538 ರ ಸಂಕ್ರಾಂತಿ ಹಬ್ಬದ ದಿನದಂದು, ಪುರೋಹಿತಗಣ ನಿರ್ಧರಿಸಿದಂತೆ ಪ್ರಶಸ್ತ ಸಮಯದಲ್ಲಿ , ದೊಮ್ಮಲೂರು ಮತ್ತು ಯಲಹಂಕದ ನಡುವಿನ ಕಾಡಿನ ನಡುವೆ ಆಯ್ದ ಒಂದು ಸ್ಥಳದಲ್ಲಿ ಭೂಮಿ ಪೂಜೆ ಪ್ರಾರಂಭವಾಯಿತು. ಹೆಸರಘಟ್ಟದ ಗುರುಕುಲವೇ ಅಲ್ಲಿಗೆ ಬಂದಿಳಿಯಿತು, ತಮ್ಮ ಶಿಷ್ಯ ಕೆಂಪೇಗೌಡರು ನೂತನ ನಗರವೊಂದನ್ನು ನಿರ್ಮಿಸುತ್ತಿದ್ದಾರೆಂದರೆ ಸಾಮಾನ್ಯದ ಮಾತೇ? ಯಜ್ಞ ಹವನಾದಿಗಳಿಂದ ಕಾಡಿನ ನಡುವೆ ಹೊಗೆ ದಟ್ಟೈಸಿತು. ವೇದಘೋಷಗಳು ಮೊಳಗುತ್ತಿದ್ದಂತೆ ನೇಗಿಲು ಹೊತ್ತ ನಾಲ್ಕು ಜೋಡಿ ಬಿಳಿ ಎತ್ತುಗಳು ನಾಲ್ಕು ದಿಕ್ಕುಗಳಲ್ಲಿ ಗೆರೆ ಎಳೆಯುತ್ತಾ ಸಾಗಿದವು. ಪೂರ್ವ, ಪಶ್ಚಿಮದ ಸಾಲನ್ನು “ಚಿಕ್ಕಪೇಟೆ”ಯಾಗಿ, ಉತ್ತರ, ದಕ್ಷಿಣದ ಸಾಲನ್ನು “ದೊಡ್ಡ ಪೇಟೆ”ಯಾಗಿ ( ಈಗಿನ ಅವೆನ್ಯೂ ರಸ್ತೆ) ನಿರ್ಮಿಸಲು ನಿರ್ಧರಿಸಿಯಾಗಿತ್ತು.

ವಿಜಯನಗರದ ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಿಂದ, ಮಾರಾಟ ಮಳಿಗೆಗಳಿಂದ ಕಲಿತ ಅನುಭವವನ್ನು ಇಲ್ಲಿ ಅಳವಡಿಸಿ ಕೊಳ್ಳಲಾಗಿತ್ತು. ದೊಡ್ಡ ಪೇಟೆ ಸಗಟು ಮಾರಾಟಕ್ಕಾದರೆ, ಚಿಕ್ಕಪೇಟೆ ಚಿಲ್ಲರೆ ವ್ಯವಹಾರಕ್ಕಾಯಿತು. ಅಕ್ಕಿಪೇಟೆ, ರಾಗಿಪೇಟೆ, ಅರಳೆ ಪೇಟೆ, ತರಗು ಪೇಟೆ ದವಸ ಧಾನ್ಯಗಳ ಮಾರಾಟಕ್ಕೆ, ಗಾಣಿಗರಪೇಟೆ ಎಣ್ಣೆ ಮಾರಾಟಕ್ಕಾಯಿತು. ಉಪ್ಪಾರರ ಪೇಟೆ ಉಪ್ಪಿನ ವರ್ತಕರಿಗಾದರೆ, ಕುಂಬಾರ ಪೇಟೆ ಮಡಿಕೆಗಳನ್ನು ಮಾಡಿ ಮಾರಾಟ ಮಾಡುವವರಿಗಾಯಿತು. ತಿಗಳರ ಪೇಟೆ ಹೂವಿನ ಮಂಡಿಯಾದರೆ, ನಗರ್ತಪೇಟೆ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗಾಯಿತು. ಬಳೇಪೇಟೆ ಬಳೆ, ಸರ ಮಾರಾಟಕ್ಕೆ ಮೀಸಲಾಯಿತು.

ಇನ್ನು ಜಲ ಸಂಪನ್ಮೂಲಗಳ ನೆಲೆಯಾಗಿ ಧರ್ಮಾಂಭುಧಿ (ಈಗಿನ ಬಸ್ ಸ್ಟ್ಯಾಂಡ್) ಮತ್ತು ಕೆಂಪಾಂಭುಧಿ, ಹಲಸೂರು ಕೆರೆ, ಯಡೆಯೂರು ಕೆರೆ, ನಾಗರೀಕರ ಬಳಕೆಗಾದರೆ ನೀರಾವರಿಗೆಂದೇ ಸಂಪಂಗಿ ಕೆರೆಯನ್ನು ( ಈಗಿನ ಕಂಠೀರವ ಸ್ಟೇಡಿಯಂ) ಕಟ್ಟಲಾಯಿತು. ಕೆಂಪೇಗೌಡರ ನಗರ ನಿರ್ಮಾಣದ ಪ್ರಮುಖವಾದ ಅಂಶವೆಂದರೆ ರಾಜಕಾಲುವೆಗಳ ಜೋಡಣೆ. ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ಬೆಂಗಳೂರಿನಲ್ಲಿ ಮಳೆ ಬಂದಾಗ ನೀರು ನೈಸರ್ಗಿಕವಾಗಿ ಕೆಳಗೆ ಹರಿದು ಹೋಗುತ್ತದೆ ಎಂಬುದನ್ನು ಅರಿತಿದ್ದ ಕೆಂಪೇಗೌಡರ ಮತ್ತು ಅವರ ನಿರ್ಮಾಣದ ತಂಡ ಆ ನೀರಿನ ಹರಿತವನ್ನು ಕಾಲುವೆಗಳ ಮುಖಾಂತರ ಕೆಳ ಮಟ್ಟದ ಕೆರೆಗಳನ್ನ ತುಂಬಿಸುವ ನಿಯಂತ್ರಿತ ವ್ಯವಸ್ಥೆ ಮಾಡಿದ್ದರು. ಮಳೆ ನೀರಿನಿಂದ ಒಂದು ಕೆರೆ ತುಂಬಿದ ಕೂಡಲೇ ಈ ರಾಜಕಾಲುವೆಗಳ ಮುಖಾಂತರ ಇನ್ನೊಂದು ಕೆರೆಗೆ ನೀರು ಹರಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ನುರಿತ ನೀರುಗಂಟಿಗಳನ್ನು ವಿಜಯನಗರದಿಂದ ಕರೆತರಲಾಗಿತ್ತು. ಹೀಗೆ ಎಲ್ಲಾ ಕೆರೆಗಳು ತುಂಬಿದ ಮೇಲೆ ಕೋಟೆಯ ಹೊರವಲಯದ ಕಾಲುವೆಗಳಿಗೆ ಹರಿಸಲಾಗುತ್ತಿತ್ತು. ಇದೊಂದು ಕೋಟೆಯ, ನಗರದ ಮತ್ತು ನಾಗರೀಕರ ಸುರಕ್ಷೆಯ ವ್ಯವಸ್ಥೆಯಾಗಿತ್ತು. ಚಿಕ್ಕಪೇಟೆ, ದೊಡ್ಡಪೇಟೆ ಹತ್ತಿರದ ಧರ್ಮಾಂಬುಧಿ ಕೆರೆ ತುಂಬಿಕೊಂಡು ಹೆಚ್ಚುವರಿ ನೀರು ರಾಜಕಾಲುವೆ ಮುಖಾಂತರ ದೂರದ ಬೆಳ್ಳಂದೂರು ಕೆರೆಗೆ ಹರಿದು ಹೋಗುತ್ತಿತ್ತು. ಆ ಕೆರೆಯೂ ತುಂಬಿಕೊಂಡು ನಂತರ ಹೆಚ್ಚುವರಿ ನೀರು ರಾಜಕಾಲುವೆ ಮುಖಾಂತರ ದೊಮ್ಮಲೂರು ಕೆರೆಗೆ ಹೋಗುತ್ತಿತ್ತು. ಹೀಗೆ ಕೋರಮಂಗಲದ, ಚಲ್ಲಘಟ್ಟದ, ಹೆಬ್ಬಾಳ ಮತ್ತು ವೃಷಭಾವತಿ ಕಣಿವೆಯ ಹಲವಾರು ಕೆರೆಗಳು ತುಂಬಿಕೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿ ಆಯಾ ಕೆರೆಗಳ ದೇವಿ ದೇವತೆಗಳ ಜಾತ್ರೆ, ತೆಪ್ಪೋತ್ಸವ ನಡೆಯುತ್ತಿತ್ತು. ರೈತರು, ಮೀನುಗಾರರು, ಅಗಸರು, ಅಂಬಿಗರು ಪ್ರಕೃತಿಯ ಈ ಸಮೃದ್ಧ ವರದಾನಕ್ಕೆ, ವರುಣನ ಕೃಪೆಗೆ ಶಿರಸಾವಹಿಸಿ ವಂದಿಸುತ್ತಿದ್ದರು. ಊರಿನ ಹಿರಿಯರು, ನೀರುಗಂಟಿಗಳು ಈಗ ತುಂಬಿರುವ ಕೆರೆಯ ನೀರನ್ನು ಕಿರುಕಾಲುವೆಗಳ ಮುಖಾಂತರ ಜನವಸತಿ ಪ್ರದೇಶಗಳಿಗೆ ನಿಯಮಿತವಾಗಿ ಸೇರಿಸುವುದರ, ಬಳಸುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಗುರುಕುಲದ ವಿದ್ಯಾರ್ಥಿಯಾಗಿ ಬೆಳೆದ ಕೆಂಪೇಗೌಡರು ದೇವಸ್ಥಾನಗಳು ಬರೀ ಭಕ್ತಿಕೇಂದ್ರಗಳಲ್ಲ, ಜ್ಞಾನ ಕೇಂದ್ರಗಳಾಗಿ ಪುರಾತನ ಕಾಲದಿಂದಲೂ ಇದ್ದ ಸಂಸ್ಕಾರವನ್ನು ಮುಂದುವರೆಸಿ ಗವಿ ಸಿಧ್ಧೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಈ ದೇವಸ್ಥಾನವೊಂದು ಖಗೋಳಶಾಸ್ತ್ರದ ಅಚ್ಚರಿ ಎಂದು ಈಗ ಅದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಬಸವನಗುಡಿಯ ನಂದಿದೇವಾಲಯ, ದೊಡ್ಡ ಪೇಟೆಯ ಆಂಜನೇಯ ದೇವಾಲಯವೇ ಅಂದು ಬೆಂಗಳೂರಿನ ಭೂಮಿಪೂಜೆ ಮಾಡಿದ ಸ್ಥಳ ಎಂದು ಹೇಳುತ್ತಾರೆ.

ಬೆಂಗಳೂರಿನ ವಾಣಿಜ್ಯ ಪ್ರಾಮುಖ್ಯತೆ ಹೆಚ್ಚಿದಂತೆ ಹೊರಗಿನವರ ಕಣ್ಣುಬೀಳುವುದು ಸಹಜ ಎಂಬ ವಿಷಯವನ್ನು ಚೆನ್ನಾಗಿ ಅರಿತಿದ್ದ ಸೇನಾನಿ ಕೆಂಪೇಗೌಡರು ನಗರ ರಕ್ಷಣೆಗೆಂದು ಸುತ್ತಲೂ ಕೋಟೆಯನ್ನು ನಿರ್ಮಿಸಿದ್ದರು. ಯಲಹಂಕ, ಕೆಂಗೇರಿ, ಹಲಸೂರು ಮತ್ತು ಆನೇಕಲ್ಲಿನಲ್ಲಿ ಈ ಕೋಟೆಯ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರು ಬೆಳೆಯುತ್ತಿರುವ ವೇಗದಿಂದಲೋ, ನಾಗರೀಕರಲ್ಲಿ ಹೆಚ್ಚುತ್ತಿದ್ದ ಸಂಪತ್ತೋ, ಅಥವಾ ವಿಜಯನಗರದಲ್ಲಿ ಬದಲಾಗುತ್ತಿದ್ದ ವಿದ್ಯಾಮಾನಗಳೋ ಅಥವಾ ಕೆಂಪೇಗೌಡರ ದುರಾದೃಷ್ಟವೋ ಇಂತಹ ಅದ್ಭುತವಾದ ನಗರವನ್ನು ನಿರ್ಮಾಣಮಾಡಿದ ಕತೃವಿಗೆ ಸೆರೆಮನೆ ಬಾಗಿಲು ತೆರೆದುಕೊಂಡು ಕಾಯುತ್ತಿತ್ತು….

ಪ್ರೌಢ ಬೆಂಗಳೂರು

ಒಂದು ಕಡೆ ವಿಜಯನಗರದರಸರ ಕೃಪಾಪೋಷಣೆಯಿಂದ ಹುಟ್ಟಿ ಬೆಳೆದು ಸಂಪಧ್ಭರಿತವಾಗುತ್ತಾ ಹೋಗುತ್ತಿದ್ದರೆ, ವಿಜಯನಗರದ ಸಾಮ್ರಾಜ್ಯದ ಅಡಿಪಾಯವೇ ಅಲುಗಾಡುವಂತಹ ಘಟನೆಗಳು ಅಲ್ಲಿ ನಡೆಯುತ್ತಿದ್ದವು. 1560 ರ ಸಮಯ ” ಅಳಿಯ ರಾಮರಾಯ” ಮತ್ತು ಸದಾಶಿವರಾಯರು ಆಡಳಿತದಲ್ಲಿ ಕೆಲವು ಸಾಮಂತರು ದಂಗೆ ಎದ್ದು ಸ್ವತಂತ್ರರಾಗುವ ಪ್ರಯತ್ನ ಮಾಡುತ್ತಿದ್ದರೆ, ಸಾಮ್ರಾಜ್ಯದ ಸೈನ್ಯದಲ್ಲೇ ಮುಸಲ್ಮಾನರ ಮಸಲತ್ತು ನಡೆಯುತ್ತಿತ್ತು. ಹಂಪೆಯ ಹಾಲುಂಡ ಗಿಲಾನಿ ಸಹೋದರ ದಂಡನಾಯಕರು ರಾಜರ ವಿರುದ್ದವೇ ಹಾಲಾಹಲ ಕಕ್ಕುವ ಹುನ್ನಾರ ನಡೆಸುತ್ತಿದ್ದರು. ಈ ಸನ್ನಿವೇಶದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನವ ಅತಂತ್ರ ಸ್ಥಿತಿಯಲ್ಲಿದ್ದಾಗಲೇ ಕೆಂಪೇಗೌಡರ ವಿರುಧ್ಧ ಚನ್ನಪಟ್ಟಣದ ಪಾಳೇಗಾರ ಜಗದೇವರಾಯ ದೂರುಕೊಟ್ಟರು. ಅದೇನೆಂದರೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಪ್ರತ್ಯೇಕವಾಗಿ ನಾಣ್ಯಗಳ ಚಲಾವಣೆ ಮಾಡುತ್ತಿದ್ದಾರೆ, ವಿಜಯನಗರದ ಸಾಮಂತಿಕೆಯಿಂದ ದೂರಸರಿಯುತ್ತಿದ್ದಾರೆ ಎಂದು. ಸಾಮ್ರಾಜ್ಯದ ಅಧೀರತೆಯಿಂದ ಕನಲಿಹೋಗಿದ್ದ ರಾಜರು ಕೆಂಪೇಗೌಡರನ್ನು ರಾಜದ್ರೋಹದ ಆರೋಪದಡಿ ಬಂಧಿಸಿ ಅನೇಗುಂದಿಯ ಸೆರೆಮನೆಗೆ ಕಳುಹಿಸಿ ಬಿಡುತ್ತಾರೆ.

ಈ ಅತಂತ್ರ ಸ್ಥಿತಿಯಲ್ಲಿ ಬೆಂಗಳೂರನ್ನು ಹೊರಗಿನವರ ವಕ್ರದೃಷ್ಟಿಯಿಂದ ಉಳಿಸಲು ಅವರ ಮಕ್ಕಳು ಟೊಂಕಕಟ್ಟಿ ನಿಲ್ಲುತ್ತಾರೆ. ಇಮ್ಮಡಿ ಕೆಂಪೇಗೌಡರ ಮೊದಲ ಆದ್ಯತೆ ನಗರದ ಸುರಕ್ಷೆ. ಹಲಸೂರು, ಈಗಿನ ಲಾಲ್ಬಾಗ್, ಸದಾಶಿವನಗರ ಮತ್ತು ಕೆಂಪಾಂಬುಧಿ ಕೆರೆಯ ಬಳಿ ಎತ್ತರದ ಆಯಕಟ್ಟಿನ ಸ್ಥಳಗಳಲ್ಲಿ ವೀಕ್ಷಣಾಗೋಪುರಗಳನ್ನು ಕಟ್ಟಲಾಗುತ್ತದೆ. ತಿಗಳರ ಪೇಟೆಯ ಧರ್ಮರಾಮ ಸ್ವಾಮಿಯ ದೇವಸ್ಥಾನವನ್ನು ಕೇಂದ್ರ ಬಿಂದುವನ್ನಾಗಿಟ್ಟು ಕೊಂಡು ಸಮಾನಾಂತರದಲ್ಲಿ ಈ ವೀಕ್ಷಣಾಕೇಂದ್ರಗಳನ್ನು ಕಟ್ಟಲಾಗಿದೆ. ಬಸವನಗುಡಿಯ ಎತ್ತರದ ಬಂಡೆಯಿಂದ ಪ್ರತಿ ಸಂಜೆ ಕಹಳೆ ಊದಿ ‘ಎಲ್ಲಾ ಸರಿಯಾಗಿದೆ’ ಎನ್ನುವ ಸಂಕೇತದ ವ್ಯವಸ್ಥೆ ಮಾಡಲಾಗುತ್ತದೆ. ನಿಯಮಿತ ಸಮಯದ ಹೊರತಾಗಿ ಕಹಳೆ ಊದಿದರೆ ಶತ್ರುಗಳ ಸುಳಿವಿನ ಎಚ್ಚರಿಕೆ ! ಇದೇ ಈಗಿನ ‘ಬ್ಯೂಗಲ್ ರಾಕ್’ ಹಿರಿಯ ಕೆಂಪೇಗೌಡರನ್ನು ಬಂಧಿಸಿ ತಾವು ಮಾಡಿದ ತಪ್ಪಿನ ಅರಿವಾಗಲು ವಿಜಯನಗರದ ಅರಸರಿಗೆ ಬರೋಬ್ಬರಿ ಐದು ವರ್ಷಗಳೇ ಹಿಡಿಯುತ್ತದೆ. ಬಿಡುಗಡೆಯಾದ ಕೆಂಪೇಗೌಡರು ಬೆಂಗಳೂರಿಗೆ ಮರಳುತ್ತಾರೆ. ಇನ್ನು ಮಕ್ಕಳದೇ, ಮೊಮ್ಮಕ್ಕಳದೇ ರಾಜ್ಯಭಾರ. ಅವರದ್ದೇನಿದ್ದರು ದೇವಸ್ಥಾನಗಳನ್ನು ಕಟ್ಟಿಸುವುದರಲ್ಲೇ ವಿಷೇಶ ಗಮನ. ಆನೆಗುಂದಿ ಕಾರಾಗೃಹದಿಂದ ಸಮ್ಮಾನಪೂರ್ವಕ ಬಿಡುಗಡೆ ಆದ ನಂತರ ಕೆಂಪೇಗೌಡರು ಯಲಹಂಕ ತಲುಪಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರು. ಕಾರಾವಾಸದಲ್ಲಿ ಇದ್ದಾಗ ಹಲವು ದೇವರುಗಳಿಗೆ ಹರಕೆ ಹೊತ್ತಿದ್ದ ದೈವಭಕ್ತ ಗೌಡರಿಗೆ ಮರುದಿನ ಕಾಡುಮಲ್ಲೇಶ್ವರ (ಬೆಂಗಳೂರಿನ ಇಂದಿನ ಮಲ್ಲೇಶ್ವರ ಬಡಾವಣೆ) ದೇವಾಲಯವನ್ನು ಸಂದರ್ಶಿಸುವ ಮನಸ್ಸಾಯಿತು. ಅದು ಯಲಹಂಕದಿಂದ ಪೇಟೆಗೆ ಹೋಗುವ ದಾರಿಯ ಬಳಸು. ಕೂಡಲೇ ಒಬ್ಬ ದೂತ ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಿಗೆ ಈ ವಿಷಯ ತಲುಪಿಸಲು ಆ ರಾತ್ರಿಯೇ ಪ್ರಯಾಣ ಬೆಳೆಸಿದ. ಮುಂಜಾನೆಯ ವೇಳೆಗೆ ಆ ಆಸುಪಾಸಿನ ಗ್ರಾಮದ ಜನರಿಗೆ ಈ ಸುದ್ದಿ ತಲುಪಿತು.

ಮುಂಜಾನೆ ಬೇಗನೆ ಪ್ರಯಾಣ ಆರಂಭಿಸಿದ ಕೆಂಪೇಗೌಡರು ಮಧ್ಯಾಹ್ನದ ಸುಮಾರಿಗೆ ಕಾಡುಮಲ್ಲೇಶ್ವರ ದೇವಾಲಯದ ಬಳಸು ಹಾದಿಗೆ ಬಂದರು (ಇಂದಿನ ಕಾವೇರಿ ಚಿತ್ರಮಂದಿರ). ಅಲ್ಲಿಂದ ಬಲಕ್ಕೆ ಒಂದು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಅಲ್ಲಿ ಜನಸಾಗರವೇ ನೆರೆದಿತ್ತು! ಕೆಂಪೇಗೌಡರಿಗೆ ಜೈಕಾರ ಹಾಕುತ್ತಾ ಅವರನ್ನು ಸಮಸ್ತ ಮರ್ಯಾದೆಗಳಿಂದ ಕರೆದೊಯ್ದು ಒಂದು ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಜೀಕಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆನಂತರ ಆ ಇಡೀ ಜನಸ್ತೋಮದ ಜೊತೆಗೆ ಹೊರಟು ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಪಡೆದರು. ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳ ನಂತರ “ಉಯ್ಯಾಲೆ ಕಾವಲು” ಎಂದು ಹೆಸರಾಗಿ, ನಂತರ ತಮಿಳರ ಬಾಯಲ್ಲಿ ವೈಯಾಲಿಕಾವಲ್ ಎಂದು ಅಪಭ್ರಂಶಗೊಂಡಿತು.

ಈ ಘಟನೆ ಇಂದಿಗೂ ರೋಮಾಂಚನ ಹುಟ್ಟಿಸುತ್ತದೆ. ಐದು ವರ್ಷ ಅಭೇದ್ಯ ಆನೆಗುಂದಿ ಜೈಲಿನಲ್ಲಿ ಕಳೆದು, ಜೀವಂತವಾಗಿ ಹೊರಬರುವ ಸಾಧ್ಯತೆಯನ್ನೂ ಕಾಣದಿದ್ದ ಕೆಂಪೇಗೌಡರನ್ನು ಅವರ ಪ್ರಜೆಗಳು ತಮಗೆ ದೊರೆತ ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ಅಷ್ಟೊಂದು ತಯಾರಿ ನಡೆಸಿ ಸಮ್ಮಾನ ಮಾಡಿದರು ಎಂದರೆ ಕೆಂಪೇಗೌಡರು ಎಷ್ಟೊಂದು ಜನಾನುರಾಗಿ ಆಗಿಯಬೇಕು? ಆ ಐದು ವರ್ಷಗಳಲ್ಲಿ ಅವರ ಬಿಡುಗಡೆಗೆ ಅದೆಷ್ಟು ಜನ ಹರಕೆ ಹೊತ್ತರೋ ತಿಳಿಯದು. ಅಷ್ಟು ದೀರ್ಘಕಾಲ ಜನರಿಂದ ದೂರ ಇದ್ದರೂ, ಹಿಂದಿರುಗುವ ಸಾಧ್ಯತೆ ಕೂಡ ಮಸುಕಾಗಿ ಇದ್ದರೂ ಜನರಿಗೆ ಕೆಂಪೇಗೌಡರ ಮೇಲಿನ ವಿಶ್ವಾಸ, ಪ್ರೀತಿ ಚಿಕ್ಕಾಸು ಕೂಡ ಕಡಿಮೆ ಆಗಿರಲಿಲ್ಲ. ಪ್ರಜೆಗಳ ಶ್ರೇಯಸ್ಸಿಗೆ ಶ್ರಮಿಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಕೆಂಪೇಗೌಡರು ಸಾಕ್ಷಿಯಾದರೆ, ಅಂತಹ ನಾಯಕರನ್ನು ಹೇಗೆ ಜನ ನಡೆಸಿಕೊಳ್ಳುತ್ತಾರೆ ಎಂಬುದನ್ನು ಪ್ರಜೆಗಳು ತೋರಿದರು.

1569 ಇಸವಿಯಲ್ಲಿ ಹಿರಿಯ ಕೆಂಪೇಗೌಡರು ಕುಣಿಗಲ್ಲಿನಿಂದ ಹಿಂತಿರುಗುವಾಗ ಮಾಗಡಿಯ ಸಮೀಪದ ಕೆಂಪಾಪುರದಲ್ಲಿಆಕಸ್ಮಿಕವಾಗಿ ಮರಣಹೊಂದುತ್ತಾರೆ. ಇತಿಹಾಸದ ಅಸ್ಪಷ್ಟ ಪುಟಗಳಲ್ಲಿ ಆಕಸ್ಮಿಕ ನಗರದ ಸೃಷ್ಟಿಕರ್ತರು ಕರಗಿಹೋಗುತ್ತಾರೆ


  • ವಿಂಗ್ ಕಮಾಂಡರ್ ಸುದರ್ಶನ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading