‘ಆಡುಕಳ’ ಪುಸ್ತಕ ಪರಿಚಯ – ರಶ್ಮಿ ಉಳಿಯಾರು

ಉತ್ತರ ಕನ್ನಡದ ಯಲ್ಲಾಪುರ‌ ತಾಲೂಕಿನ ಬಿದ್ರಳ್ಳಿ ಮತ್ತು ಆಡುಕಳ (ಕಾಲ್ಪನಿಕವೇನೋ ಗೊತ್ತಿಲ್ಲ) ಎಂಬ ಪ್ರದೇಶಗಳಲ್ಲಿ ನಡೆಯುವ ಕಥೆಯೇ ;ಆಡುಕಳ’. ಶ್ರೀಧರ ಬಳಗಾರ ಅವರ ಈ ಪುಸ್ತಕದ ಕುರಿತು ರಶ್ಮಿ ಉಳಿಯಾರು ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಆಡುಕಳ
ಲೇಖಕರು: ಶ್ರೀಧರ ಬಳಗಾರ
ಪ್ರಥಮ ಮುದ್ರಣ: ೨೦೧೪
ಬೆಲೆ: ೧೫೦/- (ಹನಿಗವನಗಳ ಲಹರಿ ಅಭಿಯಾನಕ್ಕೆ ರಾಜೇಶ್ ಎಂ.ಬಿ.ಯವರಿಂದ ದೊರೆತ ಬಹುಮಾನ)
ಪುಟಗಳು: ೨೨೬
ಲಭ್ಯತೆ: ಅಂಕಿತ ಪುಸ್ತಕ.

ಮೊದಲಿಗೆ ಎಲ್ಲರಿಗೂ ನಮ್ಮ ಬಳಗದ ಮೂರನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಮುನ್ನಾ ದಿನವಾದ ಇಂದಿನ ಈ ಸಂಭ್ರಮದ ಘಳಿಗೆಯ ಶುಭಾಶಯಗಳು. ನಾಳೆ ಮೂರು ವರ್ಷ ತುಂಬುತ್ತಿರುವ ಈ ಮಗು ನಮ್ಮೆಲ್ಲರ ಅಕ್ಷರದಾಸರೆಯ ಹಿರಿದವ್ವ.

ಆಡುಕಳ

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ಬಹಳ ಇಷ್ಟವಾಯಿತು ಇದು. ಒಂದು ವಿಶಿಷ್ಟವಾದ ಮಣ್ಣಿನ ಘಮಲಿನಿಂದ ಕೂಡಿದ ಸತ್ವಭರಿತ ಕಥಾವಸ್ತು ಇಲ್ಲಿದೆ. ಕರಾವಳಿಯ ಹಳ್ಳಿ ಮೂಲದ ನನಗೆ ಹಲವು ಭಾವಗಳನ್ನು ಮೂಡಿಸಿತು. ಉತ್ತರ ಕನ್ನಡದ ಯಲ್ಲಾಪುರ‌ ತಾಲೂಕಿನ ಬಿದ್ರಳ್ಳಿ ಮತ್ತು ಆಡುಕಳ (ಕಾಲ್ಪನಿಕವೇನೋ ಗೊತ್ತಿಲ್ಲ) ಎಂಬ ಪ್ರದೇಶಗಳಲ್ಲಿ ನಡೆಯುವ ಕಥೆ. ಸಂಭಾಷಣೆಯ ಸುಮಾರಷ್ಟು ಭಾಗ ಹವ್ಯಕ ಕನ್ನಡದಲ್ಲಿ ಮೂಡಿ ಬಂದಿದೆ. ಓದುತ್ತಾ ಹೋದಂತೆಲ್ಲಾ ಆಡುಕಳ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಕಾದಂಬರಿಯಲ್ಲಿ ಹವ್ಯಕ ಮಾಣಿಗಳಿಗೆ ಪ್ರಾಯ ಮೀರಿದರೂ ಹುಡುಗಿ ಸಿಗದೇ ಅಪತ್ಕಾಲ ಸೂತ್ರವೆಂಬಂತೆ ಲಿಂಗಾಯತರ ಹೆಣ್ಣು ತರುವುದು, ಕೂಡು ಕುಟುಂಬದಲ್ಲಿ ತಮ್ಮ ಪಾಲು ಕಡಿಮೆಯಾಗದಿರಲು ತೋರುವ ಅಣ್ಣನಾದವ ತೋರುವ ಲಾಲಸೆ, ವಂಶದ ಕುಡಿಯಿಲ್ಲದೇ ಹೋದಾಗ ಉಳಿಯುವ ಸಂಪದ್ಭರಿತ ಭೂಮಿಯ ಮೇಲೆ ಕಂಡವರ ದುರಾಸೆ, ಕುಟುಂಬದ ಸದಸ್ಯರಿಗೆ ಎದುರಾಗುವ ತೊಂದರೆಗಳು, ಅತಿಮಾನುಷ ಶಕ್ತಿಯನ್ನು ತಮ್ಮ ಹಣದಾಸೆಗೆ ಬೇಕಾದಂತೆ ಬಳಸಿಕೊಳ್ಳುವ ದುಷ್ಟತನ, ದೇವರ ಹೆಸರಲ್ಲಿ ದುಡ್ಡು ಮಾಡುವ ದಂಧೆಗೆ ಮನಸ್ಸೊಪ್ಪದೇ ಹೋದರೂ ಪಾಲ್ಗೊಳ್ಳುವ ಮನೆ ಹಿರಿಯರ ಅನಿವಾರ್ಯತೆ, ಇವೆಲ್ಲವುಗಳಿಂದ ಭೂಮಿಯಲ್ಲಿ ಗೇಯ್ಮೆ ಮಾಡಿ ಬೆಳೆ ತೆಗೆಯುವ ಶ್ರದ್ಧೆ ಎಲ್ಲರಲ್ಲೂ ಕಡಿಮೆಯಾಗಿ ಪಾಳು ಬಿದ್ದ ಜಮೀನುಗಳು, ಗುರುವಿನ ಸ್ಥಾನ ಅಲಂಕರಿಸುವವರ ಪಂಜರದಲ್ಲಿ ಸಿಕ್ಕಿ ಬಿದ್ದ ಪಕ್ಷಿಯಂತಹ ಅಸಹಾಯಕ ಮನಸ್ಥಿತಿ… ಹೀಗೆ ಸಣ್ಣ ಮುಗ್ಧ ರೈತಾಪಿ ಊರೊಂದು ಕಾಲಕ್ರಮೇಣ ಸ್ಥಿತ್ಯಂತರಕ್ಕೊಳಗಾಗಿ ಒಂದು ರೀತಿಯ ತಲ್ಲಣಕ್ಕೆ ಒಳಗಾದ ಚಿತ್ರಣವಿದೆ. ಲೇಖಕರ ಸಶಕ್ತ ಬರವಣಿಗೆಯ ಪ್ರಭಾವದಿಂದಾಗಿ ನಾವೂ ಸಹ ಅಲ್ಲೊಂದು ಪಾತ್ರವಾಗಿ ತಲ್ಲೀನರಾಗಿಬಿಡುತ್ತೇವೆ.

ಇಲ್ಲಿನ ಕಥಾನಾಯಕ ದಶರಥ. ಆತ ತನ್ನ ಮೂಲದ ಮಣ್ಮನೆಯಿಂದ ತನಗೆ ಹಿಸ್ಸೆಯಾಗಿ ದೊರೆತ ಆಡುಕಳವೆಂಬ ಬಂಗಾರದಂತಹ ನಾಲ್ಕು ಎಕರೆ ಭೂಮಿಯಲ್ಲಿ ಹೆಂಡತಿ ಸಾವಿತ್ರಿ ಹಾಗೂ ಪಕ್ಕದಲ್ಲಿ ಕೆಲಸದ ಹುಮಾಟಿ, ಅವನ ಹೆಂಡತಿ ಕಾಮಾಕ್ಷಿಯೊಂದಿಗೆ ವಾಸವಿದ್ದ. ಅವನಣ್ಣ ಬಿದ್ರಳ್ಳಿಯ ಮಣ್ಮನೆಯಲ್ಲಿರುವ ಅನಾರೋಗ್ಯದ ಕೃಷ್ಣಪ್ಪ, ಹೆಂಡತಿ ನಾಗಜ್ಜಿ, ನಾಲ್ಕು ಜನ ಮಕ್ಕಳು ಸೂರಣ್ಣ, ಹೆಂಡತಿ ಭವಾನಿ, ವಾಸುದೇವ, ಶಾರದಾ ಮತ್ತು ಪರಮೇಶ್ವರ. ಫಲಭರಿತ ಮಣ್ಣಿನ ಆಡುಕಳದಲ್ಲಿ ವಿಶೇಷವಾಗಿ ಗಿಡಮೂಲಿಕೆಗಳು, ಉತ್ತಮ ಗುಣಮಟ್ಟದ ಜೇನು ತುಪ್ಪ, ಕಬ್ಬಿನ ಆಲೆಮನೆ ಮತ್ತು ಭತ್ತದ ಗದ್ದೆಗಳಿದ್ದವು. ಮಣ್ಮನೆಯಿಂದ ಮೂರು ಮೈಲಿ ದೂರವಾದರೂ ತನ್ನದೇ ಸಂಸಾರ ಎಂಬ ಖುಷಿ ಸಾವಿತ್ರಿಗಿತ್ತು. ಒಂದಿಷ್ಟು ವರ್ಷಗಳು ಎಲ್ಲರಂತೆ ದಾಂಪತ್ಯ ನಡೆಸಿದರು. ದಿಢೀರನೆ ಹಾರ್ಮೋನ್ ವ್ಯತ್ಯಾಸದಿಂದ ಆಕೆಗೆ ಗಡ್ಡ ಮೀಸೆಗಳು ಬೆಳೆದು ಎಲ್ಲಿಗೂ ಹೊರಗೆ ಹೋಗದಾದಳು. ಮಕ್ಕಳೂ ಸಹ ಇಲ್ಲದೇ ಹೀಗೆ ಗಂಡಾಗಿ ಬದಲಾದ ವಿಲಕ್ಷಣತೆ ಆಕೆಯನ್ನು ನಿರಾಸೆಗೆ ದೂಡಿ ಒಂದು ಇದ್ದಕ್ಕಿದ್ದಂತೆ ಆಕೆ ಕಣ್ಮರೆಯಾದಳು. ಇದು ದಶರಥನನ್ನು ಖಿನ್ನತೆಗೆ ದೂಡಿದರೂ ಒಬ್ಬನೇ ಬೇಯಿಸಿ ತಿನ್ನುವುದು ರೂಢಿಯಾಯಿತು. ಗದ್ದೆ ಕೆಲಸಕ್ಕೆ ಹುಮಾಟಿ ಮತ್ತು ಕಾಮಾಕ್ಷಿಯರು ಇದ್ದರು.

ಹೀಗಿರುವಾಗ ದಶರಥನ ಮನೆಯಲ್ಲಿ ನಿಧಿಯಿದೆ ಎಂಬ ಗಾಳಿಮಾತು ಹಬ್ಬಿ ಒಂದು ರಾತ್ರಿ ಹುಮಾಟಿ ಇಲ್ಲದೇ ಇರುವಾಗ ಕಳ್ಳರು ಬಂದು ಎಲ್ಲವನ್ನೂ ತಡಕಾಡಿ, ಏನೂ ಸಿಗದ ಕೋಪಕ್ಕೆ ದಶರಥನನ್ನು ವಿವಸ್ತ್ರಗೊಳಿಸಿ ಹೊರಗೆ ಕಟ್ಟಿ ಹಾಕಿ ಮನೆಯ ಎಮ್ಮೆಯನ್ನು ಕದ್ದು, ಅದರ ಕರುವನ್ನು ಅವನ ಹತ್ತಿರ ಬಿಟ್ಟು ಹೋಗುತ್ತಾರೆ. ಕರು ಅವನನ್ನೇ ತನ್ನ ತಾಯಿ ಎಂದು ಎಣಿಸಿ ಮಾಡಿದ ಅವಾಂತರಕ್ಕೆ ಬೆಳಗಾಗುವಷ್ಟರಲ್ಲಿ ದಶರಥ ವಿಪರೀತ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಅವನನ್ನು ಅಕಸ್ಮಾತ್ತಾಗಿ ಅಲ್ಲಿಗೆ ಬಂದ ಗಂಗಣ್ಣ ಎಂಬ ಖಾನಾವಳಿ ಮಾಲೀಕ ಬಚಾವ್ ಮಾಡಿ ತನ್ನಲ್ಲೇ ಇಟ್ಟುಕೊಂಡು ಆರೈಕೆ ಮಾಡುತ್ತಾನೆ. ಈ ವಿಷಯ ಎಲ್ಲ ಕಡೆ ಗುಲ್ಲಾಗುತ್ತದೆ. ಅವಮಾನ ತಡೆಯಲಾಗದೇ ದಶರಥ ಆಡುಕಳ ಬಿಟ್ಟು ಯಲ್ಲಾಪುರ ಪೇಟೆಯಲ್ಲೇ ಮುಕ್ಕಾಂ ಹೂಡುತ್ತಾನೆ. ಇದಕ್ಕೆ ಗಂಗಣ್ಣನ ದುರುದ್ದೇಶಪೂರಿತ ಚಿತಾವಣೆ ಸಹ ಇರುತ್ತದೆ.‌

ಈ ಗಂಗಣ್ಣನೆಂಬ ವ್ಯಕ್ತಿ ಸಕಲ ಕಲಾವಲ್ಲಭ. ನೀರಿನಂತೆ ಹೊಂದಿಕೊಳ್ಳುವ ಗುಣದವನು. ನನಗೆ ನಮ್ಮೂರಿನಲ್ಲಿ ಕಾರ್ಯಗಳನ್ನು ಅಮೂಲಾಗ್ರವಾಗಿ ಸುಧಾರಿಸಿ ಸೈ ಎನ್ನಿಸಿಕೊಳ್ಳುವ ಕೆಲವರ ನೆನಪು ಬಂದಿತು. ಮೊದಮೊದಲಿಗೆ ಊರಿನ ಮದುವೆಗಳನ್ನು ಮೊದಲಿಂದ ಕೊನೆಯವರೆಗೂ ನಿರ್ವಹಣೆ ಮಾಡಿ ಎಲ್ಲರಿಗೂ ಬೇಕಾದವನಾದ ಗಂಗಣ್ಣ ನಿಧಾನವಾಗಿ ಮನೆಯಲ್ಲಿ ನಡೆಸುವ ಮದುವೆಗಳು ಕಡಿಮೆಯಾಗಿ ಛತ್ರಗಳು ಶುರುವಾದಾಗ ಕಗ್ಗಾಡಿನಂತಹ ಹಳ್ಳಿಗಳ ರೈತಾಪಿ ಜನರ ಪೇಟೆಗೆ ಬರುವಾಗಿನ ಆವಶ್ಯಕತೆ ಅರಿತು ಖಾನಾವಳಿ ಜೊತೆಗೆ ಲಾಡ್ಜ್ ತರಹದ, ಎಲ್ಲ ಮಡಿ, ದೈವತಾ ಉಪಾಸನೆಗೆ ಹೊಂದುವಂತೆ ಉಪಾಹಾರ ಗೃಹವನ್ನು ಶುರು ಮಾಡಿ ಲಾಭ ಗಳಿಸುತ್ತಾನೆ. ಸಿಹಿ ಮಾತಿನ ಗಂಗಣ್ಣನಿಂದ ಅದು ಅನೇಕ ಬಗೆಯ ವ್ಯವಹಾರಗಳ ನಡೆಯುವ ತಾಣವಾಗಿ ಬದಲಾಗಿ, ಮದುವೆಗೆ ಗಂಡು ಹೆಣ್ಣು ಹೊಂದಿಸುವ ಸ್ಥಳ, ಪೇಟೆಯ ಸಾಮಾನುಗಳನ್ನು ಒಯ್ಯಲು ಟೆಂಪೋ ಬಾಡಿಗೆಯಿರುವ ಜಾಗ… ಹೀಗೆ ಬಹುಪಯೋಗಿಯಾಗಿತ್ತು. ಸದಾ ಹಣ ಮಾಡುವುದು ಹೇಗೆ ಎಂಬ ಯೋಚನೆಯ ಚಾಲಾಕಿ ಮನುಷ್ಯ, ಪಕ್ಕಾ ವ್ಯವಹಾರಸ್ಥ ಗಂಗಣ್ಣ. ಆದರೆ ಮುಂದೆ ಪೇಟೆಯಲ್ಲಿ ಅನೇಕ ಹೊಟೇಲುಗಳು ಹುಟ್ಟಿಕೊಂಡಾಗ ಮನದೊಳಗೆ ಮಕ್ಕಳಿಲ್ಲದ ದಶರಥನ ಬಂಗಾರದಂತಹ ಆಡುಕಳದ ಜಾಗವನ್ನು ತನಗೆ ಬರೆಸಿಕೊಳ್ಳುವ ಹುನ್ನಾರ ಅವನದಿತ್ತು. ದಶರಥನಿಗೆ ಚಿಕಿತ್ಸೆ ಮಾಡುವ ಮದ್ಗುಣಿ ಡಾಕ್ಟರ್ ಸಹ ತಮ್ಮ ಆಯುರ್ವೇದದ ಔಷಧೀಯ ಸಸ್ಯ, ತೊಗಟೆ, ಬೇರುಗಳನ್ನು ಆಡುಕಳದ ಕಾಡಿನಿಂದ ಪಡೆದುಕೊಳ್ಳುತ್ತಿದ್ದರು. ಅಲ್ಲದೇ ವರ್ಷಂಪ್ರತಿ ಚೌತಿಗೆ ಗಣಪತಿ ಮಾಡಲು ಆವೆಮಣ್ಣು ಸಹ ಊರವರಿಗೆ ಮತ್ತು ಕಸುಬುದಾರರಿಗೆ ದೊರಕುತ್ತಿತ್ತು. ಜೇನುತುಪ್ಪ ಮತ್ತು ಕಬ್ಬಿನ ಕಟಾವಿನ ಹೊತ್ತು ಆಲೆಮನೆ ಎದ್ದಾಗ ಹಾಲು, ನೊರೆ ಬೆಲ್ಲ, ಗಟ್ಟಿ ಬೆಲ್ಲ ಎಲ್ಲವೂ ಎಲ್ಲರಿಗೂ ಸಿಗುತ್ತಿತ್ತು. ಇದ್ಯಾವುದಕ್ಕೂ ದಶರಥ ಬೇಡ ಎಂದವನಲ್ಲ. ಹಣವನ್ನು ವಿಧಿಸಿದವನಲ್ಲ. ಹಾಗಾಗಿ ಮದ್ಗುಣಿಯವರೂ ದಶರಥನಲ್ಲಿ ಜಾಗ ಮಾರುವ ಹಾಗಿದ್ದರೆ ಮದ್ದಿನ ಸಸ್ಯಗಳ ನರ್ಸರಿ ಮಾಡಲು ತಮಗೆ ಕೊಡುವಂತೆ ವಿನಂತಿಸುತ್ತಾರೆ. ಹೀಗೆ ಆಡುಕಳದ ಉತ್ಪನ್ನಗಳನ್ನು ಧರ್ಮಾರ್ಥ ಕೊಡುವುದು ಗಂಗಣ್ಣನಿಗೆ ಇಷ್ಟವಾಗುತ್ತಿರಲಿಲ್ಲ. ಗಂಗಣ್ಣನಿಗೆ ತನ್ನ ಸುಪ್ತ ಆಸೆಯನ್ನು ದಶರಥನ ಮೂಲಕ ಉಪಾಯವಾಗಿ ಪೂರೈಸುವ ಸನ್ನಾಹದಲ್ಲಿರುವಾಗಲೇ ಇಂತಹ ಮಾತು ಮದ್ಗುಣಿಯವರಿಂದ ಬಂದದ್ದು ಹಿಡಿಸುವುದಿಲ್ಲ. ದಶರಥ ಮಾತ್ರ ತನಗೆ ಆಡುಕಳ ಬಿಟ್ಟರೆ ಬೇರೆ ಏನಿದೆ ಎಂಬಂತೆ ಮಾತಾಡಿ ತಳ್ಳಿ ಬಿಡುತ್ತಾನೆ. ಊರಲ್ಲಿ ಅಡಿಕೆ ಎಲ್ಲ ಕಡೆ ನೆಟ್ಟು ಸಂಸಾರ ವಿನಾಶದಂಚಿಗೆ ಸಾಗಿದ್ದನ್ನು ಕಂಡು ಭತ್ತ ಮಾತ್ರ ಬೆಳೆಯುವ ನಿರ್ಧಾರ ಮಾಡಿದ್ದ ದಶರಥ.

ದಶರಥನ ಅನುಪಸ್ಥಿತಿಯಲ್ಲಿ ಕೆಲಸದಾಳು ಹುಮಾಟಿಯ ಕಾರುಬಾರು. ಅವನಿಗೆ ಆಡುಕಳದ ಜಮೀನೇ ಜೀವ, ಜೀವನ ಎಲ್ಲ… ಹಾಗಾಗಿ ಮುಂದೆಂದೋ ಒಂದು ದಿನ ತನಗೇ ಆ ಭೂಮಿಯನ್ನು ಧಣಿ ಬರೆಯಬಹುದೇನೋ ಎಂಬ ಕ್ಷೀಣ ಆಸೆ. ಈ ಕಡೆ ಕೃಷ್ಣಪ್ಪನ ಮಗ ಸೂರಣ್ಣನಿಗೆ ಮೂಲದಿಂದ ಕವಲಾದ ವಂಶದ ಕುಡಿಯಿಲ್ಲದ ಚಿಕ್ಕಪ್ಪನ ಜಾಗ ತನಗೇ ಸಿಕ್ಕಿದರೆ ಎಂಬ ಅತ್ಯಾಸೆ. ಅದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರೂ ಅವನ ನಯ ಮಾತುಗಳು, ಹುಸಿ ಗೌರವದ ಹಿಂದಿನ ಭಾವ ಅರಿಯದಷ್ಟು ಮೂರ್ಖನಲ್ಲ ದಶರಥ.ಹೀಗೆ ಕುಟುಂಬದವರು, ಹೊರಗಿನವರು… ಎಲ್ಲರಿಗೂ ಆ ಭೂಮಿಯ ಮೇಲೆಯೇ ಕಣ್ಣು. ಮುಂಜಾಗ್ರತಾ ಕ್ರಮವಾಗಿ ಸೂರಣ್ಣ ಮನೆಯ ಎಲ್ಲರ ಜೊತೆ ಮಾತಾಡಿ ಶಾರದೆಯಿಂದ ದಶರಥನ ಮೇಲೆ ಕೋರ್ಟ್ ಕೇಸ್ ಮಾಡುತ್ತಾನೆ. ಈ ಹಂತದಲ್ಲಿ ಬರುವ ಅಂಚೆಪೇದೆ ಭೈರನ ಪಾತ್ರದ ಪ್ರಾಮಾಣಿಕತೆ, ತಾ ನೀಡುವ ಪತ್ರಗಳು ಕೆಲ ಸಲ ಮಾಡುವ ಅನಾಹುತಗಳಿಂದ ನೋಯುವ ದ್ವಂದ್ವ ಗಮನ ಸೆಳೆಯುತ್ತದೆ. ಮನೆಯವರ ಹುನ್ನಾರ ದಶರಥನಿಗೆ ನೋವು ತಂದರೂ ಶಾರದೆ ಮಾತುಗಳನ್ನು ಕೇಳಿ ಸಮಾಧಾನಗೊಂಡು ಸುಮ್ಮನಾಗುತ್ತಾನೆ.

ಕಾದಂಬರಿಯ ವಿಲಕ್ಷಣತೆಗಳಲ್ಲಿ ಒಂದು; ಇಲ್ಲಿ ಸಾವಿತ್ರಿ ಮಾಯವಾದಂತೆ ಮುಂದೆ ಪ್ರತೀ ವರ್ಷ ಆಡುಕಳದ ಮರದ ಜೇನುತುಪ್ಪ ತೆಗೆಯುವ ಬಕಾಲನೂ ಕಾಣೆಯಾಗುತ್ತಾನೆ. ಅತೀ ಕಷ್ಟದ ನಾಜೂಕಿನ ಆ ಕೆಲಸ ಮಾಡುವ ಅವನಂತಹ ಕೌಶಲ್ಯ ಇರುವ ವ್ಯಕ್ತಿ ಒಬ್ಬ ಹೀಗೆ ಕಾಣದಂತಾಗಿದ್ದು ಬೇಸರ ತಂದಿತು. ಇನ್ನೊಂದು ಹುಮಾಟಿಯ ಹೆಂಡತಿ ಕಾಮಾಕ್ಷಿಯ ಮೈಯಲ್ಲಿ ದೇವಿ ಬರುವುದು. ಆಡುಕಳದಲ್ಲಿ ಇದ್ದ ಯಕ್ಷಿಯು ಆಕೆಯ ಮೈಯಲ್ಲಿ ಆವೇಶವಾಗಿ ಬಂದು ಅವಳು ಸಮಸ್ಯೆಗಳನ್ನು ಬಗೆಹರಿಸುವ ವಿಷಯ ಎಲ್ಲ‌ಕಡೆ ಹರಡಿ ತಿಂಗಳಿಗೆರಡು ಸಲ ದರ್ಶನ ನೀಡುವುದು. ಅದಕ್ಕೆ ಊರು ಪರವೂರುಗಳಿಂದ ಜನರು ಬರತೊಡಗಿದರು. ಆಕೆ ತನಗೆ ಅರಿಯದ ಮರಾಠಿ, ಮಲೆಯಾಳಿ ಭಾಷೆಗಳನ್ನು ಮಾತಾನಾಡುವುದು. ಈ ಯಕ್ಷಿಯ ಒಂದು ವಿಗ್ರಹ ಕೃಷ್ಣಪ್ಪನ ಬಳಿಯಿದ್ದು ಆತ ಸಾಯುವ ಮೊದಲು ಅದನ್ನು ದಶರಥನ ಬಳಿ ಕೊಟ್ಟು ಇದಕ್ಕೊಂದು ಗುಡಿ ನಿರ್ಮಿಸಬೇಕೆಂದೂ, ಕುಟುಂಬದ ಎಲ್ಲ ತೊಂದರೆಗಳಿಗೆ ಮೂಲವೇ ಅದರ ಪೂಜೆ ನಿಂತಿರುವುದೆಂದೂ ಹೇಳುತ್ತಾನೆ. ಕಾಮಾಕ್ಷಿಯಲ್ಲಿ ಪರಿಹಾರ ಕೇಳುವ ಜನರು ಹಾಕುವ ಕಾಣಿಕೆಗಳಿಂದ ಡಬ್ಬಿ ತುಂಬತೊಡಗಿತು. ಅಲ್ಲೊಂದು ವ್ಯಾಪಾರದ ಸಾಧ್ಯತೆ ಗಂಗಣ್ಣ ಮತ್ತು ಸೂರಣ್ಣ ಇಬ್ಬರ ಕಣ್ಣುಗಳಿಗೂ ಗೋಚರಿಸುತ್ತದೆ. ದಶರಥ ಖಾನಾವಳಿ ಬಿಟ್ಟು ಆಡುಕಳಕ್ಕೆ ಬಂದು ಉಳಿಯುತ್ತಾನೆ.

ಈ ಮಧ್ಯೆ ಬೀಳುವ ಸ್ಥಿತಿಯನ್ನು ತಲುಪಿದ ಮಣ್ಮನೆಯನ್ನು ಬಿಚ್ಚಿ ಹೊಸದಾಗಿ ಕಟ್ಟಿಸುವ ಯೋಚನೆ ಬರುತ್ತದೆ ಸೂರಣ್ಣನಿಗೆ. ವಾಸ್ತವವಾಗಿ ಅವನಿಗೆ ತನ್ನ ತಮ್ಮಂದಿರು ಆಸ್ತಿಯಲ್ಲಿ ಪಾಲು ಕೇಳುವುದು ಹಾಗೂ ತನ್ನ ಹೆಣ್ಣುಮಕ್ಕಳು ಇಬ್ಬರಿಗೂ ಮದುವೆಯಾಗುವವರೆಗೂ ಬೇರಾಗುವುದು ಇಷ್ಟವಿರಲಿಲ್ಲ. ಅವನೆಲ್ಲ ಯೋಚನೆಗಳಿಗೆ ಚಿತಾವಣೆ, ಎಲ್ಲರೆದುರೂ ನಯವಾಗಿ ವರ್ತಿಸುವ ಸೋಗಲಾಡಿತನದ‌ ಹೆಂಡತಿ ಭವಾನಿಯದ್ದು.‌ ಕೇಮು ಮೇಸ್ತ ತನ್ನಳಿಯ ಪಾಂಡುರಂಗನೊಡನೆ ಸೇರಿ ಮನೆ ಬಿಚ್ಚುತ್ತಾನೆಯೇ ಹೊರತು ಕೆಲಸ‌ ಮುಂದುವರೆಯದೇ ಅಲ್ಲೇ ನಿಲ್ಲುತ್ತದೆ. ದಶರಥನಿಗೆ ಬೇಕಾದ್ದೂ ಅದೇ.‌ಮಣ್ಮನೆ ಪಾಳು ಬಿದ್ದ ಹಾಗಾಗುತ್ತದೆ. ಶಾರದೆ ಮೊದಲೇ ದಶರಥನ ಮನೆಗೆ ಹೋಗಿರುತ್ತಾಳೆ.

ಆಡುಕಳದ ಗದ್ದೆ ಬೇಸಾಯ ಮಾಡುತ್ತಾ ಮುಂದೆ ಒಂದು ತರಹ ಮದುವೆಯಿಲ್ಲದೇ ಮಾನಸಿಕವಾಗಿ ಸೊರಗಿದ ವಾಸುದೇವನಿಗೆ ಕಲಘಟಗಿಯ ಹುಡುಗಿಯಾದ ಚನ್ನಮ್ಮನೊಂದಿಗೆ(ಮಂಜುಳಾ) ಮದುವೆಯಾಗುತ್ತದೆ. ಆಗುವ ಮೊದಲು ಶುದ್ಧ ಮಾಡಲು ಜಾತಿ ಬಾಂಧವರಿಂದ ದತ್ತಕ ತೆಗೆದುಕೊಳ್ಳುವ ಪದ್ಧತಿ ಅನುಸರಿಸಲಾಗುತ್ತದೆ. ಅದಕ್ಕೂ ಆ ದಂಪತಿ ಐವತ್ತು ಸಾವಿರ ವಿಧಿಸುತ್ತಾರೆ. ಎರಡನೇ ತಮ್ಮ ಪರಮೇಶ್ವರನ ಮದುವೆಯ ಸುದ್ದಿ ಯಾರೂ ಎತ್ತುವುದಿಲ್ಲ. ಮುಂದೆ ಮಳೆಗಾಲದಲ್ಲಿ ಎಲ್ಲರೂ ಆಡುಕಳದ ಮನೆಗೆ ಹೋಗಿ ಉಳಿಯುತ್ತಾರೆ. ಮಣ್ಮನೆ ಬಿಚ್ಚಿದ್ದು ನಾಗಜ್ಜಿ ಮತ್ತು ದಶರಥನಿಗೆ ಇಷ್ಟವಿರುವುದಿಲ್ಲ.

ಯಕ್ಷಿಯ ಮೂರ್ತಿಯನ್ನು ಮರದಡಿ ಪ್ರತಿಷ್ಠಾಪನೆ ಮಾಡಲು ಯಜ್ಞೇಶ್ವರರಿಗೆ ಹೇಳಿ ಕಳುಹಿಸಿ ಮುಹೂರ್ತವಿಡಿಸಿ ಉತ್ತಮ ಭರ್ಜರಿಯಾದ ವೈದಿಕ ಸಮಾರಂಭ ಕುಟುಂಬದ ಎಲ್ಲ ಸದಸ್ಯರೊಡಗೂಡಿ ನಡೆಯುತ್ತದೆ. ನೂರಾರು ಜನರಿಗೆ ಸಂತರ್ಪಣೆಯಾಗುತ್ತದೆ. ದಶರಥನಿಗೆ ಸಂತೋಷವಾಗುತ್ತದೆ. ಮುಂದೆ ಇದಕ್ಕಾಗಿ ಒಂದು ಗುಡಿ ಕಟ್ಟುವ ಜವಾಬ್ದಾರಿ ಊರವರ ಮೇಲಿದೆ ಎಂದು ಅವರು ಹೇಳುತ್ತಾರೆ. ಸನ್ಯಾಸಿಯಂತಿರುವ ದಶರಥನೇ ಅಲ್ಲಿನ ಗುರು ಎಂದು ಅಪ್ಪಣೆ ಕೊಡಿಸುತ್ತಾರೆ. ಅವರಿಗೆ ಕಾಮಾಕ್ಷಿಯ ಹಿನ್ನೆಲೆ ನೆನಪಾಗುತ್ತದೆ. ಆಕೆಯನ್ನು ಈ ಹಿಂದೆ ಕಾಸರಗೋಡಿನಲ್ಲಿ ನೋಡಿ ಅವಳ ಬದುಕಿಗೊಂದು ದಾರಿ ತೋರಿದರೂ ಈಗ ಪರಿಚಯ ಇಲ್ಲದವಳಂತೆ ಆಡುವ ಪರಿ ಅಚ್ಚರಿ ತರುತ್ತದೆ. ಅಂತರಂಗದ ಕಸುಬಿನ ಗುಟ್ಟು ಎಂದು ಸುಮ್ಮನಾಗುತ್ತಾರೆ. ಈ ಹಂತದಲ್ಲಿ ಆಕೆಯ ಮೈ ಮೇಲೆ ದೇವಿ ಬರುವುದು ನಿಜವೇ ಎನ್ನುವ ಭಾವ ಓದುಗರ ಮನಸ್ಸನ್ನು ಕಾಡುತ್ತದೆ.ಗುಡಿ ಕಟ್ಟಿದರೆ ಬರಬಹುದಾದ ಉತ್ಪಾದನೆಯನ್ನು ಊಹಿಸಿದ ಸೂರಣ್ಣನಿಗೆ ಒಳಗೊಳಗೆ ಬಹಳ ಖುಷಿಯಾಗುತ್ತದೆ.

ಈ ಮಧ್ಯೆ ಕಾಮಾಕ್ಷಿಯಿಂದ ಅನುಗ್ರಹೀತನಾದ ತಮಿಳು ಸಿನಿಮಾ ನಟ ಕಾಂತರಾಜ ಎಂಬ ಗಂಗಣ್ಣನ ಬಾಲ್ಯದ ಸ್ನೇಹಿತ ದೇವಿಗೆ ಗುಡಿ ಕಟ್ಟಿಸುವ ಅಭಿಲಾಷೆ ಹೊತ್ತು ಆಡುಕಳಕ್ಕೆ ಬರುತ್ತಾನೆ. ಅಲ್ಲಿ ಜನಸಾಗರ ಸೇರಿ ಅವನಿಗೆ ಸನ್ಮಾನ ನಡೆಸುತ್ತದೆ. ಗಂಗಣ್ಣ ತನ್ನದೇ ಈ ವಿಷಯದಲ್ಲಿ ಹೆಚ್ಚುಗಾರಿಕೆ ಎಂಬುದನ್ನು ತೋರಿಸಲು ತುಂಬ ಪ್ರಯತ್ನಪಡುತ್ತಾನೆ.ಸೂರಣ್ಣ ಮಾತುಗಾರಿಕೆಯಿಂದ ಅವನ ಮೇಲ್ಮೈಯನ್ನು ಜನರೆದುರು ತಡೆಯುತ್ತಾನೆ. ಗುಡಿಯನ್ನು ತನ್ನ ಹಣದಿಂದ ಕಟ್ಟಿಸುವ ನಿರ್ಧಾರ ಪ್ರಕಟಿಸುವ ಕಾಂತರಾಜ ತದನಂತರ ಕಾಮಾಕ್ಷಿಯ ಗುಡಿಸಲಿಗೆ ಹೋಗುತ್ತಾನೆ. ಅವಳ ನಿರುತ್ಸಾಹ ಕಂಡು ಆತಂಕಿತನಾಗುತ್ತಾನೆ. ಅವಳಿಗೆ ದೇವಿಗೆ ಗುಡಿ ಕಟ್ಟಿಸಿದರೆ ತನ್ನ ಮಹತ್ವ ಕಡಿಮೆಯಾಗುವುದು ಖಂಡಿತಾ ಎನ್ನಿಸುತ್ತದೆ. ಮತ್ತು ಕಾಂತರಾಜ ತನ್ನನ್ನು ಕಾಣಲು ಮೊದಲು ಬರದೇ ಇರುವುದೂ ಕೋಪ ತರಿಸುತ್ತದೆ. ಆಮೇಲೆ ಅವಳು ಸ್ವಲ್ಪ ಹೊತ್ತಿನ ಮಟ್ಟಿಗೆ ಮಾಯವಾಗುತ್ತಾಳೆ. ಎತ್ತ ಹುಡುಕಿದರೂ ಕಾಣದ ಎಲ್ಲರೂ ಗಾಬರಿಯಾದಾಗ ಆಕೆ ರಾತ್ರಿ ಹೊತ್ತು ತನ್ನಷ್ಟಕ್ಕೇ ಮರಳಿ ಬರುತ್ತಾಳೆ. ಅವಳ ಮೈಮೇಲೆ ಮರುದಿನ ದೇವಿ ಬಂದು ಗುಡಿ ಕಟ್ಟುವುದಾದರೆ ತಾನೀ ಊರನ್ನೇ ಬಿಟ್ಟು ಹೋಗುವೆ ಎಂದೂ, ತಾನು ಈ ಹೆಣ್ಣು(ಕಾಮಾಕ್ಷಿ) ಯ ಮೈಮೇಲೆ ಮಾತ್ರ ಇರುವವಳು, ಕಟ್ಟುವ ಗುಡಿಗೆ ಗುರು ಮಂದಿರ ಎಂದು ಕರೆಯಬೇಕೆಂದು ಹೇಳುತ್ತದೆ. ಸೂರಣ್ಣನಾದಿಯಾಗಿ ಎಲ್ಲರೂ ಒಪ್ಪಬೇಕಾಗುತ್ತದೆ. ಈ ವಿಷಯ ಎಲ್ಲೆಡೆ ಪ್ರಚಾರವಾಗುತ್ತದೆ‌.

ಇಲ್ಲಿಂದ ಕಥೆಗೆ ತಿರುವು ಸಿಗುತ್ತದೆ. ಕಾಂತರಾಜ ಕಳಿಸಿದ ಕಟ್ಟುಮಸ್ತಾದ ಆಳುಗಳು ಬಂದು ಪಂಚಾಂಗ ಹಾಕಿ ಸಿದ್ಧಪಡಿಸಿದ ಕಲ್ಲಿನ ಶಿಲೆಗಳ ಮೂಲಕ ಗುರು ಮಂದಿರ, ಧ್ಯಾನ ಮಂದಿರ, ಚಂದ್ರ ಶಾಲೆ, ಭೋಜನ ಶಾಲೆ… ಇತ್ಯಾದಿಗಳನ್ನು ಬೇಗನೇ ಕಟ್ಟುತ್ತಾರೆ. ದಶರಥನೇ ಮಹಾ ಗುರುವಾಗಿ, ಸೂರಣ್ಣ ದೇವಿ ಹೇಳಿದ್ದನ್ನು ಗುರುಗಳಿಗೆ ತಲುಪಿಸುವ ವಾಹಕನಾಗಿ ಕೆಲಸ ಮಾಡುತ್ತಾರೆ. ದಿನಗಳೆದಂತೆ ಹೆಚ್ಚಿದ ಭಕ್ತಗಣದಿಂದ ಹಣದ ಹೊಳೆ ಹರಿಯುತ್ತದೆ. ಪರಮೇಶ್ವರ ಲೆಕ್ಕ ಪತ್ರ ನೋಡಿಕೊಂಡರೆ, ವಾಸುದೇವ ವೇದ ಪಾಠ ಶಾಲೆ ಮತ್ತಿತರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ನಿತ್ಯ ಅನ್ನದಾನವೂ ಶುರುವಾಗುತ್ತದೆ. ಕಾಮಾಕ್ಷಿಯ ಮೂಲಕ ಪರಿಹಾರ ನೀಡುವ ದೇವಿಯ ದೆಸೆಯಿಂದ ಭವಾನಿ ಮತ್ತು ಸೂರಣ್ಣರ ಅದೃಷ್ಟ ಬದಲಾಗುತ್ತದೆ.ಭವಾನಿ ಗಂಟು ಮಾಡಿಡುತ್ತಾ ಬೀರುವಿನಲ್ಲಿ ಜೋಡಿಸಿ ಸರ್ಪದಂತೆ ಕಾಯುತ್ತಾಳೆ.

ಇದರ ಕುರುಹು ಪರಮೇಶ್ವರನಿಗೆ ಸಿಗುತ್ತದೆ. ವಾಸುದೇವ ಮತ್ತು ಅವನ ಹೆಂಡತಿ ಮಂಜುಳಾ ಸಹಿತ ಎಲ್ಲರೂ ಗುರುಮಂದಿರಕ್ಕೆ ಬಂದು ನೆಲೆ ನಿಲ್ಲುತ್ತಾರೆ. ನಾಗಜ್ಜಿ ಮಾತ್ರ ದಶರಥನ ಮನೆಯಲ್ಲಿ ಇರುತ್ತಾಳೆ. ಮಂಜುಳಾ ಗರ್ಭವತಿಯಾಗುತ್ತಾಳೆ. ಅವಿವಾಹಿತನಾಗಿ ಅವರ ಸಂಸಾರ ಕಂಡು ಮರುಗುವ ಪರಮೇಶ್ವರನಿಗೆ ತಾನು ಮಾಡುವ ಕೆಲಸದಲ್ಲಿ ಸಮಾಧಾನವಿರದೇ ಅಂಗಡಿ ಇಡಲು ಆಸ್ತಿಯಲ್ಲಿ ಪಾಲು ಕೇಳುತ್ತ ಗಲಾಟೆ ಮಾಡುತ್ತಾನೆ.‌ ಈ ಮಧ್ಯೆ ದೃಷ್ಟಿ ಮಂಕಾಗುವ ಭವಾನಿ ತಡವಾಗಿ ಹೋದ ತಪ್ಪಿಗೆ ಆಪರೇಶನ್ ನಂತರ ಸಂಪೂರ್ಣ ಕುರುಡಿಯಾಗುತ್ತಾಳೆ‌. ಇದು ಸೂರಣ್ಣನ ಧೈರ್ಯವನ್ನು ಉಡುಗಿಸುತ್ತದೆ. ಭವಾನಿಯ ಸ್ವಾರ್ಥಕ್ಕೆ ತಕ್ಕ ಶಿಕ್ಷೆಯಾಯಿತು ಎಂದು ಪರಮ ಅವಳ ಅಂಧತ್ವವನ್ನು ಹಂಗಿಸುತ್ತಾನೆ.‌ಮತ್ತೆ ಹೊರಟು ಹೋಗುತ್ತಾನೆ.

ಇನ್ನೊಂದು ಕಡೆ ದಶರಥನಿಗೆ ತನಗಿದ್ದ ಸಾಮಾನ್ಯ ಮನುಷ್ಯನ ಸ್ವಾತಂತ್ರ್ಯ ಕಸಿದ ಈ ಗುರು ಪಟ್ಟ ಹಿಂಸೆಯೆನ್ನಿಸುತ್ತದೆ. ಸೂರಣ್ಣನ ಬಳಿ ಗೋಗರೆದರೂ ಹಣದ ರುಚಿ ಕಂಡ ಅವನು ಬಾಯಿ ಮಾಡಿ ಸುಮ್ಮನಿರಿಸುತ್ತಾನೆ. ಊರವರೆಲ್ಲ ನಿನ್ನನ್ನು ಗುರುವೆಂಬ ಒಂದು ಪ್ರಭಾವಲಯದಲ್ಲಿ ಶ್ರೇಷ್ಠ ವ್ಯಕ್ತಿಯೆಂದು ಭಾವಿಸುವಾಗ ನೀನು ಪಟ್ಟ ಬಿಡಲು ಅಸಾಧ್ಯ ಎನ್ನುತ್ತಾನೆ. ತನ್ನ ಅಸಹಾಯಕತೆಯನ್ನು ಶಾರದೆಯಲ್ಲಿ ಮಾತ್ರ ತೋಡಿಕೊಳ್ಳುವ ಅವಕಾಶ ಸಿಗುತ್ತದೆ ಅವನಿಗೆ. ಈ ಸಂದರ್ಭ ಓದುಗರಲ್ಲಿ ವಿಷಾದ ಹುಟ್ಟಿಸುತ್ತದೆ ಜೊತೆಗೆ ಮರುಕವನ್ನೂ.

ದಿನಗಳೆದಂತೆ ತನ್ನ ಕೋಣೆಯ ಬಂಧನದಲ್ಲಿ ಸೂರಣ್ಣನ ಕೈ ಬೊಂಬೆಯಂತಾಡುವ ಸ್ಥಿತಿಯಲ್ಲಿ ಉಸಿರು ಕಟ್ಟುವ ಸ್ಥಿತಿಯಿಂದ ಪಾರಾಗಲೇನೋ ಎಂಬಂತೆ ದಶರಥ ಒಂದು ದಿನ‌ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾನೆ. ಸಾವಿತ್ರಿ, ಬಕಾಲರೊಂದಿಗೆ ದಶರಥನೂ ಆಡುಕಳದ ವಿಚಿತ್ರ ವಿದ್ಯಮಾನಕ್ಕೆ ಮತ್ತೊಂದು ಉದಾಹರಣೆಯಾಗುತ್ತಾನೆ. ಆ ಸಂದರ್ಭದಲ್ಲಿಯೂ ಎಲ್ಲಿ ತಾನು ಕಟ್ಟಿದ ನಂಬಿಕೆಯ ಸೌಧ ಕುಸಿದು ಬೀಳುವುದೋ, ಸಂಪಾದನೆಗೆ ಪೆಟ್ಟು ಬೀಳುವುದೋ ಎಂಬ ಅಳುಕಿನಿಂದ ಯಾರಲ್ಲೂ ವಿಷಯ ಹಬ್ಬಿಸದೇ ಆದಷ್ಟು ಅವನನ್ನು ಗುಪ್ತವಾಗಿ ಹುಡುಕುವ ಪ್ರಯತ್ನ ಮಾಡುತ್ತಾನೆ ಸೂರಣ್ಣ. ಆದರೆ ದಶರಥ ಗುರು ಮಂದಿರ ತೊರೆದದ್ದು ಎಲ್ಲ ಕಡೆ ನಿಧಾನವಾಗಿ ಹಬ್ಬುತ್ತದೆ. ಎಲ್ಲರಿಗಿಂತ ಹೆಚ್ಚು ಸೂರಣ್ಣ ಹತಾಶನಾಗುತ್ತಾನೆ.‌

ಅಣ್ಣ ತಮ್ಮಂದಿರು,‌ದಾಯಾದಿಗಳ ನಡುವಣ ಆಸ್ತಿಗಾಗಿ ಕಲಹ ಹಳ್ಳಿಗಳಲ್ಲಿ ಈಗ ಸಾಮಾನ್ಯವಾಗಿದೆ. ಇದು ಆಧುನಿಕತೆಯ ದುರಂತ ಎಂದೇ ಹೇಳಬಹುದು. ಲಾಭಕ್ಕಾಗಿ ತನ್ನ ಅಳತೆಗೆ ಸಿಗುವ ಪ್ರತಿಯೊಂದನ್ನೂ ಅದು ಭೂಮಿಯಾಗಲೀ, ಬೇರೆ ಏನೇ ಇರಲಿ, ಹಣದ ಸ್ವಾರ್ಥಕ್ಕೆ ಪರಿವರ್ತನೆ ಮಾಡಬಯಸುವ ಮನುಷ್ಯ ಕೆಟ್ಟ ಬುದ್ಧಿಗೆ ಇಲ್ಲಿನ ಕಥಾವಸ್ತು ಕನ್ನಡಿ ಹಿಡಿಯುತ್ತದೆ. ಓದುತ್ತಾ ಹೋದಂತೆ ನನಗೆ ಕಂಡು ಕೇಳಿದ ಅನೇಕ ಘಟನೆಗಳು ನೆನಪಾಗತೊಡಗಿದವು. ಹೀಗಾಗಿ ಪಿತ್ರಾರ್ಜಿತ ಆಸ್ತಿ ಇಲ್ಲದೇ ಹೋದರೇನೆ ಸಂಬಂಧಗಳ ನಡುವಿನ ನೈಜತೆ ಉಳಿದೀತೇನೋ ಎಂದು ಭಾವಿಸುವಂತಾಗಿದೆ. ಆದ ಕಾರಣವೇ ಕಾದಂಬರಿ ಈ ನೆಲೆಯಲ್ಲಿ ನನ್ನನ್ನು ಮುಟ್ಟಿತು.

ನಾನು ಕಂಡಂತೆ ಈ ಕಾದಂಬರಿಯ ವೈಶಿಷ್ಟ್ಯ ಏನೆಂದರೆ ಯಾವ ಕೊಂಡಿಯೂ ತಪ್ಪದ ಹಾಗೆ ಕಥೆಯ ನೇಯ್ಗೆ. ಬರುವ ಪಾತ್ರಗಳನ್ನು ಅಲ್ಲಲ್ಲೇ ಬಿಡದೇ ಒಂದು ಕೊನೆಯನ್ನು ಮುಟ್ಟಿಸಿರುವುದು. ಉದಾಹರಣೆಗೆ ಕಥೆಯ ಶುರುವಲ್ಲೇ ಬರುವ ದಶರಥನ ಮಾನಭಂಗ ಪ್ರಕರಣದ ರೂವಾರಿ ಯಾರು ಎಂಬ ಗಂಗಣ್ಣನ ಪ್ರಶ್ನೆಗೆ (ಊರವರ ಅಪವಾದದಿಂದ ಪಾರಾಗಲು ಕೇಳುತ್ತಾನೆ) ದೇವಿ ರೂಪದ ಕಾಮಾಕ್ಷಿಯು ಅನ್ನವನ್ನು ಹಣಕ್ಕೆ ಮಾರುವವನು ಎಂಬ ಉತ್ತರ ಕೊಡುತ್ತಾಳೆ. ನೆರೆದ ಜನರ ಎದುರು ಅವನಿಗೆ ಮುಖಭಂಗವಾಗುತ್ತದೆ. ತನಗಿಂತ ಕಾಮಾಕ್ಷಿಯೇ ಸ್ವಚ್ಛ ಮನಸ್ಸಿನ ಪ್ರಾಮಾಣಿಕಳು. ಆಕೆ ಯಾವ ವೈಭೋಗವನ್ನೂ ಬಯಸದೇ ಗುಡಿಸಲಲ್ಲೇ ಇರಲು ಇಚ್ಛಿಸಿ ದೇವಿಯ ಹರಿವು ತನ್ನಲ್ಲೇ ಇರುವಂತೆ ನೋಡಿಕೊಂಡಳು ಎಂದು ದಶರಥ ಮರುಗುತ್ತಾನೆ. ತನ್ನ ಹುಸಿ ಬೂಟಾಟಿಕೆಯ ಬದುಕನ್ನು ಅವನ ಅಂತಃಸಾಕ್ಷಿ ಒಪ್ಪದೇ ಹೋಗುತ್ತದೆ.‌ ಹುಮಾಟಿಗೆ ದೇವಿಯ ಆವೇಶ ಬರುವ ಕಾಮಾಕ್ಷಿಯಿಂದ ತನ್ನ ಹೆಂಡತಿ ಎಲ್ಲೋ ಕಳೆದುಹೋಗುತ್ತಾಳೆ. ಕಾರಣ ಅವಳ ಬ್ರಹ್ಮಚರ್ಯದ ನಿಷ್ಠೆ, ಮಡಿ, ಆಚಾರ. ಆದರೆ ಅದು ಅವನ‌ ಕೊರಗಿಗೆ ಕಾರಣವಾಗದೇ ಊರವರ ಎದುರಲ್ಲಿ ಹೆಮ್ಮೆಗೆ ಮೂಲವೆನ್ನಿಸುತ್ತದೆ.

ಸಾವಿತ್ರಿ ಏನಾದರೂ ತನ್ನ ತವರಾದ ಆವರ್ಸೆಗೆ‌ ಹೋದಳೇನೋ ಎಂದು ಹುಡುಕುವ ಶಾರದೆ ಮತ್ತು ಸೂರಣ್ಣನಿಗೆ ನಿರಾಶೆಯಾಗುತ್ತದೆ. ಅವಳ ನಾಪತ್ತೆಗೆ ದೇಹ ವಿರೂಪತೆಯ ಕಾರಣವನ್ನು ಊಹಿಸಬಹುದಾದರೂ, ಬಕಾಲನ ನಾಪತ್ತೆ ಒಂದು ನಿಗೂಢವಾಗಿ ಉಳಿದು ಬಿಡುತ್ತದೆ. ಕಾದಂಬರಿಯಲ್ಲಿ ಬಕಾಲನೊಂದಿಗೆ ಉಳಿದವರು ಜೇನು ತೆಗೆಯುವ, ಗಾಣದ ಮೂಲಕ ಕಬ್ಬಿನಿಂದ ಬೆಲ್ಲ ಮಾಡುವ, ಮದುವೆ ತಯಾರಿಯ ಪ್ರಸಂಗಗಳ ತಳಮೂಲದ ವರ್ಣನೆ ಖುಷಿ ಕೊಡುತ್ತದೆ. ಲೇಖಕರ ಅನುಭವದ ಮೂಸೆಯಿಂದ ಹೊರಬಂದಂತೆ ಕಾಣುತ್ತದೆ.

ಆಡುಕಳದ ಯಜಮಾನನಾದ ದಶರಥನ ಕಣ್ಣೆದುರೆ ಅವನ ಜಮೀನೆಲ್ಲ ಹಡೀಲು ಬಿದ್ದು, ದೇವರ ಹೆಸರಲ್ಲಿ ದುಡ್ಡು ಮಾಡುವ ಕೆಟ್ಟ ಚಾಳಿ ಹುಟ್ಟಿದ್ದು, ಅದಕ್ಕೆ ಅವನೂ ಸಹ ಕಾರಣವಾಗಬೇಕಾದ ದುರಂತ ನಮ್ಮಲ್ಲೂ ವಿಷಾದವನ್ನು ಹುಟ್ಟಿಸುತ್ತದೆ… ಅವನ ಕಣ್ಮರೆ ತನ್ನವರು, ತನ್ನ ಭೂಮಿ ಎಂಬೆಲ್ಲ, ದೇವರು… ಎಂಬೆಲ್ಲ ಭವ ಬಂಧನಗಳನ್ನು ತೊರೆದು ಸಾಗುವ ಬಿಡುಗಡೆಯ ಹಾದಿ ಎನ್ನಿಸುತ್ತದೆ.‌ ಹೆಂಡತಿ ಇದ್ದಿದ್ದರೆ ಬದುಕು ಹೀಗಾಗುತ್ತಿರಲಿಲ್ಲ ಎಂಬ ಅವನ ಯಾತನೆ ಮನ ಕಲಕುತ್ತದೆ. ದಶರಥನ ಪಾತ್ರ ನಿರೂಪಣೆ ಬಹಳ ಸಶಕ್ತವಾಗಿದೆ.

ಒಟ್ಟಿನಲ್ಲಿ ಈ ಕಾದಂಬರಿ ಒಂದಿಷ್ಟು ರಹಸ್ಯ, ಇದಮಿತ್ಥಂ ಎನ್ನಲಾಗದ ಅತಿಮಾನುಷತೆ, ಮತ್ತೊಂದಿಷ್ಟು ಮನುಷ್ಯ ಲೋಲುಪತೆ, ಕಾಲದ ಕೈವಾಡದಂತೆ ಬದುಕಿನ ಏರುಪೇರು, ಸಣ್ಣ ಹಳ್ಳಿಗಾಡಿನ ಜನರ ಸಮೃದ್ಧ ಬದುಕು ಲಾಲಸೆಯಡಿಯಲ್ಲಿ ಬರಡಾಗುತ್ತಾ ಹೋಗುವ ಪ್ರಕ್ರಿಯೆ…‌ ಈ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ, ಮಾತ್ರವಲ್ಲದೆ ಹಲವು ಯೋಚನೆಗಳ ಅಲೆಗಳನ್ನು ನಮ್ಮೊಳಗೂ ಎಬ್ಬಿಸುತ್ತದೆ.


  • ರಶ್ಮಿ ಉಳಿಯಾರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading