ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)

ನರ್ಮದಾ ಪರಿಕ್ರಮದಲ್ಲಿ ಬಿರುಸಿನಿಂದ ನಡೆಯುವಾಗ, ಅಲ್ಲಲ್ಲಿ ಕಾಲು ಜಾರಿ‌‌ ಬಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಹಿರಿ ಜೀವಗಳ ಕಾಲು ಊದಿಕೊಂಡಿತ್ತು. ಅವರನ್ನು ನೋಡಿ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿ, ಮಾತ್ರೆ ನೀಡಿ ಅಲ್ಲಿಂದ ಹೊರಟೆ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಬೆಳಿಗ್ಗೆ ಎದ್ದು ಕಣ್ಣಾಡಿಸಿದರೆ.. ನರ್ಮದಾ ನದಿ ಕಾಣದಷ್ಟು ದಟ್ಟವಾದ ಇಬ್ಬನಿ ಮಡುಗಟ್ಟಿದೆ.

ಜನ ದಟ್ಟನೆ ಹೆಚ್ಚಾಗುವ ಮೊದಲೆ “ಸಿಯಾರಾಮ್ ಬಾಬಾ” ಹತ್ತಿರ ಹೊರಟೆ. ಮೈ ತುಂಬಾ ಬೂದಿ ಬಳಿದುಕೊಂಡು, ಲಂಗೋಟಿ ಮಾತ್ರ ಧರಿಸಿದವರಿಗೆ ಚಳಿಯ ಪರಿವೇ ಇಲ್ಲ‌‌. ನರ್ಮದಾ ಪರಿಕ್ರಮ ಮಾಡುವವರಿಗೆ ಚಹಾ.. ಬಿಸ್ಕಿಟ್ ನೀಡುತ್ತಿದ್ದರು. ಬಾಬಾರಿಗೆ ವಂದಿಸಿ, ನರ್ಮದಾ ಮಾತೆಯ ಪೂಜೆಗೈದು ಮುಂದಿನ ಪಯಣಕ್ಕೆ ಅಣಿಯಾದೆ.

ಮುಂದೆ ಲೇಪಾ ಗಾಂವ್ ಕಡೆಯ ಸೈಕಲ್ ತುಳಿಯಲಾಗದ ಕಲ್ಲು, ಮಣ್ಣು, ಮುಳ್ಳುಗಳಿಂದ ಸಮೃದ್ಧವಾದ ರಸ್ತೆ. ನನ್ನ ಬಲಗಡೆಯೇ ನರ್ಮದಾ ಮಾತೆಯ ಹರಿವು ನಿರಂತರವಾಗಿತ್ತು‌. ರಸ್ತೆ ಬೇಸರವಾದರೆ ಸಾಕು, ನದಿಯ ದಂಡೆಗೆ ಕೂತು ಅವಳ ಜೊತೆ ಮಾತಿಗಿಳಿಯುವುದು ಅದ್ಭುತ ಅನುಭವ‌.

ಲೇಪಾಗಾಂವ್’ಲ್ಲಿ ಆಶ್ರಮವಿದೆ, ಸ್ವಲ್ಪ ಹೊತ್ತು ಕೂತು ಧಣಿವಾರಿಸಿಕೊಂಡು‌.‌‌ ಕಮಂಡಲ, ಬಾಟಲ್ ನಲ್ಲಿ “ನದಿಯ ಜಲ” ಭರ್ತಿಯಾಗಿಸಿ ನಿರಂತರ 4 ಕಿ.ಮೀ ನಡೆದಾಗ “ವೇದಾ” ನದಿ ನರ್ಮದೆಗೆ ಬಂದು ಬೆಸೆದುಕೊಂಡು “ವೇದಾ ಸಂಗಮ” ನಿರ್ಮಿಸಿದ್ದಾಳೆ.

ಗುಡ್ಡದ ಮೇಲಿನ ಜಟಾದಾರಿ ಬಾಬಾ “ಚಹಾ ಕುಡಿಯಲು ಕರೆದರಾದರೂ.. ನಂದಿಯನ್ನು ತಳ್ಳಿಕೊಂಡು.. ಉರಿ ಬಿಸಿಲಿನಲ್ಲಿ ಬಂದವನಿಗೆ “ಚಹಾ ಬೇಡವೆನಿಸಿ” “ಊಟಕ್ಕೆ ಹೋಗುವೆ ಮಹಾರಾಜ್” ಎಂದು ಕೈ ಮುಗಿದೆ.

ಅವರೆ ಮುಂದಿನ ಆಶ್ರಮದತ್ತ ಕೈ ತೋರಿ.. “ಅಲ್ಲಿ ಹೋಗಿ” ಎಂದರು. ಮತ್ತೆ 1 ಕಿ. ಮೀಟರ್ ನಡೆದಾದ ಮೇಲೆ “ಟಾರು ರೋಡು” ನೋಡಿ “ಮರಳುಗಾಡಿನಲ್ಲಿ ಓಯಾಸಿಸ್ ” ತರಹ ಭಾಸವಾಯಿತು‌. ನಂದಿಯನ್ನೇರಿ ” ವೇದಾಂತ ವಿಲಾ ಆಶ್ರಮ (ಮಾಖಡಖೇಡಾ)” ಹೊಕ್ಕವನಿಗೆ “ಚೋಲೆ ಬಾಟಿ”, ಅನ್ನ, ಬೇಳೆ ಸಾರು, ಮಜ್ಜಿಗೆ ಸಾರು(ಖಡಿ) ಪ್ರಸಾದ ಸ್ವೀಕರಿಸಿದವನಿಗೆ ಹೋದ ಜೀವ ಮರಳಿದಂತಾಯಿತು‌‌.

ಆಶ್ರಮ ನಡೆಸುವವರು ದಯಾಳುಗಳು, ಬಹು ಗೌರವ ಮತ್ತು ಪ್ರೇಮದಿಂದ ಸತ್ಕರಿಸುವ ಗುಣದವರು. ಅಲ್ಲಿಯೇ 1 ತಾಸು ವಿಶ್ರಾಂತಿಗಾಗಿ ಕಾಲು ಚಾಚಿ ಕೂತೆ‌. 60 ವರ್ಷ ದಾಟಿದ ಮಹಾರಾಷ್ಟ್ರದ ಇಬ್ಬರು ತಾಯಂದಿರು ಅಲ್ಲಿಯೇ ಕಾಲು ಚಾಚಿ ಗೋಡೆಗೆ ಒರಗಿದವರನ್ನ ಮಾತಿಗೆಳೆದೆ.

ಅವರು “ನರ್ಮದಾ ಪರಿಕ್ರಮದಲ್ಲಿಯೇ ಇರುವ ಹಿರಿ ಜೀವಗಳು. ನಿರ್ಜನ ರಸ್ತೆಯಲ್ಲಿ ಬಿರುಸಿನಿಂದ ನಡೆಯುವಾಗ, ಅಲ್ಲಲ್ಲಿ ಕಾಲು ಜಾರಿ‌‌… “ಮಾಖಡಖೇಡಾ” ಆಶ್ರಮ ತಲುಪವಷ್ಟರಲ್ಲಿ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡು… ಊದಿಕೊಂಡಿವೆ. ನಡೆಯಲು ಅಸಾಧ್ಯವಾದಾಗ “ಆಶ್ರಮದಲ್ಲೇ” ಉಳದಿದ್ದಾರೆ. ಆಸ್ಪತ್ರೆ ದೂರವಿರುವುದರಿಂದ ಅಲ್ಲಿಗೇ ಹೋಗಿ ತೋರಿಸಿದರು ನೋವಿನ ತೀವ್ರತೆ, ಬಾವು ಕಡಿಮೆಯಾಗಿಲ್ಲ.

ಸ್ವತಃ ಮುಲಾಮು ಹಚ್ಚಿ, “ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿದೆ (creep bandage). ಒಂದಿಷ್ಟು ಸಲಹೆ ಕೊಟ್ಟು, ಮಾತ್ರೆ ಕೊಟ್ಟು ಹೊರಟೆ ಅಷ್ಟರಲ್ಲಿ ಆಶ್ರಮದಲ್ಲಿದ್ದ 2 ಕೆಲಸಗಾರರಿಗೂ ಮಾತ್ರೆ ಕೊಟ್ಟು ಹೊರಟೆ. ಒಂದಿಷ್ಟು ಸೇವೆ ಸಲ್ಲಿಸಿದವನಿಗೆ ಸಂತೃಪ್ತಿ.

This slideshow requires JavaScript.

 

ನಂದಿಯ ಹೆಗಲಿಗೆ ಹಾಕಿದ್ದ ಬ್ಯಾಗ್ ಅಲುಗಾಡುತಿತ್ತು‌. ಕ್ಯಾರಿಯರ್ ಗೆ ಒಂದು ಪಟ್ಟಿ ವೆಲ್ಡಿಂಗ್ ಮಾಡಿಸಿದರೆ ಬ್ಯಾಗ್ ಇಟ್ಟು ಕಟ್ಟಲು ಅನುಕೂಲವಾಗುತಿತ್ತು. ಅದಕ್ಕೇನೆ “ಖಸರವಾಡ” ಊರಿಗೆ ಹೋದೆ.. ವೆಲ್ಡಿಂಗ್ ಅಂಗಡಿ ಹುಡುಕುತ್ತಾ.

ರಸ್ತೆಯ ಪಕ್ಕವಿದ್ದ ವೆಲ್ಡಿಂಗ್ ಅಂಗಡಿಯಲ್ಲಿ ಸ್ವಲ್ಪ ಜುಗಾಡ್ ಕೆಲಸ ಮಾಡಿ.. ಬ್ಯಾಗ್ ಅಲುಗಾಡದಂತೆ ಕಟ್ಟಲು ಅನುವಾಗುವಂತೆ ಮಾಡಿಕೊಟ್ಟರು. ಅದು ಉಚಿತ. ವೆಲ್ಡಿಂಗ್ ಶಾಪ್ ಪಕ್ಕದ ಅಂಗಡಿಯಾತ ಬಂದು ಅದರ ಹಣ ಕೊಟ್ಟು “ಇದು ನರ್ಮದಾ ಮಾತೆಗೆ” ನನ್ನ ಸೇವೆ,, ನೀವು ಹೊರಡಿ ಎಂದು ವಿನಂತಿಸಿದ‌‌. ತಾಯಿಯ ಲೀಲೆ ಅಷ್ಟೇ‌‌.

ಮುಂದಿನ ಆಶ್ರಮ ಇದ್ದದ್ದು “ಶಾಲಿವಾಹನ” ಎಂಬ ಸ್ಥಳದಲ್ಲಿ ಇದು “ನರ್ಮದಾ ಮಾತೆಯ ದಂಡೆಯ ಮೇಲಿನ ಆಶ್ರಮ” ಕಣ್ಣಲ್ಲಿ ಬೆಳಕಿರುವಾಗಲೆ ತಲುಪಬೇಕು ಎಂದು ಕೊಂಡವನಿಗೆ… ಆಗದೇ ಬರುವಷ್ಟರಲ್ಲಿ ಕತ್ತಲು ಕವಿಯಿತು…

ದೇವಸ್ಥಾನ, ತಟ ಎಲ್ಲವನ್ನೂ ಮುಂಜಾವು ನೋಡುವೆ. ಚಳಿ ಆಗಲೇ ಶುರುವಾಗಿದೆ. ರಾತ್ರಿಯ ಊಟವು ಆಗಿದೆ.. ನಾನು ಮಲಗಿದ ಸ್ಥಳದಿಂದ 200 ಮೀಟರ್ ದೂರದಲ್ಲಿ ನರ್ಮದಾ ಮಾತೆ ಜುಳು ಜುಳು ನಾದಗೈಯುತ್ತಾ ಹರಿಯುತ್ತಿದ್ದಾಳೆ. ದೀಪಗಳ ಪ್ರತಿಫಲನ ದೃಶ್ಯ ಅಮೋಘ. ಸ್ವರ್ಗವೆ ಧರೆಗಿಳಿದಂತೆ ಇದೆ.

ಮುಂದಿನ ಪಯಣ ನಾಳೆಗೆ…..

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ -ವೈದ್ಯರು, ಲೇಖಕರು, ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading