ನಮ್ಮ ಮನೆಯ ಅಂಗಳದಲ್ಲಿ ಹುತಾತ್ಮನ ಆತ್ಮಸಂವಾದ

ಅಮ್ಮಾ, ಕಣ್ಣೀರಧಾರೆಯಲ್ಲೇ ತೊಳೆದು ಬಿಟ್ಟಳು ನನ್ನ ಕನ್ನಡಕವನ್ನು. ಅಂತೂ ನನ್ನ ಕನ್ನಡಕ ಅಮ್ಮನ ಬಳಿ ಜೋಪಾನವಾಯ್ತು. ಇನ್ನೆಂದೂ ನನ್ನ ಕನ್ನಡಕ ಹುಡಿಕಿಕೊಡು ಎನ್ನುವುದಿಲ್ಲ. ಈಗಂತೂ ನಾನು ಪಂಚಭೂತಗಳಲ್ಲಿ ವಿಲೀನವಾಗಿ, ಈ ಬ್ರಹ್ಮಾಂಡ ರಕ್ಷಕನ ರಕ್ಷಣೆಯಲ್ಲಿದ್ದೇನೆ ಒಂದಂತೂ ಈಗ ಸ್ಪಷ್ಟವಾಗಿದೆ…ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನಿಯಲ್ಲಿ ವೀರಯೋಧ ವಿಷಾದಗಾಥೆಯನ್ನು ತಪ್ಪದೆ ಮುಂದೆ ಓದಿ…

ಇಲ್ಲೇ ಇದ್ದೀನಮ್ಮಾ….

ಹುತಾತ್ಮ ಮೇಜರ್ ಅಕ್ಷಯ್.. ಹೀಗಂತಾ ನನ್ನ ಆಪ್ತರು, ಮಿತ್ರರು, ನನ್ನ ದೇಶದ ಜನ ಈಗ ಕರೆಯುತ್ತಾರೆ . ಆದರೆ ನನ್ನ ಹೆಸರಿನಲ್ಲೇ ಇದೆ.ಅ…ಕ್ಷಯ. ನಾನೆಂದಿಗೂ ಕ್ಷಯಿಸಲಾರೆ. ಈಗ ಪಂಚಭೂತಗಳಲ್ಲಿ ವಿಲೀನವಾಗಿದ್ದೇನೆ ಅಷ್ಟೆ. ಆದರೆ ಅಂದು 2016 ನವೆಂಬರ್ ಇಪ್ಪತ್ತೊಂಬತ್ತರಂದು ಜಮ್ಮುವಿನ ನಗ್ರೋತದ ಸೇನೆಯ ಕ್ಯಾಂಪಿನಲ್ಲಿ ಏನಾಯಿತು ಎಂದು ನಿಮಗೆ ಹೇಳಲೇ ಬೇಕು…ಅದಲ್ಲಾ ನಿನ್ನೆ ನಡೆದ ಹಾಗಿದೆ.

ಸೇನೆಯ ಜೀವನದಲ್ಲಿ ನನಗೆ ಅತಿ ಇಷ್ಟವಾದ ಅಂಶ ಎಂದರೆ ಬೆಳಗ್ಗಿನ ದೈಹಿಕ ಶಿಕ್ಷಣ.. PT. ಇದನ್ನಂತೂ ನಾನು ಯಾವಾಗಲೂ ತಪ್ಪಿಸುತ್ತಿರಲಿಲ್ಲ. ಬೆಳಗಿನ ಆ ಅಹ್ಲಾದಕರ ವಾತಾವರಣದಲ್ಲಿ ದೇಹವನ್ನು ದಂಡಿಸಿ, ಶುದ್ದಗಾಳಿಯ ದೀರ್ಘ ಉಚ್ವಾಸದಲ್ಲಿರುವ ಆನಂದ. ಸೇನೆಯಲ್ಲಿರುವವರಿಗೇ ಗೊತ್ತು. ಸುಮಾರು ಒಂದು ಗಂಟೆಯ ಬೆಳಗಿನ ಚಟುವಟಿಕೆ ದಿನವಿಡೀ ಮೈ ಮನಗಳಲ್ಲಿ ಉತ್ಸಾಹ ತುಂಬಿಟ್ಟುರುತ್ತದೆ.

ಅಂದು ಬೆಳಗ್ಗೆ ಸುಮಾರು ಐದುವರೆಯ ಸಮಯ. ನಾನು ಬೆಳಗಿನ PT ಗೆ ತಯಾರಾಗುತ್ತಿದ್ದೆ. ಗಾಢ ನಿದ್ರೆಯಲ್ಲಿದ್ದ ಪುಟ್ಟ ಮಗು ನೈನಾಳ ಸುಂದರ ಮುಖವನ್ನೇ ನೋಡುತ್ತಾ, ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಿದ್ದೆ. ಇನ್ನೇನು ನಾಲ್ಕು ದಿನಗಳಲ್ಲಿ ಒಂದು ತಿಂಗಳ ರಜೆ ಶುರುವಾಗುತ್ತದೆ. ಬೆಂಗಳೂರಿಗೆ ಹೊರಡುವ ಕಾತುರದ ಸಿಧ್ಧತೆ ನಡೆದಿದೆ, ಇನ್ನೊಂದು ವಾರದಲ್ಲಿ ನನ್ನ ಮುವ್ವತ್ತೊಂದನೇ ಹುಟ್ಟುಹಬ್ಬ, ಅದನ್ನು ಬೆಂಗಳೂರಿನಲ್ಲೇ ಬಂಧುಗಳ, ಸ್ನೇಹಿತರುಗಳ ಜೊತೆ ಆಚರಿಸುವ ಪ್ಲಾನು. ನೈನಾಳ, ನಮ್ಮೆಲ್ಲರ ಆಗಮನಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೊತ್ತಿಗೆ ಕಾಫಿ ತೆಗೆದುಕೊಂಡು ಬಂದ ಸಂಗೀತಾಗೆ ಹೇಳಿದೆ..

‘ಇವತ್ತು PT ಮುಗಿದ ಮೇಲೆ ಫೈರಿಂಗ್ ತರಬೇತಿ ಇದೆ, ಬರುವುದು ಲೇಟಾಗಬಹುದು’..

ಇನ್ನೂ ಹೇಳುವುದನ್ನು ಮುಗಿಸುತ್ತಿದ್ದಂತೆ ಗುಂಡು ಹಾರಿಸಿದ ಶಬ್ದ ಕೇಳಿಸಿತು. ಮಲಗಿದ್ದ ನೈನಾ ಬೆಚ್ಚಿಬಿತ್ತು.

Something is not right..ಫೈರಿಂಗ್ ತರಬೇತಿ ಈಗಲೇ ಶುರುವಾಯಿತೇ?… ಯಾಕೋ ಎಡಗಣ್ಣು ಹಾರಿತು…ಆಪಾಯದ ಮುನ್ಸೂಚನೆ..ಸೈನಿಕನ ಎಚ್ಚರಿಕೆ ಜಾಗೃತವಾಯಿತು. ಕೂಡಲೇ ಹೋಗಿ ಸಮವಸ್ತ್ರ ಧರಿಸಿಕೊಂಡು ನಮ್ಮ ಯುನಿಟ್ಟಿನ ಕಡೆ ದೌಡಾಯಿಸಿದೆ. ಅಷ್ಟೊತ್ತಿಗಾಗಲೇ ನಮ್ಮ ಕಮಾಂಡಿಂಗ್ ಆಫೀಸರ್ ಕರ್ನಲ್ ಪ್ರಕಾಶರು ಒಂದು ತಂಡವನ್ನು ತಯಾರಿಸಿ ಹೊರಡಲು ಅಣಿಮಾಡಿದ್ದರು.

“ಮೇಜರ್ ಅಕ್ಷಯ್…ನೀವು ಈ ತಂಡದ ಜೊತೆ ಸೈನಿಕರ ಮನೆಗಳ ಕಡೆ ಹೋಗಿ..ನಾನು ಇನ್ನಷ್ಟು ತಂಡಗಳನ್ನು ಕಳುಹಿಸುತ್ತೇನೆ”

ಸಂಕ್ಷಿಪ್ತವಾಗಿ ನನಗೆ ಹೇಳಿದ್ದು ಇಷ್ಟೇ..“ ನಾಲ್ವರು ಆತಂಕವಾದಿಗಳು ಪೋಲಿಸ್ ಡ್ರೆಸ್ಸಿನಲ್ಲಿ ಕ್ಯಾಂಪಿನೊಳಗೆ ತೂರಿಕೊಂಡಿದ್ದಾರೆ..ಅವರ ಟಾರ್ಗೆಟ್, ಸೈನಿಕರ ಕುಟುಂಬಗಳು…ಅದೇ ದಿಕ್ಕಿನಲ್ಲಿ ಫೈರಿಂಗ್ ಮಾಡುತ್ತಾ ಮುಂದುವರೆಯುತ್ತಿದ್ದಾರೆ”.

ಕೂಡಲೇ ಒಂದು ಬುಲೆಟ್ ಪ್ರೂಫ್ ವಾಹನದಲ್ಲಿ ಮಷಿನ್ ಗನ್ನುಗಳ ಜೊತೆ ಐದು ಜನರ ತಂಡದೊಂದಿಗೆ ಹೊರಟು ಭಯೋತ್ಪಾದಕರು ಫೈರಿಂಗ್ ನಡೆಯುತ್ತಿದ್ದ ಸೈನಿಕರ ಮನೆಗಳ ಹತ್ತಿರ ಒಂದು ಆಯಕಟ್ಟಿನ ಜಾಗಕ್ಕೆ ಬಂದೆವು. ಅಷ್ಟರಲ್ಲೇ ಮೇಜರ್ ಕುನಾಲ್ ಸಹಾ ಜೊತೆಗೂಡಿದರು. ಪಕ್ಕದ ಒಂದು ಮನೆಯಲ್ಲಿ ಸೈನಿಕನೊಬ್ಬನ ತುಂಬು ಗರ್ಭಿಣಿ ಹೆಂಡತಿ ಒಬ್ಬಳೇ ಮನೆಯಲ್ಲಿರುವುದು ತಿಳಿದು ಬಂತು. ಕೂಡಲೇ ಮೇಜರ್ ಕುನಾಲ್ ಇನ್ನೊಬ್ಬ ಸೈನಿಕನ ಸಹಾಯದಿಂದ ಆ ಮಹಿಳೆಯನ್ನು ಮನೆಯ ಹಿಂದಿನ ಪೈಪಿನ ಮುಖಾಂತರ ಕೆಳಗಿಳಿಸಿ ಸುರಕ್ಷಿತ ಜಾಗಕ್ಕೆ ತಲುಪಿದರು. ಆ ಮಹಿಳೆ ಸುರಕ್ಷಿತ ಎಂದು ಖಾತರಿಯಾದ ನಂತರ ನಾವು ಆತಂಕವಾದಿಗಳ ಮೇಲೆ ಮಷೀನ್ ಗನ್ನಿನ ಫೈರಿಂಗ್ ಶುರುಮಾಡಿದೆವು.

ಬೆಳಗಿನ ಸುಮಾರು ಎಂಟು ಗಂಟೆಯವರೆಗೂ ಫೈರಿಂಗ್ ನಡೆಯುತ್ತಲೇ ಇತ್ತು. ಏನಾದರೂ ಸರಿ ಈ ಆತಂಕವಾದಿಗಳನ್ನು ಸೈನಿಕರ ಮನೆಗಳ ಹತ್ತಿರ ಹೋಗಲು ಬಿಡಲೇಬಾರದು. ಅಷ್ಟರಲ್ಲೇ ತುರ್ತಾಗಿ WhatsApp ನಲ್ಲಿ ಸಂಗೀತಾಗೆ ಒಂದು ಮೆಸೇಜ್ ಕಳಿಸಿದೆ..

‘ಹುಷಾರಾಗಿರಿ,ಹತ್ತಿರದಲ್ಲೇ ಫೈರಿಂಗ್ ನಡೀತಾ ಇದೆ, ಬಾಗಿಲು ತೆಗೀಬೇಡಿ..ಕಿಟಕಿಯ ಹತ್ತಿರ ಬರಬೇಡಿ ‘

ಹತ್ತಿರದ ಇನ್ನೊಂದು ಮನೆಯಲ್ಲಿ ಭಾನುಪ್ರಿಯ ತನ್ನ ಎರಡು ವರ್ಷದ ಮಗಳ ಜೊತೆ ಒಬ್ಬರೇ ಇದ್ದಾರೆ ಎಂದು ಗೊತ್ತಾಯಿತು. ಸ್ವಲ್ಪಹೊತ್ತು ಫೈರಿಂಗ್ ನಿಲ್ಲಿಸಿದೆವು. ಕೂಡಲೇ ಹೋಗಿ ಅವರಿಬ್ಬರನ್ನೂ ಕರೆದುಕೊಂಡು ಬಂದೆವು. ಸುಮಾರು ಮುನ್ನೂರಕ್ಕೂ ಹೆಚ್ಚು ಫ್ಯಾಮಿಲಿಗಳಿರುವ ಜಾಗದಲ್ಲಿ ನಾವು ಹೆಚ್ಚಿನ ಮಾರಕವಾದಂತಹ ಬಾಂಬು ದಾಳಿಯನ್ನು ಮಾಡಲಾಗದ ಸಂದಿಗ್ಧ ಪರಿಸ್ಥಿತಿ. ಮೇಜರ್ ಕುನಾಲ್ ಇನ್ನಿಬ್ಬರು ಸೈನಿಕರೊಂದಿಗೆ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಓಡೋಡುತ್ತಲೇ ಎಲ್ಲಾ ಕಡೆಯಿಂದಲೂ ಸುರಕ್ಷಿತ ಸ್ಥಳಕ್ಕೆ ತಲುಪಿಸುತಿದ್ದರು. ಕೆಲ ಸಮಯ ಆತಂಕವಾದಿಗಳ ಕಡೆಯಿಂದ ನಡೆಯುತ್ತಿದ್ದ ಫೈರಿಂಗ್ ನಿಂತುಹೋಯಿತು. ಅಷ್ಟರಲ್ಲಾಗಲೇ ಒಬ್ಬನನ್ನು ಹೊಡದುರಿಳಿಸಿದ್ದೆವು, ಇನ್ನಿಬ್ಬರು ಓಡಿಹೋಗಿ ಬೇರೆ ಕಡೆ ಬಚ್ಚಿಟ್ಟು ಕೊಂಡಿದ್ದರು. ಅಷ್ಟರಲ್ಲೇ ನಾನೊಂದು ಕಡೆ, ಮೇಜರ್ ಕುನಾಲ್ ಒಂದು ಕಡೆ ಈ ಭಯೋತ್ಪಾದಕರನ್ನು ಹುಡುಕಲಾರಂಭಿಸಿದೆವು. ಯಾವುದಾದರೂ ಮನೆಗೆ ನುಗ್ಗಿ ಅಲ್ಲಿಯವರಿಗೆ ಹಿಂಸೆ ಕೊಡುತ್ತಿರಬಹುದೆಂಬ ಅನುಮಾನವೂ ಇತ್ತು.

ಪೊದೆಗಳ ಮಧ್ಯೆ ತೆವಳುತ್ತಾ ಆತಂಕವಾದಿಗಳ ಕಣ್ಣಿಗೆ ಕಾಣಿಸದಂತೆ ಮನೆಗಳ ಸಾಲಿನ ಹಿಂದಿನಿಂದ ಹೋಗುತ್ತಿದ್ದೆ. ಆ ಕಡೆಯಿಂದ ಫೈರಿಂಗ್ ಶುರುವಾದರೆ ನನಗೆ cover fire ಕೊಡಲು ಹೇಳಿ ಮುಂದೆ ಹೋದೆ. ಅದೆಲ್ಲಿಂದಲೋ ಸುಂಯ್ಯೆಂದು ಒಂದು ಗುಂಡು ನನ್ನ ಕಿವಿಯ ಬಹಳ ಹತ್ತಿರದಿಂದ ಹರಿದು ಹೋಯ್ತು…ಹಾಗೇ ಹಿಂದಕ್ಕೆ ಬಿದ್ದ ನೆನಪು..ಬೇಗ ಒಂದು ದೊಡ್ಡ ಪೊದೆಯ ಹಿಂದೆ ತೆವಳಿಕೊಂಡೇ ಹೋದೆ…ಮಸುಕು ಮಸುಕು. ಸುತ್ತಲೂ ಕಣ್ಣಾಡಿಸಿದೆ…ಎಲ್ಲಿದ್ದಾನೆ ಈ ಪಾಕೀಸ್ತಾನದ ನಾಯಿ. ಅವಡುಗಚ್ಚಿಕೊಂಡು ಇನ್ನೂ ಮುಂದೆ ತೆವಳುತ್ತಾ ಹೋದೆ..

ಅಮರ ಅಕ್ಷಯ…

ದೇಹ ನಿಮ್ಮನ್ನು ತೊರೆದರೆ ಅದು ಸಾವು.

ನೀವೇ ದೇಹವನ್ನು ತೊರೆದು ನಡೆದರೆ..ಅದೇ ಮೋಕ್ಷ…ಹಾಗಂತ ಎಲ್ಲೋ ಓದಿದ್ದೆ.

ಅವತ್ತು ಜಮ್ಮುವಿನ ನಗ್ರೋತದ ಆರ್ಮಿ ಕ್ಯಾಂಪಿನಲ್ಲಿ ನಾನು ಸ್ವಯಿಚ್ಛೆಯಿಂದನಮ್ಮ ಸೈನಿಕರನ್ನು, ಅವರ ಕುಟುಂಬದವರನ್ನು ಆತಂಕವಾದಿಗಳಿಂದ ಸಂರಕ್ಷಿಸಲು ತೆಗೆದುಕೊಂಡ ಅಂತಿಮ ನಿರ್ಧಾರ…ಒಬ್ಬ ಸೈನಿಕನಿಗೆ ಅವನ ದೇಶ, ದೇಶದ ಜನಗಳೇ ಅವನ ಜೀವ.ಅವರನ್ನು ಸಂರಕ್ಷಿಸಲು ಅವಶ್ಯಕತೆಯಿದ್ದರೆ ನನ್ನ ದೇಹವನ್ನು ಬಿಡುವ ಪ್ರಮೇಯ ಬಂದರೂ ಸರಿ..ಹಾಗೆಂದುಕೊಂಡವನೇ ಏನಾದರಾಗಲಿ ಈ ಆತಂಕವಾದಿಗಳು ನಮ್ಮ ಸೈನಿಕರ ಕುಟುಂಬದ ಸದಸ್ಯರನ್ನು ಹಿಂಸಿಸುವುದಾಗಲೀ ಅಥವಾ ಅವರನ್ನು ಸೆರೆಯಾಳುಗಳನ್ನಾಗಿ ಮಾಡಿಕೊಂಡು ಅವರ ಬಿಡುಗಡೆಗೆ ಯಾವುದಾದರೂ ಶರತ್ತುಗಳನ್ನು ಹಾಕಿ ಪೀಡಿಸುವ ಮನ್ನವೇ ಅವರನ್ನು ಮುಗಿಸಲೇ ಬೇಕು ಎಂದುಕೊಂಡು ಎದ್ದು ಅವರು ಗುಂಡು ಹಾರಿಸುತ್ತಿದ್ದ ದಿಕ್ಕಿನಲ್ಲಿ ನಡದೇ ಬಿಟ್ಟೇ..

ಹಿಂದಿನಿಂದ ಚಿರಂತನ್ ಮಷಿನ್ ಗನ್ನಿನ ಫೈರಿಂಗ್ ಮಾಡುವುದನ್ನು ಬಿಟ್ಟು ನನ್ನ ಹಿಂದೆ ಓಡಿ ಬಂದ. ಆದರೆ ಪುನಃ ಅವನನ್ನು ಗನ್ ಪೋಸ್ಟಿಗೆ ವಾಪಾಸು ಕಳಿಸಿದೆ,

‘ನೀನು ಹೋಗು ಗನ್ ಪೋಸ್ಟಿಗೆ ನನಗೆ cover fire ಕೊಡು ನಾನು ಈ ನಾಯಿಗಳನ್ನು ಬಿಡುವುದಿಲ್ಲ’

ಎಂದು ಪೊದೆಗಳ ಹಿಂದಿನಿಂದ ಆತಂಕವಾದಿಗಳು ಅಡಗಿ ಕೊಂಡಿದ್ದ ಕಟ್ಟಡವನ್ನು ಸಮೀಪಿಸಿದೆ. ಅಷ್ಟೊತ್ತಿಗಾಗಲೇ ಅವರು ಮೊದಲ ಮಹಡಿಗೇರಿ ಬಿಟ್ಟಿದ್ದರು. ಪೊದೆಗಳ ಹಿಂದೆ ಕಂಡ ನನ್ನ ಮೇಲೆ ಗುಂಡು ಹಾರಿಸೇ ಬಿಟ್ಟರು..ನನ್ನ ಭೌತಿಕ ದೇಹದಿಂದ ಹೊರಬಂದೆ..ಇದು ನಿಶ್ಚಯಿಸಿಕೊಂಡೇ ಮಾಡಿದ ಕರ್ತವ್ಯ.

ಒಬ್ಬ ಸೈನಿಕನ ಕರ್ತವ್ಯದಲ್ಲಿ ಮೂರು ವಿಷೇಶ ಅಂಶಗಳಿರುತ್ತವೆ.

ನಾಮ್, ನಮಕ್, ನಿಶಾನ್…

ನಾಮ್…ನನ್ನ , ನನ್ನ ಸೈನ್ಯದ ಮತ್ತು ನನ್ನ ದೇಶದ ಹೆಸರು..ಅಭಿಮಾನ ಮತ್ತು ಗೌರವದಿಂದ ‌ಉಚ್ಚರಿಸಬೇಕು.ದೇಶದ ಹೆಸರಿನ ಮಾನ್ಯತೆಗೆ ದಕ್ಕೆ ಬರುವಂತಾ ಕೆಲಸವನ್ನು ಯಾರಾದರೂ ಮಾಡಿದರೆ ಅವರನ್ನು ಸುಮ್ಮನೆ ಬಿಡಬಾರದು.

ನಮಕ್…ಉಪ್ಪಿನ ಋಣ, ಈ ದೇಶದ ಋಣ ಎಂದೂ ಮರೆಯಬಾರದು. ಉಪ್ಪುತಿಂದ ಮನೆಗೆ ಎರಡು ಬಗೆಯ ಬಾರದು. ಜೀವಕೊಟ್ಟು ಪೋಷಿಸಿದ ತಾಯಿಗೆ, ಕುಟುಂಬಕ್ಕೆ ಮತ್ತು ದೇಶಕ್ಕೆ ಎಂದಿಗೂ ದ್ರೋಹ ಬಗೆಯಬಾರದು.

ನಿಶಾನ್…ನಮ್ಮ ಹೆಮ್ಮೆಯನ್ನು ಸಂಕೇತಿಸುವ ಲಾಂಛನ, ನಮ್ಮ ರಾಷ್ಟ್ರಧ್ವಜ..ನಮ್ಮ ಸೈನ್ಯದ ಮತ್ತು ರೆಜಿಮೆಂಟಿನ ಧ್ವಜಗಳು. ಎಂದೆಂದಿಗೂ ಇವಕ್ಕೆ ಅಗೌರವವನ್ನು ತೋರಿಸಬಾರದು ಮತ್ತು ಅಗೌರಿಸುವವರನ್ನು ಸುಮ್ಮನೆ ಬಿಡಬಾರದು.

ಸೇನೆಯ ಸಮವಸ್ತ್ರ ಧರಿಸಿದ ಮೇಲೆ ದೇಶ ಸೇವೆಯ ಬ್ರಹ್ಮದೀಕ್ಷೆ ಪಡೆದ ಹಾಗೇ…ಅದು ನಿರಂತರ,ಸೇವೆಯಲ್ಲಿದ್ದಾಗಲೂ… ನಿವೃತ್ತಿ ಹೊಂದಿದ ಮೇಲೂ…ದೇಹವನ್ನು ತ್ಯಜಿಸಿದ ಮೇಲೂ.

ನನ್ನ ಕೋರಿಕೆಯೊಂದೇ…ನೀವು ಸೈನಿಕರನ್ನು, ಅವರ ದೇಶಪ್ರೇಮವನ್ನು ಎಂದೂ ಸಂದೇಹಿಸಬೇಡಿ…

ಶಾಂತಿಯಿಂದ ನಿದ್ರೆಮಾಡಿ…ನಾವಿದ್ದೇವೆ.

ಭೂಮಿ, ಆಕಾಶ, ವಾಯು, ಜಲ ಮತ್ತು ಅಗ್ನಿ…ಹುಂ.. ಅಂತಿಮವಾಗಿ ಅಗ್ನಿಯಲ್ಲಿ..ಪಂಚಭೂತಗಳಲ್ಲಿ‌‌..ಲೀನವಾದ ನನಗೆ ಮಾನವ ಸಹಜ ಭಾವನೆಗಳಿಲ್ಲವಂತಿಲ್ಲ. ಮಾತೃ ಪ್ರೇಮ, ದೇಶಪ್ರೇಮ ಇವೆಲ್ಲಾ ಅಳಿಸಿ ಹೋಗಲಾರದ ಮನೋಧರ್ಮಗಳು. ಈ ನೆಲದ ಪ್ರೇಮ..ಬೆಂಗಳೂರಿಗೆ ಎಳೆತಂದಿತು.

ಅಂದು ಯಲಹಂಕದ ವಾಯುಸೇನೆಯ ನೆಲೆಯಲ್ಲಿ ನನ್ನ ಪಾರ್ಥಿವಕ್ಕೆ ಸಕಲ ಸೈನ್ಯದ ಮರ್ಯಾದೆ. ಏಕತಾನತೆಯ ಸೈನ್ಯದ ವಾದ್ಯಗಳ ಹಿನ್ನಲೆಯಲ್ಲಿ ಆಳೆತ್ತರದಷ್ಟು ಹೂಗುಚ್ಚಗಳನ್ನು ಪೇರಿಸಿ ಒಬ್ಬೊಬ್ಬರಾಗಿ ಅಂತಿಮ ನಮನ ಸಲ್ಲಿಸಿ ನಿರ್ಗಮಿಸುವ ದೃಶ್ಯಾವಳಿ ಕಣ್ಮುಂದೆ.. ವೀರಸ್ವರ್ಗ ಪ್ರಾಪ್ತಿ ಎಂದರೆ ಇದೇ ಇರಬಹುದೇ?

ಸೈನ್ಯದ ಗಾಂಭೀರ್ಯ ಎಲ್ಲೆಡೆ . ಮಡುಗಟ್ಟಿದ ಕಣ್ಣೀರು ಕಣ್ಣಾಲಿಗಳೊಳಗೆ ಉಳಿದುಕೊಂಡಿದೆ, ಹೊರಗೆ ಬಿಟ್ಟುಕೊಡಲೇಬಾರದೆಂಬ ಸಂಯಮ. ಇಂತಹ ದುಖಃಭರಿತ ವಾತಾವರಣದಲ್ಲೂ ಒಂದು ಕಿಲ ಕಿಲ ನಗು…ಅದೇ ನನ್ನ ಮಗು ನೈನಾ..ಅಲ್ಲೇ ಹತ್ತಿರದಲ್ಲಿ ಹಾರುತ್ತಿದ್ದ ಚಿಟ್ಟಿಯನ್ನು ಹಿಡಿಯಲು ಓಡಾಡಿಕೊಂಡು ಸಂತೋಷಿಸಿತ್ತಿತ್ತು. ಅಲ್ಲೇ ನಿಂತಿದ್ದ ನನ್ನಮ್ಮ ಮತ್ತು ಇತರೆ
ಹೆಣ್ಣುಮಕ್ಕಳ ದುಃಖ ಭೋರ್ಗರೆಯುವಂತೆ ಮಾಡಿತು ಮಗುವಿನ ಆ ನಗು. ನಮ್ಮಮ್ಮನಂತೂ ಕುಸಿದೇ ಬಿದ್ದರು.

‘ಅಮ್ಮಾ…ನೀನು ಹೀಗೆ ಮಾಡಬಹುದೇ.. ಒಬ್ಬ ವಾಯುಸೇನೆಯ ಯುಧ್ಧವಿಮಾನದ ಪೈಲಟ್ಟನ ಹೆಂಡತಿಯಾಗಿ, ಒಬ್ಬ ಸೇನಾಧಿಕಾರಿಯ ತಾಯಿಯಾಗಿ ನೀನು ಹೀಗೆ ಕುಸಿಯುವುದೇ…ಜೋರಾಗಿ ಕೂಗಿದೆ..ನನ್ನ ಕೂಗೂ ಪಂಚಭೂತಗಳಲ್ಲಿ ಕರಗಿ ಹೋಯಿತು.

ನನ್ನ ಮತ್ತು ನನ್ನಮ್ಮನ ಭಾಂಧವ್ಯ ಅಷ್ಟು ಗಹನವಾದ್ದು….

Good night ಅಮ್ಮಾ…ಎಂದು ಮಲಗಿದವನು, ಬೆಳಗ್ಗೆ ಕಣ್ಣುಬಿಡುವ ಮುಂಚೆನೇ ಹೊರಡುತ್ತಿದ್ದ ಶಬ್ದ.. ‘ಅಮ್ಮಾ ನನ್ನ ಕನ್ನಡಕ ಕಾಣುತ್ತಾ ಇಲ್ಲ’ ಎನ್ನುವುದೇ ನನ್ನ ಸುಪ್ರಭಾತ. ಇದಕ್ಕೆಂದೇ ಅಮ್ಮ ಇನ್ನೊಂದು ಜೊತೆ ಕನ್ನಡಕ ಮಾಡಿಸಿಬಿಟ್ಟರು. ‘ಅಮ್ಮಾ ಕನ್ನಡಕ’ ಅಂದ ಕೂಡಲೇ ಅದನ್ನು ತಂದು ಕೊಟ್ಟು ಬಿಡುವರು, ನಂತರ ನಾನು ಹಿಂದಿನರಾತ್ರಿ ಅಲ್ಲೆಲ್ಲೋ ಬಿಟ್ಟಿದ್ದ ಕನ್ನಡಕವನ್ನು ಜೋಪಾನವಾಗಿಟ್ಟುಕೊಳ್ಳುತ್ತಿದ್ದರು… ಮರುದಿನ ಕೊಡಲು! ಹೀಗೆ ನಮ್ಮಮ್ಮನ ಸೆರಗಿನಲ್ಲೇ ಬೆಳದೆ..ಸೈನ್ಯಕ್ಕೆ ಸೇರುವವರೆಗೂ. ಆಮೇಲೆ ನಮ್ಮಿಬ್ಬರ ‘ದೋಸ್ತಿ’ ಮೊಬೈಲುಗಳಲ್ಲಿ ಮುಂದುವರೆಯಿತು. ವಾಟ್ಸಪ್ಪಿನಲ್ಲಿ ದಿನಕ್ಕೆ ನಾಲ್ಕೈದು ಸಲವಾದರೂ ಸಂದೇಶಿಸುತ್ತಿದ್ದೆವು.

ಈಗ ಅಮ್ಮ ದುಖಿಃಸುತ್ತಾಳೆ, ಎಲ್ಲರೂ ಕಣ್ಣೀರಿಡುತ್ತಿದ್ದಾರೆ..ಸಹಜವೇ.

ಅವತ್ತು ಅಮ್ಮ, ಅಪ್ಪ, ನನ್ನ ತಂಗಿ ನೇಹಾ ಮತ್ತು ಭಾವ ಪ್ರದೀಶ್ ನಗ್ರೋತಕ್ಕೆ ಬಂದಿದ್ದರು. ಆತಂಕವಾದಿಗಳನ್ನು ಹಿಮ್ಮೆಟ್ಟಿ ಕೊಂದು ಮುಗಿಸಿದ್ದನ್ನು ವಿವರವಾಗಿ ಹೇಳುತ್ತಿದ್ದರು ಕರ್ನಲ್ ಪ್ರಕಾಶ್. ಮಧ್ಯ ಮಧ್ಯ ಅಮ್ಮ, ನೇಹಾರ ಅಳು…

ನಾನಿಲ್ಲೇ ಇದ್ದೇನೆ ಅಮ್ಮಾ..ನಿನ್ನ ಹತ್ತಿರವೇ.

ಗುಂಡಿನೇಟು, ಗ್ರೆನೇಡಿನ ಸ್ಪೋಟದಿಂದ ನಾನು ಬಿದ್ದಿದ್ದ ಸ್ಥಳಕ್ಕೆ ಬಂದರು. ಕಣ್ಣು ತುಂಬಿ ಬಂತು ಅಮ್ಮನಿಗೆ. ಅಲ್ಲೇ ಬಿದ್ದಿದ್ದ ಒಂದು ಚಿಕ್ಕ ಕಲ್ಲನ್ನು ಎತ್ತಿಕೊಂಡಳು ಅಮ್ಮ…ನನ್ನ ನೆನಪಿನ ಚಿನ್ಹೆಗಾಗಿ. ಅಲ್ಲೇ ಹತ್ತಿರದಲ್ಲೇ ನನ್ನ ಕನ್ನಡಕ ಬಿದ್ದಿದ್ದನ್ನು ಈಗ ಎಷ್ಟೋ ದಿನಗಳಾದರೂ ಯಾರಿಗೂ ಕಾಣಿಸಲಿಲ್ಲವೇ..ಈಗ ಅಮ್ಮನೂ ಅದನ್ನು ದಾಟಿ ಕೊಂಡೇ ಹೋದಳು…ಅಮ್ಮಾ ಹಿಂತಿರುಗಿ ಬಾ..ನನ್ನ ಕನ್ನಡಕ ಎತ್ತಿಕೊಂಡು ಹೋಗು ಎಂದು ಕೂಗಿದೆ ,ಸ್ವಲ್ಪ ದೂರ ಹೋದವಳು ತಿರುಗಿ ಬಂದಳು…ಆಗ ಕಾಣಿಸಿತು ಅಮ್ಮನಿಗೆ ನನ್ನ ಕನ್ನಡಕ.

ಕಣ್ಣೀರಧಾರೆಯಲ್ಲೇ ತೊಳೆದು ಬಿಟ್ಟಳು ನನ್ನ ಕನ್ನಡಕವನ್ನು… ಅಂತೂ ನನ್ನ ಕನ್ನಡಕ ಅಮ್ಮನ ಬಳಿ ಜೋಪಾನವಾಯ್ತು. ಇನ್ನೆಂದೂ ನನ್ನ ಕನ್ನಡಕ ಹುಡಿಕಿಕೊಡು ಎನ್ನುವುದಿಲ್ಲ….
ಈಗಂತೂ ನಾನು ಪಂಚಭೂತಗಳಲ್ಲಿ ವಿಲೀನವಾಗಿ, ಈ ಬ್ರಹ್ಮಾಂಡ ರಕ್ಷಕನ ರಕ್ಷಣೆಯಲ್ಲಿದ್ದೇನೆ ಒಂದಂತೂ ಈಗ ಸ್ಪಷ್ಟವಾಗಿದೆ…

“ತೃಣಮಪಿ ನ ಚಲತಿ ತೆನ ವಿನಾ”

ಅವನ ಕರುಣೆ ಇಲ್ಲದೆ ಹುಲುಕಡ್ಡಿಯೂ ಅಲ್ಲಾಡದು. ನಾವೆಲ್ಲಾ ಪಾತ್ರಧಾರಿಗಳು. ನಮ್ಮ ಪಾತ್ರದ ಗತಿ, ಅವಧಿ ಅವನಿಗೇ ಬಿಟ್ಟದ್ದು.
(ಅಕ್ಷಯರವರ ತಾಯಿ ಮೇಘನಾ ಗಿರೀಶ್ ರವರ ಆದಾನ ಪಡೆದು…ಬರೆದದ್ದು, ‘ಯೋಧ ನಮನ’ ಪುಸ್ತಕದ ಅಧ್ಯಾಯ.)

  • ಮೇಜರ್ ಅಕ್ಷಯ ಗಿರೀಶ್ ಅವರ ಪ್ರತಿಮೆಗೆ ನಮನ ಸಲ್ಲಿಸುವ ಆಸಕ್ತಿ ಇರುವವರಿಗೆ, ಮಾಹಿತಿ :

ಶಿಲ್ಪ ರಚನೆ
ಮೂರ್ತಿಕಾರ್ ನರೇಶ್ ಕುಮಾವತ್

ಸ್ಥಳ: ಮೇಜರ್ ಅಕ್ಷಯ್ ಗಿರೀಶ್ ಮೊಮೋರಿಯಲ್ ಟ್ರಸ್ಟ್
#635 ಜೇಡ್ ಗಾರ್ಡನ್,4 ನೇ ಹಂತ
ಸಾದಹಳ್ಳಿ
ಬೆಂಗಳೂರು – 562110

ಮೇಘನಾ ಗಿರೀಶ್

ವಿಂಗ್ ಕಮಾಂಡರ್ ಗಿರೀಶ್


  • ವಿಂಗ್ ಕಮಾಂಡರ್ ಸುದರ್ಶನ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading