ಅಬ್ದುಲ್ ರಶೀದ್ ಅವರ ‘ಅಂತರಾಷ್ಟ್ರೀಯ ಕುಂಬಳಕಾಯಿ ಕಥೆಗಳು’ ಕುರಿತು ಪಾರ್ವತಿ ಜಗದೀಶ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ – ಅಂತರಾಷ್ಟ್ರೀಯ ಕುಂಬಳಕಾಯಿ ಕಥೆಗಳು.
ಲೇಖಕರು – ಅಬ್ದುಲ್ ರಶೀದ್
ಪ್ರಕಾಶಕರು – ವೀರಲೋಕ ಬುಕ್ಸ್, ಬೆಂಗಳೂರು.
ಬೆಲೆ – 120 ರೂಪಾಯಿ.
ಅಬ್ದುಲ್ ರಶೀದ್ ಅವರ ಈ ಕೃತಿ ನನಗೆ ವೀರಲೋಕ ಬುಕ್ಸ್ ನವರು ಏರ್ಪಡಿಸಿದ ಪುಸ್ತಕ ಅವಲೋಕನ ಸ್ಪರ್ಧೆಯಲ್ಲಿ ಬಹುಮಾನ ರೂಪದಲ್ಲಿ ಬಂದ ಕೃತಿ. ಮುಖ ಪುಟದಲ್ಲಿ ಸ್ನೇಹಿತರು ಆದಂತಹ ಪತ್ರಿಕೆಯಲ್ಲಿ ಅಂಕಣ ಬರಹಗಾರರರೂ ಆದ ರಶೀದ್ ಸರ್ ಅವರ ಕಥಾ ಸಂಕಲನ ಇದು. ಅವರ ಬರಹದ ಬಗ್ಗೆ ಏನೂ ಗೊತ್ತಿಲ್ಲದೇ ಕೇವಲ ಕೃತಿ ಹೆಸರಿಗೆ ಆಕರ್ಷಣೆಗಾಗಿ ಈ ಪುಸ್ತಕ ಆಯ್ಕೆ ಮಾಡಿಕೊಂಡದ್ದು ಆದರೆ ಕೃತಿ ಓದಿನ ನಂತರವೇ ತಿಳಿದಿದ್ದು ಅವರೊಬ್ಬ ವಿಶೇಷ,ಹಾಗೂ ವಿಭಿನ್ನ ಶೈಲಿಯಲ್ಲಿ ಬರೆಯುವ ಬರಹಗಾರರು ಅಂತ ಮುಖ ಪುಟದ ಒನ್ ಲೈನ್ ಬರಹಕ್ಕೂ,ಕೃತಿಯ ಬರಹ ಶೈಲಿಗೂ ಅಜಗಜಾoತರ ಭಿನ್ನತೆ ಕಾಣಿಸ್ತು. ಕೃತಿಯಲ್ಲಿ ಒಟ್ಟು 5 ಕಥೆಗಳು ಇವೆ. ವಾಸ್ತವವಾಗಿ ಹೇಳಬೇಕು ಅಂದರೆ ಈ ಐದೂ ಕಥೆಗಳೂ ಅವರ ನೈಜ ಅನುಭವದಿಂದ ಬರೆದ ಕಥೆಗಳಾಗಿವೆ. ಇಲ್ಲಿಯ ಕಥೆಗಳನ್ನು ಕೇವಲ ಕಥೆಯಾಗಿಯೇ ಓದಿಸಿಕೊಳ್ಳದೇ ಪ್ರಸ್ತುತ ಪರಿಸ್ಥಿತಿಗಳ ಹೊಳವು ಬಿಂಬಿಸುವ ಕಥೆಗಳಾಗಿ ಕಂಡುಬರುತ್ತವೆ.ಜೊತೆಗೆ ಆ ಸಂದರ್ಭ, ಸನ್ನಿವೇಶಗಳ ಕುರಿತು ಆಲೋಚನೆ ಮಾಡುವಂತೆ ಪ್ರೇರೆಪಿಸುತ್ತವೆ ಇದು ನನ್ನ ವೈಯಕ್ತಿಕ ಅನುಭವ ಕೃತಿ ಕುರಿತು.
ಇನ್ನು ಈ ಕೃತಿ ಓದಿನ ನಂತರ ಕೃತಿಯ ಶೀರ್ಷಿಕೆ ಇದೇ ಯಾಕೆ ಅನ್ನುವದಕ್ಕೆ ಸ್ವಲ್ಪ ಮಟ್ಟಿಗೆ ಉತ್ತರ ಸಿಕ್ಕಂತೆ ಆಯ್ತು. ಬಹುಷಃ ಕುಂಬಳಕಾಯಿ ಗಾತ್ರದಲ್ಲಿ ದೊಡ್ಡದು ಇರುವ ಕಾರಣಕ್ಕೆ ಅದು ಅನ್ವರ್ಥಕವಾಗಿ ಬಳಕೆ ಮಾಡಿರಬಹುದು. ಅಂತಾರಾಷ್ಟ್ರೀಯ ಅಥವಾ ಜಾಗತಿಕ ಅನ್ನುವ ಪದಗಳು ಕಥೆಯಲ್ಲಿ ಬರುವ ವ್ಯಕ್ತಿಗಳು ಮತ್ತೂ ವಿದ್ಯಮಾನಗಳು ಜಾಗತಿಕ ಮಟ್ಟದಲ್ಲಿ ಇದ್ದುದರಿಂದ ಆ ಹೆಸರು ಸೂಕ್ತ ಅನಿಸಿರಬಹುದು.ಇಲ್ಲಿಯ ಕಥೆಗಳಲ್ಲಿ ಮಾಂಟೆನಿಗ್ರೋದ ರೂಪದರ್ಶಿ,ಜರ್ಮನಿಯ ಕ್ರಿಸ್ತಿನಾ,ಅನ್ಯ ದೇಶದ ಔಲಿಯಾ,ಭೂತಾನ್ ದ ಮೂರು ಹಸುಳೆಗಳು ಪೋರ್ಚುಗೀಸ್ ಮೂಲದ ರಾಬಿನ್ ಡೀಸಲ್ವಾ ಇವಿಷ್ಟೇ ಅಲ್ಲದೇ ಅರಬ್ಬೀ ಕಡಲಿನ ದ್ವೀಪ,ತೈಲ ಸಾಗಿಸುವ ಅಂತರಾಷ್ಟ್ರೀಯ ಹಡಗು,ಆಕಾಶ, ನಕ್ಷತ್ರ.ಇವೆಲ್ಲವೂ ಅಂತಾರಾಷ್ಟ್ರೀಯ ಕಥಾ ವಸ್ತುಗಳೇ ಆದುದರಿಂದ ಶೀರ್ಷಿಕೆ ಸೂಚ್ಯವಿರಬಹುದು.

ಮೊದಲಿಗೆ ಕೃತಿ ಓದೋಕೆ ಕೂತಾಗ ಒಂದು ಪ್ಯಾರಾ ಓದಿದಾಗ ಯಾಕೋ ಕಥಾ ವಸ್ತು ಬೇಗ ಅರ್ಥವಾಗದಂತೆ ಅನಿಸಿ ಮುಚ್ಚಿಟ್ಟೆ. ಆದರೂ ಅದರಲ್ಲಿ ಏನೋ ಇದೆ ಅನ್ನುವ ಸೆಳೆತ ಹೆಚ್ಚಾಗಿ ನಾಲ್ಕು ತಾಸಿನಲ್ಲೇ ಓದಿ ಮುಗಿಸಿದೆ ಓದುತ್ತಾ ಹೋದಂತೆ ಕೃತಿ ಕೆಳಗಿಡದೇ ಓದಿಸಿಕೊಂಡು ಹೋಗುವ ಕೌತುಕ,ರೋಚಕ ಸನ್ನಿವೇಶಗಳ ನಿರೂಪಣಾ ಶೈಲಿಯಲ್ಲಿ ಹೆಣೆದ ಕಥೆಗಳು ಅಲ್ಲಲ್ಲಿ ಕಂಡುಬರುವ ತುಸು ವ್ಯಂಗ್ಯ ಭರಿತ ಹಾಸ್ಯ ಚಟಾಕೆಗಳು ಮನಸಿಗೆ ಮುದ ನೀಡುತ್ತವೆ.ಕಥೆಯ ಉದ್ದಕ್ಕೂ ಅಲ್ಲಲ್ಲಿ ಬಳಸಲಾದ ಉಪಮೆ, ರೂಪಕಗಳಂತೂ ಅಮೋಘ.
ಅಮಾವಾಸ್ಯೆ ಇರುಳ ಅಸಂಖ್ಯ ನಕ್ಷತ್ರಗಳು.ನೋಡಿ ಈ ಕಥೆಯ ಶೀರ್ಷಿಕೆ ಅಮಾವಾಸ್ಯೆ ಇರುಳಿನ ಅಸಂಖ್ಯ ನಕ್ಷತ್ರಗಳು ಕಥೆಯ ಶೀರ್ಷಿಕೆಯೇ ಆಸಕ್ತಿದಾಯಕವಲ್ಲವೇ? ಅದರಂತೆ ಕಥಾ ಹೂರಣ ಕೂಡ ಅಷ್ಟೇ ಆಸಕ್ತಿದಾಯಕವಾಗಿ ಇದೆ.ಕಥೆಯಲ್ಲಿ ಕಾಣೆಯಾದ ರೂಪದರ್ಶಿಯ ಅವಳಿ ಸಹೋದರನ ಪತ್ತೆ ಹಚ್ಚುವಿಕೆ ಕಾರಣಕ್ಕೆ ಕಥೆ ಹುಟ್ಟಿಕೊಂಡಿದೆ ಆದರೂ,ಕಥಾ ಹೆಣಿಕೆ ಅಲ್ಲಿ ಪ್ರಕೃತಿ ಸೌಂದರ್ಯ ದ ವರ್ಣನೆ,ಜೊತೆಗೆ,ಅಲ್ಲಿಯ ವ್ಯಕ್ತಿಗಳ ವ್ಯಕ್ತಿತ್ವ ನಿರೂಪಣೆ ಆಗಿದೆ,ರೂಪದರ್ಶಿಯ ಸೌಂದರ್ಯ,ಮುಕ್ತಿಯಾರರ ವ್ಯಕ್ತಿತ್ವ ಪರಿಚಯ,ಮುತ್ತುಕೋಯಾನ ಮಾನಸಿಕ ಅಸ್ವಸ್ಥತೆಗೆ ಕಾರಣ,ಆತನ ಪತ್ನಿ ಕಿಯಾ0ಬಿಯ ಮಾನಸಿಕ ಅಸ್ವಸ್ಥತೆ,ಅವರಿಬ್ಬರ ಜೀವನ ನಿರ್ವಹಣೆ ವಿಧಾನ.ಮುಕ್ತಿಯಾರ ಮತ್ತು ರಶೀದ್ ರ ನಡುವಿನ ಹಾಸ್ಯ ಸಂಭಾಷಣೆ ಓದುಗರಿಗೂ ನಗು ತರಿಸುತ್ತವೆ.ಮುಕ್ತಿಯಾರರ ಪ್ರೇಯಸಿ,ಹೆಂಡತಿ ಇಬ್ಬರೂ ಕಾಲವಾದ ನಂತರ ಚಿರ ತರುಣರಂತೆ ಬದುಕುತ್ತಿರುವ ಅವರಿಗೆ ರಶೀದ್ ಅವರು ಇನ್ನೊಂದು ಮದುವೆಗೆ ಸೂಚನೆ ಕೊಟ್ಟಾಗ, ನೋಡೋಣ ನೀನು ತೋರಿಸಿದ ರೂಪದರ್ಶಿ ಅಂತ ಯುವತಿ ಸಿಕ್ಕರೆ.,..ಅನ್ನುವ ಮುಕ್ತಿಯಾರ್ ಕೊನೆಗೆ ಇವರ ಹೇಳಿಕೆ ಅವಳು ನಿಮಗೆ ಸಿಕ್ಕಿ ನೀವು ಹೋದ ಮೇಲೆ ಅವಳೇನಾದರೂ ಉಳಿದಿದ್ದರೆ,?? ಅವಳನ್ನೇ ನಾನು ಮರು ಮದುವೆ ಆಗುತ್ತೇನೆ ಅಂತ.ಒಟ್ಟಿನಲ್ಲಿ ಇಬ್ಬರೂ ರಸಿಕರೆ.ಮುಕ್ತಿಯಾರ್ ಸ್ವತಃ ಕಥೆಗಾರರು ಆಗಿರುವ ಕಾರಣಕ್ಕೆ ಮುತ್ತುಕೋಯಾನ ಮಾನಸಿಕ ಅಸ್ವಸ್ಥತೆಗೆ ಕಾರಣ ಆತ ಅರಿಯದೇ ಮಾಡಿದ ಸಣ್ಣ ದೇಶ ದ್ರೋಹದ ಅಪವಾದ ಏನೆಂದು ಕಥೆಯ ಕೊನೆಯವರೆಗೂ ಓದುಗರಿಗೆ ಕುತೂಹಲ ಹುಟ್ಟುವಂತೆ ಕಥೆ ಹೇಳುತ್ತಾರೆ ಇವರೂ ಅದನ್ನೇ ಮುಂದುವರೆಸಿ ಓದುಗರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತಾರೆ.ಅದೇನು ದೇಶ ದ್ರೋಹದ ಕೆಲಸ ಮಾಡಿದ ಅನ್ನುವುದಕ್ಕೆ,ಮತ್ತೆ ರೂಪ ದರ್ಶಿ ಅವಳಿ ಸಹೋದರನ ಪತ್ತೆ ಆಯಿತಾ? ಇದೆಲ್ಲದಕ್ಕೂ ಉತ್ತರ ಈ ಕಥೆ.
ಕಾಮ್ರೇಡ್ ಅಲಿ ರೈಟರ್ ಕಥೆಯಲ್ಲಿ ಮಡಿಕೇರಿಯ ನಿಸರ್ಗ ವರ್ಣನೆ, ಅಲ್ಲಿಯ ಪ್ರಾದೇಶಿಕ ಜನ ಜೀವನ, ಆಹಾರ ಪದ್ಧತಿ, ಜೊತೆಗೆ ಅಲ್ಲಿಯ ಪಾತ್ರಗಳ ಜೊತೆಗಿನ ಇವರ ಬಾಂಧವ್ಯ ಸೂಚನೆ ಮಾಡುತ್ತಾರೆ. ಅಲ್ಲಿಯೂ ಕಾಮ್ರೇಡ್ ಅಲಿ ಅವರು ಹೇಳಿದ ಕಥೆಯ ಮೂಲಕ ಸಂದೇಶ ರಾಜಕೀಯ ಸಿದ್ದಾಂತಕ್ಕೆ ಬದ್ದನಾಗಿ ಸಾಮಾನ್ಯ ಮನುಷ್ಯ ಬದುಕಿನ ರೀತಿ.ಅಲಿ ರೈಟರ್ ಮಗಳ ಪ್ರೇಮ ಪ್ರಸಂಗ.ಅವಳು ನೂರು ಮೀಟರ್ ಓಟಗಾರ್ತಿ ಅವಳೊಂದಿಗೆ ಓಡಲಾಗದ ಇವರು ಅವಳ ಜೊತೆಗಿನ ಮದುವೆ ನಿರಾಕರಿಸಿದರೆ ಅವಳು ಸಾವಿರಾರು ಕಿಲೋಮೀಟರ್ ಬೇರೆ ಯಾರದೋ ಜೊತೆಯಲ್ಲಿ ಓಡಿ ಹೋಗಿದ್ದಳು.
ಮೂರನೇ ಕಥೆ ಕಾರ್ತ್ಯಾಯಿನಿ ಈ ಕಥೆಯಲ್ಲಿ ಲೆಸ್ಬಿಯನ್ ಪ್ರೇಮದ ಉತ್ಕಟಾವಸ್ಥೆಯ ಬಗೆಗೆ ವಿವರಿಸಿ. ಕೊನೆಯಲ್ಲಿ ವಿವರಿಸಿದ ಆಟಿಕೆಯ ಪುರುಷ ಜನನಾ0ಗವನ್ನು ನಾಯಿ ಕಚ್ಚಿಕೊಂಡು ಹೋಗಿ ಅದಕ್ಕಾಗಿ ಬೀದಿ ನಾಯಿಗಳು ಕಚ್ಚಾಟ,ಅದನ್ನ ನೋಡಿದ ಓಣಿಯ ಹೆಂಗಸರು ನಿಜವೆಂದು ನಂಬಿ ಯಾವುದೋ ಹೆಣ್ಣು ಮಗಳು ಪುರುಷನ ದುಶ್ಕೃತ್ಯಕ್ಕೆ ರೋಸಿ ಹೋಗಿ ತಕ್ಕ ಶಿಕ್ಷೆ ಕೊಟ್ಟಿದ್ದಾಳೆ ಅನ್ನುವ ಮಾತಿನ ವಿವರಣೆ ಸನ್ನಿವೇಶ ಒಮ್ಮೆ ಮನ ಕಲಕುತ್ತದೆ.

ನಾಲ್ಕನೇ ಕಥೆ ಕವಿ ಸಾಮ್ರಾಟ್ ಇಲ್ಲಿ ಓದುಗಳೊಬ್ಬಳು ಕವಿಯೊಂದಿಗಿನ ಓದಿನಲ್ಲಿ,ಪಾತ್ರಗಳೊಂದಿಗೆ ಪರಕಾಯ ಪ್ರವೇಶ ಮಾಡಿದಾಗ ಆದ ಪರಿಣಾಮಗಳ ಕುರಿತು ವಿವರಣೆ ಮಾಡಿದ್ದಾರೆ.
ಕೊನೆಯ ಕಥೆ ಕೃತಿ ಶೀರ್ಷಿಕೆಯನ್ನೇ ಹೊಂದಿದ ಕಥೆ ಅಂತರಾಷ್ಟ್ರೀಯ ಕುಂಬಳಕಾಯಿ ಅಲ್ಲಿಯ ಧಾರ್ಮಿಕ ದಬ್ಬಾಳಿಕೆಯ ಮೂಲ ಜಾಗತಿಕ ಮೂಲ ನೆಲೆಗಟ್ಟಿನಲ್ಲೇ ನೆಡೆದು ಅಲ್ಲಿಯ ಸ್ಥಳೀಯ ಜನ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಅನ್ನುವದನ್ನು ತಿಳಿಸಿದ್ದಾರೆ. ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಜನರೊಂದಿಗೆ ಇರುವ ಪ್ರಮುಖ ನಿಕಟ ವರ್ತಿಗಳೇ ಸಮಾಜದ ಎದುರಿಗೆ ತೋರಿಕೆಯ ಮುಖವಾಡ ಧರಿಸಿ ಜನಸಾಮಾನ್ಯರನ್ನು ಹೇಗೆ ವಂಚನೆ ಮಾಡುತ್ತಾರೆ.ಅನ್ನುವುದನ್ನು ಚಿತ್ರಿಸಿದರೆ ಸಾಮಾನ್ಯ ಹೆಣ್ಣುಮಗಳೇ ಆದ ಸೈನಿಕನ ಹೆಂಡತಿ ಲಾಮಾನ ಕ್ರೌರ್ಯಕ್ಕೆ ಒಳಗಾದ ಮೂರು ಜನ ಭಾಷೆ ಬಾರದ ಹಸಿವಿನಿಂದ ಒದ್ದಾಡುವ ಹಸುಳೆಗಳಿಗೆ ಊಟ ಮಾಡಿಸಿ ಔದಾರ್ಯ ತೋರಿಸಿ ಆದರಿಸಿದವಳು ನಿಜಕ್ಕೂ ಮಾನವೀಯತೆಯ ಪ್ರತಿರೂಪ ಅನಿಸುತ್ತಾಳೆ.
ಒಟ್ಟಿನಲ್ಲಿ ಐದೂ ಕಥೆಗಳು ವಿಭಿನ್ನ ವಿಶೇಷ ಕಥಾ ಹಂದರ ಹೊಂದಿದ್ದು ಓದುಗರಲ್ಲಿ ಒಂದು ಸಾಮಾಜಿಕ ಚಿಂತನೆ ಹಚ್ಚುತ್ತವೆ ಅನ್ನುವುದರಲ್ಲಿ ಸಂದೇಹವಿಲ್ಲ.ಇನ್ನಷ್ಟು, ಮತ್ತಷ್ಟು ಕೃತಿ ಓದುಗರ ಓದಿಗೆ ಸಿಗಲಿ ಅನ್ನುವ ಶುಭ ಆಶಯದೊಂದಿಗೆ…
- ಪಾರ್ವತಿ ಜಗದೀಶ್
