ಜಿ. ವಿ. ಅಯ್ಯರ್ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದವರು. ಅವರ ಪೂರ್ಣ ಹೆಸರು ಗಣಪತಿ ವೆಂಕಟನಾರಾಯಣ ಅಯ್ಯರ್. ಅವರನ್ನು ‘ಕನ್ನಡ ಚಿತ್ರರಂಗದ ಭೀಷ್ಮ’ ಎಂದೇ ಕರೆಯುತ್ತಾರೆ. ಮುಂದೆ ಓದಿ…

ಫೋಟೋ ಕೃಪೆ : google
ಎಂಟನೇ ವಯಸ್ಸಿಗೇ ಗುಬ್ಬಿ ಕಂಪನಿಯನ್ನು ಸೇರಿ, ನಂತರ ಚಿತ್ರರಂಗ ಪ್ರವೇಶಿಸಿ ನಟರಾಗಿ ನಿರ್ದೇಶಕರಾಗಿ ಅಪಾರ ಹೆಸರು ಗಳಿಸಿದರು. ಅವರ ಹಂಸಗೀತೆ, ರಣಧೀರ ಕಂಠೀರವ, ಭಗವದ್ಗೀತೆ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಸ್ವಾಮಿ ವಿವೇಕಾನಂದ ಚಿತ್ರಗಳು ದಾಖಲೆ ನಿರ್ಮಿಸಿವೆ. ಈ ಮಹಾನ್ ಕಲಾವಿದ ಮರಣಿಸಿದಾಗ ಅವರಿಗೆ ೮೬ ವರ್ಷ ವಯಸ್ಸಾಗಿತ್ತು.
ಒಮ್ಮೆ ಚಿತ್ರದುರ್ಗದಲ್ಲಿ ಅಯ್ಯರ್ ನಟಿಸುತ್ತಿದ್ದ ನಾಟಕ ಕಂಪನಿ ಬೀಡುಬಿಟ್ಟಿತ್ತು. ಇದ್ದಕ್ಕಿದ್ದಂತೆ ಹಣದ ಮುಗ್ಗಟ್ಟಿನಿಂದ ನಾಟಕ ನಿಂತುಹೋಯಿತು. ವಿಪರೀತ ಸಾಲ, ಹಸಿವಿನಿಂದ ನಾಟಕದ ನಲವತ್ತು ಮಂದಿ ಕಲಾವಿದರೂ ಪರದಾಡಬೇಕಾಯಿತು. ಕಂಪನಿಯ ಮಾಲೀಕ ನೀಲಕಂಠಪ್ಪನವರು ಊರು ಬಿಟ್ಟು ಹೊರಟೇ ಹೋದರು. ಅಯ್ಯರ್ ಮತ್ತು ಟಿ. ಎನ್ ಬಾಲಕೃಷ್ಣ ಇಬ್ಬರೂ ನಾಟಕದಲ್ಲಿ ಬಣ್ಣ ಹಚ್ಚಿಕೊಳ್ಳುವಾಗ ಅಲ್ಪಸ್ವಲ್ಪ ಬಣ್ಣ ಉಳಿಸಿ ಇಟ್ಟುಕೊಂಡಿದ್ದರು. ಅದನ್ನು ತೆಗೆದುಕೊಂಡು ಹೋಗಿ ತಾವು ಬೋರ್ಡ್ ಬರೆದುಕೊಡುವುದಾಗಿ ಹೇಳುತ್ತಿದ್ದರೂ ಜನ ಇವರ ಹೊಸವೇಷ ನೋಡಿ ಪರಿಹಾಸ್ಯ ಮಾಡುತ್ತಿದ್ದರೇ ಹೊರತು, ಯಾರೂ ಬೋರ್ಡ್ ಬರೆಸುವ ಸಾಹಸ ಮಾಡಲಿಲ್ಲ. ಕೊನೆಗೆ ಒಬ್ಬ ವರ್ತಕ ಇವರಿಂದ ಬೋರ್ಡ್ ಬರೆಸಲು ಒಪ್ಪಿದ.

ಫೋಟೋ ಕೃಪೆ : ruthumana
ಬಾಲಕೃಷ್ಣ ಅವರಿಗೆ ಕಿವಿ ಕೇಳಿಸುತ್ತಿರಲಿಲ್ಲವಾದ್ದರಿಂದ ‘ಅದೆಲ್ಲಾ ಆಗಲ್ಲ. ಎಂಟು ರೂಪಾಯಿಗಿಂತ ಒಂದು ಪೈಸೆಯೂ ಕಡಿಮೆ ತೆಗೆದುಕೊಳ್ಳುವುದಿಲ್ಲ’ ಎಂದಾಗ ಅಯ್ಯರ್ ಬಾಲಣ್ಣ ಅವರ ಬಾಯಿ ಮುಚ್ಚಿಸಿ ಅಂತೂ ಹದಿನೈದು ರೂಪಾಯಿಗೆ ಬೋರ್ಡ್ ಬರೆದುಕೊಟ್ಟು ಕೆಲವು ದಿನ ಹೊಟ್ಟೆ ತುಂಬಾ ಊಟ ಮಾಡಿದರು. ಹೀಗೆ ಅವರ ಬೋರ್ಡ್ ಬರೆಯುವ ಕಾಯಕ ಸ್ವಲ್ಪದಿನ ಚೆನ್ನಾಗಿಯೇ ನಡೆಯಿತು. ಇಬ್ಬರೂ ಸಿಲ್ಕ್ ಜುಬ್ಬಾ ಹೊಲಿಸಿಕೊಂಡು ಖುಷಿಯಾಗಿಯೇ ಇದ್ದರು. ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಯಿತು. ಇವರು ನಾಟಕದ ಬಣ್ಣದಲ್ಲಿ ಬರೆದಿದ್ದರಿಂದ ಅವರು ಬರೆದಿದ್ದ ಬೋರ್ಡುಗಳೆಲ್ಲವೂ ನೀರಿಗೆ ಅಳಿಸಿ ಹೋದವು. ಇನ್ನು ಇಲ್ಲಿದ್ದರೆ ಉಳಿಗಾಲವಿಲ್ಲವೆಂದು ಅಯ್ಯರ್ ಮತ್ತು ಬಾಲಕೃಷ್ಣ ಇಬ್ಬರೂ ರೈಲ್ವೇ ಸ್ಟೇಷನ್ನಿಗೆ ಹೋಗಿ ರೈಲೊಂದನ್ನು ಏರಿದರು. ಆದರೆ ಊರವರು ಬಿಟ್ಟಾರೆಯೇ? ನಾಲ್ಕಾರು ಜನ ಅಲ್ಲಿಗೂ ಬಂದು ‘ಎಲ್ಲಿಗ್ಹೋಗ್ತೀರಪ್ಪಾ ಮೋಸಾ ಮಾಡಿ’ ಎಂದು ಗಲಾಟೆ ಮಾಡಿದಾಗ ಈ ಇಬ್ಬರು ಕಲಾವಿದರೂ ತಾವು ಹೊಟ್ಟೆಪಾಡಿಗಾಗಿ ಹೀಗೆ ಮಾಡಬೇಕಾಯಿತು ಎಂದು ಗೋಗರೆಯುತ್ತಾ ತಿಳಿಸಿದರು. ಸಹೃದಯರಾದ ದುರ್ಗದ ಜನ ಅವರ ಕಥೆ ಕೇಳಿ ಕರುಣೆ ತೋರಿ ಬಿಟ್ಟುಬಿಟ್ಟರು. ಆಗ ಅವರಿಗೆ ಗೊತ್ತಾಯಿತು ಹಸಿವು ಎಂಬ ರಾಕ್ಷಸ ಎಂತೆಂಥಹ ಕೆಲಸ ಮಾಡಿಸುತ್ತಾನೆ ಎಂದು!
- ಡಾ. ಎಂ ಎನ್ ಸುಂದರರಾಜ್ (ಡಾ. ಎಂ. ಎನ್. ಸುಂದರರಾಜ್ ಅಧ್ಯಕ್ಷರು ಕರ್ನಾಟಕ ಸಂಘ) ಶಿವಮೊಗ್ಗ.
