”ಡಾ. ಆನಂದ ಋಗ್ವೇದಿ ಅವರ ಕರಕೀಯ ಕುಡಿ ಕತೆಯಲ್ಲಿ ವೈವಿಧ್ಯಮಯ ಪಾತ್ರಗಳನ್ನು ಸೃಷ್ಟಿಸುವ ಮೂಲಕ ಮನುಷ್ಯನ ಸ್ವಭಾವದ ವೈಚಿತ್ರ್ಯಗಳ ಅನಾವರಣ ಮಾಡಿದ್ದಾರೆ” – ರಘುನಾಥ್ ಕೃಷ್ಣಮಾಚಾರ್ , ಮುಂದೆ ಓದಿ ಕರಕೀಯ ಕುಡಿ ಪುಸ್ತಕ ಪರಿಚಯ…
ಪುಸ್ತಕ : ಕರಕೀಯ ಕುಡಿ
ಲೇಖಕರು : ಡಾ. ಆನಂದ ಋಗ್ವೇದಿ
ಪ್ರಕಾಶನ : ರೂಪಾ ಪ್ರಕಾಶನ
ಪರಂಪರೆ ಮತ್ತು ವರ್ತಮಾನಗಳ ಮುಖಾಮುಖಿ,
- ಭೂಪೋತ್ತಮ: ಪಂಪ ಭಾರತದ ದುರ್ಯೋಧನ ಮತ್ತು ಕರ್ಣರ ನಡುವಿನ ಸ್ನೇಹವನ್ನು ಇಲ್ಲಿ ಬರುವ ಇಬ್ಬರು ಗೆಳೆಯರ ಸ್ನೇಹ ದೊಂದಿಗೆ ಸಮೀಕರಿಸಲಾಗಿದೆ. ಅಲ್ಲಿ ಭಾನುಮತಿ ದುರ್ಯೋಧನ ಮತ್ತು ಕರ್ಣರ ಸ್ನೇಹದ ನಿಕಷವಾಗಿ ಬಂದರೆ ಇಲ್ಲಿ ನಿರ್ವೀರ್ಯನಾದ ಪಾರ್ಥಸಾರಥಿಯ ಹೆಂಡತಿ ಬರುತ್ತಾಳೆ. ಅವಳ ಮಕ್ಕಳ ಬಯಕೆಯನ್ನು ತೀರಿಸಲು ತನ್ನ ಗೆಳೆಯನಾದ ವೇಲಾಯುಧನ್ ಸಾಧನವಾಗಿ ಬರುತ್ತಾನೆ. ಅವನ ವೀರ್ಯಾಣುಗಳನ್ನು ತನ್ನ ಹೆಂಡತಿಯ ಅಂಡಾಣುವಿನ ಜತೆಗೆ ಅವನಿಗೆ ಗೊತ್ತಿಲ್ಲದ ಹಾಗೆ ಕಸಿ ಮಾಡಿಸಿ ಪ್ರಣಾಳಶಿಶುವಿನ ಜನನಕ್ಕೆ ಕಾರಣನಾಗುತ್ತಾನೆ.ಅದು ಸ್ಪೋಟಗೊಳ್ಳುವುದು ಕತೆಯ ಕೊನೆಯಲ್ಲಿ ಆ ಮಗಳಿಗೆ ಮದುವೆ ಮಾಡಿಸುವಾಗ.

- ವಿರಾಟಪರ್ವ ಕತೆಯಲ್ಲಿ ಕುಮಾರವ್ಯಾಸನ ಕಾವ್ಯದಲ್ಲಿ ಬರುವ ಶಾಪಗ್ರಸ್ತ ಅರ್ಜುನ ನಪುಂಸಕನಾಗಿ ವಿದುರನ ಅಂತಃಪುರದಲ್ಲಿ ಉತ್ತರೆಗೆ ನಾಟ್ಯ ಕಲಿಸುತ್ತಾ ಕಳೆದ ಪ್ರಸಂಗವನ್ನು ಇಲ್ಲಿ ಕಥಾನಾಯಕನ ಬದುಕಿನೊಂದಿಗೆ ಸಮೀಕರಿಸಲಾಗಿದೆ. ಅವನಲ್ಲಿಗೆ ಬರುವ ಹೆಣ್ಣು ಅವನನ್ನು ಕೊನೆಯಲ್ಲಿ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುವುದು ಇದರ ದ್ಯೋತಕವಾಗಿದೆ. ೨. ಸಾಮಾಜಿಕ ಅನಿಷ್ಟ ಪದ್ಧತಿಗಳ ಪರಿಣಾಮಕ್ಕೆ ನಿದರ್ಶನವಾಗಿ ಇಲ್ಲಿನ ಕರಕಿಯ ಕುಡಿ ಕತೆಯನ್ನು ಪರಿಶೀಲಿಸಬಹುದು. ದೇವದಾಸಿ ಪದ್ಧತಿಗೆ ಸೇರಿದ ಹೆಣ್ಣು ಹೊನ್ನಮ್ಮ. ಅದಕ್ಕೆ ಬೇಕಾದ ಅಂಗಸೌಷ್ಟವವನ್ನು ಅವಳು ಹೊಂದದ ಪ್ರಯುಕ್ತ ಅವಳು ಮೂವತ್ತೈದರ ಹರೆಯಕ್ಕೆ ಮುಪ್ಪಾದಾಗ, ಅವಳ ಬಳಿಗೆ ಯಾರೂ ಬರದೆ ಜಯಾ, ಅವಳ ಬಂಧುವೊಬ್ಬ ದೇವದಾಸಿ ಯರಿಗೆ ಬ್ಯಾಂಕ್ ನವರು ಸಾಲಕೊಡುವ ಸೌಲಭ್ಯವನ್ನು ತಿಳಿದುಕೊಂಡು ಅವಳನ್ನು ವಿವಾಹವಾದ ನಾಟಕ ಮಾಡಿ ಅವಳ ಹೆಸರಿನಲ್ಲಿ ಸಾಲಪಡೆದು ಅಂಗಡಿ ತೆಗೆದು, ಅದನ್ನು ಸರಿಯಾಗಿ ನಡೆಸದೆ, ಇನ್ನೊಂದು ಹೆಣ್ಣನ್ನು ಮದುವೆಯಾಗಿ ಇವಳಿಗೆ ಮೋಸ ಮಾಡುತ್ತಾನೆ. ಬ್ಯಾಂಕ್ ನಿಂದ ಸಾಲದ ನೋಟಿಸ್ ಬಂದಾಗ ,ದಾರಿಕಾಣದೆ , ಕಟ್ಟಡದ ಕೂಲಿ ಕೆಲಸ ಮಾಡುತ್ತಿದ್ದ ಇವಳನ್ನು ಮಹಡಿಯ ಮೇಲಿನಿಂದ ಕೆಳಕ್ಕೆ ತಳ್ಳಿ ಇಲ್ಲವಾಗಿಸಿದ ಕ್ರೌರ್ಯ ಮೈ ನಡುಗಿಸುತ್ತದೆ.

(ಕರಕೀಯ ಕುಡಿ ಲೇಖಕರು ಡಾ.ಆನಂದ ಋಗ್ವೇದಿ)
- ಆಧುನಿಕತೆಯ ( ವಿರಾಟ ಪರ್ವ)ಪರಿಣಾಮ: ಗಂಡು ಹೆಣ್ಣಿನ ಸಂಬಂಧಗಳ ಮೇಲೆ ಆಗಿರುವ ಬಗೆಯನ್ನು ಇಲ್ಲಿನ ಒಂದು ಕತೆಯಲ್ಲಿ ಬರುವ ರೇವತಿಯ ಪಾತ್ರದ ಮೂಲಕ ಅನ್ವೇಷಣೆ ಮಾಡಿದ್ದಾರೆ. ಅವಳು ಲಿವ್ ಇನ್ ಸಂಬಂಧ ವನ್ನು ಹೊಂದಿದರೂ ಅವನಿಂದ ಮಗುವನ್ನು ಬಯಸಿ ಪಡೆದು ದೂರವಾಗುತ್ತಾಳೆ. ನಂತರ ಅನ್ಯಾನ್ಯ ಸಂಬಂಧಗಳಲ್ಲಿ ತೊಡಗುತ್ತಾಳೆ. ಯಾವುದೇ ಹಿಂಜರಿಕೆ ಇಲ್ಲದೆ. ಇದು ಮೌಲ್ಯಗಳ ಪಲ್ಲಟಗಳನ್ನು ನಿರ್ಲಿಪ್ತವಾಗಿ ದಾಖಲಿಸುತ್ತದೆ.
ವೀಣಾ ಶಾಂತೇಶ್ವರ ಅವರ ಒಂದು ಕತೆಯಲ್ಲಿ ಇದು ಈಗಾಗಲೇ ಕನ್ನಡ ಕಥಾಲೋಕದಲ್ಲಿ ಪ್ರವೇಶ ಪಡೆದಿದ್ದು, ಅದನ್ನು ಈ ಕತೆ ಮುಂದುವರಿಸುತ್ತದೆ.
- ಆದರ್ಶಗಳ ಅಧಃಪತನದ: ಸಂಕೇತವಾಗಿ ಶಂಕರ್ ನ ಪಾತ್ರ ಬರುತ್ತದೆ. ಕ್ರಾಂತಿಕಾರನ ವೇಷ ಹಾಕಿ ಅಂತರ್ಜಾತಿ ವಿವಾಹ ಆಗುವ ಅವನು ತನ್ನ ಜಾತಿಯ ಹೆಣ್ಣಿನ ಕಡೆಯಿಂದ ಲಾಭವಾಗುತ್ತದೆ ಎಂದು ತಿಳಿದ ಕೂಡಲೆ ಅವಳ ಕೈಬಿಟ್ಟು, ಅವಳನ್ನು ವಿವಾಹವಾಗುವ, ಉಳಿದ ಹೆಣ್ಣುಗಳ ಸಂಬಂಧ ಬೆಳೆಸುವ ಸಮಯ ಸಾಧಕನಾಗುತ್ತಾನೆ. ಇದಕ್ಕೆ ವಿರುದ್ಧವಾಗಿ ಜಾತ್ರೆ ಕತೆಯಲ್ಲಿ ಬರುವ ರೆಡ್ಡಿ ತಾನು ಕೈಹಿಡಿದ ಹೆಣ್ಣು ಕಮಲ ತನಗೆ ನಿಷ್ಠಳಾಗಿ ಉಳಿಯದಿದ್ದರೂ ಅವಳ ಕಡೆಗಾಲದವರೆಗೂ ಅವಳಿಗೆ ನಿಷ್ಠನಾಗಿಯೆ ಉಳಿಯುತ್ತಾನೆ. ಸುಲಗ್ನಾ ಸಾವಧಾನ ಕತೆಯಲ್ಲಿ ಬರುವ ಅವಿನಾಶ್ ತನಗೆ ನಿಷ್ಠಳಾಗಿ ಉಳಿಯದ ಹೆಂಡತಿಯಿಂದ ಬೇಸತ್ತು, ಕಡೆಗೆ ತನ್ನ ಗೆಳೆಯ ತೀರಿಕೊಂಡಾಗ ಅವನ ಹೆಂಡತಿಗೆ ಒಲಿಯುತ್ತಾನೆ. ಹೀಗೆ ವೈವಿಧ್ಯಮಯ ಪಾತ್ರಗಳನ್ನು ಸೃಷ್ಟಿಸುವ ಮೂಲಕ ಮನುಷ್ಯ ಸ್ವಭಾವದ ವೈಚಿತ್ರ್ಯಗಳ ಅನಾವರಣ ಮಾಡಿರುವುದು ಈ ಲೇಖಕರಿಗೆ ಇರುವ ಸೂಕ್ಷ್ಮ ಸಂವೇದನಾ ಶೀಲತೆಗೆ ನಿದರ್ಶನವಾಗಿದೆ. ಈ ಮೂಲಕ ಸಮಕಾಲೀನ ಜಗತ್ತಿನ ತಲ್ಕಣಗಳನ್ನು ಮತ್ತು ಅದು ಉಂಟುಮಾಡಿರುವ ಪಲ್ಲಟಗಳನ್ನು ತಮ್ಮ ಕತೆಗಳ ಮೂಲಕ ಸೆರೆಹಿಡಿದ ಶ್ರೇಯಸ್ಸು ಗೆಳೆಯರಾದ ಆನಂದ ಋಗ್ವೇದಿಯವರಿಗೆ ಸಲ್ಲುತ್ತದೆ. ಅದಕ್ಕೆ ತಕ್ಕ ಭಾಷಾಶೈಲಿ, ಸಂನಿವೇಶ ನಿರ್ಮಾಣ ಕೌಶಲ ಅವರಿಗೆ ಸಿದ್ದಿಸಿದೆ. ಪ್ರೀತಿಯಿಂದ ನಾಲ್ಕು ಪುಸ್ತಕಗಳನ್ನು ಕಳಿಸಿದ ಅವರಿಗೆ ಕೃತಜ್ಞತೆ ಮತ್ತು ಒಳ್ಳೆಯ ಕತೆಗಳನ್ನು ಓದುವ ಅವಕಾಶ ಕಲ್ಪಿಸಿದ ಅವರಿಗೆ ಅಭಿನಂದನ.
- ರಘುನಾಥ್ ಕೃಷ್ಣಮಾಚಾರ್ (ಲೇಖಕರು, ಚಿಂತಕರು)
