ವಿಜಯಪುರದ ಶ್ರೀಚಕ್ರಾಂಕಿತ ಶಿವಲಿಂಗ



ವಿಜಯಪುರದಲ್ಲಿರುವ ಸುಂದರೇಶ್ವರ  ದೇವಾಲಯದ ಅಧಿಕೃತವಾದ ಇತಿಹಾಸ ಇನ್ನೂ ತಿಳಿದುಬಂದಿಲ್ಲ, ಈ ದೇವಾಲಯದ ಕುರಿತು ಇತಿಹಾಸ ಪ್ರಾಜ್ಞರು ಬೆಳಕು ಚೆಲ್ಲಬೇಕಾಗಿದೆ . – ರಾಜಶೇಖರ ಎಸ್.ಬಿರಾದಾರ, ಮುಂದೆ ಓದಿ…

ಸುಂದರೇಶ್ವರ ದೇವಾಲಯ ವಿಜಯಪುರದಲ್ಲಿರುವ ನಾಲ್ಕನೂರು ವರ್ಷ ವರ್ಷ ಹಳೆಯದಾದ ಪ್ರಾಚೀನತೆಯನ್ನು ಹೊಂದಿರುವ “ಸುಂದರೇಶ್ವರ” ದೇವಾಲಯ. ಇಲ್ಲಿನ ಶಿವಲಿಂಗದ ಮೇಲೆ ಶ್ರೀಚಕ್ರವಿರುವುದರಿಂದ ಇದು ದೇಶದಲ್ಲಿಯೇ ಅಪರೂಪದ ಶಿವಲಿಂಗವೆಂದು ಹೇಳಬಹುದಾಗಿದೆ.

ಈ ಕಾರಣದಿಂದ ಈ ದೇವಸ್ಥಾನ ಬಹು ಪ್ರಾಮುಖ್ಯತೆಯನ್ನು ಪಡೆಯಬೇಕಾಗಿತ್ತು. ಆದರೆ ಪುರಾತತ್ವ ಇಲಾಖೆಯ ಅನಾದರಣೆಯಿಂದ ಅಷ್ಟೊಂದು ಪ್ರಚಾರ ದೊರಕಿಲ್ಲ. ಅದು ಅಲ್ಲದೆ, ವಿಜಯಪುರ ನಗರವಾಸಿಗಳಿಗೆ ಇಂಥದೊಂದು ವಿಶಿಷ್ಟ ಮಾದರಿಯ ಶಿವಲಿಂಗ ನಮ್ಮ ನಗರದಲ್ಲಿಯೇ ಇದೆ ಎಂಬ ಮಾಹಿತಿಯೂ ಇಲ್ಲ. ಇದು ನಿಜಕ್ಕೂ ಖೇದಕರ ಸಂಗತಿ. ಈ ದೇವಾಲಯವನ್ನು ಗಮನಿಸಿದರೆ…ಇದು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ “ಸಿಂಕ್ರೇಟಿಕ್” ಕಲೆಯನ್ನು ಹೊಂದಿರುವುದು ಕಂಡು ಬರುವುದು.

This slideshow requires JavaScript.

ಕೆಲವರ ಪ್ರಕಾರ ಈ ಚಕ್ರಾಂಕಿತ ಶಿವಲಿಂಗ ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಅಭಿಪ್ರಾಯಪಡುತ್ತಾರೆ. ಕಾರಣ ಆದಿಶಂಕರರು ಶಿವ-ಶಕ್ತಿ ಸಮ್ಮೀಲನದ ದ್ಯೋತಕವಾಗಿ ಶ್ರೀ ಚಕ್ರಾಂಕಿತ ಶಿವಲಿಂಗಗಳನ್ನು ಸ್ಥಾಪಿಸಿದರು ಎನ್ನಲಾಗುತ್ತಿದೆ. ಹೀಗಾಗಿ ಶ್ರೀಚಕ್ರಾಧಾರಿತ ಶಿವಲಿಂಗವನ್ನು ಶಿವ-ಪಾರ್ವತಿಯರ “ಪರಾಶಕ್ತಿ”ಯ ಸಂಕೇತವೆಂದು ಆಸ್ತಿಕರು ನಂಬುತ್ತಾರೆ. ದುಷ್ಟರನ್ನು ಸೆದೆಬಡೆದು ಶಿಷ್ಟರನ್ನು ಈ ಶ್ರೀಚಕ್ರಾಧಾರಿತ ಸುಂದರೇಶ್ವರನು ರಕ್ಷಿಸುತ್ತಾನೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿ ಜನಜನಿತವಾಗಿದೆ.

ಆಸ್ತಿಕರ ಜಾಗೃತ ಸ್ಥಳವಾಗಿ, ಶಿವನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯಂದು ಇಲ್ಲಿ ಜನಸಾಗರವೇ ಸೇರುತ್ತದೆ. ಅಂದು ನಸುಕಿನ ನಾಲ್ಕು ಘಂಟೆಗೆ ದೇವಾಲಯದ ಬಾಗಿಲು ಶಿವಭಕ್ತರಿಗೆ ಮುಕ್ತವಾಗಿರುತ್ತದೆ. ಅಂದಾಜು ಇದು (17ನೇ ಶತಮಾನ) ಮೂರ್ನಾಲ್ಕು ನೂರು ವರ್ಷಗಳ ಹಿಂದೆ ಕಟ್ಟಿದ ಕಟ್ಟಡವಾಗಿದ್ದು. ಈ ದೇಗುಲದ ಒಳಗೆ ವಿಶಾಲವಾದ ಪ್ರಾಂಗಣವಿದೆ. ಇಲ್ಲಿ ಗರುಢಗಂಬ, ಹನುಮಂತನ ಮತ್ತು ಗಣಪತಿ ಮೂರ್ತಿಗಳಿವೆ. ಸುಂದರೇಶ್ವರನಿಗೆ ಎದುರಾಗಿ ನಂದಿ ವಿಗ್ರಹವಿದೆ. ಅಲ್ಲದೆ,ಇಲ್ಲಿ ಸುಂದರೇಶ್ವರನ ಗರ್ಭಗುಡಿ ಸ್ವಲ್ಪ ಕೆಳಗಡೆವಿರುವುದರಿಂದ ಒಂದೆರೆಡು ಮೆಟ್ಟಿಲು ಇಳಿದು ಚಕ್ರಾಧಾರಿತ ಶಿವಲಿಂಗವನ್ನು ದರ್ಶಿಸಬಹುದಾಗಿದೆ.



ಈ ವಿಶೇಷ ಶಿವಲಿಂಗದ ಜೊತೆಗೆ ಇನ್ನೊಂದು ಸಾಮಾನ್ಯವಾದ ಶಿವಲಿಂಗವೂ ಕೂಡಾ ಇದೆ. ಇಂಥ ಪ್ರಾಚೀನ ದೇಗುಲದ ಕುರಿತ ಅಧಿಕೃತವಾದ ಇತಿಹಾಸ ಇನ್ನೂ ತಿಳಿದುಬಂದಿಲ್ಲ. ಈ ದೇವಾಲಯದ ನಿಖರ ಚರಿತ್ರೆಯ ಮೇಲೆ ಇತಿಹಾಸ ಪ್ರಾಜ್ಞರು ಬೆಳಕು ಚೆಲ್ಲಬೇಕಾಗಿದೆ.ಇದು ತನ್ನ ವಿಶಿಷ್ಟತೆಯಿಂದ ರಾಷ್ಟ್ರದ ಸಕಲ ಶಿವಭಕ್ತರ ಗಮನ ಸೆಳೆಯಬೇಕಾಗಿತ್ತು. ಆದರೆ ಪ್ರಚಾರದ ಕೊರತೆಯಿಂದ ಹಾಗೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ಕೆಲವೇ ಕೆಲವು ಭಕ್ತರಿಗೆ ಮಾತ್ರ ಈ ದೇವಳದ ಮಾಹಿತಿ ಇದೆ.ಹೀಗಾಗಿ,ಇಂಥ ಪ್ರಾಚೀನ ಸ್ಮಾರಕಕ್ಕೆ ಇಂದು ದೇಶದಲ್ಲೆಡೆ ಪ್ರಚಾರ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಮುಜರಾಯಿ ಇಲಾಖೆ ಇತ್ತ ತುರ್ತಾಗಿ ಗಮನಹರಿಸಬೇಕಾಗಿದೆ.ಈ ದೇವಾಲಯದ ಒಳಾವರಣ, ಹೊರಾವರಣದ ಸ್ವಚ್ಛತೆ, ಮುಖ್ಯ ರಸ್ತೆಯುದ್ದಕ್ಕೂ ಸುಂದರೇಶ್ವರ ದೇವಸ್ಥಾನದ ಹೆಸರಿನ ನಾಮಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು. ಇಲ್ಲಿಗೆ ಭಕ್ತರು ಆಗಮಿಸಬೇಕಾದರೆ,ಬೆಂಗಳೂರು-ವಿಜಯಪುರ, ಹುಬ್ಬಳ್ಳಿ-ವಿಜಯಪುರಕ್ಕೆ ಬಸ್ಸು ಹಾಗೂ ರೈಲ್ವೆ ಸೌಲಭ್ಯವಿದೆ. ವಿಜಯಪುರದ ಗಾಂಧಿ ಚೌಕದಿಂದ ಗೋಳಗುಮ್ಮಟ ರಸ್ತೆಯ ಮುಖೇನ ಸಾಗಿ,ರಸ್ತೆಯ ಬಲಭಾಗದಲ್ಲಿ ಪರ್ಲ್ ಹೋಟೆಲ್ ಹತ್ತಿರ ತಿರುಗಿದರೆ…ಈ ದೇವಾಲಯ ತಲುಪಬಹುದು.


  • ರಾಜಶೇಖರ ಎಸ್.ಬಿರಾದಾರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading