”ಪೊಲಾವರಂ ಬೃಹತ್ ಅಣೆಕಟ್ಟು ಯೋಜನೆಯ ರಾಕ್ಷಸ ಯಂತ್ರಗಳು ಬೆಟ್ಟ , ಗುಡ್ಡ, ಮರಗಿಡಗಳನ್ನೆಲ್ಲಾ ಬಗೆದು ರಸ್ತೆಯುದ್ದಕ್ಕೂ, ಬಂಡೆ ಹಿಂಡಿದ ಬಿಳಿಬೂದಿ ಮುಖಕ್ಕೆ ಉಗಿದಂತೆ ರಸ್ತೆಯುದ್ದಕ್ಕೂ ರಾಚುತ್ತಿತ್ತು.ಗೋದಾವರಿಯು ಬೇಡವೆನ್ಪುವಷ್ಟರ ಮಟ್ಟಿಗೆ ರೋಸಿಬಿಟ್ಟೆವು” – ಡಾ.ಸ್ವಾಮಿ ಎಚ್ ಆರ್, ಮುಂದೆ ಓದಿ…
‘ದಕ್ಷಿಣ ಗಂಗಾ’ ಎಂದೆ ಪ್ರಸಿದ್ಧವಾಗಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಸಣ್ಣ ಪುಟ್ಟ ನದಿಗಳನ್ನು ಒಡಲಲ್ಲಿ ಇಟ್ಟುಕೊಂಡು ಪೂರ್ವದಿಕ್ಕಿಗೆ ಹರಿದು ಸಾಗರ ಸೇರುವ ಗೋದಾವರಿ ಮೇಲೆ ವಿಹರಿಸಲು ಹೇಳಿದ್ದು ಗೆಳೆಯ ಅಶೋಕ ಪಟವಾರಿ.

ಬೆಂಗಳೂರಿನಿಂದಲೆ ಆನ್ಲೈನ್ ಮುಂಗಡ ಬುಕ್ಕಿಂಗ್ ಮಾಡಿಸಿಕೊಂಡು ಹಣ ಪಡೆದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಹಂದ್ರಾಳ ಗೆಳೆಯರಾದ ಕೃಷ್ಣರಾಜ ನಿವೃತ್ತ I P S ಪೊಲೀಸ್ ಅಧಿಕಾರಿಗಳ ಸಹೋದ್ಯೋಗಿಗಳಾದ ರಾಜು ಅವರು ಕರೆಮಾಡಿ ಬೇರೆ ಬೋಟ್ ವ್ಯವಸ್ಥೆ ಮಾಡಿ ಬೀಳ್ಕೊಟ್ಟರು. ದೋಣಿ ಹತ್ತುವ ಸ್ಥಳಕ್ಕೆ ತಲುಪಲು ವಾಹನದಲ್ಲಿ ಪ್ರಯಾಣಿಸುವಾಗ ಮುಂಗಡ ಪಡೆದು ಮಾಯವಾದವನ ಬಗ್ಗೆ ಚಾಲಕನ ಬಳಿ ಗೊಣಗುತ್ತಿರುವಾಗಲೆ, ಆ ಕಡೆಯಿಂದ” ಯಾಡುಂಡಾರು “ಎಂಬ ಮುಂಗಡ ಪಡೆದವನ ಕರೆ ಬಂದಾಗ , ನಾನು ಸಿಟ್ಟಿನಿಂದಲೇ ಚಾಲಕನಿಗೆ ಮೊಬೈಲ್ ಕೊಟ್ಟೆ. ಅವನು ನಂತರ ಅವರ ಮಗು ನೀರಲ್ಲಿ ಹಾಕಿದ್ದರಿಂದ ಆಫ್ ಆಗಿತ್ತಂತೆ. ನಿಮ್ಮ ಬಳಿ ಮುಂಗಡ ಮುರಿದು ಉಳಿಕೆ ಹಣ ಪಡೆಯಲು ಹೇಳಿದ್ದಾರೆ ಏಜೆಂಟ್, ಎಂದು ಮುಖ ನೋಡಿದ .
ಕವರ್ ಆಗಿದ್ದ ಮಾಸ್ಕನ್ನು ಈ ಪರಿಸರದಲ್ಲಾದರೂ ಬಿಚ್ಚೊಣ ಎಂದರೆ ಎದುರಾದದ್ದು ಪೊಲಾವರಂ ಬೃಹತ್ ಅಣೆಕಟ್ಟು ಯೋಜನೆಯ ರಾಕ್ಷಸ ಯಂತ್ರಗಳು ಬೆಟ್ಟ , ಗುಡ್ಡ, ಮರಗಿಡಗಳನ್ನೆಲ್ಲಾ ಬಗೆದು ರಸ್ತೆಯುದ್ದಕ್ಕೂ, ಬಂಡೆ ಹಿಂಡಿದ ಬಿಳಿಬೂದಿ ಮುಖಕ್ಕೆ ಉಗಿದಂತೆ ರಸ್ತೆಯುದ್ದಕ್ಕೂ ರಾಚುತ್ತಿತ್ತು. ರೈತರು ಬೆಳೆದ ಪೈರುಗಳ ಮೇಲೆ ಬೂದಿಮಂಜಿನಂತೆ ದೂಳು ಕುಳಿತು ಪತ್ರ ಹರಿತ್ತು ಕ್ರಿಯೆ ನಡೆಯದೆ ಇಳುವರಿ ಎಕ್ಕುಟ್ಟೋಗದು ಖಚಿತ ಎನಿಸಿತು ! ಒಂದು ಕ್ಷಣ ಯಾವ ಗೋದಾವರಿಯು ಬೇಡವೆನ್ಪುವಷ್ಟರ ಮಟ್ಟಿಗೆ ರೋಸಿಬಿಟ್ಟೆವು , ಅಷ್ಟರಲ್ಲಿ ಪಾಪಿಕೊಂಡ, ಪಾಪಿಬೆಟ್ಟ ಎಂದು ಬೋಟ್ ಬಾಯಿಗಳ ಕೂಗು ಕೇಳಿಸಿತು.
ಈ ಬೃಹತ್ ಯೋಜನೆಯಿಂದ ಸಹಸ್ರಾರು ರೈತರಿಗೆ , ಬೃಹತ್ ನಗರಗಳ ನಾಗರಿಕಜನರಿಗೆ ನೀರು, ವಿದ್ಯುತ್ ಪೂರೈಸಿ ಪೊರೆಯುವ ಜೀವದಾತೆ ಗೊದಾವರಿ ಒಡಲ ಆಸರಿಸಿ ಜೀವವಿಡಿದು ಬದುಕುತ್ತಿರುವ ಬುಡಕಟ್ಟುಗಳು ,ದಲಿತರು ಶತಮಾನಗಳಿಂದ ಉಸಿರಾಡುತ್ತಿರುವ ನೂರಾರು ಹಳ್ಳಿಗಳು , ಇರುವೆಂಬತ್ತುಕೋಟಿ ಜೀವಿಗಳು ಮುಳುಗಿದರೂ ಗೋದಾವರಿ ಮೌನವಾಗಿ ಪ್ರತಿಭಟಿಸಿದರೆ, ಪಾಪಿಗುಡ್ಡಗಳು ಮಾತ್ರ ರಾಕ್ಷಸರಂತೆ ಗಹಗಹಿಸಿ ಕೇಕೆ ಹಾಕುವುದ ಮೌನವಾಗಿ ವೀಕ್ಷಿಸುತ್ತಿದ್ದ ನಮಗೆ, ಇಡೀ ದಿನ ಹೊಟ್ಟೆ ಪಾಡಿಗಾಗಿ ಹಳ್ಳಿಮಕ್ಕಳು ಡ್ಯಾನ್ಸ್ ಆಡುತ್ತಾ, ನಗಿಸುತ್ತಾ ತೆಲುಗು ಚಿತ್ರಗಳ ಚಿತ್ರೀಕರಣ ಇಲ್ಲೆ ಜರುಗಿದ್ದು ಎಂದು ತೋರಿಸಿ ರಂಜಿಸಿದರೆ… ದ್ವೀಪಗಳ ಕಾಡ ಕಂದಗಳು ತಾಯ್ನೆಲವನ್ನು ಬಿಟ್ಟು ಕದಲೆವೆಂದು ಶೈತಾನ ಯಂತ್ರಗಳ ಮುಂದೆ ಕಾಡಮೂಲ ಹಣ್ಣು,ಬಿದುರಿನಕರ ಕೌಶಲ್ಯಗಳನ್ನು ಪ್ರವಾಸಿಗರಿಗೆ ಬಿಕರಿ ಮಾಡುತ್ತಿದ್ದು, ಮನುಷ್ಯರ ದುರಾಸೆಯ ಮುಂದೆ ಜೀವಪರ ವೈಜ್ಞಾನಿಕ ಚಿಂತನೆಗಳು , ಪರಿಸರ ,ಆದಿವಾಸಿಗಳ ಪರ ಹೋರಾಟಗಳು ಸಮಾಧಿಯಾಗುತ್ತಿರುವುದಕ್ಕೆ … ನಾವು ಸಾಕ್ಷಿ ಎಂಬುದೇ ದುರಂತ…
- ಡಾ.ಸ್ವಾಮಿ ಎಚ್ ಆರ್ (ಲೇಖಕರು, ಚಿಂತಕರು)
