ಡಾ.ಎಸ್.ವಿ. ಪ್ರಭಾವತಿ ಅವರ ‘ಗಾರ್ಗಿ’ ಕಾದಂಬರಿಯುದ್ದಕ್ಕೂ ಹಲವು ಧಾರ್ಮಿಕ, ಸಾಮಾಜಿಕ ವಿಷಯಗಳು ಚರ್ಚೆಗೊಳ್ಳುತ್ತವೆ. ಕೃತಿ ಪುರಾಣಗಳಿಗಿಂತಲೂ ಹಿಂದಿನ ಕತೆಯನ್ನು ತೆರೆದಿಡುವುದರಿಂದ ಅಲ್ಲಿಂದಲೇ ಕುತೂಹಲ ಬೆಳೆಸುತ್ತಲೇ ಹೋಗುತ್ತದೆ.ವಿದ್ಯಾ ಶಿರಹಟ್ಟಿ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಗಾರ್ಗಿ
ಲೇಖಕಿ : ಡಾ.ಎಸ್.ವಿ. ಪ್ರಭಾವತಿ
ಪ್ರಕಾಶಕರು :ಸುಂದರ ಸಾಹಿತ್ಯ,ಬೆಂಗಳೂರು
ಪುಟಗಳು : 104
ಬೆಲೆ : ರೂ.100.00
ಗಾರ್ಗಿ ಸೋತು ಗೆದ್ದಳೋ ಗೆದ್ದು ಸೋತಳೋ ?
2007 ರಲ್ಲಿಯೇ ಪ್ರಕಾಶ ಕಂಡು 2019 ರಲ್ಲಿ ದ್ವಿತೀಯ ಮುದ್ರಣ ಕಂಡ ಪುಟ್ಟದೇ ಎನ್ನಬಹುದಾದ ಕೃತಿ ಗಾರ್ಗಿ. ಈ 104 ಪುಟಗಳಲ್ಲಿ ಅಡಗಿದ್ದ ವಿಷಯಜ್ಞಾನ, ಆ ಜ್ಞಾನದ ಆಳಗಲಗಳು ಬೆರಗು ಮೂಡಿಸುವಂಥವು. ಕನ್ನಡ ಸಾಹಿತ್ಯಕ್ಕೆ ಕೊಂಚ ಅಪರಿಚಿತವೇ ಎನಿಸಿದ್ದ ವೇದ ಹಾಗೂ ಸ್ಮೃತಿಗಳ ಮನ್ವಂತರ ಕಾಲದ ವಸ್ತು, ಭಾರತದ ವೇದಗಳು ಹಾಗೂ ಅವುಗಳನ್ನು ವ್ಯಾಸರು ಋಗ್ವೇದ,ಸಾಮವೇದ,ಯಜುರ್ವೇದ ಹಾಗೂ ಅಥರ್ವಣ ವೇದ ಎಂದು ನಾಲ್ಕು ಭಾಗಗಳಾಗಿ ವಿಭಾಗಿಸಿ ತಮ್ಮ ನಾಲ್ವರು ಶಿಷ್ಯರಾದ ವೈಶಂಪಾಯನ, ಪೈಲ,ಸುಮಂತು ಹಾಗೂ ಜೈಮಿನಿಯರಿಗೆ ನೀಡುವ ವಿವರಗಳೊಂದಿಗೆ ರೋಚಕವಾಗಿ ಆರಂಭವಾಗುವ ಕೃತಿ ಪುರಾಣಗಳಿಗಿಂತಲೂ ಹಿಂದಿನ ಕತೆಯನ್ನು ತೆರೆದಿಡುವುದರಿಂದ ಅಲ್ಲಿಂದಲೇ ಕುತೂಹಲ ಬೆಳೆಸುತ್ತಲೇ ಹೋಗುತ್ತದೆ. ಅದರಲ್ಲಿಯೂ ಅಲ್ಲೆಲ್ಲ ಮಹಿಳೆಯರ ಸಾಧನೆಯ ಕುರಿತು ನಡೆವ ಚರ್ಚೆಗಳು ಬಲು ಆಸಕ್ತಿದಾಯಕ ಎನಿಸಿಬಿಡುತ್ತವೆ. ಮುಂದಿನ ಸಂಹಿತೆಗಳು, ಟೀಕೆ, ವ್ಯಾಖ್ಯಾನಗಳನ್ನು ರಚಿಸಲು ಆಯಾ ಮುನಿಗಳ ಶಿಷ್ಯರೆಲ್ಲರ ಸಹಕಾರ ಬೇಕಾಗುತ್ತದೆ ಎಂಬಲ್ಲಿ ಆ ಶಿಷ್ಯಂದಿರಲ್ಲಿ ಬ್ರಹ್ಮವಾದಿನಿಯರಾದ ಮೈತ್ರೇಯಿ, ಗಾರ್ಗಿ ಮಾತ್ರವಲ್ಲ ಅಶ್ವಘೋಷಾ, ಘೃತಾಚಿ, ಊರ್ವಶಿ, ಉದಯಭಾರ್ತಿ, ವೇದವತಿ, ಘೋಷಾ, ವಾಗ್ಪ್ರಾಣಿ, ಸಪ್ರಜ್ಞೆ, ಸೂರ್ಯಾ, ದಾಕ್ಷಾಯಣಿ, ರೋಮಶಾ, ಲೋಪಾಮುದ್ರಾ ಈ ಎಲ್ಲ ಕನ್ಯೆಯರ ಹೆಸರುಗಳೂ ಉಲ್ಲೇಖಿತವಾಗುತ್ತವೆ. ವೇದಮಂತ್ರಗಳು ಹಾಗೂ ಅವುಗಳ ಅರ್ಥ ಎರಡರ ಮೇಲೆಯೂ ಈ ಕನ್ಯೆಯರಿಗಿದ್ದ ಪ್ರಭುತ್ವ ಮತ್ತು ಅದರ ಬಗ್ಗೆ ಗುರು ವೈಶಂಪಾಯನ ತೋರುತ್ತಿದ್ದ ಅಭಿಮಾನ ಈ ಎಲ್ಲವನ್ನೂ ಲೇಖಕಿ ಮಂಡಿಸಿದ ಪರಿ ಅಚ್ಚರಿಯನ್ನೂ ಆನಂದವನ್ನೂ ಒಟ್ಟಿಗೇ ಉಂಟು ಮಾಡುವಂಥದ್ದು. ವೇದಗಳನ್ನೇ ಇನ್ನೂ ಬೆಳೆಸಿ ಬ್ರಾಹ್ಮಣಗಳಾಗಲಿ, ಅರಣ್ಯಕಗಳಾಗಲಿ, ಸಂಹಿತೆ ಹಾಗೂ ಉಪನಿಷತ್ ಎಂದು ಬೇರೆ ಬೇರೆ ಮಾಡಲು ತಮ್ಮ ಶಿಷ್ಯರುಗಳಿಗೆ ನೀಡುವ ಬಗೆಗಿನ ಇಲ್ಲಿಯ ಪುರಾಣೋಕ್ತ ಸಂಗತಿಗಳಿಗೆ ತಮ್ಮದೇ ಕಲ್ಪನೆಯ ಉಡುಗೆ ತೊಡಿಸಿ ಸಂಭಾಷಣೆ ವಿವರಣೆಗಳಲ್ಲಿ ಪ್ರತಿಪಾದಿಸಿದ ಲೇಖಕಿಯ ಆತ್ಮವಿಶ್ವಾಸ ನಿಜಕ್ಕೂ ಅಗಾಧವಾದ ಆಶ್ಚರ್ಯವನ್ನುಂಟು ಮಾಡುತ್ತದೆ.
ಕುರುವಂಶದ ಜನಮೇಜಯ ಸರ್ಪಯಾಗ ನಡೆಸುತ್ತಿರುವುದರ ಬಗ್ಗೆ ಬಹಳ ಕಳವಳಗೊಂಡಿದ್ದ ವ್ಯಾಸರು ಹಿಂದಿನ ಕತೆಯನ್ನೆಲ್ಲ ಹೇಳಿ ಅದನ್ನು ನಿಲ್ಲಿಸುವುದಕ್ಕಾಗಿ ತಮ್ಮ ಶಿಷ್ಯನಾದ ವೈಶಂಪಾಯನನನ್ನು ಹಸ್ತಿನಾಪುರಕ್ಕೆ ಕಳಿಸುವುದರೊಂದಿಗೆ ಆರಂಭವಾಗುತ್ತದೆ ಕತೆ . ಮುಂದೆ ರಾಜರ್ಷಿಯಾದ ಮಿಥಿಲೆಯ ಜನಕ ಮಹಾರಾಜನ ಆಸ್ಥಾನದಲ್ಲಿ ನಡೆಯುವ ವೇದಗಳ ಕುರಿತಾದ ಚರ್ಚೆಯೊಂದಿಗೆ ಮುಂದುವರಿಯುತ್ತದೆ. ಯಾಜ್ಞವಲ್ಕ್ಯ ಮೈತ್ರೇಯಿ ಗಾರ್ಗಿಯರೊಂದಿಗೆ ಈ ಚರ್ಚೆಯಲ್ಲಿ ಬಾಗವಹಿಸಿದ್ದು, ಅಲ್ಲಿಯ ಪುರೋಹಿತರನ್ನು ಸೋಲಿಸಿದ್ದು ಮುಂತಾದ ವಿವರಗಳೊಂದಿಗೆ ಕತೆ ಮುಂದುವರಿಯುತ್ತದೆ. ಇಲ್ಲಿನ ಒಂದು ಉಲ್ಲೇಖ ನನ್ನನ್ನು ಸ್ವಲ್ಪ ಗೊಂದಲಕ್ಕೆ ಕೆಡವಿತು. ಬಂಗಾರದಲ್ಲಿ ಕೆತ್ತಿದ ಬೊಂಬೆಯತಿದ್ದ ಎಂಟು ವರ್ಷದ ಸೀತೆಯ ಉಲ್ಲೇಖ ಇಲ್ಲಿ ಬರುತ್ತದೆ. ನಾನು ಓದಿದ್ದ ಪ್ರಕಾರ ರಾಮಾವತಾರ ಮೊದಲು ನಡೆದದ್ದು ಅಂದರೆ ತ್ರೇತಾಯುಗದ ಕತೆ ರಾಮಾಯಣ. ಇಲ್ಲಿ ಬರುವ ಕತೆ ದ್ವಾಪರದ ನಂತರದ್ದು ಅಂದರೆ ಶ್ರೀಕೃಷ್ಣ,ಪಾಂಡವರು,ಕುರುಕ್ಷೇತ್ರ ಯುದ್ಧ ಇವೆಲ್ಲದರ ಹಲವು ಕಾಲ ನಂತರದ್ದು. ಏಕೆಂದರೆ ಜನಮೇಜಯ ಅರ್ಜುನನ ಮರಿಮಗ. ಹಾಗಿದ್ದರೆ ಇಲ್ಲಿ ಪುಟ್ಟ ಬಾಲಕಿಯಾಗಿ ಸೀತೆ ಹೇಗೆ ಕಾಣಿಸಿಕೊಳ್ಳಲು ಸಾಧ್ಯ ? ಇದು ಸಂದೇಹ ಅಷ್ಟೇ. ಈ ಬಗ್ಗೆ ಚರ್ಚಿಸುವಷ್ಟು ವೇದ ಪುರಾಣಗಳ ಜ್ಞಾನ ನನಗಿಲ್ಲ.. ಚರ್ಚಿಸುವಷ್ಟೇನು ಆ ಜ್ಞಾನವೇ ನನ್ನಲ್ಲಿ ಶೂನ್ಯ. ಹಾಗಾಗಿ ನಾನು ಈ ಕೃತಿಯನ್ನು ನನ್ನ ಚಿಂತನಮಂಥನಕ್ಕೆ ಹೆಚ್ಚು ಒಳಪಡಿಸದೆ ಕತೆಯ ಹಾಗೆ ಓದುತ್ತ ನಡೆದೆ.

ಕಾದಂಬರಿಯುದ್ದಕ್ಕೂ ಮಿಂಚುವವನು ಯಾಜ್ಞವಲ್ಕ್ಯ. ವೈಶಂಪಾಯನರೊಂದಿಗೆ ವ್ಯಾಸರಿಗೂ ನಿಷ್ಠ ಶಿಷ್ಯನಾಗಿ, ಬ್ರಹ್ಮವಾದಿನಿ ಆಗುತ್ತೇವೆ ಎಂದು ವೇದಾಧ್ಯಯನದಲ್ಲಿ ನಿರತರಾದ ಮೈತ್ರೇಯಿ,ಗಾರ್ಗಿಯರಿಗೆ ಪ್ರಬುದ್ಧ ಗುರುವಾಗಿ, ಉದ್ದಾಮ ಪಂಡಿತನಾಗಿ, ಕಾತ್ಯಾಯಿನಿಗೆ ಒಳ್ಳೆಯ ಪತಿಯಾಗಿ , ಸಖನಾಗಿ , ತನ್ನ ಕರ್ತವ್ಯಕ್ಕೆ ಬದ್ಧನಾದ ಪ್ರಖರ ನಿಲುವಿನ ವ್ಯಕ್ತಿಯಾಗಿ ಅವನ ಪಾತ್ರ ಕೃತಿಯ ತುಂಬ ಕಣ್ತುಂಬುತ್ತದೆ. ಆದರೆ ಕತೆಯುದ್ದಕ್ಕೂ ಹಿನ್ನೆಲೆಯ ಪಾತ್ರವಾಗಿ ನಿಂದರೂ ಮನವನ್ನು ಸೂರೆಗೊಂಡವಳು ಅವರ ಪತ್ನಿ ಕಾತ್ಯಾಯಿನಿ. ಸ್ತ್ರೀಸಹಜ ಗೃಹಕೃತ್ಯಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಂಡಿದ್ದರೂ ಅಕ್ಕಂದಿರಾದ ಮೈತ್ರೇಯಿ,ಗಾರ್ಗಿಯರು ಪಠಿಸುತ್ತಿದ್ದಾಗಲೇ ವೇದಪಾಠವನ್ನೂ ಪರಿಚಯಿಸಿಕೊಂಡವಳು. ಯಾವುದೇ ಪೂಜೆ,ಯಜ್ಞ ಯಾಗಾದಿಗಳಿಗೆ ಎಲ್ಲ ಸಿದ್ಧತೆಗಳನ್ನೂ ತ್ರಿಕರಣಪೂರ್ವಕವಾಗಿ ಮಾಡಿಕೊಡುವಲ್ಲಿ ನಿಪುಣಳು. ಬ್ರಹ್ಮಚರ್ಯೆ ಪಾಲಿಸುವಲ್ಲಿ ಮದುವೆಯ ದಿನದಿಂದಲೇ ಪತಿಯ ಸಹಚಾರಿಯಾಗಿ ಗಟ್ಟಿ ನಿಂದವಳು. ಎಲ್ಲಕ್ಕಿಂತ ಹೆಚ್ಚಾಗಿ ಇಂಗಿತಜ್ಞೆ. ಪತಿ ಧ್ಯಾನಮಗ್ನನಾಗಿದ್ದಾನೋ ಇಲ್ಲವೋ ,ಅವನಿಗೆ ತಪ ಸಿದ್ಧಿಯಾಯಿತೋ ಇಲ್ಲವೋ, ಅವನ ಮನದೊಲವು ಎತ್ತ ಹರಿಯುತ್ತಲಿದೆ ಎಂಬುದನ್ನು ಕೇವಲ ಅವನ ಮೊಗ ನೋಡಿಯೇ ಅರಿಯಬಲ್ಲ ಚದುರೆ. ಬರೀ ಪತಿಯನ್ನು ಮಾತ್ರವಲ್ಲ ಅವನ ಅನುಯಾಯಿಗಳಾದ ಮೈತ್ತ್ರೇಯಿ,ಗಾರ್ಗಿಯರನ್ನೂ ಸರಿಯಾಗಿ ಅರಿತುಕೊಂಡ ದ್ದಲ್ಲದೇ ಅವರ ಮನದಿಚ್ಛೆ ಪೂರ್ಣವಾಗುವಂತೆ ಹವಣಿಸಿದ ಸಿದ್ಧಹಸ್ತೆ. ಲೇಖಕಿಗೂ ಈ ಪಾತ್ರದ ಮೇಲಿನ ಒಲವು,ಆದರ ಹೆಚ್ಚು ಎಂಬುದು ಓದುವಾಗ ಮನಕ್ಕೆ ಅರಿವಾಗದೇ ಇರದು. ನನಗಂತೂ ಕಾತ್ಯಾಯಿನಿ ಈ ಕಾದಂಬರಿಯ ಓದಿನ ನಂತರವೂ ಒಂದು ಗುಂಗು ಹಿಡಿಸಿದ ಪಾತ್ರ. ನಂತರ ಬರುವವಳು ಮೈತ್ರೇಯಿ . “ದುಂಡು ಮುಖದ ,ಶ್ವೇತ ಬಿಳುಪು ಬಣ್ಣದ ತಿದ್ದಿದ ಮೂಗು ಬಾಯಿ ಕಣ್ಣುಗಳ” ಚೆಲುವೆ. ಮಹಾ ಮೇಧಾವಿ. ವೇದಮಂತ್ರಗಳನ್ನು ಅಸ್ಖಲಿತವಾಗಿ ಪಠಿಸಿ ಅರ್ಥ ಹೇಳಬಲ್ಲ ಬ್ರಹ್ಮವಾದಿನಿ. ಮನದಲ್ಲಿಯೇ ಯಾಜ್ಞವಲ್ಕ್ಯನನ್ನು ಪ್ರೀತಿಸಿದ್ದವಳು. ಜನಕನ ಆಸ್ಥಾನದಲ್ಲಿ ಯಾಜ್ಞವಲ್ಕ್ಯನ ಆಣತಿಯಂತೆ ಸಾಮವೇದದ ಶ್ಲೋಕವನ್ನು ರಾಗವಾಗಿ ಹಾಡಿ ಅವನು ವಿಶೇಷ ಮೆಚ್ಚುಗೆಯಿಂದ ಭುಜ ತಟ್ಟಿದಾಗ ಒಳಗೊಳಗೆ ಪುಲಕಗೊಂಡವಳು. ಕಾತ್ಯಾಯನಿಯೊಂದಿಗೆ ಅವನ ಮದುವೆಯಾದಾಗ ಒಳಗೊಳಗೇ ಕೊರಗಿ ಬಳಲಿದವಳು. ತಪಸ್ಸು ಸಿದ್ಧಿಯಾಗದೆ ಯಾಜ್ಞವಲ್ಕ್ಯ ಅದಕ್ಕೆ ಮೈತ್ರೇಯಿಯನ್ನು ಕಾಮಿಸುತ್ತಿದ್ದ ತನ್ನ ಮನದಿಚ್ಛೆಯೇ ಕಾರಣ ಎಂಬುದನ್ನು ಅರಿತುಕೊಂಡು ಕಾತ್ಯಯನಿಯ ಇಂಗಿತದಂತೆ ಮೈತ್ರೇಯಿಯ ಪಾಣಿಗ್ರಹಣ ಮಾಡುವುದು, ನಂತರ ಅವನ ಸಹಚರಿಯಾಗಿ ವೇದಗಳ ವಿಭಾಗೀಕರಣದಲ್ಲಿ,ಉಪನಿಷತ್ತುಗಳ ರಚನೆಯಲ್ಲಿ ಅವಳೂ ಪಾಲ್ಗೊಳ್ಳುವುದು ಕತೆಯ ವಿಶಿಷ್ಟ ತಿರುವುಗಳು.
ಕತೆಯ ನಾಯಕಿ ಗಾರ್ಗಿಯೂ ಇನ್ನೊಂದು ಸಶಕ್ತ ಪಾತ್ರವಾಗಿ ಕಾಣಿಸಿಕೊಳ್ಳುತ್ತಾಳೆ. ಯಾಜ್ಞವಲ್ಕ್ಯನಷ್ಟೇ ಎತ್ತರ,ಗೋಧಿಬಣ್ಣ,ಲಕ್ಷಣವಾದ ಹುಡುಗಿ. ಎದುರಿನವರನ್ನು ಚುಚ್ಚುವಂತಹ ಪಾಂಡಿತ್ಯದ ಹೊಳಪಿನ ಕಂಗಳು. ಯಾಜ್ಞವಲ್ಕ್ಯನ ಬಗೆಗೆ ಅವಳಿಗೂ ಆರಾಧನೆ,ಪ್ರೇಮ. ಆದರೆ ನಿಷ್ಠುರ ನೇರಮಾತಿನ ಗಾರ್ಗಿ ಮೈತ್ರೇಯಿಯಂತೆ ಅಳುತ್ತ ಕೂಡುವದಿಲ್ಲ. ಪ್ರೇಮಭಿಕ್ಷೆ ಬೇಡುವದಿಲ್ಲ. ಜನಕಮಹಾರಾಜನ ಪಂಡಿತರಲ್ಲಿ ಒಬ್ಬಳಾಗಿ ಅವನಿಗೇ ಸವಾಲು ಹಾಕುವ ದಿಟ್ಟತನ ತೋರುತ್ತಾಳೆ. ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಕೊನೆಗೆ ಅವನನ್ನು ರೊಚ್ಚಿಗೆಬ್ಬಿಸುತ್ತಾಳೆ. ಅವನ ಪಾಂಡಿತ್ಯದೆದುರು ಸೋಲೊಪ್ಪಿಕೊಂಡು ಅವನನ್ನೇ ಗೆದ್ದುಬಿಡುವ ಬ್ರಹ್ಮವಾದಿನಿಯಾದರೂ ಪುರುಷಪ್ರೇಮಕ್ಕೆ ತಲೆಬಾಗುವ ಹೆಣ್ಣುಮನದ ಗಾರ್ಗಿ ಯಾಜ್ಞವಲ್ಕ್ಯನ ಸಂಕಲ್ಪದಲ್ಲಿ ಆತ್ಮಸಂಗಾತಿಯಾಗುತ್ತಾಳೆ.

ಈ ಪುಟ್ಟ ಕೃತಿಯಲ್ಲಿ ಕತೆ,ವಸ್ತು, ಪಾತ್ರಗಳಿಗಿಂತಲೂ ನನಗೆ ಪರಿಣಾಮಕಾರೀ ಎನಿಸಿದ್ದು ಇಲ್ಲಿಯ ಕೆಲವು ಸನ್ನಿವೇಶಗಳು, ಅವು ನೀಡುವ ಸಂದೇಶಗಳು, ಆ ಸಂಕ್ರಮಣ ಕಾಲಘಟ್ಟದ ಚಿತ್ರಣಗಳು. ಉದಾಹರಣೆಗೆ ತೊಂಬತ್ತು ವರುಷದ ಶುಕಮುನಿ ಅಂದರೆ ವ್ಯಾಸಮುನಿಗಳ ಮಗ ಇನ್ನೂ ಪೂರ್ಣ ತರುಣನೇ ಆಗಿದ್ದುದರ ರಹಸ್ಯವನ್ನು ಉದ್ದಾಲಕರು ವಿವರಿಸುವ ಸನ್ನಿವೇಶ . “ ನೋಡಿ ಈ ಪ್ರಕೃತಿಯಲ್ಲಿ ಗಾಳಿ ನೀರು ಆಹಾರ ಎಲ್ಲವೂ ಇವೆ……ಪ್ರಕೃತಿಯ ಅಂಶವೇ ಬೀಜವಾಗಿ ಕಾಯಾಗಿ ಹಣ್ಣಾಗಿ, ಹಾಗೆಯೇ ಸಸಿಯಾಗಿ ,ಪೈರಾಗಿ ,ಧಾನ್ಯವಾಗಿ, ಕಾಳಾಗಿ ದೊರೆಯುತ್ತದೆ. ಇವುಗಳನ್ನು ಈ ರೂಪದಲ್ಲಿ ಸ್ವೀಕರಿಸುವ ಮನುಷ್ಯನಿಗೆ ಇವುಗಳದೇ ಕಟ್ಟುಪಾಡಿದೆ.ಅದೆಂದರೆ ಇವನ್ನು ಅವನು….ಕಚ್ಚಿ ತಿನ್ನಬೇಕು…ಜೀರ್ಣವಾಗಬೇಕು…ಈ ಕ್ರಿಯೆಯಲ್ಲಿ ದೇಹ ಸವೆಯುತ್ತದೆ..ಮುಪ್ಪು ಬರುತ್ತದೆ…ಸಾವು ಬರುತ್ತದೆ. ನೇರವಾಗಿ ಪ್ರಕೃತಿಯ ಅಂಶಗಳಿಂದಲೇ ಈ ಆಹಾರವನ್ನು ಸ್ವೀಕರಿಸಿದರೆ ದೇಹದ ಯಾವ ಅಂಗಾಂಗಗಳಿಗೂ ಇವಾವ ಕೆಲಸವೂ ಇರುವುದಿಲ್ಲ. ಅವು ಸವೆಯುವುದೂ ಇಲ್ಲ. ಇದ್ದ ಹಾಗೆಯೇ ಇರುತ್ತವೆ,ಅಂದರೆ ಮುಪ್ಪೂ ಇಲ್ಲ .ಸಾವೂ ಇಲ್ಲ. “ ಈ ವಿವರಣೆ ಎಷ್ಟೊಂದು ಸಮಂಜಸ ಎನಿಸುತ್ತದೆ ನೋಡಿ. ಹಾಗೆಯೇ “ದೇಹದ ಜೊತೆ ಮನಸ್ಸೂ ಇದೆ. ಊರ್ಧ್ವರೇತಸ್ ಎಂದರೇನು ರೇತಸ್ಸು ಕೆಳಗೆ ಬೀಳದವನು …ಗ್ರಹಸ್ಥರಿಗೆ ಇದು ಸಾಧ್ಯವಿಲ್ಲ.ಹಾಗೆಂದು ಗೃಹಸ್ಥರಾಗಿರುವುದು ತಪ್ಪೂ ಅಲ್ಲ.” ಬ್ರಹ್ಮಚರ್ಯದ ಮಹತ್ವವನ್ನು ಹೇಳುವುದರೊಂದಿಗೆ ಕಾಮನಿಗ್ರಹದ ಕಠಿಣತೆಯನ್ನೂ ಕೃತಿ ವಿವರಿಸುತ್ತದೆ ಯಾಜ್ಞವಲ್ಕ್ಯರು ತಪಸ್ಸು ಕೈಕೊಂಡಾಗ ಸಿದ್ಧಿ ಪಡೆಯದೆ ಇರುವ ಸಂದರ್ಭದಲ್ಲಿ! ಕಾಮದ ಬಲವತ್ತರತೆಯನ್ನು ಆತ ಮೈತ್ರೇಯಿಯ ಎದುರಿನಲ್ಲಿ ವ್ಯಾಖ್ಯಾನ ಮಾಡಿದ್ದ ರೀತಿಯಲ್ಲಿ ! ಇಲ್ಲಿಯ ಧರ್ಮ,ಅರ್ಥ,ಕಾಮ,ಮೋಕ್ಷಗಳೆಲ್ಲಕ್ಕೂ ಸಮಾನ ಸ್ಥಾನ ನೀಡಿದಾಗಲೇ ಸಿದ್ಧಿ ಸಾಧ್ಯ ಎಂಬ ವಿವರಣೆ ಸಾರ್ವಕಾಲಿಕವೇ !! ಯಾಜ್ಞವಲ್ಕ್ಯನ ತಪಸ್ಸಿನಲ್ಲಿ ಕಾಣಿಸಿಕೊಳ್ಳುವ ಕಾಲೆತ್ತಿ ನಿಂದ ಕುದುರೆ,ಕಂದು ಬಣ್ಣದಿಂದ ಬಿಳಿಯಾಗುತ್ತ ನಡೆದ ಕುದುರೆ, ನಂತರ ಏಳಾಗುವ ಕುದುರೆಗಳು ಇವೆಲ್ಲ ಅರ್ಥಪೂರ್ಣ ಪ್ರತಿಮೆಗಳು !! ಅದೇ ರೀತಿ ಜನಕನ ಆಸ್ಥಾನದಲ್ಲಿ ಮಧುಪರ್ಕದಲ್ಲಿ ಗೋಮಾಂಸ ಇರಲೇ ಬಾರದು ಎಂಬ ಕುರಿತು ಶ್ವೇತಕೇತುವಿನ ವಾದ ಹಾಗೂ ಯಾಜ್ಞವಲ್ಕ್ಯ ಗೋವಿಗೆ ಮಾತ್ರ ದೇವತಾ ಸ್ಥಾನವೇಕೆ ,ಉಳಿದ ಪ್ರಾಣಿಗಳಿಗೆ ಏಕಿಲ್ಲ ಎಂದು ಕೇಳಿದರೂ ನಂತರ ಆ ಬಗ್ಗೆ ನೀಡುವ ಸಮಾಧಾನ – ಇವೆಲ್ಲವೂ ಕಾದಂಬರಿಯ ಓದನ್ನು ರೋಚಕವಾಗಿಸಿವೆ. ಯಾಜ್ಞವಲ್ಕ್ಯ ಹಾಗೂ ಕಾತ್ಯಾಯಿನಿಯರ ವಿವಾಹ ಸಂದರ್ಭದಲ್ಲಿ ಶ್ವೇತಕೇತು ಮದುವೆಯ ಮಂತ್ರವೊಂದಕ್ಕೆ ಆಕ್ಷೇಪವೆತ್ತಿ ಅದರ ಪ್ರಕಾರ ಮದುವೆಗೆ ಮೊದಲೇ ಕನ್ಯೆ ಐದು ದೇವತೆಗಳಿಂದ ಅನುಭವಿಸಲ್ಪಟ್ಟಿರುತ್ತಾಳೆ , ಎಂಜಲಾಗಿರುತ್ತಾಳೆ ಎಂದೆಲ್ಲ ವಾದಿಸತೊಡಗಿದಾಗ ಯಾಜ್ಞವಲ್ಕ್ಯ ಅದನ್ನು ಖಂಡಿಸಿ ಮಂತ್ರದ ನಿಜವಾದ ಅರ್ಥವನ್ನು ವಿವರಿಸಿ ಮಾಂಗಲ್ಯ ಧಾರಣೆ ಸಂಪನ್ನಗೊಳಿಸುವ ಪ್ರಸಂಗವೂ ಮನನೀಯ !! ಕಲುಷಿತ ಮನದವರು ಪಾವಿತ್ರ್ಯದಲ್ಲಿಯೂ ಕಾಣುವ ಕಲ್ಮಶ , ಪ್ರಬುದ್ಧರು ಅದನ್ನು ಖಚಿತವಾಗಿ ನಿರ್ದೇಶಿಸಿ ನಿವಾರಿಸುವುದು – ಎರಡೂ ಮನೋಜ್ಞವೇ !! ವೇದೋಪನಿಷತ್ತುಗಳಿಂದ ಸ್ಮೃತಿಗಳಿಗೆ ಬದಲಾಗುತ್ತಿರುವ ಮನ್ವಂತರ ಕಾಲದ ಒಂದು ಹೃದಯಸ್ಪರ್ಶಿ ಸನ್ನಿವೇಶ ಅಶ್ವಲಾಯನ ಹಾಗೂ ಪಿಪ್ಪಲಾದರ ಸಂವಾದ . ಋಗ್ವೇದದಲ್ಲಿ ಉಲ್ಲೇಖಿತವಾದ ವಿಧವೆಯ ಸಹಗಮನ ಪದ್ಧತಿಯ ಕುರಿತು ಅದು ತಪ್ಪು ಎನ್ನುತ್ತಾನೆ ಅಶ್ವಲಾಯನ. ಏಕೆಂದರೆ ಅದರ ಪ್ರಕಾರ ಪತಿಯ ಚಿತೆಯ ಬಳಿ ಕುಳಿತ ಮಹಿಳೆಯನ್ನು ಎಲ್ಲರೂ “ಅಮ್ಮಾ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಕೆಳಗಿಳಿದು ಬಾ.ನೀನು ಇನ್ನೊಂದು ಮದುವೆಯನ್ನೂ ಮಾಡಿಕೊಳ್ಳಬಹುದು . “ ಎಂದು ಕರೆಯುತ್ತಿದ್ದರಂತೆ. ಅವಳು ಕೆಳಗಿಳಿದು ಬರುತ್ತಿದ್ದಳಂತೆ. ಆದರೆ ಅಶ್ವಲಾಯನ ಹಾಗೂ ಅವನಂತೆ ಯೋಚಿಸುವ ಕೆಲವು ಮುನಿಗಳ ಪ್ರಕಾರ ಹೀಗೆ ಸಹಗಮನದ ವಿಧಿಯನ್ನು ಐಚ್ಛಿಕವಾಗಿಸುವುದೇ ತಪ್ಪು. ‘ಅವಳು ಕೆಳಗಿಳಿದು ಬರಲು ಅವಕಾಶವನ್ನೇ ಕೊಡಬಾರದು. ಇಳಿಯಲು ಯತ್ನಿಸಿದರೆ ಕೋಲಿನಿಂದ ಅಲ್ಲಿಯೇ ತಳ್ಳಬೇಕು.ಅವಳು ಕೂಗಿಕೊಂಡರೂ ಕೇಳದಂತೆ ತಮಟೆ ಬಾರಿಸಬೇಕು.ಅವಳು ಅಲ್ಲಿಯೇ ಸುಟ್ಟು ಹೋಗುವಂತೆ ನೋಡಿಕೊಳ್ಳಬೇಕು. ‘ ಹೀಗೆ ಅವರು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಡುತ್ತಿದ್ದಂತೆ “ ಶಾಂತಂ ಪಾಪಂ “ ಎಂದು ಕಿವಿ ಮುಚ್ಚಿಕೊಂಡ ಪಿಪ್ಪಲಾದರಿಗೆ ಮನು ಹೇಳುವ ಈ ನಿಷ್ಠುರ ನುಡಿಗಳನ್ನು ಕೇಳಿ – “ ಸರಿ ಅವಳು ಬದುಕಿಕೊಳ್ಳಲಿ…ಅವಳು ಮತ್ತೆ ಮದುವೆಯಾಗುವಂತಿಲ್ಲ.ಅಷ್ಟೇ ಅಲ್ಲ ಸೌಮಾಂಗಲ್ಯದ ಸಂಕೇತಗಳನ್ನು ತ್ಯಜಿಸಬೇಕು …… ತಲೆಗೂದಲನ್ನು ಬೋಳಿಸಿ ಕೆಂಪು ಸೀರೆ ಉಡಿಸಿ ವಿಕಾರ ಮಾಡಿದರೆ ಯಾವ ಗಂಡಸು ತಾನೇ ಅವಳಿಂದ ಆಕರ್ಷಿತನಾಗುತ್ತಾನೆ ?” ಅವನ ಈ ನುಡಿಗಳಿಗೆ ದನಿಗೂಡಿಸುತ್ತಾನೆ ಇನ್ನೊಬ್ಬ “ ಕಾಮವಾಸನೆ ಜಾಗೃತವಾಗದಂತೆ ಒಂದೇ ಹೊತ್ತು ಉಂಡು ಇನ್ನೊಂದು ಹೊತ್ತು ಫಲಾಹಾರ ಮಾಡಬೇಕು.”!! ಮಹಿಳೆಗಿದ್ದ ಸ್ವತಂತ್ರ ಜೀವನ ರೀತಿಯನ್ನು ,ಸ್ತ್ರೀಸಮುದಾಯದ ಬಗೆಗಿನ ಸಮಾಜದ ಉದಾತ್ತ ವಿಚಾರಗಳನ್ನು ಕೆಳಗಿಳಿಸಿದ ಮೊದಲ ಹಂತದ ಯತ್ನಗಳಿವು. ಮುಂದೆ ಇವೇ ಸ್ಮೃತಿಗಳಾಗಿ ಹೆಣ್ಣನ್ನು ಪೂರಾ ಅಧಃಪತನಕ್ಕೇ ಇಳಿಸಿದ್ದಕ್ಕೆ ಇದೇ ನಾಂದಿ ಹಾಡಿದ್ದಿರಬೇಕು ಎಂಬುದನ್ನು ಬಲು ಮನ ತಟ್ಟುವಂತೆ ನಿರೂಪಿಸಿದ್ದಾರೆ ಪ್ರಭಾವತಿಯವರು. ಅಷ್ಟೇ ಅಲ್ಲ ಜಾತಿ ಪದ್ಧತಿ, ವರ್ಣಸಂಕರದ ವಿರೋಧ, ಅರ್ಥವ್ಯವಸ್ಥೆ ಮೊದಲಾದ ಸಮಾಜವನ್ನು ಅವನತಿಯತ್ತ ಕೊಂಡೊಯ್ಯುವ ವಿಚಾರಗಳನ್ಣು ಹುಟ್ಟು ಹಾಕಿದವರೂ ಇದೇ ಗುಂಪಿನ ಕೆಲವರು ಎಂಬುದನ್ನೂ ಶ್ರುತಪಡಿಸುತ್ತಾರೆ.
ಈ ಕಾದಂಬರಿಯುದ್ದಕ್ಕೂ ಹಲವು ಧಾರ್ಮಿಕ, ಸಾಮಾಜಿಕ ವಿಷಯಗಳು ಚರ್ಚೆಗೊಳ್ಳುತ್ತವೆ. ಹಲವು ಉಪಕಥೆಗಳು ಇಲ್ಲಿ ಪ್ರಸ್ತಾಪಿತವಾಗುತ್ತವೆ, ಸತ್ಯಕಾಮ ಜಾಬಾಲರ ಕತೆ,ಋಷಿ ಗೌತಮರ ವೃತ್ತಾಂತ, ಶುಕಮುನಿಗಳ ದೇಹತ್ಯಾಗದ ಪ್ರಸ್ತಾಪ, ತಕ್ಷಕನ ಕತೆ, ವೇದವ್ಯಾಸರ ವೇದೋಪನಿಷತ್ತುಗಳ ಬಗೆಗಿನ ಅಕ್ಕರತೆಯ ಕಥನ ಒಂದೇ ಎರಡೇ ಪುಟ್ಟದೊಂದು ಕೃತಿಯಲ್ಲಿ ಪುರಾಣ ಹಾಗೂ ಪುರಾಣ ಪೂರ್ವಕಾಲದ ಬ್ರಹ್ಮಾಂಡವೇ ಅಡಗಿದ್ದು ಕೌತುಕವೇ !! ಭಾಷೆ,ಸಂಭಾಷಣೆಗಳ ಹೆಣಿಕೆಯಲ್ಲಿ, ಪಾತ್ರ ಪ್ರಸಂಗಗಳ ಬಣ್ಣನೆಯಲ್ಲಿ ಕಾಣುವ ಗಾಂಭೀರ್ಯ, ಗಹನತೆ ವಸ್ತುವಿನ ದೃಷ್ಟಿಯಿಂದ ಔಚಿತ್ಯಪೂರ್ಣ . ಹಲವು ಘಟನೆಗಳ ಹಿಂದುಮುಂದಿನ ಒಟ್ಟಿಗೇ ಬರುವ ವಿವರಗಳು, ಇಂದಿನವರೆಗೆ ಕೇಳಿಯೇ ಇರದ ಅನೇಕ ಋಷಿಮುನಿಗಳು, ಬ್ರಹ್ಮವಾದಿನಿಯರ ಉಲ್ಲೇಖಗಳು, ಚರಿತೆಗಳು ಒಮ್ಮೊಮ್ಮೆ ಧೃತಿಗೆಡಿಸಿದರೂ ಒಟ್ಟಾರೆಯಾಗಿ ಕೃತಿ ಸಾಕಷ್ಟು ಪರಿಣಾಮಕಾರಿ ! ಅಷ್ಟೇ ಅಲ್ಲ ಉದ್ದೇಶಿತ ಸಂದೇಶ ನೀಡುವಲ್ಲಿ ಸಫಲವಾಗಿದೆ ಎಂದೇ ಹೇಳಬಹುದು.
ಡಾ. ಎಸ್.ವಿ.ಪ್ರಭಾವತಿಯವರೇ ಹೇಳಿರುವಂತೆ “ ವೇದಗಳ ಕಾಲದಲ್ಲಿ ಸ್ತ್ರೀಯರಿಗಿದ್ದ ಸ್ವಚ್ಛಂದ ಸ್ವಾತಂತ್ರ್ಯ, ಸತಿ ಪದ್ಧತಿಗೆ ಇದ್ದ ಐಚ್ಛಿಕ ಸ್ವಾತಂತ್ರ್ಯ, ಮದುವೆಯಾಗದೇ ಬ್ರಹ್ಮವಾದಿನಿಯರಾಗಿ ಉಳಿಯುತ್ತಿದ್ದ ಹೆಣ್ಣು ಮಕ್ಕಳಿಗಿದ್ದ ಲೈಂಗಿಕ ಸ್ವಾತಂತ್ರ್ಯ, ವೈಧವ್ಯಕ್ಕೆ ಅಂಟದಿದ್ದ ಅಮಂಗಳ ಇವೆಲ್ಲವೂ ಅನಂತರದಲ್ಲಿ ಸ್ಮೃತಿಗಳ ಕಾಲಕ್ಕೆ ಇಲ್ಲವಾದವು. ಸ್ಮೃತಿಕಾರರು ಸ್ತ್ರೀಯರಿಗೆ ಮತ್ತು ಕೆಳಜಾತಿಯವರಿಗೆ ಅನೇಕ ನಿರ್ಬಂಧಗಳನ್ನು ಹೇರಿದರು. ಆ ಕಾಲದ ಒಂದು ಚಿತ್ರಣ ಇಲ್ಲಿದೆ.” ಇಂಥ ಚಿತ್ರಣವನ್ನು ನೀಡಲು ಆಳವಾದ ಅಧ್ಯಯನವಂತೂ ಬೇಕೇ ಬೇಕು. ಅದರೊಂದಿಗೆ ಕತೆಯಾಗಿ ಹೆಣೆಯಲು ಸಾಕಷ್ಟು ಪ್ರಖರತೆ,ತೀಕ್ಷ್ಣತೆ ಹಾಗೂ ಪ್ರಚಂಡ ಗಟ್ಟಿತನ ಅತ್ಯವಶ್ಯ. ಈ ದೃಷ್ಟಿಯಿಂದ ಪ್ರಭಾವತಿಯವರ “ಗಾರ್ಗಿ” ಕನ್ನಡ ಸಾಹಿತ್ಯಕ್ಕೆ ಒಂದು ಅಪರೂಪದ ಅಸದೃಶ ಕೊಡುಗೆ ಎಂದು ಹೇಳಲೇಬೇಕು . ಪ್ರಭಾವತಿಯವರ ಕೃತಿಗಳನ್ನು ಓದುವುದೇ ಒಂದು ವಿಶಿಷ್ಟ ಆನಂದವನ್ನು ನೀಡುವ ಅನುಭವ !!!
- ವಿದ್ಯಾ ಶಿರಹಟ್ಟಿ
