ಜೋಗಿಯವರು ತಮ್ಮ ಹೊಸ ಕಾದಂಬರಿಯಾದ ʻನಿರ್ಗಮನʼದ ಕುರಿತು ಮಾಕೋನಹಳ್ಳಿ ವಿನಯ್ ಮಾಧವ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನಿರ್ಗಮನ
ಲೇಖಕರು : ಜೋಗಿ
ಪ್ರಕಾಶನ : ಅಂಕಿತ ಪುಸ್ತಕ
ಬೆಲೆ : ೧೭೦.೦೦
ಅಪ್ಪ ಕಾಣೆಯಾಗಿದ್ದಾರೆ – ಗೋಧಿ ಬಣ್ಣ, ಸಾಮಾನ್ಯ ಮೈಕಟ್ಟು. ಅವರಿಗೆ ಮರೆವಿನ ಖಾಯಿಲೆ ಇದೆ. ಹುಡುಕಲು ಊರೆಲ್ಲಾ ಪೋಸ್ಟರ್ ಹಚ್ಚಬೇಕು. ಅಪ್ಪ ಕಾಣೆಯಾಗಿದ್ದಾರೆ – ಅಂಬಿಗೆ ವಯಸ್ಸಾಯಿತು. ಮನೆಯಲ್ಲಿ ಮಗನಿಗೆ ಸರಿ ಹೊಂದುತ್ತಿಲ್ಲ ಎನ್ನುವ ಕಾರಣಕ್ಕೆ, ತನ್ನ ಹಳೇ ಲವ್ವರ್ ಹುಡುಕಿಕೊಂಡು, ಬೈಕಿನಲ್ಲಿ ಕೇರಳಕ್ಕೆ ಹೋಗಿದ್ದಾರೆ. ಪಕ್ಕದ ಮನೆ ತುಂಟ ಹುಡುಗನಿಗೆ ಫೋನ್ ಮಾಡುತ್ತಾರೆ. ಅವನಿಗೆ ಪೋಲಿಸ್ ಮೂಲಕ ಎರಡು ಬಾರಿಸಬೇಕು.
ಅಮ್ಮ ಎಂಬ ಎಮೋಷನ್ ಅದೆಷ್ಟು ಶತಮಾನಗಳಿಂದ ಎಲ್ಲರ ಜೀವನಕ್ಕೂ ಅಂಟಿಕೊಂಡಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಅಪ್ಪ ಎನ್ನುವುದು ಬಹಳ ಇತ್ತೀಚಿನ ಎಮೋಷನ್. ಏಕೆಂದರೆ, ʻಅಮ್ಮ ಎನ್ನುವುದು ಸತ್ಯ ಮತ್ತು ಅಪ್ಪ ಎನ್ನುವುದು ನಂಬಿಕೆʼ ಎಂಬ ಮಾತು ಬಹಳ ಕಾಲದಿಂದ ಪ್ರಚಲಿತದಲ್ಲಿದೆ. ದರ್ಪದಿಂದ, ದಪ್ಪದ ಮೀಸೆಯಡಿಯಲ್ಲಿ ನಗುವನ್ನೇ ಕಳೆದುಕೊಂಡ ತುಟಿಯನ್ನು ಅಲುಗಿಸದೆ, ಕಣ್ಣುಗಳಲ್ಲೇ ಆಜ್ಞೆಯನ್ನು ಕೊಡುವ ಅಪ್ಪ ಮತ್ತು ಮಮತೆಯ ಪ್ರಪಂಚವನೇ ಹೊದ್ದುಕೊಂಡ ಅಮ್ಮ ಎನ್ನುವುದು ಸಾಮಾನ್ಯ ಅನಿಸಿಕೆ.
ಸಾಹಿತ್ಯ ಲೋಕವಂತೂ ಇಂತಹ ನಂಬಿಕೆಗಳನ್ನು ನೀರೆರೆದು ಪೋಷಿಸಿ, ಯೌವನಕ್ಕೆ ಕಾಲಿಡುವವರ ಚಿಂತನೆಗಳನ್ನು ಅದೇ ನಂಬಿಕೆಯತ್ತ ದೂಡಿರಬಹುದೆಂಬ ಬಲವಾದ ನಂಬಿಕೆ ನನಗೆ ಯಾವಾಗಲೂ ಕಾಡುತ್ತಿತ್ತು. ಏಕೆಂದರೆ, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪ್ರಪಂಚದ ಯಾವುದೇ ಸಾಮಾನ್ಯ ಅಭಿಪ್ರಾಯಗಳು, ಶೇಕಡಾ ಅರವತ್ತರ ಮಟ್ಟಿಗೆ ಮಾತ್ರ ಸತ್ಯ.
ಕೆಟ್ಟ ಮಗ ಹಟ್ಟಬಹುದು, ಆದರೆ ಕೆಟ್ಟ ಅಮ್ಮ ಹುಟ್ಟಲಾರಳು ಎಂಬ ಗಾದೆ ಮಾತುಗಳೂ ಇವೆ. ಆದರೆ, ಅಪ್ಪನ ಬಗ್ಗೆ ಇಷ್ಟೊಂದು ಸಮಾಧಾನಕರ ಗಾದೆಗಳೂ ವಿರಳ. ತೀರ ಇತ್ತೀಚೆಗೆ –
ಅಂದರೆ, ಒಂದು ದಶಕದಿಂದೀಚೆಗೆ ಗಂಡಸರ ಬಗ್ಗೆ, ಅದರಲ್ಲೂ ಅಪ್ಪಂದಿರ ಬಗ್ಗೆ ಸ್ವಲ್ಪ ಸದಭಿಪ್ರಾಯದ ಅಭಿಯಾನ ಶುರುವಾಗಿದೆ. ಸಮಾಧಾನಕರ ವಿಷಯ.

ಸಾಧಾರಣವಾಗಿ, ನಾವು ಧೈರ್ಯದ ಬಗ್ಗೆ ಮಾತನಾಡುವಾಗ ಹುಲಿಯೊಂದಿಗೆ ಸಮೀಕರಿಸುತ್ತೇವೆ. ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ವಿಷಯ ಎಂದರೆ, ಹುಲಿಯ ಮುಪ್ಪಿನಷ್ಟು ಘೋರವಾದದ್ದು ಇನ್ಯಾವ ಪ್ರಾಣಿಯದೂ ಅಲ್ಲ. ತನ್ನ ಪ್ರಾದೇಶಿಕ ಪ್ರಾಭಲ್ಯ ಉಳಿಸಿಕೊಳ್ಳಲು ಸಣ್ಣ ವಯಸ್ಸಿನ ಹುಲಿಗಳೊಂದಿಗೆ ಕಾದಾಡುತ್ತಲೇ ಇರಬೇಕು. ಅದರಲ್ಲಿ ಸತ್ತರೆ ಪರವಾಗಿಲ್ಲ. ಸೋತು ಗಾಯಗೊಂಡರೆ, ಎಲ್ಲಿಗೆ ಹೋಗಬೇಕು? ಅದರ ಹಲ್ಲುಗಳು ಮತ್ತು ಉಗುರುಗಳು ಉದುರಿ ಹೋದಮೇಲೆ, ಅವುಗಳು ಶಿಕಾರಿ ಹೇಗೆ ಮಾಡಬೇಕು? ಕೊನೆಯ ದಿನಗಳಲ್ಲಿ, ಹಸಿವು ತಾಳಲಾಗದೆ ಇಲಿ, ಕಪ್ಪೆಗಳನ್ನು ಸಹ ತಿನ್ನಲು ಪ್ರಯತ್ನಿಸುತ್ತವೆ. ಬಿದ್ದ ಮರದ ಕೊರಡಿಲ್ಲೂ ಮಾಂಸ ಸಿಗಬಹುದೇ? ಎಂದು ಕೆರೆದು ನೋಡುತ್ತವೆ. ಕೊನೆಗೆ, ಹಸಿವಿನಿಂದ ನರಳಿ, ನರಳಿ ಎಲ್ಲೋ ಒಂದು ಕಡೆ ಸಾಯುತ್ತವೆ.
ಹೆಚ್ಚಿನ ಗಂಡಸರ ಪಾಡೂ ಇದೇ. ಮುಂಚೆ ತುಂಬಿದ ಸಂಸಾರಗಳಿದ್ದಾಗ ಪರವಾಗಿಲ್ಲ. ಈಗ ಮಕ್ಕಳ ಹಂಗಿನಲ್ಲಿ ಬದುಕುವುದು ಬಹಳ ಕಷ್ಟದ ಕೆಲಸ. ಎಷ್ಟೋ ವರ್ಷಗಳ ಕೆಳಗೆ, ಲಾಲ್‌ಬಾಗ್ ನಲ್ಲಿ ಬೆಳಗ್ಗೆ ವಾಕಿಂಗ್ ಹೋದಾಗ, ಇಬ್ಬರು ಹಿರಿಯರ ನಡುವೆ ನಡೆದ ಸಂಭಾಷಣೆ ಕೇಳಿ ಬಹಳ ದಿನ ನೊಂದುಕೊಂಡಿದ್ದೆ. ಒಬ್ಬರು ಇನ್ನೊಬ್ಬರಿಗೆ ಹೇಳುತ್ತಿದ್ದರು: ʻಓ… ನಿಮ್ಮ ಮನೆಯಲ್ಲಿ ಅವರೇ ಕಾಳು ಸಾರು ಮಾಡಿದ್ದರಾ? ನನಗೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ಮಾಡೋದಿಲ್ಲ. ಮಗ, ಸೊಸೆ ಇಬ್ಬರೂ ಕೆಲಸಕ್ಕೆ ಹೋಗುತ್ತಾರಲ್ಲಾ? ನಮ್ಮಾಕೆ ಬದುಕಿದ್ದಾಗ ಯಾವಾಗಲೂ ಮಾಡಿಕೊಡುತ್ತಿದ್ದಳು. ಇನ್ನು ತಿನ್ನುತ್ತೇನೋ, ಇಲ್ಲವೋ. ನನ್ನ ಪೆನ್ಷನ್ ಪೂರ್ತಿ ಮಗನ ಕೈಯಲ್ಲೇ ಕೊಡಬೇಕು. ಬೆಳಗ್ಗೆ ವಾಕಿಂಗ್ ಬಿಟ್ಟರೆ, ಎಲ್ಲಿಗೆ ಹೋದರೂ ಬೈತಾರೆ.ʼ
ಇದು ಮಧ್ಯಮ ವರ್ಗದವರ ಕಥೆ. ಆದರೆ, ದುಡ್ಡಿದ್ದವರ ಕಥೆಗಳೂ ಬಹಳಷ್ಟಿವೆ. ರೇಮಂಡ್ಸ್ ಕಂಪನಿಯ ಛೇರ್ಮನ್ ಆಗಿದ್ದ ವಿಯಜಪತ್ ಸಿಂಘಾನಿಯ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದ್ದರು. ಮೈಕ್ರೋಲೈಟ್ ಏರೋಪ್ಲೇನ್ ನಲ್ಲಿ ವಿಶ್ವವನ್ನೇ ಸುತ್ತಿ ದಾಖಲೆ ನಿರ್ಮಿಸಿದ ಸಾಹಸಿ ಕೂಡ ಹೌದು. ಜೀವನದಲ್ಲಿ ಒಂದು ಸಣ್ಣ ತಪ್ಪು ಮಾಡಿದರು. ತಮ್ಮ ಆಸ್ತಿಯನ್ನೆಲ್ಲ ತಮ್ಮ ಮಗ ಗೌತಮ್ ಸಿಂಘಾನಿಯ ಹೆಸರಿಗೆ ಬರೆದರು. ಈಗ, ವಿಜಯಪತ್ ಸಿಂಘಾನಿಯ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ದಾರೆ ಮತ್ತು ಮಗನ ವಿರುದ್ದ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಗೆಲ್ಲುವ ಲಕ್ಷಣಗಳಿಲ್ಲ.
ಎಲ್ಲರೂ ಅಪ್ಪ, ಅಮ್ಮನನ್ನು ನಿರ್ಲಕ್ಷಿಸಿದ್ದಾರೆ ಅಂತಲ್ಲ. ಹೊಸ ಆರ್ಥಿಕ ವ್ಯವಸ್ಥೆಯು ನಮ್ಮ ಸಾಮಾಜಿಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ನಿಧಾನವಾಗಿ ಎಲ್ಲರಿಗೂ ಸರಿಯಾಗಿ ಅರಿವಾಗುತ್ತಿಲ್ಲ. ಪೀಳಿಗೆ, ಪೀಳಿಗೆ ನಡುವೆ ಕಂದಕ ತೋಡುತ್ತಿದೆ. ಭವಿಷ್ಯ ಭಯಾನಕ ಎನ್ನುವುದು ಇಂದಿನ ಪೀಳಿಗೆಯವರಿಗೆ ಅರ್ಥವಾಗುತ್ತಿಲ್ಲ. ಆದರೂ, ಕಾಲದ ಜೊತೆ ಕಾಲು ಹಾಕಿ, ನಾಗಾಲೋಟದಿಂದ ಓಡುತ್ತಿದ್ದಾರೆ.

ಈಗ ಮತ್ತೆ ಅಪ್ಪ ಕಾಣೆಯಾಗಿದ್ದಾರೆ – ಅನಿರುದ್ದ್ ಅಪ್ಪ ಶಾರದಾ ಪ್ರಸಾದ್. ಅವರು ಮಕ್ಕಳ ನೆರಳಲ್ಲಾಗಲೀ, ವೃದ್ದಾಶ್ರಮದಲ್ಲಾಗಲೀ ಇರಲು ಇಷ್ಟ ಪಡಲಿಲ್ಲ. ಏಕೆಂದರೆ, ಅವರ ಜೀವನದ ಎರಡನೇ ಇನ್ನಿಂಗ್ಸ್ ಆಡುತ್ತಿದ್ದರು. ಒಂದು ವಿಷಯವಂತೂ ಸತ್ಯ. ಗಂಡಸು ಎರಡನೇ ಇನ್ನಿಂಗ್ಸ್ ಆಡಲು, ಹೀರೋಯಿನ್ ಬೇಕಿಲ್ಲ. ಆಗ, ಅವನು ಜೀವನದುದ್ದಕ್ಕೂ ಪಡೆದ ಅನುಭವಗಳು ಮತ್ತು ಆಸಕ್ತಿಗಳೇ ಅವನ ಸಂಗಾತಿಗಳು. ಮಾತಿಗಿಂತ ಮೌನದಲ್ಲೇ ನಂಬಿಕೆ ಹೆಚ್ಚಿರುತ್ತದೆ. ಆ ಆಟ, ಪ್ರಪಂಚದ ದೃಷ್ಟಿಕೋನಕ್ಕಿಂತ ಬಹಳ ಮುಂದಿರುತ್ತದೆ ಮತ್ತು ಸಾಮಾನ್ಯರ ಊಹೆಗೂ ನಿಲುಕದಂತಿರುತ್ತದೆ.
ಈ ಸತ್ಯವನ್ನು ಜೋಗಿಯವರು ತಮ್ಮ ಹೊಸ ಕಾದಂಬರಿಯಾದ ʻನಿರ್ಗಮನʼದಲ್ಲಿ ಬಹಳ ಸುಂದರವಾಗಿ ನಿರೂಪಿಸಿದ್ದಾರೆ. ಅಲ್ಲಲ್ಲಿ ನನ್ನ ಗತಕಾಲದ ಕ್ರೈಂ ರಿಪೋರ್ಟಿಂಗ್ ದಿನಗಳನ್ನೂ ನೆನಪಿಸುತ್ತಾ, ನಾನು ಕಂಡು, ನಕ್ಕು ಸುಮ್ಮನಾಗಿ, ನನ್ನೊಳಗೇ ಇಟ್ಟುಕೊಂಡಿದ್ದ ಎಷ್ಟೋ ವಿಷಯಗಳಿಗೆ ಸಣ್ಣ ಕಚುಗುಳಿ ನೀಡಿ, ನೆನಪಿಸುತ್ತಾ ಸಾಗಿದ್ದಾರೆ. ಕೊನೆಯಲ್ಲಿ ಅನಿರುದ್ದ್‌ಗೆ ಅವನ ತಂದೆ ಸಿಕ್ಕಿದರೋ, ಅಥವಾ ಅವನೇ ಸಿಕ್ಕಿದನೋ ಎನ್ನುವುದನ್ನು ನಿಶ್ಚಯ ಮಾಡುವುದನ್ನು ಓದುಗರಿಗೆ ಬಿಟ್ಟಿದ್ದಾರೆ. ಅದು ಜೋಗಿ ಸ್ಟೈಲ್ ಕೂಡ.
ಈಗ, ನನ್ನ ಅಪ್ಪ ನನಗಾಗಿ ಕಾಯುತ್ತಿದ್ದಾರೆ – ಅವರು ಕಾಣೆಯಾಗುತ್ತಾರೆ ಎನ್ನುವ ಯಾವುದೇ ಹೆದರಿಕೆ ನನಗಿಲ್ಲ. ಆದರೂ, ನಾನು ಊರಿಗೆ ಹೋಗುವುದನ್ನು ಕಾಯುತ್ತಾರೆ. ಅದೇಕೆ ಎನ್ನುವುದು ನನಗೆ ಮತ್ತು ಅವರಿಗೆ ಮಾತ್ರ ಗೊತ್ತಿರುವ ವಿಷಯ.
ಪ್ರತೀ ವಾರವೂ ಊರಿಗೆ ಹೋಗಿ, ಅಪ್ಪ, ಅಮ್ಮ, ತೋಟ, ಮನೆ ಮತ್ತು ಅಲ್ಲಿನ ವ್ಯವಹಾರಗಳನ್ನೆಲ್ಲ ಚೆನ್ನಾಗಿ ನೋಡಿಕೊಂಡು ಬರುವ ಅಣ್ಣನಿದ್ದಾನೆ. ತೊಂಬತ್ತ ಎರಡು ವರ್ಷದ ನನ್ನ ಅಪ್ಪನನ್ನು ನೋಡಿಕೋಳ್ಳಲು, ಬರೀ ಎಪ್ಪತ್ತಾರು ವರ್ಷದ ಹುಡುಗಿ ನನ್ನಮ್ಮ ಸಹ ಇದ್ದಾಳೆ. ಆದರೂ, ವರ್ಷಕ್ಕೆ ಇಪ್ಪತೈದು ಸಲಕ್ಕಿಂತ ಹೆಚ್ಚು ಹೋಗದ ನನ್ನ ಬರುವಿಕೆಗೆ ಅಪ್ಪ ಕಾಯುತ್ತಿರುತ್ತಾರೆ…
- ಮಾಕೋನಹಳ್ಳಿ ವಿನಯ್ ಮಾಧವ
