ಅಮೇರಿಕಾದ ಸ್ಟೇಟ್ ಆಫ್ ವಾಷಿಂಗ್ಟನ್‌ನ ಸಿಯಾಟಲ್ ನಗರದಲ್ಲಿ ನೋಡಲೇಬೇಕಾದ ಒಂದು ಮೋಜಿನ ಸ್ಥಳ ಎಂದರೆ ಪೈಕ್ ಮಾರ್ಕೆಟ್ಟಿನ ಬದಿಯ ‘ಗಮ್ ವಾಲ್’. ಇದೇನಿದು ಗಮ್ ವಾಲ್ ಎಂದು ಆಶ್ಚರ್ಯವಾಯಿತೇ?. ಲೇಖಕಿ ಧಾರಿಣಿ ಮಾಯಾ ಅವರು ‘ಗಮ್ ವಾಲ್’ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ನಾವೆಲ್ಲಾ ಸಣ್ಣವರಿದ್ದಾಗ ಬಬಲ್ ಗಮ್ಮನ್ನು ಚೆನ್ನಾಗಿ ಅಗಿದ ಮೇಲೆ ಶಾಲೆಯಲ್ಲಿ ಬೆಂಚಿನಡಿಯಲ್ಲಿ, ಬಸ್ಸಿನ ಸೀಟಿನಡಿಯಲ್ಲಿ, ಮಲಗುವಾಗಲೂ ಬಾಯಲ್ಲೇ ಇಟ್ಟುಕೊಂಡು ಕೊನೆಗೆ ತಲೆಗೂದಲಿಗೆ ಅಂಟಿಕೊಂಡು ಅದನ್ನು ಬಿಡಿಸಲಾರದೆ ಕೂದಲಿಗೇ ಕತ್ತರಿ ಹಾಕುವ ತನಕ ಹೋಗುತ್ತಿತ್ತೇ ವಿನಃ ಕಸದ ಬುಟ್ಟಿಯೊಂದನ್ನು ಬಿಟ್ಟು ಎಲ್ಲೆಂದರಲ್ಲಿ ಅಂಟಿಕೊಳ್ಳುತ್ತಿದ್ದುದು ಗೊತ್ತೇ ಇದೆ. ಆದರೆ ನಿಮಗೆ ಗೊತ್ತೇ, ಈ ಪುಟ್ಟ ಬಬಲ್ ಗಮ್ ಒಂದು ಗೋಡೆ ತುಂಬೆಲ್ಲಾ ರಾರಾಜಿಸುತ್ತ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದೆ.
ಅಮೇರಿಕಾದ ಸ್ಟೇಟ್ ಆಫ್ ವಾಷಿಂಗ್ಟನ್‌ನ ಸಿಯಾಟಲ್ ನಗರದಲ್ಲಿ ನೋಡಲೇಬೇಕಾದ ಒಂದು ಮೋಜಿನ ಸ್ಥಳ ಎಂದರೆ ಪೈಕ್ ಮಾರ್ಕೆಟ್ಟಿನ ಬದಿಯ ‘ಗಮ್ ವಾಲ್.’ ಅರೆ ಇದೇನಿದು ಗಮ್ ವಾಲ್ ಎಂದು ಆಶ್ಚರ್ಯವಾಯಿತೇ? ಹೌದು ಈ ಗೋಡೆಯನ್ನು ನೋಡಿದಾಗ ಮೊದಲಿಗೆ ನನಗೂ ಸೋಜಿಗವೆನಿಸಿತು. ಇದೊಂದು ವಿಚಿತ್ರ ಆಕರ್ಷಣೀಯ ಸ್ಥಳವಾಗಿ ಪ್ರವಾಸಿಗರನ್ನು ಕೈಬೀಸಿ ಕರೆದು ಒಂದು ಅಂತರರಾಷ್ಟ್ರೀಯ ಆಕರ್ಷಣೆಯಾಗಿ ಸಂಪ್ರದಾಯಕವಲ್ಲದ ಕಲಾ ಸ್ಥಾಪನೆಯಾಗಿದೆ. 15 ಅಡಿ ಎತ್ತರ ಹಾಗೂ 50 ಅಡಿ ಉದ್ದದ ಈ ಗೋಡೆಯ ತುಂಬಾ ಬಣ್ಣ ಬಣ್ಣದ ಬಬಲ್ ಗಮ್‌ಗಳು ಮುದ್ದೆಯಂತೆ, ಲಂಬವಾಗಿ, ವೃತ್ತಾಕಾರವಾಗಿ ಇನ್ನೂ ಅನೇಕ ವಿನ್ಯಾಸದಿಂದ ಅಲಂಕೃತವಾಗಿವೆ. ಇದೆಲ್ಲಾ ಯಾಕೆ, ಏನು ಎಂಬೆಲ್ಲಾ ನನ್ನ ಕುತೂಹಲದ ಪ್ರಶ್ನೆಗಳಿಗೆ ಒಂದಷ್ಟು ವಿವರಗಳು ಸಿಕ್ಕಿತು.

ಹಿನ್ನೆಲೆ:
1990 ರಲ್ಲಿ ಜನ ಟಿಕೆಟ್ ಕೊಂಡುಕೊಳ್ಳುವ ಸಲುವಾಗಿ ಮಾರ್ಕೆಟ್ಟಿನ ಥಿಯೇಟರ್‌ನಲ್ಲಿ ಸಾಲಾಗಿ ಕಾಯ್ದು ನಿಂತಾಗ ತಮ್ಮ ಬಾಯಲ್ಲಿ ಜಗಿಯುತ್ತಿದ್ದ ಬಬಲ್ ಗಮ್ ನ್ನು ಥಿಯೇಟರಿನ ಗೋಡೆಗೆ ಅಂಟಿಸಲು ಶುರುವಿಟ್ಟುಕೊಂಡರು. ಒಬ್ಬರು ಅಂಟಿಸುವುದನ್ನು ನೋಡಿ ಮತ್ತೊಬ್ಬರು, ಮಗದೊಬ್ಬರು ಎನ್ನುತ್ತಾ ಹೀಗೆ ಸಾಲಾಗಿ ಅಲ್ಲಿ ನಿಲ್ಲುತ್ತಿದ್ದ ಪ್ರತಿಯೊಬ್ಬರೂ ತಾವು ಅಗಿದ ಬಬಲ್ ಗಮ್ಮನ್ನು ಅಂಟಿಸುತ್ತಾ ಹೋದರು. ಇದು ಎಷ್ಟರ ಮಟ್ಟಿಗೆ ಆಯಿತೆಂದರೆ, ಆ ಥಿಯೇಟರಿನ ಇಟ್ಟಿಗೆ ಗೋಡೆಯೇ ಕಾಣದೇ ಇರುವಷ್ಟಾಗಿ, ಗೋಡೆ ತುಂಬೆಲ್ಲಾ ವೈವಿಧ್ಯಮಯ ಬಣ್ಣದ ಓಕುಳಿ ಎರಚಿದಂತೆ ತೋರಹತ್ತಿತು. ಇದು ನೋಡಲು ಆಕರ್ಷಕವಾಗೇನೋ ಕಂಡರೂ, ಯಾರೋ ಅಗಿದು ಅಂಟಿಸಿದ ಗಮ್‌ಗಳನ್ನು ಮುಟ್ಟಿ ನೋಡುವ ಸಾಹಸಕ್ಕೆ ಮಾತ್ರ ನಾ ಹೋಗಲಿಲ್ಲ. ಈ ಬಬಲ್ ಗಮ್ ಗೋಡೆಯನ್ನು ನೋಡಲು ಹೋಗುವ ಪ್ರವಾಸಿಗರು ಗಮ್ ಗಳನ್ನು ಎಳೆದು ತಮಗೆ ಬೇಕಾದ ಆಕಾರ ಮಾಡಿ ತಮ್ಮ ಹೆಸರು ಮೂಡಿಸುವುದು, ಶಿಲ್ಪಾಕೃತಿಗಳನ್ನು ಮೂಡಿಸುವುದಲ್ಲದೇ ಅದನ್ನು ಬಲವಂತವಾಗಿ ಕಿತ್ತು ತಮ್ಮ ಬಾಯೊಳಗೆ ಹಾಕಿಕೊಂಡು ಜಗಿದು ಫೋಟೋಗಾಗಿ ಫೋಸ್ ಕೊಡುವ ಹುಚ್ಚುಮಂದಿಯೂ ಇದ್ದಾರೆಂದರೆ ನಂಬಲೇಬೇಕು. ಈ ತಾಣವು ‘ಅತ್ಯಂತ ಸೂಕ್ಷ್ಮಾಣುಗಳನ್ನು ಹೊಂದಿರುವ ಆಕರ್ಷಣೀಯ ಸ್ಥಳ’ ಎಂದು ಗುರುತಿಸಿಕೊಂಡಿದೆ.
ಗಮ್ ವಾಲ್‌ಗೂ ವಿವಾದ:
ಈ ಗಮ್ ವಾಲ್‌ಗೆ ತನ್ನದೇ ಆದ ವಿವಾದಗಳೂ ಇವೆ. ಈ ಐತಿಹಾಸಿಕ ಕಟ್ಟಡವನ್ನು ಶುಚಿಗೊಳಿಸುವುದು ಮುಖ್ಯ ಧ್ಯೇಯ ಎಂಬ ವಾಗ್ವಾದ ಒಂದು ಕಡೆಯಾದರೆ, ಈ ಗಮ್‌ಗಳನ್ನು ಕಿತ್ತುಹಾಕಿದರೆ ಅವುಗಳ ಹಿಂದೆ ಅಡಗಿರುವ ಒಟ್ಟಾರೆ ಇತಿಹಾಸ ಹಾಗೂ ಭಾವನಾತ್ಮಕತೆಯನ್ನು ಹೊಸಕಿಹಾಕಿದಂತೆ ಎಂಬ ಚರ್ಚೆಗಳಾಗುತ್ತಿವೆ.
ಸಂಪ್ರದಾಯಕವಲ್ಲದ ಕಲಾ ಸ್ಥಾಪನೆ:
ಥಿಯೇಟರ್‌ಗೆ ಹೋಗುವ ಮಂದಿಯಿಂದ ತಮಾಷೆಗಾಗಿ ಶುರುವಾದ ಈ ಕ್ರಿಯೆ ಸಿಯಾಟಲ್‌ನ ಗಮ್ ವಾಲಿನ ಅಸಂಪ್ರಾದಾಯಿಕ ಆಚರಣೆಯಾಗಿ ಈ ನಗರದ ರೋಮಾಂಚಕತೆಗೆ ಹಾಗೂ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ರಂಗುರಂಗಿನ ಬಣ್ಣದ ಅಂಟುಗಳನ್ನು ಮೆತ್ತಿಕೊಂಡಿರುವ ಈ ಗಮ್ ವಾಲ್ ನಮಗೆ ನೆನಪಿಸುವುದೇನೆಂದರೆ ಕಲೆ ಎಂಬುದು ಅನಿರೀಕ್ಷಿತ ಸ್ಥಳಗಳಲ್ಲಿ ಯಾವ ರೂಪದಲ್ಲಾದರೂ ಹುಟ್ಟಬಹುದು.
- ಧಾರಿಣಿ ಮಾಯಾ
