ಕಲೆಯ ಆಗರ ರಘುರಾಜ್‌‌ಪುರ ಪಿಪಿಲೀ

ಕಲೆಯ ಆಗರವಾದ ಓರಿಸ್ಸಾದ ಪುರಿ ನಗರದ ಒಂದೆರಡು ಹಳ್ಳಿಗಳಿಗೆ ಭೇಟಿ ಕೊಟ್ಟ ಲೇಖಕಿ ಧಾರಿಣಿ ಮಾಯಾ ಅವರ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ….

ಓರಿಸ್ಸಾದ ಪುರಿಯಿಂದ ಸುಮ್ಮರು 14 ಕಿ.ಮೀ ದೂರದಲ್ಲಿರುವ ರಘುರಾಜ್‌ಪುರ ಎಂಬ ಹಳ್ಳಿ ಪರಂಪರೆಯಿಂದ ನಡೆದುಬಂದ ಕರಕುಶಲಕ್ಕೆ ಹೆಸರುವಾಸಿಯಾಗಿದೆ. ಸುಮಾರು 100 ಮನೆಗಳಿರುವ ಇದೊಂದು ಚಿಕ್ಕ ಹಳ್ಳಿ. ಈ ಊರಿನ ಒಳಗೆ ಕಾಲಿಡುತ್ತಿದ್ದಂತೆ ಓಣಿಯ ಇಕ್ಕೆಲಗಳಲ್ಲೂ ಪುಟ್ಟ ಪುಟ್ಟ ಮನೆಗಳು, ಈ ಮನೆಗಳ ಗೋಡೆಗಳ ಮೇಲೆಲ್ಲಾ ಚಿತ್ತಾಕರ್ಷಕ ಚಿತ್ರಗಳು ಕಂಡುಬರುತ್ತವೆ. ಈ ಸಂಪೂರ್ಣ ಹಳ್ಳಿಯೇ ಒಂದು ಆರ್ಟ್ ವಿಲೇಜ್ ಆಗಿದ್ದು, ಇದು ‘ಹೆರಿಟೇಜ್ ವಿಲೇಜ್’ ಎಂದೇ ಖ್ಯಾತಿ ಗಳಿಸಿದೆ.

ಇಲ್ಲಿಗೆ ಪ್ರವಾಸಿಗರು ಅಡಿ ಇಡುತ್ತಿದ್ದಂತೆ ಆ ಹಳ್ಳಿಯ ಜನ ಒಬ್ಬರ ಹಿಂದೊಂಬ್ಬರು ಬಂದು ತಮ್ಮ ಮನೆಗೆ ಬಂದು ಅವರು ರಚಿಸಿರುವ ಕಲಾಕೃತಿಗಳನ್ನು, ‘ನೀವು ಖರೀದಿಸದಿದ್ದರೂ ಚಿಂತೆಯಿಲ್ಲ, ಒಮ್ಮೆ ನೋಡಿ ಬನ್ನಿರಿ’ ಎಂದು ದುಂಬಾಲು ಬೀಳುತ್ತಾರೆ. ಒಂದು ಮನೆಯ ಒಳಹೊಕ್ಕಾಗ, ಮನೆಯ ಗೋಡೆಯೇ ಕಾಣಿಸದಷ್ಟು ಕರಕುಶಲಗಳು, ಚಿತ್ರಕಲೆಗಳು, ಮುಖವಾಡಗಳು ರಾರಾಜಿಸುತ್ತಿದ್ದವು. ಒಂದು ಮೂಲೆಯಲ್ಲಿ ಬಟ್ಟೆಯ ಮೇಲೆ ಮೂಡಿಸಿದ್ದ ಚಿತ್ರಕಲೆಗಳನ್ನು ಸುರುಳಿ ಸುತ್ತಿ ಜೋಡಿಸಿಡಲಾಗಿದ್ದವು. ಆದರೆ ಇವಾವೂ ಸಾಮಾನ್ಯ ಚಿತ್ರ ಕಲೆಯಾಗಿರದೆ, ಅವುಗಳಲ್ಲೇನೋ ವಿಶೇಷತೆಯಿದ್ದವು. ಪ್ರತಿ ಮನೆಯಲ್ಲೂ ಹೆಂಗಸರನ್ನೊಳಗೊಂಡು ಮನೆಯ ಇಡೀ ಸದಸ್ಯರೂ ಕಲಾವಿದರೇ ಆಗಿದ್ದರು.

ಶಿಲ್ಪ ಗುರು ಡಾ. ಜಗನ್ನಾಥ ಮಹಾಪಾತ್ರ ಎಂಬ ಪತ್ತಚಿತ್ರ ಕಲಾಕಾರರಿಂದ ಈ ಸಾಂಪ್ರದಾಯಿಕ ಕಲೆ ಈ ಊರಿನಲ್ಲಿ ಗಟ್ಟಿ ನೆಲೆಯೂರಿದೆ. ಈ ಕಲೆಯೇ ಇಲ್ಲಿ ನೆಲೆಸಿರುವವರ ಜೀವನಕ್ಕೆ ಆಧಾರ. ಪತ್ತಚಿತ್ರಕ್ಕೆ ಪೂರ್ವ ತಯಾರಿ ಬಹುಮುಖ್ಯ ಪಾತ್ರವಹಿಸುತ್ತದೆ. ಒಂದರ ಮೇಲೊಂದು ಹಳೆಯ ಹತ್ತಿ ಸೀರೆಯನ್ನಿಟ್ಟು, ಹುಣಿಸೆ ರಸ ಹಚ್ಚಿ, ಬಿಸಿಲಿನಿಂದ ಒಣಗಿಸಿ, ನಂತರ ಮತ್ತೊಂದು ಸೀರೆಯನ್ನಿಟ್ಟು ಅದೇ ರೀತಿ ಮಾಡಿದಾಗ, ಕ್ಯಾನ್ವಾಸ್ ಬೋರ್ಡಿನಂತೆ ಗಟ್ಟಿಯ ರಟ್ಟಿನಂತೆ ತಯಾರಾಗುತ್ತದೆ. ಆಗ ಅದರ ಮೇಲೆ ಬೇಕಾದ ಚಿತ್ರ ಬಿಡಿಸಿ ಬಣ್ಣ ತುಂಬಲಾಗುತ್ತದೆ. ಇದರ ಮೇಲೆ ಮೂಡುವ ಸಂಕೀರ್ಣವಾದ ಚಿತ್ರಗಳು ಪ್ರಾಣಿ, ಪಕ್ಷಿ, ಹೂವು, ಎಲೆ, ರಾಧಾ ಕೃಷ್ಣನ ರಾಸಲೀಲೆ, ಜಗನ್ನಾಥ, ಪೌರಾಣಿಕ ಕಥೆಗಳು, ಜಾನಪದ ಕಥೆಗಳು, ಅಷ್ಟೇ ಅಲ್ಲದೆ ಸಂಪೂರ್ಣ ರಾಮಾಯಣವನ್ನೇ ಭಾಗಗಳಾಗಿ ಚಿತ್ರದಲ್ಲಿ ಮೂಡಿಸಿರುವುದು ಎಲ್ಲವೂ ಅವರ ಕಲೆಯ ಹಿಂದಿನ ಶ್ರದ್ಧೆ, ಪರಿಶ್ರಮವನ್ನು ಎತ್ತಿ ಹಿಡಿಯುತ್ತದೆ.

ಪತ್ತಚಿತ್ರ ಅಲ್ಲದೇ, ಇದೇ ರೀತಿಯ ಚಿತ್ರಕಲೆ ಟಸ್ಸರ್ ಬಟ್ಟೆಯ ಮೇಲೂ ಬಿಡಿಸುತ್ತಾರೆ. ಚಿತ್ರಗಳ ವಿನ್ಯಾಸ, ಸಂಕೀರ್ಣತೆ ಹಾಗೂ ಅವುಗಳ ಅಳತೆಯ ಪ್ರಕಾರಕ್ಕೆ ಪ್ರತಿಯೊಂದರ ಬೆಲೆ ನಿಗದಿಪಡಿಸುತ್ತಾರೆ. ಅಷ್ಟೇ ಅಲ್ಲದೆ, ಶಿಲ್ಪಕಲೆ, ಮರದ ಗೊಂಬೆಗಳು, ತೆಂಗಿನ ಚಿಪ್ಪಿನ ಕಲಾಕೃತಿಗಳು, ಕಾಗದದಿಂದ ರುಬ್ಬಿ (papier mache) ಮಾಡಿದ ಆಕೃತಿಗಳು, ತಾಳೆ ಎಲೆಯ ಮೇಲೆ ಚಿತ್ರ ಕೆತ್ತನೆಗಳೆಲ್ಲ ಆಕರ್ಷಕವಾಗಿರುತ್ತವೆ. ಯಾವುದೇ ಗ್ರಾಹಕ ಇಲ್ಲಿ ಕಾಲಿಟ್ಟೊಡನೆ ತಮ್ಮ ಕಲಾಕೃತಿಗಳನ್ನು ಒಳ್ಳೆಯ ಬೆಲೆಗೆ ಮಾರಲು ಅಕ್ಕ ಪಕ್ಕದ ಮನೆಯವರಿಗೇ ಪೈಪೋಟಿ ಏರ್ಪಡುತ್ತದೆ. ಒಂದು ಕಲಾಕೃತಿಗೆ ಒಬ್ಬರು ಹೇಳಿದ ಬೆಲೆ ಅದೇ ರೀತಿಯ ಕಲಾಕೃತಿ ಮತ್ತೊಬ್ಬರಲ್ಲಿ ದುಪ್ಪಟ್ಟು ಬೆಲೆ ಇರಲೂ ಸಾಧ್ಯ. ಹಾಗಾಗಿ ಕೊಳ್ಳುವವರು ಮೊದಲು ಒಂದಿಷ್ಟು ಮನೆಗಳಿಗೆ ಎಡತಾಕಿ ಬೆಲೆ ತಿಳಿದು ಕೊಂಡುಕೊಳ್ಳುವುದು ಸೂಕ್ತ.

ಪರಂಪರೆಯಿಂದ ಬಳುವಳಿಯಾಗಿ ಬಂದಿರುವ ಈ ಕಲೆಯನ್ನು ಯುವಕರೂ ಮೈಗೂಡಿಸಿಕೊಂಡಿದ್ದಾರೆ. ಆದರೆ ಅವರು ಮಾಡಿದ ಕಲಾಕೃತಿಯಲ್ಲಿ ಅವರ ಹಿರಿಯಿಕರು ಮಾಡಿದ ನುರಿತ ಕಲೆ ಕಂಡು ಬರುವುದಿಲ್ಲ. ಹಾಗಾಗಿ ಅವುಗಳ ಬೆಲೆ ಸ್ವಲ್ಪ ಕಡಿಮೆಯೇ.

* * *
ಪಿಪಿಲೀ:

ಪುರಿಯಿಂದ 45 ಕಿ.ಮೀ ನಲ್ಲಿ ಪಿಪಿಲೀ ಎಂಬ ಹಳ್ಳಿ ಇದೆ. ಇಲ್ಲಿಗೆ ಕಾಲಿಟ್ಟೊಡನೆ ಉದ್ದಕ್ಕೂ ಅಂಗಡಿ ಮುಗ್ಗಟ್ಟುಗಳು ಕಾಣಸಿಗುತ್ತವೆ. ಪ್ರತಿಯೊಂದು ಅಂಗಡಿಗಳ ಮುಂದೆಯೂ ಚಿತ್ತಾಕರ್ಷಕ ಬಣ್ಣದ ಬಟ್ಟೆಗಳಿಂದ ಮಾಡಿದ ದೀಪದ ಮುಸುಕುಗಳು, ಮೇಜಿನ ಹಾಸುಗಳು ಕಣ್ಸೆಯುತ್ತವೆ. ಆನೆ, ನವಿಲಿನ ಕಲಾಕೃತಿಯ ಕಸೂತಿ ಮಾಡಿದ ನೆಲಹಾಸು, ಹೊದಿಕೆ, ಬ್ಯಾಗ್, ದಿಂಬಿನ ಹೊದಿಕೆ, ಬಣ್ಣದ ಹೆಣಿಕೆಯ ಛತ್ರಿಗಳು ಆಕರ್ಷಣೀಯ.
ಈ ಎಲ್ಲಕ್ಕೂ ನಮ್ಮ ದೇಶದಲ್ಲೂ ಹಾಗೂ ವಿದೇಶದಲ್ಲೂ ಬಹಳ ಬೇಡಿಕೆಯಿದೆ.


  • ಧಾರಿಣಿ ಮಾಯಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading