ಕಾಡಿನ ಗಿರಿ ವಾಸಿಗಳ ಬುಡಕಟ್ಟು ಪರಂಪರೆ, ದಕ್ಷಿಣ ದಿಕ್ಕಿನ ಪುರಾತನ “ಡೆಕ್ಕನ್” ಬಯಲಿನ ಅಲೆಮಾರಿತನದ ದಿನ ನಿತ್ಯದ ಉಪಕ್ರಮಗಳು ನಮ್ಮ ಮಕ್ಕಳಿಗೆ ಇಂದು ಸೋಜಿಗದ ಸಂಗತಿಯಾಗಿ ಮಾರ್ಪಟ್ಟಿರುವುದು ಮಾತ್ರ ವಿಪರ್ಯಾಸವೇ ಸರಿ. ಗಿರಿವಾಲ್ಮೀಕಿ ಅವರ ಅನುಭವದ ಕಾಡಿನ ಕತೆಯನ್ನು ತಪ್ಪದೆ ಮುಂದೆ ಓದಿ…
ಪ್ರತಿಯೊಬ್ಬರ ಬದುಕು ವಿಚಿತ್ರ ಒಬ್ಬೊಬ್ಬರದು ಒಂದೊಂದು ತೆರೆನಾದ ಬದುಕುವ ದಾರಿ ರೂಢಿತವಾಗಿರುತ್ತದೆ.ನಾವೇ ಆಚರಣೆಗೆ ತಂದ ಸಾಮಾಜಿಕ ಚೌಕಟ್ಟಿನಡಿ ನಮ್ಮ ಬದುಕನ್ನ ಹಿಂಸಿಸುತ್ತಿರುತ್ತೇವೆ.ಈ ಎಲ್ಲಾ ಕಟ್ಟು ಪಾಡುಗಳನ್ನ ಧಿಕ್ಕರಿಸಿ ಅದರಾಚೆಗೆ ನಿನ್ನಿಷ್ಟದಂತೆ ನೀ ಅಲೆಮಾರಿಯಂತೆ ಪ್ರಕೃತಿಯಲ್ಲಿ ಬದುಕಿದರೆ ಈ ನಾಗರೀಕ ಯಂತ್ರ ಪ್ರಪಂಚದಲ್ಲಿ ನೀನು ನಿಷೇಧಕ್ಕೊಳಪಡುತ್ತೀಯಾ.!
ಆದರೆ ಪ್ರಕೃತಿಯಲ್ಲಿರುವ ಮರ,ಆ ಮರಕ್ಕೆ ಅಪ್ಪಿಕೊಂಡ ಬಳ್ಳಿ,ದೂರದ ಬೆಟ್ಟ-ಗುಡ್ಡಗಳು ಅದ್ಬುತವಾದ ಸಾಮರಸ್ಯದ ಕತೆ ಹೇಳುತ್ತವೆ. ಇಲ್ಲಿ ಯಾವುದಕ್ಕೂ ನಿಷೇಧವಿಲ್ಲಾ ಎಲ್ಲವೂ ಪ್ರಸ್ತುತ. ಎಲ್ಲದರಲ್ಲೂ ಅನನ್ಯವಾದ ಸಾಮರಸ್ಯ ಅವಿತುಕೊಂಡಿರುತ್ತದೆ. ಆದರೆ ಪ್ರಕೃತಿಗೆ ಮಾತ್ರ ನಮ್ಮ ಮನಸ್ಸು,ಕಣ್ಣು ಎರಡನ್ನೂ ನಿಚ್ಚಳವಾಗಿ ತೆರೆದಿಟ್ಟು ಅನನ್ಯತೆಯನ್ನು ಆಸ್ವಾದಿಸುವ ಅನುಭವಿಸುವ ಗುಣವಿರಬೇಕಷ್ಟೇ. ಇಲ್ಲವಾದರೆ ಪ್ರಕೃತಿ ನಮಗೆ ಸಂಕೀರ್ಣವಾಗುತ್ತ ಹೋಗುತ್ತದೆ.

ಫೋಟೋ ಕೃಪೆ : google
ಗಮನಿಸಿ :
ಶಾಲಾ ದಿನಗಳಲ್ಲಿ ನಾವೆಲ್ಲರೂ ದಂಡಯಾತ್ರೆಗಳ ಇತಿಹಾಸ ಓದಿಕೊಂಡು ಮುಂದೆ ನಮ್ಮ ಆಸಕ್ತಿಗನುಗುಣವಾಗಿ ಪದವಿ ಗಳಿಕೊಂಡಿದ್ದು ಬಿಟ್ಟರೆ ನಮ್ಮ ನೆಲದ ದೇಸಿತನವನ್ನು ಜಗವ್ಯಾಪಿ ವಿಸ್ತರಿಸದೇ ಪಾಶ್ಚಾತ್ಯ ಅನುಕರಣೆಗಳಿಗೆ ಈ ನೆಲವನ್ನೇ ಮಾರಿಕೊಂಡು ಬಿಟ್ಟೆವು. ನಮ್ಮ ಬದುಕಿಗೆ ಪರಂಪರೆ ಬೆಳಕಾಗಬೇಕಾಗಿದ್ದ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮದೇ ಪಾರಂಪರಿಕ ಕೃಷಿಯ ಜ್ಞಾನ,ನೆಲ ಮೂಲದ ಶ್ರಮದ ಸಹಜ ಬದಕನ್ನು ಕಿತ್ತುಕೊಂಡಿತು.ಈ ಔದ್ಯೋಗೀಕೃತ ನಾಗರೀಕತೆಯಲ್ಲಿ ನೆಲ ಆಧಾರಿತ ಕೌಶಲ್ಯಗಳು,ಗ್ರಾಮ್ಯ ಸೊಗಡು, ಸಾವಯವ ಜ್ಞಾನ ಮತ್ತು ಜನರ ನಡುವೆ ಭಾವೆಕ್ಯತೆಯನ್ನು ಇಮ್ಮಡಿಗೊಳಿಸುವ ಆಚರಣೆಗಳು ಹಂತ ಹಂತವಾಗಿ ಮಾಯವಾದವು. ಆಲೆಮನೆ,ಗಾಣದ ಉತ್ಪನ್ನಗಳ ಬಳಕೆ,ಜ್ಯಾತ್ಯತೀತವಾಗಿ ಉಸಿರಾಡುತ್ತಿದ್ದ ಕೊಡು ಕೊಳ್ಳುವಿಕೆ ಸಂಸ್ಕೃತಿ ಮರೆಯಾಗಿ ಜಾತಿಯ ಮತಿಭ್ರಮಣೆ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಿಸಿತು. ಮನುಷ್ಯನಾಗಿ ಪ್ರಕೃತಿಗೆ ಹತ್ತಿರವಾಗಿ ಬದುಕಬೇಕಾದವನು ನಿಸರ್ಗದಿಂದ ದೂರಾಗಿ ಕೀಳು ಮಟ್ಟದ ರಾಜಕಾರಣಕ್ಕೆ ಹತ್ತಿರನಾದ.
ಕಾಡಿನ ಗಿರಿ ವಾಸಿಗಳ ಬುಡಕಟ್ಟು ಪರಂಪರೆ, ದಕ್ಷಿಣ ದಿಕ್ಕಿನ ಪುರಾತನ “ಡೆಕ್ಕನ್” ಬಯಲಿನ ಅಲೆಮಾರಿತನದ ದಿನ ನಿತ್ಯದ ಉಪಕ್ರಮಗಳು ನಮ್ಮ ಮಕ್ಕಳಿಗೆ ಇಂದು ಸೋಜಿಗದ ಸಂಗತಿಯಾಗಿ ಮಾರ್ಪಟ್ಟಿರುವುದು ಮಾತ್ರ ವಿಪರ್ಯಾಸವೇ ಸರಿ. ಪ್ರತಿ ಪ್ರವಾಹ,ಬರಗಾಲ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಾ ಬಂದರೂ ಊಹುಃ ಮನುಷ್ಯ ಇನ್ನೂ ಬುದ್ದಿ ಕಲಿಯಲೊಲ್ಲಾ. ನಿಸರ್ಗ ಅರಿತು ಅದರ ಜೊತೆ ಪೂರಕವಾಗಿ ಬದುಕುವ ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಸಂವೇಧನೆಯನ್ನು ಕಳೆದುಕೊಳ್ಳವಂತೆ ಮಾಡುವಲ್ಲಿ ಈ ಶತಮಾನದ ರಾಜಕೀಯ ಪ್ರಭೃತಿಗಳ ಆಷಾಢಭೂತಿತನವು ಮುಖ್ಯ ಕಾರಣವೆಂದರೆ ಅತಿಶಯೋಕ್ತಿಯಾಗಲಾರದು.
ಇನ್ನಾದರೂ ನಾವು ನಿದ್ರಿಸದೇ ಬಸ್ಸಿನ ಕಿಟಕಿಯಾಚೆ ಉಳಿದಿರುವ ಕಾಡು,ನದಿ ಮೂಲಗಳನ್ನು ನೋಡಬೇಕು ಮನುಷ್ಯತ್ವ,ಅಂತಃಕರಣ,ನಿಷ್ಕಲ್ಮಶವಾದ ಸೊಗಸಾದ ನಗು ನಮ್ಮ ಆಂತರ್ಯದೊಳಗೆ ಜೀವಕಟ್ಟುತ್ತದೆ. ಒಂದು ಸುಸ್ಥಿರವಾದ ಸಮನ್ವಯತೆ ಭಾವವನ್ನು ಪ್ರಕೃತಿಯೊಟ್ಟಿಗೆ ಸಾಧಿಸುತ್ತೀರಿ.
ಹಿಂದಿನ ಸಂಚಿಕೆಗಳು :
- ಕಾಡಿನ ಸುತ್ತ – ಭಾಗ ೧
- ಕಾಡಿನ ಸುತ್ತ – ಭಾಗ ೨
- ಕಾಡಿನ ಸುತ್ತ – ಭಾಗ ೩
- ಕಾಡಿನ ಸುತ್ತ – ಭಾಗ ೪
- ಕಾಡಿನ ಸುತ್ತ – ಭಾಗ ೫
- ಕಾಡಿನ ಸುತ್ತ – ಭಾಗ ೬
- ಕಾಡಿನ ಸುತ್ತ – ಭಾಗ ೭
- ಕಾಡಿನ ಸುತ್ತ – ಭಾಗ ೮
- ಗಿರಿವಾಲ್ಮೀಕಿ
