‘ಲಾಳನಕಟ್ಟೆ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ದಾರಿಹೋಕರಿಗೆಲ್ಲ ತಂಪು ಪಾನಿಯ ನೀಡಿ ಬೀಳ್ಕೊಡುವ ನಮ್ಮೂರೆ ನಮಗೆ ಚೆಂದ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಊರಿನ ಕುರಿತು ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ತೆಂಗು ಕೆಂಗಿನ ನಡುವೆ ನನ್ನ ಲಾಳನಕಟ್ಟೆ
ಬಾಂಧವ್ಯದೊಡಲಿದುವೆ ನಮ್ಮ ಊರು
ತಂಗಿರುವ ಜನರೆಲ್ಲ ಸೋದರತೆ ವಾತ್ಸಲ್ಯ
ಕೇಳದೆಯ ಕೊಡುತಾರೆ ಸಿಹಿಯ ನೀರು

ಸಂಸ್ಕಾರ ಸಂಸ್ಕೃತಿಯು ನೆಲೆನಿಂತ ನೆಲವಿದುವೆ
ಕಷ್ಟದೊಳಗಿಹ ಜನರಿಗಾಧಾರವು
ಸತ್ಕಾರ ಮಾಡುವರು ಹಸಿದ ಮಂದಿಗೆ ಮೊದಲು
ಅನ್ನಪೂರ್ಣೆಯು ನೆಲೆಸಿದಂತ ತಾವು

ರಾಗಿ ಭತ್ತದ ಜೊತೆಯಲಲಸಂದೆ ತೊಗರಿಯನು
ಅವರೆ ಹುರುಳಿಯ ಜೊತೆಗೆ ಬೆಳೆಯುತಾರೆ
ಅಕ್ಕಡಿಯ ಸಾಲಿನೊಳು ಹೆಸರು ಉದ್ದಿನ ಕಾಳು
ಮೆಕ್ಕೆ ಜೋಳವು ಮನೆಯ ರಾಸುಗಳಿಗೆ

ಕೊಬ್ಬರಿಗೆ ಹೆಚ್ಚು ಬೆಲೆ ಸಿಕ್ಕಿದರೆ ಸಂಭ್ರಮವು
ಖುಷಿಯೊಳಗೆ ಬಾಳುವರು ಹಿಗ್ಗಿನೊಳಗೆ
ಒಬ್ಬರೊಬ್ಬರಿಗಾಗಿ ಸಹಬಾಳ್ವೆ ನಡೆಸುವರು
ಅಂಥ ಚೆಲುವಿಹುದು ಸಂಬಂಧದೊಳಗೆ

ಊರ ಮುಂದಿನ ಹನುಮ ಕಾಯುತಿಹನೆಲ್ಲರನು
ಭೂತ ಪ್ರೇತದ ಚೇಷ್ಟೆ ಯಾರಿಗಿಲ್ಲ
ದಾರಿಹೋಕರಿಗೆಲ್ಲ ತಂಪು ಪಾನಿಯ ನೀಡಿ
ಬೀಳ್ಕೊಡುವ ನಮ್ಮೂರೆ ನಮಗೆ ಚೆಂದ

ಹಬ್ಬ ಹರಿದಿನಗಳಲಿ ಮನೆಹೆಣ್ಣುಮಕ್ಕಳಿಗೆ
ಕರೆದು ಕೊಡುವರು ತವರ ಉಡುಗೊರೆಯನು
ಉಬ್ಬಿನೊಳು ಮಾಡುವರು ಪ್ರತಿವರ್ಷ ಜಾತ್ರೆಯನು
ಗ್ರಾಮದೇವಿಗೆ ಕೊಡುತ ಹರಕೆಯನ್ನು.


  • ಚನ್ನಕೇಶವ ಜಿ ಲಾಳನಕಟ್ಟೆ – ಕವಿಗಳು , ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading