ಹೂಲಿಶೇಖರ್ ಅವರಿಗೆ ಎಪ್ಪತ್ತಮೂರು ತುಂಬಿದ ಸಂದರ್ಭದಲ್ಲಿ ಅನೇಕ ನಾಟಕಕಾರರು, ಕಥೆಗಾರರು, ಕಿರುತೆರೆಯ ದಿಗ್ಗಜರು, ನಟನಟಿಯರು, ಅವರ ಸ್ನೇಹಿರು ಮುಂತಾದವರು ಅವರಿಗೆ ಸಲ್ಲಿಸುತ್ತಿರುವ ಪ್ರೀತಿಯ ಕಾಣಿಕೆ ಇದು.’ಹೂಲಿ ರಂಗ ಶಂಕರ’ ಇದು ಹೂಲಿ ಶೇಖರ್ ಅವರ ಅಭಿನಂದನಾ ಗ್ರಂಥ. ಲೇಖಕಿ ಗಿರಿಜಾ ಶಾಸ್ತ್ರಿ ಅವರು ‘ಹೂಲಿ ರಂಗ ಶಿಖರ’ ಗ್ರಂಥದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇಂದು ಬಿಡುಗಡೆಯಾಗುತ್ತಿದೆ. ಡಾ. ಮಹೇಂದ್ರ ಕುಮಾರ್ ಬಿ.ಪಿ. ಹಾಗೂ ನರೇಂದ್ರ ಬಾಬು ಆರ್ ಅವರು ಸಂಪಾದಿಸಿದ್ದಾರೆ. ‘ಕರಿಯು ಕನ್ನಡಿಯೊಳಗೆ’ ಇದು ಹೂಲಿ ಶೇಖರ್ ಅವರ ಒಂದು ನಾಟಕದ ಹೆಸರು. ಅವರ ಈ ಅಭಿನಂದನ ಗ್ರಂಥ ಕೂಡ ಕರಿಯನ್ನು ಕನ್ನಡಿಯೊಳಗೆ ಹಿಡಿಯುವುದೇ ಆಗಿದೆ. ಮಹತ್ತನ್ನು ಅಣುವಿನೊಳಗೆ ತೋರಿಸುವುದು. ಇದು ಮಹತ್ತಿನೊಳಗೆ ಅಣು, ಅಣುವಿನೊಳಗೆ ಮಹತ್ತು ಅಡಗಿರುವ ಅಧ್ಯಾತ್ಮಿಕ ಚಿಂತನೆಯ ರೂಪವೂ ಆಗಿದೆ. ಇದನ್ನು ಸಾಮಾಜಿಕ ಅಧ್ಯಾತ್ಮ ಎನ್ನುತ್ತಾರೆ ಜಯಂತ್ ಕಾಯ್ಕಿಣಿ ಕರಿಯನ್ನು ಕುರುಡರು ಮುಟ್ಟಿದಂತೆ ( ಹೇಳುವುದು ಸರಿಯಲ್ಲವೆನಿಸುತ್ತೆ) ಎಂದು ಇಲ್ಲಿನ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಎಲ್ಲ ಸೇರಿ ಒಂದು ಅಖಂಡ ವ್ಯಕ್ತಿತ್ವವನ್ನು ಕಟ್ಟಿ ಕೊಡುವುದು. ನಾಟಕದ ಹುಚ್ಚು ಹತ್ತಿಸಿಕೊಂಡ ಹೂಲಿಯೆಂಬ ಸಣ್ಣ ಹಳ್ಳಿಯ ಮುಗ್ಧ ಬಾಲಕನಿಂದ ಹಿಡಿದು ಶಾಲಾ ಕಾಲೇಜುಗಳಲ್ಲಿ ಆ ಹುಚ್ಚಿಗೆ ನೀರೆರೆದು ಆನಂತರ ಕರ್ನಾಟಕ ವಿದ್ಯುತ್ ನಿಗಮದ ಸೇವಕರಾಗಿ ಕಾಡಿನ ಕಷ್ಟ ಕೋಟಲೆಗಳನ್ನು ಲೆಕ್ಕಿಸದೇ (ಮರಾಠಿಯ ಹರಿಶ್ಚಂದ್ರಾಚಿ ಫಾಕ್ಟರಿ ನೆನಪಾಗುತ್ತದೆ. ಅನೇಕ ನಾಟಕಗಳನ್ನು ಆಡಿಸಿದ ನಾಟಕಕಾರರಾಗಿ, ನಟರಾಗಿ, ನಿರ್ದೇಶಕರಾಗಿ, ಕಥೆ ಕಾಬರಿಕಾರರಾಗಿ, ಹೋರಾಟಗಾರರಾಗಿ, ಸಂಘಟನಾಕಾರರಾಗಿ, ಕನ್ನಡ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಗ್ರಂಥಾಲಯಗಳನ್ನು ಪ್ರಾರಂಭಿಸಿ, ಕಿರುತೆರೆಯ ಕಥೆ ಮತ್ತು ಸಂಭಾಷಣೆಗಳ ಕರ್ತೃವಾಗಿ – ಹೀಗೆ ಹೂಲಿ ಶೇಖರ್ ಅವರ ವ್ಯಕ್ತಿತ್ವದ ಅನಂತ ಆಯಾಮಗಳನ್ನು, ಮೇರು ಸ್ವರೂಪವನ್ನು ಬಯಲಾಗಿಸುವ ಪ್ರಯತ್ನವನ್ನು ಈ ಅಭಿನಂದನ ಗ್ರಂಥದಲ್ಲಿ ಮಾಡಲಾಗಿದೆ. ಒಬ್ಬ ಮೇರು ನಾಟಕಕಾರನಿಗೆ, ಲೇಖಕನಿಗೆ ಓದುಗರು ಪ್ರೇಕ್ಷಕರು ಸಲ್ಲಿಸಬೇಕಾದ ಋಣವಿದು.

ಇಂತಹ ಗ್ರಂಥಗಳು ಆ ಕಾಲದ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯ ದಾಖಲಾತಿಯೇ ಆಗಿರುತ್ತದೆ. ಹೂಲಿ ಶೇಖರ್ ಅವರನ್ನು ನಾನು ಕಂಡಿದ್ದೇ ಇತ್ತೀಚೆಗೆ. ಅವರ ಮೂಡಲಮನೆ ಮತ್ತು ಒಂದೆರೆಡು ನಾಟಕಗಳನ್ನು ನೋಡಿರುವುದನ್ನು ಬಿಟ್ಟರೆ ನನಗೆ ಅವರ ಕೃತಿಗಳ ಬಗ್ಗೆ ಹೆಚ್ಚು ಪರಿಚಯವಿರಲಿಲ್ಲ. ಈ ಕೃತಿಯನ್ನು ಓದುತ್ತಾ ಓದುತ್ತಾ ಅವರ ವಿರಾಟ್ ವ್ಯಕ್ತಿತ್ವದ ಬಗ್ಗೆ ಪರಿಚಯವಾಯಿತು. ನಮ್ಮ ಮನೆಗೆ ಬಂದಾಗ ಅವರು ಅಗದೀ ಸಾಮಾನ್ಯರ ಹಾಗೆ ಕುಳಿತಿದ್ದರ ಧ್ಯಾಸ ತಲೆಗೆ ಹೊಕ್ಕಿದ್ದೇ ಇದರೊಳಗಿನ ಅಕ್ಷರ ಬ್ರಹ್ಮನನ್ನು ತಿಳಿದುಕೊಳ್ಳಲು ಹತ್ತಿದಾಗ. ನಾವು ಮುಂಬಯಿಯಲ್ಲಿ ನಲವತ್ತು ವರುಷ ಇದ್ದು ಈಗಷ್ಟೇ ಬೆಂಗಳೂರಿನಲ್ಲಿ ನೆಲಸಲು ಬಂದಿದ್ದೇವೆ. ಮುಂಬಯಿ ಹ್ಯಾಂಗೋವರ್ ನಲ್ಲಿಯೇ ಇದ್ದೇವೆ. ಈ ಕೃತಿಯನ್ನು ಓದುತ್ತಿರುವಾಗ ಅದು ನನ್ನನ್ನು ಅನಾಮತ್ತು ಮುಂಬಯಿಗೆ ಕರೆದೊಯ್ದು ಬಿಟ್ಟಿತು. ಇಲ್ಲಿಯ ಜವಾರಿ ಭಾಷೆ (ಮರಾಠಿಯಲ್ಲಿ ಜೋಳ), ಕೆಲವು ಆಡುನುಡಿಗಳು, ನಾಟಕಗಳ ಆಣಿಮುತ್ತುಗಳು, ಗಾದೆ ಮಾತುಗಳು ಎಲ್ಲವೂ ಮರಾಠಿ ಮಣ್ಣಿನದ್ದೇ. ಮರಾಠಿ ನನ್ನ ಮಾವುಶೀ ! ಮಾವುಶೀ ಮಾಯಿಗಿಂತ ಎಂದಿಗೂ ಪ್ರಿಯಳೇ. ಮಾಯಿ ಮತ್ತು ಮಾವುಶೀಯರ ನಡುವೆ ಸಾಂಸ್ಕೃತಿಕ ಸೇತುವೆಯಾಗಿ ಶೇಖರ್ ಅವರು ದುಡಿದಿದ್ದಾರೆ. ಇವರ ಮಧ್ಯೆ ರಾಜಕಾರಣ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ. ಕನ್ನಡ ಮರಾಠಿ ಅಂದರೆ ಸಾಂಸ್ಕೃತಿಕ, ಕರ್ನಾಟಕ ಮಹಾರಾಷ್ಡ್ರ ಎಂದರೆ ರಾಜಕೀಯ- ಎಂದು ಹೇಳಿದ್ದಾರೆ ಹಾಮಾನಾ. ಕಲಾ ಮಾಧ್ಯಮಗಳು ಎಂದೂ ಸಾಂಸ್ಕೃತಿಕ ಸೇತುವೆಗಳೇ ಆಗಿರುತ್ತವೆ ಎನ್ನುವುದಕ್ಕೆ ಒಂದು ಉದಾಹರಣೆ ಹೂಲಿಯವರು.
ನಮ್ಮ ಮುಂಬಯಿ ನಾಟಕ ಪ್ರಿಯರಿಗೆ ಪೃಥ್ವೀ ಥಿಯೇಟರ್ ಎಂದರೆ ಸಿದ್ಧಿವಿನಾಯಕನ ಮಂದಿರವೇ! ಶಶಿಕಪೂರ್ ಹೆಂಡತಿ ಸಂಜನಾ ಕಪೂರ್ ಬೆಳೆಸಿದಂತಹ ರಂಗಮಂದಿರ ಅದು.
ಇಲ್ಲಿನ ರಂಗಶಂಕರದ ಹಾಗೆ ಅರುಂಧತಿಯ ಹಾಗೆ ! ಅಂತಹ ರಂಗಮಂದಿರದಲ್ಲಿ ಬಿ.ವಿ. ಕಾರಂತರಂತಹ ಮೇರು ರಂಗ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹೂಲಿ ಶೇಖರ್ ಅವರ ‘ಅರಗಿನ ಬೆಟ್ಟ’ ನಾಟಕದ ಹಿಂದಿ ಅವತರಣಿಕೆ ‘ಲಾಹ್ ಕಿ ಪಹಾಡ್’ ನ್ನು ಸಂಜನಾ ಕಪೂರ್ ಮತ್ತು ಬಬಿತಾ ಬಬ್ಬರ್ ಬಿಡುಗಡೆಮಾಡುತ್ತಾರೆ. ಇದು ಹೂಲಿಯವರ ರಂಗ ನೈಪುಣ್ಯತೆಯ ಸ್ಥಾನ ನಿರ್ದೇಶನವನ್ನೂ ಮಾಡುತ್ತದೆ. ತಾಯಿ ಹಾಲಿನ ಜೊತೆಗೇ ನಾಟಕ ಕಲೆಯನ್ನೂ ಇವರು ಅರೆದು ಕುಡಿದಿರಬೇಕು. ಬಾಲ್ಯದಲ್ಲೇ ಬರೆಯಲು ಪ್ರಾರಂಭಿಸುತ್ತಾರೆ. ಸಣ್ಣಾಟ, ದೊಡ್ಡಾಟ, ದಪ್ಪಿನಾಟ, ಲಾವಣಿಗಳು ಮುಂತಾದ ಜಾನಪದ ಆಟಗಳ ಪ್ರಭಾವ ಇವರ ರಂಗಾಸಕ್ತಿಯ ಬೇರುಗಳು. ಅವು ಗಟ್ಟಿಯಾಗಿ ನೆಲೆಯೂರಿದ್ದರಿಂದಲೇ ಇವರು ದೊಡ್ಡ ವೃಕ್ಷವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಬೆಟಗೇರಿ ಕೃಷ್ಣ ಶರ್ಮ, ವರದರಾಜ ಹುಯಿಲಗೋಳ, ನಾಗಾಭರಣ, ಕೆ.ವಿ.ಸುಬ್ಬಣ್ಣ, ಕಂಬಾರ, ಸಿದ್ಧಲಿಂಗ ಪಟ್ಟಣ ಶೆಟ್ಟಿ, ಕಾಳೇಗೌಡ ನಾಗವಾರ, ಜಯಂತ್ ಕಾಯ್ಕಿಣಿ, ಬಿ.ವಿ. ಕಾರಂತ, ಬೋಳುವಾರು, ನಾದಾ ಶೆಟ್ಟಿ ಮುಂತಾದವರೆಲ್ಲರೂ ಇವರ ನಾಟಕ ಕಥೆ ಕಾದಂಬರಿ ಮುಂತಾದವುಗಳನ್ನು ಮೆಚ್ಚಿ ಹರಸಿದ್ದಾರೆ. ‘ಹೂಲಿ’ ಯಲ್ಲ ‘ರಂಗ ಹುಲಿ’, ಎಂಟು ಹತ್ತು ಲಕ್ಷ ಪುಟಗಳಷ್ಟು ಬರೆದಿರುವ ‘ರಾಕ್ಷಸ ಬರಹಗಾರ’, ‘ರಂಗ ಕಲಿ’, ‘ರಂಗ ಶಿಖರ’ ಎಂದೆಲ್ಲಾ ನಾಟಕ , ಕಿರುತರೆಯ ನಿರ್ದೇಶಕರುಗಳು, ನಟರು, ನಾಟಕ ಪ್ರೇಮಿಗಳು ಕೊಂಡಾಡಿದ್ದಾರೆ.
ಹಿಂದಿ ಮರಾಠಿ, ತೆಲುಗು, ತಮಿಳು ಭಾಷೆಗಳಿಗೆ ಇವರ ನಾಟಕಗಳು ಅನುವಾದಗೊಂಡು ಪ್ರದರ್ಶಿಸಲ್ಪಟ್ಟಿವೆ. ಹಲಗಲಿ ಬೇಡರ ದಂಗೆ (೩೦೦ ಹೆಚ್ಚು ಪ್ರದರ್ಶನಗಳು), ಬಂಟ ಅಮಟೂರು ಬಾಳಪ್ಪ ( ೪೦೦ ಕ್ಕೂ ಹೆಚ್ಚು), ಹಾವು ಹರಿದಾಡತಾವ (೨೦೦ ಕ್ಕೂ ಮಿಕ್ಕು), ಕಲ್ಯಾಣದಲ್ಲಿಕ್ರಾಂತಿ, ಸುಳಿವಾತ್ಮ ಎನ್ನೊಳಗೆ, ರಾಕ್ಷಸ, ದಫನ್, ಅರಗಿನ ಬೆಟ್ಟ, ಮುಂತಾದ. ನಾಟಕಗಳು ದೇಶದ ನಾನಾ ಭಾಗಗಳಲ್ಲಿ ನೂರಾರು ಪ್ರದರ್ಶನಗಳನ ಕಂಡು ಜಯಭೇರಿ ಬಾರಿಸಿವೆ. ಈ ಎಲ್ಲಾ ಸಾಧನೆಗಳನ್ನು ಮನದಾಳದಿಂದ ಇಲ್ಲಿನ ಲೇಖಕ ಲೇಖಕಿಯರೆಲ್ಲಾ ಕೊಂಡಾಡಿದ್ದಾರೆ. ಅಂತಹ ನೂರಕ್ಕಿಂತ ಹೆಚ್ಚಿನ ಲೇಖನಗಳು ಇಲ್ಲಿವೆ. ಹೂಲಿ ಶೇಖರ್ ಅವರ ಹಾರದಲ್ಲಿ ಕಂಗೊಳಿಸುವ ರತ್ನಗಳು ಇವು. ಇಂತಹ ಅನರ್ಘ್ಯಹಾರವನ್ನು ಧರಿಸಿಕೊಂಡು ಇಂದು ವೇದಿಕೆ ಮೇಲೆ ವಿರಾಜಮಾನರಾಗಿದ್ದಾರೆ. ಒಬ್ಬ ನಾಟಕಕಾರನಿಗೆ,ಲೇಖಕನಿಗೆ ಇದಕ್ಕಿಂತ ಹೆಚ್ಚಿನದೇನು ಬೇಕು? ಬಸವರಾಜ ಕಟ್ಟೀಮನಿ (ಮಾಮರಡಿಯ ಅಲೆಮಾರಿ) ಕಲ್ಬುರ್ಗಿ (ಕರಿಯು ಕನ್ನಡಿಯೊಳಗೆ) ಚೆನ್ನವೀರ ಕಣವಿ ಮುಂತಾದವರ ಬಗೆಗೆ ಬರೆದ ಇವರ ನಾಟಕಗಳ ಕುರಿತ ಮಾಹಿತಿ ಬಹಳ ವಿಶಿಷ್ಟವಾಗಿ ಓದುಗರ ಮನ ಸೆಳೆಯುತ್ತವೆ. ನಾಟಕದ ಹುಟ್ಟು ಬೆಳವಣಿಗೆ, ನಾಟಕದ ತಂತ್ರಗಳು, ರಂಗ ಸಜ್ಜಿಕೆ, ಧ್ವನಿ ತಂತ್ರ,ಪ್ರೇಕ್ಷಕನ ಪಾತ್ರ, ನಟನಟಿಯರ ಜವಾಬ್ದಾರಿಗಳು, ಜಾನಪದ ರಂಗ ಭೂಮಿಯ ಚರಿತ್ರೆ ಮುಂತಾದ ಹೂಲಿಯವರೇ ಬರೆದ ತಾತ್ವಿಕ ಚರ್ಚೆಗಳನ್ನು ಕುರಿತ ಲೇಖನಗಳು ಬಹಳ ಅಮೂಲ್ಯವಾದವು. ಇವು ಅವರ ಗ್ರಹಿಕೆ ಮತ್ತು ಹುಚ್ಚನ್ನು ಏಕಕಾಲಕ್ಕೆ ಬಯಲಾಗಿಸುತ್ತವೆ. ನಾಟಕಕಾರರಾಗಿ ಇವರ ವಸ್ತುನಿಷ್ಠತೆ ಮತ್ತು ಸಂಶೋಧನ ಪ್ರವೃತ್ತಿ ಬೆರಗುಗೊಳಿಸುವಂತಹದ್ದು. ಅವರ ಸಂಶೋಧನ ಪ್ರವೃತ್ತಿಗೆ ಎರಡು ಉದಾ: ಅಮಟೂರು ಬಾಳಪ್ಪ ಮತ್ತು ಕರಿಯು ಕನ್ನಡಿಯೊಳಗೆ.
ಬಿಜ್ಜಳನನ್ನು ಕೊಲೆಮಾಡಲು ಸಂಚು ಹೂಡಿದವರಲ್ಲಿ ಬಿಜ್ಜಳ ನ ಮಗ ಸೋವಿದೇವನ ಮೂಲಕ ಕಸಪ್ಪಯ್ಯ, ಕೊಂಡಿ ಮಂಚಯ್ಯ ಮುಂತಾದವರೇ ಕಾರಣ ಅದನ್ನು ಕೆಳವರ್ಗದ ಶರಣರ ಮೇಲೆ ಆರೋಪ ಬರುವಂತೆ ಮಾಡಿದ ಹುನ್ನಾರವನ್ನು ಬಯಲಿಗೆಳೆಯುತ್ತಾರೆ ಥಾಕರೆ ಸಾಹೇಬನನ್ನು ಕೊಂದದ್ದು ಕಿತ್ತೂರು ರಾಣಿ ಚೆನ್ನಮ್ಮನಲ್ಲ ಬದಲಾಗಿ ಅಮಟೂರ ಬಾಳಪ್ಪ ಎಂಬುದನ್ನು ಸಾಧಾರವಾಗಿ ಬಿಂಬಿಸುತ್ತಾರೆ. ಇವೆಲ್ಲವೂ ಅವರ ಚಾರಿತ್ರಿಕ ಪ್ರಜ್ಞೆಗೆ ಸಾಕ್ಷಿಯಾಗಿವೆ. ‘ಸುಳಿವಾತ್ಮ ಎನ್ನೊಳಗೆ’ ನಾಟಕ ಇವರ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ.
ಬಸವಣ್ಣನ ಅನುಯಾಯಿಯಾದ ಹೂಲಿಯವರದ್ದು ಕುರುಡು ಭಕ್ತಿಯಲ್ಲ. ಅಲ್ಲಮ, ಸ್ಥಾವರವನ್ನು ನಿರಾಕರಿಸಿ ಜಂಗಮವನ್ನು ಎತ್ತಿ ಹಿಡಿಯುವುದರ ಮೂಲಕ ಬಸವಣ್ಣನ ಭ್ರಮೆಯನ್ನು ಹರಿಸುವುದನ್ನು ಇವರು ಇಲ್ಲಿ ದಾಖಲಿಸಿರುವುದು, ನಾಟಕಕಾರರಾಗಿ ಇವರ ಘನತೆಯನ್ನು ಹೆಚ್ಚಿಸಿವೆ.

ವಚನ ಸಾಹಿತ್ಯದ ಪ್ರಭಾವ ಎಷ್ಟು ತೀವ್ರವಾಗಿದೆ ಎನ್ನುವುದಕ್ಕೆ ಕಲ್ಯಾಣದ ಕ್ರಾಂತಿಯೂ ಸೇರಿದಂತೆ ಮೇಲಿನ ನಾಟಕಗಳು ಉದಾಹರಣೆಗಳಾಗಿವೆ ಕಿರುತೆರೆಗಿಂತ ನಾಟಕವೇ ತಮಗೆ ಪ್ರಿಯವೆಂದು ಹೇಳುತ್ತಾ ಎರಡರ ನಡುವಿನ ಸಾಧಕ ಬಾಧಕಗಳನ್ನು ಬಿಚ್ಚು ಮನಸ್ಸಿನಿಂದ ಚರ್ಚಿಸುತ್ತಾರೆ. ಜಾನಪದ ರಂಗಭೂಮಿ ಮೂಲೆಗುಂಪಾಗುತ್ತಿರುವುದರ ಬಗ್ಗೆ ವ್ಯಸನವೂ ಇದೆ. ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಒಬ್ಬ ಹಳ್ಳಿಯ ಮುಗ್ಧ ಬಾಲಕ , ದೇಶಾದ್ಯಂತ ತಿರುಗಿ ಕೊನೆಗೆ ಬೆಂಗಳೂರಿಗೆ ಬಂದು ನೆಲೆಸಿ ತಮ್ಮ ದಿಗಂತಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಯಿತು ಎನ್ನುವುದನ್ನು ಇಲ್ಲಿ ದಾಖಲಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಗಮದಲ್ಲಿ ೩೨ ವರುಷ ಸೇವೆ ಮಾಡುತ್ತಲೇ ನಾಟಕಗಳನ್ನು ರಚಿಸಿ,ಪ್ರದರ್ಶಿಸಿದ್ದಾರೆ, ನಾಟಕೋತ್ಸವಗಳನ್ನು ರಾಜ್ಯಮಟ್ಟದಲ್ಲಿ ಆಯೋಜಿಸಿದ್ದಾರೆ. . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳೇ ಅಲ್ಲದೆ ಅನೇಕ ಪ್ರಶಸ್ತಿಗಳು, ಸವದತ್ತಿ ಕನ್ನಡ ಸಮ್ಮೇಳನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಟಿ.ವಿ. ಧಾರಾವಾಹಿಗಳಿಗೆ ಕಥೆ ಸಂಭಾಷಣೆ ಇತ್ಯಾದಿ ಇವರ ಕಿರೀಟಕ್ಕೆ ದಕ್ಕಿದ ಗರಿಗಳಾಗಿವೆ.
ಹೂಲಿಯಿಂದ ಬೆಂಗಳೂರಿನವರೆಗಿನ ಒಂದು ಮಹಾಯಾತ್ರೆಯ ಗಾಥೆ ಇದು. ಪುತಿನ ಒಮ್ಮೆಎಚ್ ಎಸ್. ವಿ ಯವರಿಗೆ “ನೀನು ಏನೇ ಬರಿ ಆದರೆ ನಾಟಕ ಬರೆಯದಿದ್ದರೆ ನೀನು ಪೂರ್ಣ ಲೇಖಕನಾಗಲಾರೆ” ಎಂದು ಹೇಳಿದ್ದರಂತೆ ಆನಂತರವೇ ತಾವು ನಾಟಕ ಬರೆಯಲು ಪ್ರಾರಂಭಿಸಿದೆ ಎಂದು ಎಚ್ ಎಸ್ ವಿ ಹೇಳಿಕೊಂಡಿದ್ದಾರೆ. ಪರಕಾಯ ಪ್ರವೇಶಕ್ಕೆ ನಾಟಕಕಾರನಿಗೆ ಹೆಚ್ಚಿನ ಅವಕಾಶವಿದೆ.
ಶೇಖರ್ ಅವರೋ ತಮ್ಮ ಬರವಣಿಗೆಯನ್ನು ನಾಟಕದಿಂದಲೇ ಪ್ರಾರಂಭಸಿದವರು. ಕಥೆ ಕಾದಂಬರಿಗಳನ್ನೂ ಬರೆದವರು. ಅವರು ಏರಿದ ಎತ್ತರಕ್ಕೆ ಪ್ರತೀಕವಾಗಿ ಇಂದು ಈ ಕೃತಿ ಬಿಡುಗಡೆಯಾಗುತ್ತಿದೆ. ಹೂಲಿ ಶೇಖರ್ ಅವರಿಗೆ ಕೋರುತ್ತೇನೆ.
- ಗಿರಿಜಾ ಶಾಸ್ತ್ರಿ – ಉಪನ್ಯಾಸಕರು, ಲೇಖಕರು, ವಿಮರ್ಶಕರು
