ನಾನು ಪೈಲಟ್ಟಾಗಲೇ ಬೇಕೆಂದು ನಿಶ್ಚಯಿಸಿದಾಗ ನಾನು ಧೃಡವಾದೆ,ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಆಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಪದ್ಮಾ ಬಂದೋಪಧ್ಯಾಯ ನೀಡಿದ ಪ್ರೋತ್ಸಾಹದಿಂದ ನಲವತ್ತು ಜನರಲ್ಲಿ ಸೆಲೆಕ್ಟ್ ಆದ ಮೂರು ಜನರಲ್ಲಿ ನಾನೂ ಒಬ್ಬ ಆಯ್ಕೆಯಾಗಿ ಪೈಲೆಟ್ ಆದೆ ಎಂದು ತಮ್ಮ ನೆನೆಪಿನ ಸುರಳಿಯನ್ನು ಬಿಚ್ಚಿಟ್ಟಿದ್ದಾರೆ ವಿಂಗ್ ಕಮಾಂಡರ್ ಸುದರ್ಶನ ಅವರು.ಮುಂದೆ ಓದಿ …
ನಾನು ಕುಳಿತಿದ್ದ ಮಿಲಿಟರಿ ಟ್ರಕ್ ಪಂಜಾಬಿನ ಲೂಧಿಯಾನ ರೈಲ್ವೇ ಸ್ಟೇಷನ್ನಿನಿಂದ ಹೊರಟು ಸುಮಾರು 30 ಕಿಲೋಮೀಟರ್ ದೂರದ ಹಲ್ವಾರ ಎನ್ನುವ ವಾಯುನೆಲೆಯನ್ನು ಪ್ರವೇಶಿಸುವಷ್ಟೊತ್ತಿಗಾಗಲೇ ಸಂಜೆಯ ಮಬ್ಬುಗತ್ತಲು. ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿ ಬರುವವರಿಗೆ, ಹೊಸದಾಗಿ ವರ್ಗಾವಣೆಯಾದವರಿಗೆಂದೇ ರೈಲ್ವೇ ನಿಲ್ದಾಣದಿಂದ ಈ ಟ್ರಕ್ಕಿನ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ಜಾಲಹಳ್ಳಿಯ ವಾಯುಸೇನೆಯ ತರಬೇತಿ ಕೇಂದ್ರದಲ್ಲಿ ವೈದ್ಯಕೀಯ ಸಹಾಯಕನಾಗಿ ಒಂದು ವರ್ಷದ ತರಬೇತಿ ಮುಗಿಸಿದ ನಂತರ ನನಗೆ ವರ್ಗಾವಣೆಯಾಗಿದ್ದು ಪಂಜಾಬಿನ ಹಲ್ವಾರದ ವಾಯುಸೇನೆಯ ಆಸ್ಪತ್ರೆಗೆ. ಹಲ್ವಾರ ತಲುಪಿದ ಅವತ್ತಿನ ದಿನವೂ ಚೆನ್ನಾಗಿ ನೆನಪಿದೆ ಯಾಕೆಂದರೆ ಅವತ್ತು ನನ್ನ ಹದಿನೆಂಟನೇ ಹುಟ್ಟು ಹಬ್ಬ!

ಫೋಟೋ ಕೃಪೆ : commons.wikimedia
ನಾನು ಹೊಸದಾಗಿ ಹಲ್ವಾರಕ್ಕೆ ಬರುತ್ತಿದ್ದೇನೆ ಎಂದು ತಿಳಿದ ಕೂಡಲೇ ಟ್ರಕ್ಕಿನಲ್ಲಿದ್ದ ಕೆಲವರು ಸಹಾಯ ಮಾಡಲು ಮುಂದಾದರು, ನಾನು ಇಳಿದು ಕೊಳ್ಳುವ ಸ್ಥಳ, ಉಳಿದುಕೊಳ್ಳುವ ಬ್ಯಾರಕ್ಕಿಗೆ ತಲುಪಿಸಿದರು. ಆಸ್ಪತ್ರೆಯ ಸಿಬ್ಬಂದಿಗೆಂದು ಪ್ರತ್ಯೇಕವಾದ ಉದ್ದನೆಯ ಹಜಾರ, ಅಲ್ಲಿ ಸುಮಾರು ಇಪ್ಪತ್ತು ಮಂಚಗಳ ನೀಟಾದ ಸಾಲು, ಪಕ್ಕದಲ್ಲೇ ಕಪ್ಪನೆಯ ಟ್ರಂಕುಗಳು, ಮೂಲೆಯಲ್ಲಿ ಖಾಲಿಯಿದ್ದ ಮಂಚವೇ ನನಗೆ ಅಂದು ರಾತ್ರಿಯ ಮತ್ತು ಮುಂದಿನ ಮೂರು ವರ್ಷಗಳ ನಿವಾಸ ಸ್ಥಾನ. ಸದ್ಯ ಕಾರ್ನರ್ ಸೈಟು ಸಿಕ್ಕಿತಲ್ಲಾ ಎನ್ನುವಷ್ಟು ಖುಷಿ. ಬಂದಿರುವ ಹೊಸಬನಿಗೆ ಕುತೂಹಲಭರಿತ ಪರಿಚಯ, ಸ್ವಾಗತಗಳು ನಡೆದವು. ನನ್ನ ಸೀನಿಯರ್ ವೈದ್ಯಕೀಯ ಸಹಾಯಕರು, ಆಂಬುಲೆನ್ಸ್ ಡ್ರೈವರುಗಳು, ಆಫೀಸಿನ ಸಿಬ್ಬಂದಿ…ಎಲ್ಲಾ ಇದ್ದರು ಆ ಹಜಾರದಲ್ಲಿ.
ಮರುದಿನ ಬೆಳಿಗ್ಗೆ ಇಸ್ತ್ರಿಮಾಡಿದ ಗರಿಗರಿಯಾದ ಯೂನಿಫಾರಂ, ಲಕಲಕ ಪಾಲಿಶ್ ಮಾಡಿದ ಬೂಟುಗಳನ್ನು ಧರಿಸಿ ಆಸ್ಪತ್ರೆಯ ಆಫೀಸಿಗೆ ಬಂದು ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಚಯ ಮಾಡಿಸಲು ಜೊತೆಗೆ ಒಬ್ಬರನ್ನು ಕಳುಹಿಸಲಾಯಿತು. ಸಾರ್ಜೆಂಟ್ ದೇಶಮುಖರು ಕನ್ನಡದವರು ಎಂದು ತಿಳಿದು ಸಂತೋಷವಾಯಿತು.

ಫೋಟೋ ಕೃಪೆ : up.punjabkesari
#ಪಂಜಾಬ್ ತುಂಬಾ ಫಲವತ್ತಾದ ಭೂಮಿ, ಇದು ನಮ್ಮ ದೇಶದ ದವಸ ಧಾನ್ಯಗಳ ಕಣಜ ಎನ್ನುತ್ತಾರೆ. ಇದೇ ಭೂಮಿಯಲ್ಲೇ ನನ್ನ ವೃತ್ತಿಪರ ಜೀವನ ಮೊಳಕೆಯೊಡೆದು, ನನ್ನ ದೈಹಿಕ, ಮಾನಸಿಕ ಬೆಳವಣಿಗೆಯಾಗಬೇಕಾಗಿರುವ ಫಲವತ್ತಾದ ಭೂಮಿ ಸಹಾ. ನನ್ನ ಆಲೋಚನೆ, ವಿಚಾರಗಳ ಸಮುದ್ರ ಮಂಥನ, ಸಾಮರ್ಥ್ಯದ ಅಗ್ನಿಪರೀಕ್ಷೆ…ಇವೆಲ್ಲಾ ನಡೆಯುಬೇಕಾಗಿರುವ ಕರ್ಮಭೂಮಿ. ಅದಕ್ಕೆ ಬೇಕಾಗುವ ದೈಹಿಕ, ಮಾನಸಿಕ ಸಿದ್ಧತೆಗಳನ್ನು ನಾನು ಮಾಡಿಕೊಳ್ಳಬೇಕು ಎನ್ನುವ ಸ್ಥಿರಸಂಕಲ್ಪದಿಂದ ನನ್ನ ಉದ್ಯೋಗಪರ್ವವನ್ನು ಪ್ರಾರಂಭಿಸಿದೆ.
ಹಲ್ವಾರ ಪಾಕಿಸ್ತಾನದ ಗಡಿಯಿಂದ ಕೇವಲ 130 ಕಿಲೋಮೀಟರ್ ದೂರದಲ್ಲಿದೆ ಹಾಗಾಗಿ ಗಡಿಪ್ರದೇಶಗಳಲ್ಲಿ ಸೈನ್ಯದ ಎಲ್ಲಾ ಕಟ್ಟಡಗಳಿಗೆ ಅಲ್ಲಿನ ನೆಲಹರು ಹಿನ ಅನುಸಾರವಾಗಿ ಬಣ್ಣ ಬಳಿದಿರುತ್ತಾರೆ. ಇದು ಶತ್ರುಗಳ ಕಣ್ಣಿಗೆ ಸುಲಭವಾಗಿ ಬೀಳದಿರುವ ರಕ್ಷಣಾತ್ಮಕ ಕ್ರಮ, ಹಾಗಾಗಿ ಅಲ್ಲಿಯ ಕಟ್ಟಡಗಳಿಗೆಲ್ಲಾ ಕಂದು, ಹಸಿರು ಹಾಗು ಬೂದುಬಣ್ಣಗಳನ್ನು ಬಳಿದಿದ್ದರು. ಹಲ್ವಾರದ ವಾಯುನೆಲೆಯಲ್ಲಿ ಎರಡು ಯುದ್ಧವಿಮಾನಗಳ ಸ್ಕ್ವಾಡ್ರನ್, ಕ್ಷಿಪಣಿಗಳ, ರಡಾರುಗಳ ಅಂಗಗಳು ಇನ್ನೂ ಹಲವಾರು ಸಹಾಯಕ ವಿಭಾಗಗಳಿದ್ದವು ಅದರಲ್ಲಿ ಅಲ್ಲಿನ ವಾಯುಸೈನಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ನೆರವು ಒದಗಿಸುವುದಕ್ಕೆಂದೇ ಈ ಪುಟ್ಟ ಆಸ್ಪತ್ರೆಯ ವ್ಯವಸ್ಥೆ. ಆಸ್ಪತ್ರೆಗೆ ಜನ ಬರುವುದೇ ಅವರು ನೋವಿನಲ್ಲಿದ್ದಾಗ, ಅನಾರೋಗ್ಯದಿಂದ ಬಳಲುತ್ತಿರುವಾಗ, ನಾವುಗಳು ಅವರಿಗೆ ಚಿಕಿತ್ಸೆ ಕೊಡುವಾಗ ಒಂದಿಷ್ಟು ಮುಗುಳ್ನಗೆ, ವಿನಯವಾಗಿ ಒಂದಿಷ್ಟು ಮಾತುಕತೆ ಆಡುವುದು ಬಹಳ ಮುಖ್ಯ ಎಂದು ಪ್ರಾರಂಭದಲ್ಲೇ ಮನವರಿಕೆಯಾಯಿತು, ಇದರಿಂದಾಗಿ ಬಹುಬೇಗ ಸ್ನೇಹಿತರ ಬಳಗ ಬೆಳೆಯುತ್ತಾ ಹೋಯಿತು. ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳ ಜನರೂ ಅವರದ್ದೇ ಒಂದು ಸಂಘ ಕಟ್ಟಿಕೊಂಡು, ಸಹಭೋಜನ, ವನವಿಹಾರ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೀಗೆ ಹಲವಾರು ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುತ್ತಾರೆ. ಹಲ್ವಾರದಲ್ಲಿ ನಮ್ಮದೇ ಒಂದು ಕನ್ನಡ ಸಂಘವೂ ಇತ್ತು ಹೊಸಬರು ಬಂದಾಗ ಅವರನ್ನು ಸ್ವಾಗತಿಸುವ, ಬೇರೆ ಸ್ಥಳಕ್ಕೆ ವರ್ಗಾವಣೆ ಆದಾಗ ಅವರನ್ನು ಬೀಳ್ಕೊಡುವ ಪರಿಪಾಠವಿತ್ತು. ಕನ್ನಡ ರಾಜ್ಯೋತ್ಸವದ ಆಚರಣೆಗೆ ಕೆಲವು ಹೊರರಾಜ್ಯಗಳ ಅತಿಥಿಗಳನ್ನು ಆಮಂತ್ರಿಸಿ ಆದರಿಸುತ್ತಿದ್ದೆವು.
ಪಂಜಾಬಿನ ಇನ್ನೊಂದು ವಿಶೇಷತೆ ಏನೆಂದರೆ ಅಲ್ಲಿನ ಧಾಬಾಗಳು. ಮುಂದುಗಡೆ ತೂಗಾಡುತ್ತಿದ್ದ ಮಸಾಲೆ ಹಚ್ಚಿದ ಕೋಳಿಗಳನ್ನು ನೋಡಿ ಇದೇನಿದು ವಿಚಿತ್ರಾ ಎನಿಸುತ್ತಿತ್ತು…ಕ್ರಮೇಣ ಪಕ್ಕದಲ್ಲಿ ನಿಂತು ಉದ್ದನೆಯ ಲೋಟದಿಂದ ಕೆನೆಭರಿತ ಲಸ್ಸಿಯನ್ನು ಗಟಗಟನೆ ಕುಡಿಯುವಷ್ಟು ಆ ಧಾಬಾಗಳಿಗೆ ಒಗ್ಗಿಕೊಂಡು ಬಿಟ್ಟೆ!

ಫೋಟೋ ಕೃಪೆ : Reddit
ವಾಯುಸೈನಿಕರ ವಿಶೇಷತೆ ಏನೆಂದರೆ ತಮ್ಮ ತಮ್ಮ ವಲಯದ ಕರ್ತವ್ಯವನ್ನು ನಿಭಾಯಿಸುತ್ತಲೇ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಬಹುತೇಕ ವಾಯುಸೈನಿಕರಿಗೆ ಹದಿನೈದು ಅಥವಾ ಇಪ್ಪತ್ತು ವರ್ಷಗಳ ಸೇವೆಯ ನಂತರ ಎರಡನೇ ಆವೃತ್ತಿಯ ಉದ್ಯೋಗ ಪರ್ವದ ಆಲೋಚನೆ ಇರುತ್ತದೆ. ಹೀಗಾಗಿ ಒಂದಲ್ಲಾ ಒಂದು ಚಟುವಟಿಕೆಗಳು ನಿರಂತರವಾಗಿ ನಡೆದೇ ಇರುತ್ತದೆ. ಪಿಯುಸಿ ಮುಗಿದ ಕೂಡಲೇ ವಾಯುಸೇನೆಗೆ ಸೇರಿದ ನನಗೂ ಹಾಗೇ ಆಲೋಚನೆ ಪ್ರಾರಂಭವಾಯಿತು. ಜೀವನದಲ್ಲಿ ಇನ್ನೂ ಮುಂದುವರೆಯಬೇಕು ಎನ್ನುವ ತುಡಿತ ಪ್ರಾರಂಭವಾಯಿತು. ಪಂಜಾಬಿನ ಮುಕ್ತ ವಿಶ್ವವಿದ್ಯಾಲಯದ BA ಪದವಿ ಕೋರ್ಸ್ ಮಾಡಲು ಪ್ರಾರಂಭಿಸಿದೆ. ನನ್ನ ಇಷ್ಟವಾದ ವಿಷಯಗಳು ತತ್ವಶಾಸ್ತ್ರ ಮತ್ತು ನೀತಿಶಾಸ್ತ್ರಗಳನ್ನು ಆರಿಸಿಕೊಂಡಿದ್ದರಿಂದ ಆಸಕ್ತಿಯಿಂದಲೇ ಓದಿ ಪಾಸಾಗುತ್ತಾ ಬಂದೆ. ಇನ್ನೂ ಏನೇನೆಲ್ಲಾ ಸಾಧ್ಯ…ಭೂಸೇನೆಯ ಅಧಿಕಾರಿಯಾಗುವ ಅವಕಾಶವೂ ಇದೆ, ಅದೃಷ್ಟವಿದ್ದರೆ ವಾಯುಸೇನೆಯ ಪೈಲಟ್ ಆಗುವ ಅವಕಾಶವೂ ಇದೆ! ಇದನ್ನು ಮೊಟ್ಟಮೊದಲ ಸಲ ಕೇಳಿದಾಗಲೇ ನನ್ನ ಕನಸುಗಳು ಗರಿಗೆದರಿಕೊಂಡು ಬಿಟ್ಟಿದ್ದವು ಆದರೆ ಕೂಡಲೇ ವರ್ತಮಾನಕ್ಕೆ ಇಳಿದು ಬಿಡುತ್ತಿದ್ದೆ , ನಾನು ನೋಡಿದರೆ ವೈದ್ಯಕೀಯ ಸಹಾಯಕ.. ಏರೋಪ್ಲೇನುಗಳನ್ನು ದೂರದಿಂದ ನೋಡಿದ್ದೊಂದು ಬಿಟ್ಟರೆ ಅದರ ತಲೆಬುಡವೂ ಗೊತ್ತಿಲ್ಲಾ, ಸರಿಯಾಗಿ ಇಂಗ್ಲೀಷು ಮಾತನಾಡಲು ಬರುವುದಿಲ್ಲಾ..ಎಲ್ಲಾದರೂ ಉಂಟೆ?
ನನ್ನ ತಾಂತ್ರಿಕ ಮಿತ್ರರು ಎಷ್ಟು ಅದೃಷ್ಟವಂತರು, ಅವರು ವಿಮಾನಗಳಲ್ಲಿ ಕೆಲಸ ಮಾಡುತ್ತಾರೆ, ವಿಮಾನಗಳ ಬಗೆಗಿನ ವಿಶೇಷ ತಂತ್ರಜ್ಞಾನ ಪಡೆದಿರುತ್ತಾರೆ, ಪೈಲಟ್ಟುಗಳನ್ನು ಮಾತಾಡಿಸುತ್ತಾರೆ, ಹಾರಾಟ ಮುಗಿಸಿದ ನಂತರ ಪೈಲಟ್ಟುಗಳು ಅವರಿಗೆ ವಿಮಾನದ ತಾಂತ್ರಿಕ ವರದಿಕೊಡುತ್ತಾರಂತೆ..ಇದರ ಬಗ್ಗೆ ಅವರು ಹೇಳುತ್ತಿರುವುದನ್ನು ಕೇಳುತ್ತಲೇ ಅದ್ಯಾವಾಗ ಹುಚ್ಚು ಹತ್ತಿಕೊಂಡಿತೋ…ಇಲ್ಲಾ.. ನಾನು ಪೈಲಟ್ಟಾಗಲೇ ಬೇಕೆಂದು ನಿಶ್ಚಯಿಸಿಯೇ ಬಿಟ್ಟೆ! ಇನ್ನು ಹಿಂತಿರುಗಿ ನೋಡಬಾರದು.
ಸದ್ದಿಲ್ಲದೇ ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಪ್ರಾರಂಭಿಸಿದೆ. ರಾತ್ರಿಯ ಊಟವಾದ ನಂತರ ಒಂದು ಸಣ್ಣನಿದ್ರೆ ತೆಗೆದು ಎದ್ದಾಗ ಸುಮಾರು ಹನ್ನೊಂದು ಗಂಟೆ, ಅಷ್ಟೊತ್ತಿಗಾಗಲೇ ಬ್ಯಾರಕ್ಕಿನಲ್ಲಿ ನಿಶ್ಯಬ್ದತೆ ಆವರಿಸಿಬಿಟ್ಟಿರುತ್ತದೆ..ಇನ್ನು ಮೇಲೆ ನನ್ನ ಚಟುವಟಿಕೆಗಳು ಆರಂಭ. ಒಂದು ಪುಟ್ಟ ರೇಡಿಯೋ, ಅದರಲ್ಲಿ BBC ಟ್ಯೂನ್ ಮಾಡಿಕೊಂಡು ಇಂಗ್ಲಿಷಿನ ಪದ ಉಚ್ಚಾರಣೆ, ವಾಕ್ಯ ನಿರ್ಮಾಣದ ಬಗ್ಗೆ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ವರಾಂಡದಲ್ಲಿ ಓಡಾಡುತ್ತಾ ಗುಂಪು ಚರ್ಚೆಯ ಅಣಕು ಅಭ್ಯಾಸ ಮಾಡುತ್ತಿದ್ದೆ. ಒಂದು ಅಂಗೈ ಅಗಲದ ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ವಿಚಾರಗಳ ಪುಸ್ತಕ “Powerful Thoughts” ನನ್ನ ಬಗ್ಗೆ ನನಗೇ ಅನುಮಾನ ಬರದಂತಹ ಮನಃಸ್ಥಿತಿಯನ್ನು ಕಾಯ್ದುಕೊಂಡಿತ್ತು. ಸಾಯಂಕಾಲದ PT ಮತ್ತು ಬಾಸ್ಕೆಟ್ಬಾಲ್ ಆಟದಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರಲ್ಲಿ ನೆರವಾಯಿತು.
ಅಲ್ಲಿನ ಪ್ರೋತ್ಸಾಹದಾಯಕ ವಾತಾವರಣ, ಹುರಿದುಂಬಿಸುವ ಹಿರಿಯರು, ಹಿಂದಿನಿಂದ ಅಪಹಾಸ್ಯ ಮಾಡುವ ‘ಗೆಳೆಯರು’ ಎಲ್ಲವೂ ನೆರವಿಗೆ ಬಂತು.

ಫೋಟೋ ಕೃಪೆ : ssbcrack
ಒಬ್ಬರನ್ನು ವಿಶೇಷವಾಗಿ ಇಲ್ಲಿ ಸ್ಮರಿಸಲೇಬೇಕು. ಅವರೇ ಇತ್ತೀಚೆಗೆ ‘ಪದ್ಮಶ್ರೀ’ ಪ್ರಶಸ್ತಿ ವಿಜೇತರು..ಆಗ ಅವರು ಕೇವಲ ಪದ್ಮ ಅಷ್ಟೇ.. ಸ್ಕಾಡ್ರನ್ ಲೀಡರ್ #ಪದ್ಮಾ_ಬಂದೋಪಧ್ಯಾಯ.
ವಾಯುಸೇನೆಯ ಆಸ್ಪತ್ರೆಯಲ್ಲಿ ಇವರು ಹಿರಿಯ ವೈದ್ಯರು. ಹಲ್ವಾರದ ನನ್ನ ಹೋರಾಟದ ದಿನಗಳಲ್ಲಿ ದೈವದತ್ತ ಮಾರ್ಗದರ್ಶಿಯಾಗಿ ದೊರೆತವರು. ತಿರುಪತಿಯ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿಬೆಳೆದ ಇವರ ಸಾಧನೆಗಳ ಸರಮಾಲೆಗಳನ್ನೇ ಧರಿಸಿದ ಮಹಾನ್ ಮಹಿಳೆ. 1971 ರ ಯುದ್ಧದಲ್ಲಿ ಪಾಕಿಸ್ತಾನ ಹಲ್ವಾರದ ಮೇಲೆ ದಾಳಿಮಾಡಿದಾಗ, ಗಾಯಾಳುಗಳಾದ ಹಲವಾರು ಸೈನಿಕರ ಜೀವ ಉಳಿಸಿದ ಮಹಾತಾಯಿ. ನನ್ನನ್ನು ಪ್ರೋತ್ಸಾಹಿಸುತ್ತಲೇ ಜೀವನದ ಏರುಪೇರುಗಳ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು..ಅವಸರಪಡಬೇಡ, ದುಡುಕಬೇಡ, ನಿನ್ನ ಪ್ರಯತ್ನ ನಿರಂತರವಾಗಿರಲಿ, ಫಲ ಅದರ ಸಮಯಕ್ಕೆ ತಾನೇ ತಾನಾಗಿ ಬರುತ್ತದೆ ಎಂದೆಲ್ಲಾ ಹೇಳುತ್ತಿದ್ದರು. ಮುಂದೆ ಇವರೂ ವಾಯುಸೇನೆಯ ಪ್ರಪ್ರಥಮ ಮಹಿಳಾ ಏರ್ ಮಾರ್ಷಲ್ ಆಗಿ ಬಡ್ತಿ ಪಡೆದರು. 2020 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಿತು. ಈಗಲೂ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ಇವರದೊಂದು ಪುಸ್ತಕ ಸಹಾ ಬಿಡುಗಡೆಯಾಗಿದೆ ‘Lady in Blue’ ಅಂತಾ. ನನ್ನ ಪುಸ್ತಕ ‘ಯೋಧ ನಮನ’ ದಲ್ಲಿ ಇವರ ಜೀವನ ಚರಿತ್ರೆಯ ಸಂಕ್ಷಿಪ್ತ ಅಧ್ಯಾಯವಿದೆ.
ಇರಲಿ…ಈಗ ಹಲ್ವಾರದ ಹೋರಾಟಕ್ಕೆ ಮರಳೋಣ.

ಫೋಟೋ ಕೃಪೆ : scroll
ಇಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿರುವಾಗಲೇ ಡೆಹ್ರಾಡೂನಿನಿಂದ Services Selection Board (SSB) ಯಿಂದ ಕರೆ ಬಂತು. ಮೂರು ದಿನಗಳು ಸತತವಾಗಿ ನಡೆಯುವ ಪರಿಷ್ಕರಣೆಯ ಪ್ರಕ್ರಿಯೆ ನಡೆಯಿತು. ಗುಂಪು ಸಂವಾದ, ಮನೋವೈಜ್ಞಾನಿಕ ಪರೀಕ್ಷೆಗಳು, ಮುಂಖಡತ್ವದ ಗುಣಗಳ ಪರೀಕ್ಷೆ, ಸೈನ್ಯಾಧಿಕಾರಿಗಳಿಗೆ ಅವಶ್ಯಕವಾಗಿ ಇರಬೇಕಾದ ವಿಶೇಷ ಲಕ್ಷಣಗಳ ಪರೀಕ್ಷೆ ಮತ್ತು ಸಾರ್ವಜನಿಕ ಭಾಷಣ ಇತ್ಯಾದಿ ಪರೀಕ್ಷೆಗಳ ನಿರಂತರ ಪರಿಷ್ಕರಣೆ ನಡೆಯುತ್ತದೆ.
ಅಂತಿಮ ಘಟ್ಟದಲ್ಲಿ ಸೆಲೆಕ್ಟ್ ಆಗದೆ ಉಳಿದುಕೊಂಡು ಬಿಟ್ಟೆ. ಡೆಹ್ರಾಡೂನಿನಿಂದ ಹಲ್ವಾರಕ್ಕೆ ಹಿಂತಿರುಗಿ ಬರುವಾಗ ಮುಂದೇನು ಮಾಡಬೇಕು ಎನ್ನುವ ಕಾರ್ಯತಂತ್ರದ ರೂಪರೇಷ ಮನಸ್ಸಿನಲ್ಲಾಗಲೇ ಸಿದ್ಧವಾಗಿತ್ತು. ಒಂದು ವಾರದ ರಜೆ ಪಡೆದು ಚಂಡೀಗಢಕ್ಕೆ ಹೋಗಿ ಒಬ್ಬ ನಿವೃತ್ತ ಕರ್ನಲ್ ಒಬ್ಬರ ಮಾರ್ಗದರ್ಶನ ಪಡೆದೆ. ಅವರು ಸಂಕ್ಷಿಪ್ತವಾಗಿ ಹೇಳಿದ್ದು.. ನೀನು ನೀನಾಗಿಯೇ ಇರು..ಬೇರೊಬ್ಬರ ಪಾತ್ರಧಾರಣೆ ಮಾಡಬೇಡ ಎಂದು…ಇಂತಹದ್ದೊಂದು ಕನ್ನಡಿಯ ಅವಶ್ಯಕತೆ ಇತ್ತು ಆಗ.
ಆರು ತಿಂಗಳಾದ ಮೇಲೆ ಪುನಃ ಡೆಹ್ರಾಡೂನಿಗೆ ಪ್ರಯಾಣ. ಈ ಸಲ ನಲವತ್ತು ಜನರ ದೊಡ್ಡ ಬ್ಯಾಚೇ ಬಂದಿತ್ತು. ಕಳೆದು ಸಲಕ್ಕಿಂತಲೂ ಈ ಸಲದ ಆತ್ಮವಿಶ್ವಾಸ ವೃದ್ಧಿಸಿದೆ ಎಂದು ನನಗೇ ಅಂತರಂಗದಲ್ಲಿ ಅನಿಸಿತ್ತು. ಜೀವನದಲ್ಲಿ ಒಮ್ಮೆ ಮಾತ್ರ ಅವಕಾಶ ಸಿಗುವ ಪೈಲಟ್ ಆಪ್ಟಿಟ್ಯೂಡ್ ಮತ್ತು ಬ್ಯಾಟರಿ ಟೆಸ್ಟ್ನಲ್ಲಿ ಆಗಲೇ ಪಾಸಾಗಿದ್ದೆ. ಇಂಗ್ಲೀಷಿನ ಸಂಭಾಷಣೆಯ ಕಲೆ ಕರಗತವಾಗಿತ್ತು, ಹೊಸ ಹೊಸ ಪದಗಳನ್ನು ಬಳಸಲು ಕಲಿತಿದ್ದೆ. ರಕ್ಷಣಾ ಆಯ್ಕೆಯ ಸಂಸ್ಥೆಯ ಅಧ್ಯಕ್ಷರು ನಡೆಸುವ ಸುಮಾರು ನಲವತ್ತು ನಿಮಿಷಗಳ ಕಾಲದ ಸಂದರ್ಶನಕ್ಕೆ ಮುನ್ನ ಸುಮಾರು ಹತ್ತು ನಿಮಿಷಗಳ ಧ್ಯಾನ ಮಾಡಿ ಮನಸ್ಸನ್ನು ಶಾಂತಗೊಳಿಸಿದೆ. ಸಂದರ್ಶನವೂ ಚೆನ್ನಾಗಿ ನಡೆಯಿತು. ನಾಲ್ಕನೇ ದಿನ ಫಲಿತಾಂಶ ಪ್ರಕಟಿಸಿದರು, ಸೆಲೆಕ್ಟ್ ಆದ ಮೂರು ಜನರಲ್ಲಿ ನಾನೂ ಒಬ್ಬ ಎಂದು ಘೋಷಿಸಲಾಯಿತು.
ಅಂತೂ #ಹಲ್ವಾರದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಜಯ ದೊರಕಿತು.
ನಾನು ವೈದ್ಯಕೀಯ ಸಹಾಯಕನ ವೃತ್ತಿಗೆ ವಿದಾಯ ಹೇಳಿ ವಾಯುಯಾನದ ತರಬೇತಿಗೆ ಹೊರಟು ನಿಂತಾಗ ಸಂತಸದಿಂದ ಬೀಳ್ಕೊಟ್ಟ ನನ್ನ ಸ್ನೇಹಿತರನ್ನು, ಹಿತೈಷಿಗಳನ್ನು ಮರೆಯಲಾದೀತೇ!
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
