ಪೈಲಟ್ ತರಬೇತಿಯ ಮಾಹಿತಿ – ವಿಂಗ್ ಕಮಾಂಡರ್ ಸುದರ್ಶನ



ಪೈಲಟ್ ಆಗಬೇಕೆನ್ನುವ ಕನಸ್ಸನ್ನು ಹೊತ್ತ ಯುವಜನರಿಗೆ ವಿಂಗ್ ಕಮಾಂಡರ್ ಸುದರ್ಶನ ಅವರು ಉತ್ತಮ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ…

ನಿನ್ನೆ ಬಂದ ಸಮಾಚಾರವೇನೆಂದರೆ ಕಲಬುರ್ಗಿ ಯಲ್ಲಿ APFT ಎನ್ನುವ ವೈಮಾನಿಕ ತರಬೇತಿ ಕೇಂದ್ರ ಪ್ರಾರಂಭವಾಗಲಿದೆಯಂತೆ. ಅಂತೂ ರಾಜ್ಯದಲ್ಲಿ ಒಂದಾದರೂ ಈ ತರಹದ ಕೇಂದ್ರ ಪ್ರಾರಂಭವಾಗುತ್ತಿದೆಯಲ್ಲಾ ಎನ್ನುವ ಸಂತೋಷವಾಯಿತು. ನಾನು ವಾಯುಸೇನೆಯಿಂದ ಹೊರಬಂದ ನಂತರ ಏರ್ಲೈನ್ಸ್ ಸೇರುವ ವಿಚಾರವಿರಲಿಲ್ಲ. ವೈಮಾನಿಕ ತರಬೇತಿಯಲ್ಲೇ ಮುಂದುವರೆಯುವ ಇರಾದೆ ಇತ್ತು. ಅದಕ್ಕೆಂದೇ ಜಕ್ಕೂರಿನ ಅಗ್ನಿ ಏವಿಯೇಶನ್ ಅವರ ಸಹಾಯದಿಂದ ‘ Seven Steps To Cockpit'(SSTC) ಎನ್ನುವ ಗ್ರೌಂಡ್ ಸ್ಕೂಲ್ ಪ್ರಾರಂಭಿಸಿದ್ದೆ. ನಾಲ್ಕು ಜನ ತರಬೇತಿದಾರರ ತಂಡವನ್ನು ಕಟ್ಟಿಕೊಂಡು ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದೆವು. ಆದರೆ ದುರದೃಷ್ಟವಶಾತ್ ನಮ್ಮ ಅಧೀನಕ್ಕೂ ಮೀರಿದ ಕೆಲವು ಕಾರಣಗಳಿಂದ ಆ ಸ್ಕೂಲನ್ನು ಮುಂದುವರೆಸಲಾಗಲಿಲ್ಲ. ಹಾಗಾಗಿ ನಾನು ಏರ್ಲೈನ್ಸ್ ಸೇರಿಕೊಳ್ಳಬೇಕಾಯಿತು. ಇದರ ಬಗ್ಗೆ ಆಗಾಗ ಒಂದು ಸಣ್ಣ ಮಟ್ಟದ ವಿಷಾದವೂ ಆಗುತ್ತಿರುತ್ತದೆ.

ವೈಮಾನಿಕ ಕ್ಷೇತ್ರ ಹಲವಾರು ಹಂತಗಳಲ್ಲಿ ಯುವಕ ಯುವತಿಯರನ್ನು ಆಕರ್ಷಿಸುತ್ತದೆ. ತಮ್ಮ ವಿದ್ಯಾರ್ಹತೆಗೆ ಮತ್ತು ಮುಖ್ಯವಾಗಿ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಈ ಕ್ಷೇತ್ರದಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಇದೊಂದು ಆಕರ್ಷಕ ಮತ್ತು ಸಮೃದ್ಧ ಕ್ಷೇತ್ರ, ಇದೇ ಕಾರಣದಿಂದಾಗಿ ಹಲವಾರು ಕುತಂತ್ರಿಗಳು ಅಮಾಯಕ ಯುವಕ ಯುವತಿಯರನ್ನು ಮೋಸ ಮಾಡಲು ಮುಂದಾಗುತ್ತಾರೆ ಎನ್ನುವುದು ದುರಂತ. ಈ ಕುತಂತ್ರದ ಜಾಲ ಎಲ್ಲಾ ಹಂತಗಳಲ್ಲೂ ನಡೆಯುತ್ತದೆ. ಇಂಡಿಗೋ ಏರ್ಲೈನ್ಸ್ ಹೆಸರು ಹೇಳಿಕೊಂಡು ಮೋಸ ಮಾಡುತ್ತಿರುವ ಕುತಂತ್ರಿಗಳಿಂದ ಹಲವಾರರನ್ನು ಪಾರುಮಾಡಿದ್ದೇನೆ. ಇದರ ಬಗ್ಗೆ ಕಾನೂನು ತಂಡಕ್ಕೆ ದೂರು ಸಹಾ ಕೊಟ್ಟಾಗಿದೆ.

ಹಲವಾರು ಮಿತ್ರರು ತಮ್ಮ ಮಕ್ಕಳಿಗೆ ಪೈಲಟ್ ತರಬೇತಿ ನೀಡುವ ಕೇಂದ್ರಗಳ ಬಗ್ಗೆ ಕೇಳುತ್ತಿದ್ದರು. ನಾನೀಗ ಆ ವಲಯದಲ್ಲಿಲ್ಲದಿದ್ದರೂ ಕೆಲವು ವಿಷಯಗಳನ್ನು ತಿಳಿಸಬಲ್ಲೆ.

ವಿದ್ಯಾರ್ಹತೆ: ಕನಿಷ್ಟ ವಿದ್ಯಾರ್ಹತೆ PUC, ಭೌತಶಾಸ್ತ್ರ ಮತ್ತು ಗಣಿತ ಕಡ್ಡಾಯವಾಗಿರಬೇಕು. ಆದರೆ ನನ್ನ ಸಲಹೆ ಏನೆಂದರೆ ಇದೊಂದು ಅನಿಶ್ಚಿತ ವಲಯ ಹಾಗಾಗಿ ವಿಜ್ಞಾನ ಅಥವಾ ಎಂಜಿನಿಯರಿಂಗ್ ಪದವಿ ಮಾಡಿಕೊಂಡು ಒಂದು fallback ವ್ಯವಸ್ಥೆ ಮಾಡಿಟ್ಟುಕೊಂಡಿರುವುದು ಒಳ್ಳೆಯದು.

ತರಬೇತಿ: ಮೊದಲೆಲ್ಲಾ ನಮ್ಮ ವಿದ್ಯಾರ್ಥಿಗಳು ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಹೀಗೆ ಹಲವಾರು ವಿದೇಶಗಳಿಗೆ ಹೋಗಿ ಒಂದು ವರ್ಷದ ಲ್ಲಿ 200 ಗಂಟೆಗಳ ತರಬೇತಿ ಮುಗಿಸಿಕೊಂಡು ಬರೋರು. ಈಗಲೂ ಆ ಆಯ್ಕೆ ಇದೆ, ಆದರೆ ಭಾರತಲ್ಲೂ ಈಗ ಉತ್ತಮ ತರಬೇತಿ ಕೇಂದ್ರ ಗಳಿವೆ, ಗೋಂಡಿಯಾ, IGRUA, ಹೈದರಾಬಾದ್, ಇಂದೋರ್ ಹೀಗೆ ಹಲವಾರು. ಇಂಡಿಗೋ ಏರ್ಲೈನ್ಸ್ ನ ಕೆಡೆಟ್ ಪ್ರೋಗ್ರಾಂ ಇದೆ. ಭಾರತದಲ್ಲಿ ತರಬೇತಿಯ ಅವಧಿ ಸುಮಾರು ಎರಡು ವರ್ಷಗಳಷ್ಟು ಆಗಬಹುದು.

ಹಣಕಾಸು : ಒಂದು ಏರ್ಲೈನ್ಸ್ ಪೈಲಟ್ ಆಗಿ ಆಯ್ಕೆಗೆ ಹೋಗುವಷ್ಟರಲ್ಲಿ ಸುಮಾರು 45 -50 ಲಕ್ಷಗಳಷ್ಟು ಖರ್ಚು ಬರಬಹುದು. ಮತ್ತು ಆಯಾ ಏರ್ಲೈನ್ಸ್ ಗಳಲ್ಲಿರುವ ವಿವಿಧ ರೀತಿಯ ವಿಮಾನಗಳ ವಿಶೇಷ ತರಬೇತಿಯ ಖರ್ಚು ಪ್ರತ್ಯೇಕ. ಅದು ಸುಮಾರು 12-15 ಲಕ್ಷವಾಗಬಹುದು.

ವೈದ್ಯಕೀಯ ಪರೀಕ್ಷೆ: ಪ್ರಾರಂಭದಲ್ಲಿ ಬೆಂಗಳೂರಿನ Institute of Aerospace Medicine (IAM) ನಲ್ಲಿ ವಿಸ್ತೃತವಾಗಿ ದೈಹಿಕ ತಪಾಸಣೆ ಮಾಡುತ್ತಾರೆ. ನಂತರ ಪ್ರತೀವರ್ಷ ಮತ್ತು ಕೆಲವು ವರ್ಷಗಳ ನಂತರ ಪ್ರತಿ ಆರು ತಿಂಗಳಿಗೊಮ್ಮೆ ತಪಾಸಣೆ ನಡೆಯುತ್ತದೆ.

ಪರೀಕ್ಷೆಗಳು: Directorate General of Civil Aviation (DGCA) ನಡೆಸುವ ಪರೀಕ್ಷೆಗಳು ಸ್ವಲ್ಪ ಕಠಿಣವೇ ಅನ್ನಬಹುದು. ಪಾಸಾಗಲು ಕನಿಷ್ಟ 70% ಅಂಕಗಳನ್ನು ಗಳಿಸಬೇಕು. ಮುಂದೆ ಏರ್ಲೈನ್ಸ್ ಸೇರಿಕೊಳ್ಳಲು ಅವರೂ ಪರೀಕ್ಷೆ ನಡೆಸುತ್ತಾರೆ. Airbus ಅಥವಾ Boeing ವಿಮಾನಗಳ simulator ತರಬೇತಿ ಸಮಯದಲ್ಲಿ ಮಾನಸಿಕ ಒತ್ತಡ ತುಂಬಾ ಇರುತ್ತದೆ, ಇದನ್ನು ನಿಭಾಯಿಸುವ ವ್ಯವಧಾನ ಇರಬೇಕಾಗುತ್ತದೆ.

#ಏರ್ಲೈನ್ಸ್ ಸೇರಿಕೊಂಡ ನಂತರವೂ ಈ Simulator ತರಬೇತಿ ಮತ್ತು ಪರೀಕ್ಷೆ ಆರು ತಿಂಗಳಿಗೊಮ್ಮೆ ನಡೆಯುತ್ತದೆ.

ಇದೊಂದು ಆಕರ್ಷಕ ವೃತ್ತಿವಲಯವಾಗಿ ಕಂಡರೂ ಆಂತರ್ಯದಲ್ಲಿ ಪರಿಶ್ರಮ, ಜಾಗರೂಕತೆ, ಮಾನಸಿಕ ಧೃಡತೆ ಇತ್ಯಾದಿಗಳನ್ನು ಸತತವಾಗಿ ಪರೀಕ್ಷಿಸುವ ಆಗ್ನಿಕುಂಡ ಅಂತಾ ಹೇಳಬಹುದು. ಸದ್ಯಕ್ಕೆ ಇಷ್ಟಿರಲಿ, ಮುಂದೊಮ್ಮೆ ಇನ್ನಷ್ಟು ವಿಸ್ತಾರವಾಗಿ ಹೇಳುವೆ.


  • ವಿಂಗ್ ಕಮಾಂಡರ್ ಸುದರ್ಶನ
    (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW