‘ಮೊಬೈಲ್’ ಎನ್ನುವ ಮಾಯೆ – ಲತಾ ಜೋಶಿಬಿಟ್ಟೇನೆಂದರೂ ಬಿಡದಿ ‘ಮೊಬೈಲ್’ ಎನ್ನುವ ಮಾಯೆ. ಎಷ್ಟೇ ಕೆಲಸ ನಮಗೆ ಒತ್ತುತ್ತಿದ್ದರೂ ಮೊಬೈಲ್ ಒಂದು ಕ್ಷಣ ಬಿಟ್ಟಿರಲು ಸಾಧ್ಯವಿಲ್ಲ.ಅದು ನಮ್ಮನ್ನು ಬಂಧಿಸಿರುವ ಬಗೆಯನ್ನು ಲೇಖಕಿ ಲತಾ ಜೋಶಿ ಅವರು ಒಂದು ಪುಟ್ಟ ಲೇಖನದ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ನಾಳೆ ಎಷ್ಟ್ ಕೆಲಸ ಅವ. ಒಂದಿನ ಪೂರ್ತಿ ಮೊಬೈಲ್ ಕಡೆ ತಿರುಗಿನೂ ನೋಡದ ಎಲ್ಲಾ ಕೆಲ್ಸ ಮುಗ್ಸೆ ಬಿಡೋದ. #ಮೊಬೈಲ್ ಸ್ವಿಚ್ ಓಫ್ ಮಾಡೋದ ಬರೋಬ್ಬರಿ. ಅಷ್ಟs ಮಾಡ್ತೇನಿ.. ಸುಮ್ನ ಆನ್ ಇದ್ರ ಯಾರ್ದರ ಕಾಲ್ ಬರ್ತದ, ಮೆಸೇಜ್ ಬರ್ತಾವು.. ನೋಡ್ಕೋತ ನಿಂತೇ ಅಂದ್ರ ಇಡೀ ದಿನ ಹೋಗಿಬಿಡ್ತದ, ಈಗ ಮಕ್ಕೋಳೋ ಬೇಕಾದ್ರ ತೀರ್ಮಾನ ಮಾಡಿಬಿಡೋದು.. ಮಕ್ಕಳಿಗೂ ಹೇಳಿ ಇಡಬೇಕು. ಯಾಕ್ ಸ್ವಿಚ್ ಆಫ್ ಅದ ಅಮ್ಮನ ಫೋನ್ ಅಂತ ಮಕ್ಳು ಗಾಬ್ರಿ ಆದಾರು ಅದಕ್ಕ..

ಒಳ್ಳೊಳ್ಳೆ ರೇಶ್ಮಿ ಸೀರಿ ಇಸ್ತ್ರಿ ಇಲ್ಲದ ಬಿದ್ದಾವು. ಮೊದ್ಲ ಅವುನ್ನ ಬಿಸಿಲಿಗೆ ಹಾಕಿ ಇಸ್ತ್ರಿಗೆ ಕೊಡಬೇಕು. ಅದರ ಬ್ಲೌಸ್ ಯಾಕೋ ಬಣ್ಣ ಕಳ್ಕೊಂಡಾವು, ಅವುಕ್ ಮ್ಯಾಚಿಂಗ್ ಬ್ಯಾರೆ ಹೊಲಿಸಿಕೋಬೇಕು. ಮಗಳಿಗೆ ಹೇಳ್ಬೇಕು ನಾಳೆ ತರೋಣ ಬ್ಲೌಸ್ ಪೀಸ್.. ವಾರ್ಡ್ರೋಬ್ ಬಸಿರು ಹೆಣ್ಣಿನ ಹೊಟ್ಟಿ ಆಗೇದ, ಬಾಗಲ ತಗದ್ರ ದಬಾ ದಬಾ ಬೀಳ್ತಾವು ಬಟ್ಟಿ.. ನಾಳೆ ಮೊದ್ಲ ನೀಟ್ ಆಗಿ ಹೊಂದಿಸಬೇಕು.. ಕೆಲವೊಂದು ಬ್ಲೌಸ್ ಯಾಕೋ ಲೂಸ್ ಅನಸ್ತಾವು , ಫಿಟ್ಟಿಂಗ್ ಮಾಡ್ಲಿಕ್ಕೆ ಕೊಡ್ಬೇಕು ಟೈಲರ ಹತ್ರ.

ಫೋಟೋ ಕೃಪೆ : amazon
.
ಅಡಿಗಿ ಮನಿ ಶೆಲ್ಫ್ ಭಾರೀ ಹೊಲಸ್ ಆಗೇದ. ಡಬ್ಬಿ ಹಿಂದ ಮುಂದ ಆಗ್ಯಾವು. ಎಷ್ಟೊತ್ ಆದ್ರೂ ಚಿಂತಿಲ್ಲ ನಾಳೆ. ಅವನ್ನೆಲ್ಲ ತೊಳದು, ಒರೆಸಿ ಕಿರಾಣಿ ತುಂಬ್ಸಿ ಇಡಬೇಕು.. ಹೆಚ್ಚಿಗಿ ಭಾಂಡಿ ಉಪಯೋಗ ಇಲ್ಲದ್ವು ಎತ್ತಿ ಮ್ಯಾಲ ಇಡ್ಬೇಕು.. ಮ್ಯಾಲ್ ಇಟ್ಟ ಭಾಂಡಿ ಒಳಗ ತಟ್ಟೆ ಇಡ್ಲಿ ಸ್ಟಾಂಡ್ ಅದ ತಕ್ಕೋಬುಕು. ಸಣ್ಣ ಸಣ್ಣ ಪಾತ್ರಿ ಬೇಕಾಗ್ತಾವು. ಅವುನ್ನ ತಕ್ಕೋಬೇಕು. ಯಾರರ ಮನಿಗೆ ಬಂದ್ರ 10 ಜನಕ್ ಉಪ್ಪಿಟ್ಟ್ ಮಾಡ್ಲಿಕ್ಕೆ ಒಂದು ಬಾಂಡ್ಲಿ ಬೇಕು.. ಅದೊಂದು ತರ್ಬುಕು ಹೊರಗ್ ಹೋದಾಗ..

ಮನ್ಯಾಗ ಮೆಂತೆಹಿಟ್ಟು ಮುಗದು ತಿಂಗ್ಳ್ ಆತು. ನಾಳೆ ಹುರಿದು ಬಿಡ್ತೇನಿ.ಪಾಪ ಮಗ ಕೇಳೇ ಕೆಳ್ಯಾನ. ಮಾಡಿದ್ರ ಖುಷಿ ಆಗ್ತಾನ.. ಫ್ರಿಡ್ಜ್ ಅಂತೂ ಒಂದು ಹಸಿಮೆಣಸಿನಕಾಯಿ ಇಡಲಾರದಷ್ಟು ತುಂಬೇದ. ಮೊದ್ಲ ಅದನ್ನ ಸ್ವಚ್ಛ ಮಾಡ್ಬೇಕು. ಕೂಡಿಸಿಟ್ಟ್ ಕೆನಿ ಡಬ್ಬಿ ತುಂಬಿ ಮತ್ತೊಂದು ಸಣ್ಣ ಡಬ್ಬಿ ಅರ್ಧ ಆಗೇದ.. ಬೆಣ್ಣಿ ತಗದು ಇಡ್ತೇನಿ ನಾಳೆ ತಂಪು ಹೊತ್ತಿನ್ಯಾಗ. ಕ್ಯಾರಟ್ ಭಾಳ ಅವ, ಹಲ್ವಾ ಮಾಡಿ ಇಟ್ರ ಸೊಸಿಗೆ ಪ್ರೀತಿ. ಮಾಡಿಬಿಡ್ತೇನಿ.. ಸೀಮಿ ಬದನಿಕಾಯಿ ತೊಗೊಂಡು 15 ದಿನಾ ಆತು.. ಅವುನ್ನ ಡಸ್ಟ್ ಬಿನ್ ಹಾಕಬೇಕು. ಕೂಸಿಗೆ ಕುಟ್ಟವಲಕ್ಕಿ ಅಂದ್ರ ಪ್ರೀತಿ. ಅವಲಕ್ಕಿ ಎರಡು ಡಬ್ಬಿ ಅವ. ನಾಳೆ ಮಾಡೋದ ಚೊಲೋ. ತಿಂತಾವು ಪಾಪ ಮಕ್ಳು..

ಫೋಟೋ ಕೃಪೆ : filmyduniya

ಕೂದಲದ್ದು ಒಟ್ಟ ಕಾಳಜಿ ಆಗೋದ ಇಲ್ಲಾ.. ನಾಳೆ oil ಮಸಾಜ್ ಮಾಡ್ಕೊಂಡು ತಲಿಸ್ನಾನ ಮಾಡ್ಬೇಕು.. ಕೂದಲ ಕತ್ತರಿಸಿ ಬಿಡೋದು ಬೆಸ್ಟ್ ಅನಸ್ತದ. ಮಗಳಿಗೆ ಹೇಳ್ಬೇಕು ನಾಳೆ ಬಂದು ಕತ್ರಿ ಪ್ರಯೋಗ ಮಾಡು ಅಂತ. ನಾಳಿಂದ ಸ್ವಲ್ಪ್ ಲಗು ಎದ್ದು ಎಕ್ಸರ್ಸೈಜ್, ಮೆಡಿಟೇಶನ್ ಶುರು ಮಾಡ್ಬೇಕು. ಯಾಕೋ ತಿಂಗಳಾತು, ಎಲ್ಲಾ ಬಿಟ್ಟು ಕೂತೀನಿ. ನಾಳಿಂದ ಮತ್ ಮಾಡೋದ. ಓದಿದ ಬುಕ್ಸ್ ಯಾವು, ಓದಲಾರದ್ದು ಯಾವ್ದು ನೋಡಿ ಇಟ್ಕೋಬೇಕು.. ಮೊನ್ನೆ ಯಾರ್ಯಾರೋ ಕಳಿಸಿದ ಬುಕ್ಸ್ ಓಪನ್ ಸೈತ ಮಾಡ್ಲಿಕ್ಕೆ ಟೈಮ್ ಸಿಕ್ಕೇ ಇಲ್ಲ. ಅವುನೆಲ್ಲ ನೋಡ್ಬೇಕು.

ಇನ್ನೂ ಭಾಳ ಅವ ನಾಳೆ ಮಾಡೋ ಕೆಲ್ಸ. ಇವಿಷ್ಟು ಮಾಡಿ ಮುಗಸ್ತೇನಿ.. ಟೈಮ್ ಉಳಿದ್ರ ಒಂದಿಷ್ಟು ಕೋಡುಬಳೆ ಆದ್ರೂ ಕರದು ಇಡ್ಬುಕು. ಸಂಜಿಕೆ ಛಾ ಜೊತಿಗೆ ತಿನ್ಲಿಕ್ಕೆ ಚೊಲೋ ಆಗ್ತದ, ಬೆಡ್ಶೀಟ್ ಮಷೀನ್ ಗೆ ಹಾಕೋವವ, ಅದರ ಜೊತಿಗೆ ನಾಳೆ ಕರ್ಟನ್ ಸೈತ ಹಾಕಿಬಿಡ್ಬುಕು. ಸೋಫಾ ಕವರ್ ಹಿಡದ್ರ ಅವುನ್ನು ಹಾಕೋದು ಚೊಲೋ. ಒಮ್ಮೆ ತಿರುಗಿ ಬರ್ತಾವು. ನಾಳೆ ಭಾಳ ಕೆಲಸ ಅವ, ನಿದ್ದಿ ಬರ್ಲಿಕ್ಕತ್ತು. ಮಕ್ಕೋತೀನಿ. ಮುಂಜೆನೆ ಆ ಮೊಬೈಲ್ ತಿರುಗಿನೂ ನೋಡಂಗಿಲ್ಲ. Good nightಯಾಕೋ ಲಗು ಎಚ್ಛ್ರಾ ಆತು.. ಇವತ್ ಥೀಮ್ ಅದ. ನೋಡದ ಬಿಟ್ರ ಇನ್ಬಾಕ್ಸ್ ತುಂಬಿ ಹೋಗ್ತದ ಅಷ್ಟು ಪೋಸ್ಟ್ ಬಂದಿರ್ತಾವು.. ಗ್ರೂಪ್ ಸೇರ್ಕೊಲಿಕ್ಕೆ ರಿಕ್ವೆಸ್ಟ್ ಬಂದಿರ್ತಾವು.. ಪ್ರೊಫೈಲ್ ಚೆಕ್ ಮಾಡ್ಬೇಕು ಅವರದ್ದು accept ಮಾಡೋ ಮೊದ್ಲ. ಮುಗಿಸಿಬಿಡ್ತೇನಿ. ಹೊಸ ಧಾರಾವಾಹಿ ಚಂದ ಅದ. ಅರ್ಧಕ್ಕ ಬಿಡೋದು ಚೊಲೋ ಅಲ್ಲ. 5 ನಿಮಿಷದಾಗ ಓದಿಬಿಟ್ರಾತು..ಎಕ್ಸರ್ಸೈಜ್ ನಾಳಿಂದ ಮಾಡಿದ್ರಾತು..

ಹಲೋ, ಯಾರೂ?? ಭಕ್ತಿ ಪ್ರಧಾನ ಧಾರಾವಾಹಿ ಶುರು ಮಾಡ್ತೀರಾ?? ಆಗ್ಲಿ ಮಾಡಿ, ಮಾಡಿ…. ಯಾರವೋ ಎರಡು ಮಿಸ್ಸೆಡ್ ಕಾಲ್ ಅವ. Unknown ನಂಬರ್. ಯಾರೋ ಏನೋ ಪಾಪ. ನೋಡ್ತೇನಿ ಫೋನ್ ಮಾಡಿ ಯಾರು ಅಂತ.

ಅದೇನೋ ನಾಳೆ ಏನೇನೊ ಕೆಲ್ಸ ಮಾಡ್ಬೇಕು ಅಂದಿದ್ದೀ ಅಂದ್ರ್ಯಾ?? ನಾಳೆ ಮಾಡಿದ್ರಾತು ಬಿಡ್ರಿ.


  • ಲತಾ ಜೋಶಿ (ಕತೆಗಾರ್ತಿ ಲತಾ ಜೋಶಿ ಅವರು ಮೂಲತಃ ಉತ್ತರ ಕರ್ನಾಟಕದ ಮೆಣಸಿನಕಾಯಿಗೆ ಜಗತ್ಪ್ರಸಿದ್ಧವಾದ ಬ್ಯಾಡಿಗಿಯವರು. ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯದಲ್ಲಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕನ್ನಡ ಸಾಹಿತ್ಯಾರಾಧಕಿ. ಓದುವುದು, ಕತೆ ಬರೆಯುವುದು ಅವರ ಹವ್ಯಾಸದಲ್ಲೊಂದು. ಅವರ ಬರವಣಿಗೆಯಲ್ಲಿ ಉತ್ತರಕರ್ನಾಟಕದ ಸೊಗಡು ಎದ್ದುಕಾಣಿಸುತ್ತದೆ. “ಜೀವನ ಜೋಕಾಲಿ’” ಎಂಬ ಕಿರು ಕಾದಂಬರಿಯನ್ನು ಈಗಾಗಲೇ ಹೊರಗೆತಂದಿದ್ದಾರೆ. ಹಲವಾರು ಮಾಸ ಪತ್ರಿಕೆಗಳು, ವಾರ ಪತ್ರಿಕೆಗಳು, ನಿಯತಕಾಲಿಕಗಳಲ್ಲಿಯೂ ಅವರ ಬರಹಗಳು ಪ್ರಕಟವಾಗಿವೆ.)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW