ಕವಿ ಜಬೀವುಲ್ಲಾ ಎಂ. ಅಸದ್ ಅವರ ಲೇಖನಿಯಲ್ಲಿ ಅರಳಿದ ಕವನ ತಪ್ಪದೆ ಮುಂದೆ ಓದಿ…
ಒಮ್ಮೊಮ್ಮೆ ಹೀಗೆಯೇ
ಎಲ್ಲಾ ಇದ್ದೂ ಏನೂ ಇಲ್ಲದ ಭಾವ
ಮೊದಲಾಗುವ ಪ್ರವಾಹ
ತುಂಬಿ ಭೋರ್ಗರೆಯುತ್ತಿದ್ದರೂ ಒಡಲ್ಗಡಲು
ಏಕತಾನತೆಯ ಅನುಭವ
ಹಕ್ಕಿ, ಮೋಡ, ಮಳೆ, ಕಾಮನಬಿಲ್ಲು
ಸೂರ್ಯ, ಚಂದಿರ, ಚುಕ್ಕಿ
ಏನು ಕಾಣದ
ಖಾಲಿ ಕ್ಯಾನುವಾಸಿನಂತಹ
ಅಂತರಂಗದ ಆಗಸ
ಅರಸ ಹೊರಡುತ್ತೆ ಮನಸು
ಇರದ ದಾರಿಯ,
ಕಾಣದ ನೆರಳ ಕೈ ಬೆರಳ
ಕುರುಡಾಗಿ ಹಿಡಿದು
ಸಂತಸದ ಚಿಟ್ಟೆಯ
ಭ್ರಮನಿರಸ ಬದುಕು
ಆ ಸಮಯ
ನಡೆದಷ್ಟು ದೂರ
ಕೇಳದಲ್ಲ ಹೆಜ್ಜೆಗಳ ಸಪ್ಪಳ
ಕಿವುಡಾಗಿ ನಡೆಯಬೇಕು ಹೀಗೆ
ಇನ್ನೆಷ್ಟುಸಂವತ್ಸರ
ಕಳೆಯಬೇಕು ಹೇಗೆ ಈ ಮನ್ವಂತರ
ಬಯಸಿ ತಂದದ್ದು ಉಳಿಯಲಿಲ್ಲ
ತ್ಯಜಿಸಿ ಉಳಿದದ್ದು ಅಳಿಯಲಿಲ್ಲ
ಇರುವಿಕೆಯ ಪ್ರಶ್ನೆಯೇ ಗೌಣ
ಹೇಗೆ ಹುಡುಕುವುದು ಉತ್ತರ?
- ಜಬೀವುಲ್ಲಾ ಎಂ. ಅಸದ್
