ದೇಶ ಸುತ್ತಿ ನೋಡು ಕೋಶ ಓದಿ ನೋಡುವ ಜನ ನಾನು…ಕರ್ನಾಟಕದ ಇಂಚಿಂಚು ಸ್ಥಳಗಳನ್ನು ನೋಡುವ ಹಂಬಲ ನನ್ನಲಿದೆ. ಆ ನನ್ನ ಪುಟ್ಟ ಆಸೆಗೆ ನನ್ನ ಗಂಡ, ಮಕ್ಕಳು ಯಾವಾಗಲೂ ಜೊತೆಗಾರರು. ನಾನು ಇತ್ತೀಚಿಗೆ ಬಾದಾಮಿಗೆ ಭೇಟಿ ನೀಡಿದ್ದೆ, ಅದರ ಸೌಂದರ್ಯ ನನ್ನ ಪದಗಳಲ್ಲಿ ನಿಲುಕುವುದಿಲ್ಲ, ಆದರೆ ನನ್ನ ಅನುಭವವನ್ನು ಮಾತ್ರ ನನ್ನ ಪ್ರವಾಸ ಕಥನದಲ್ಲಿ ಹಂಚಿಕೊಳ್ಳುತ್ತಿದ್ದೇನೆ ತಪ್ಪದೆ ಓದಿ…
ಅಪ್ಪ ‘ಗುಡ್ಡಕ್ಕೆ ಹೋಗುವ ಮೊದಲೇ ಗುಡ್ಡದಲ್ಲಿ ಮಂಗ್ಯಾಗಳು ಬಾಳ, ಬ್ಯಾಗ್ ಇತ್ತ ಅಂದ್ರ್ ಎತ್ತಕೊಂಡು ಗುಡ್ಡದ ಮ್ಯಾಲ್ ಒಯ್ಯತ್ತಾವ… ಹುಷಾರ್’…ಅಂತ ಫೋನ್ ನಲ್ಲಿ ಎಚ್ಚರಿಸಿದ್ದರು. ಮಂಗ್ಯಾಗಳ ಚೇಷ್ಟೆಗಳು ನನಗೆ ಸಂತೋಷ ಕೊಡುತ್ತದೆ. ಅವುಗಳು ಒಂದಕ್ಕೊಂದು ಹೆಣು ನೋಡುವ ರೀತಿ, ಹೆಣು ನೋಡುವಾಗ ಅಲುಗಾಡಿದಾಗ ತಲೆಗೆ ಬಡಿಯುವ ರೀತಿ, ಮರಿಗಳು ಮಾತು ಕೇಳದಿದ್ದಾಗ ತಲೆಗೆ ಕುಟ್ಟುವ ರೀತಿ, ಮಂಗ್ಯಾಗಳು ಕಿತ್ತಾಡುವಾಗ ಮನುಷ್ಯರು ಸಂಬಂಧಿಕರ ಜೊತೆಗೆ ಕಿತ್ತಾಡುವುದು ನೆನಪಿಗೆ ತರಿಸುತ್ತವೆ.
ಎಲ್ಲಾದರೂ ಮಂಗಗಳು ಕಂಡಾಗ ನಿಮ್ಮ ಸಂಬಂಧಿಕರು ನೋಡು… ಎಂದು ತಮಾಷೆಗೆ ಇನ್ನೊಬ್ಬರ ಕಾಲು ಎಳೆಳೆಯುವುದು ಸಹಜ. ಆದರೆ ಮನುಷ್ಯನ ಪ್ರತಿಬಿಂಬಗಳಂತೆ ಮಂಗಗಳು. ಅವುಗಳ ಹಾವ ಭಾವ ಮನುಷ್ಯರಂತೆ ಇದ್ದಾಗ ಮಂಗನಿಂದ ಮಾನವನಾಗಿದ್ದು ಸುಳ್ಳಲ್ಲ. ನನಗೆ ಯಾವಾಗಲು ಮಂಗಗಳ ಮೇಲೆ ಏನೋ ಒಂದು ಪ್ರೀತಿ,ಆಕರ್ಷಣೆ.
ಆದರೆ ಬಾದಾಮಿಯಲ್ಲಿನ ಮಂಗ್ಯಾಗಳು ನನಗೆ ಭಯ ಹುಟ್ಟಿಸಿದವು.

ಯಾಕೆ ಅಂದ್ರೆ…
ನಾನು ಚಪ್ಪಲಿ ಕಾಯುತ್ತಾ ಸೆಲ್ಫಿ ತಗೆದುಕೊಳ್ಳುತ್ತಿದ್ದೆ, ಮಂಗ್ಯಾಗಳ ಸೈನ್ಯ ಮೆಟ್ಟಿಲು ಇಳಿದು ನನ್ನತ್ತ ಬರೋದು ನೋಡಿದ್ರೆ… ನನ್ನ ಜಾಗಕ್ಕೆ ನೀನ್ಯಾಕೆ ಬಂದಿಯಾ?!… ಅನ್ನೋತರ ನನ್ನನ್ನು ನೋಡಿ ಹಲ್ಲು ಕಡಿಯುತ್ತಿದ್ದವು. ಅವತಾರ ನೋಡಿ ಭಯವಾಗಿ ನನ್ನ ಬ್ಯಾಗ್ ಗಿಂತ ನನ್ನ ಮೊಬೈಲ್ ನ್ನು ಮೊದಲು ಮುಚ್ಚಿಟ್ಟುಕೊಂಡೇ. ಯಾರಿಗೆ ಗೊತ್ತು ಮಂಗ್ಯಾಗೂ ಸೆಲ್ಫಿ ಹುಚ್ಚು ಇದ್ರೆ ನನ್ನ ಮೊಬೈಲ್ ಬಿಡೋಲ್ಲ ಅನ್ನೋ ಹುಚ್ಚು ಭಯ. ಮೊಬೈಲ್ ನ್ನು ನನ್ನ ಪ್ಯಾಂಟ್ ನ ಜೋಬಿಯೋಳಕ್ಕೆ ಹಾಕಿಕೊಂಡೆ. ಆಮೇಲೆ ಮೊಬೈಲ್ ಗಾಗಿ ಮಂಗ್ಯಾಗಳು ನನ್ನ ಪ್ಯಾಂಟ್ ನ್ನೇ ಹಿಡಿದುಕೊಂಡರೆ ಏನು ಮಾಡೋದು ಅನ್ನೋ ಗಾಬರಿಗೆ ಸುತ್ತಲೂ ನೋಡಿದೆ. ಪದ್ದಣ್ಣ, ಮಕ್ಕಳು ತಮ್ಮದೇ ಲೋಕದಲ್ಲಿಯೇ ವಿಹರಿಸುತ್ತಿದ್ದರು. ಅವರು ಸ್ಲೋ ಮೋಷನಲ್ ಲ್ಲಿ ನನ್ನತ್ತ ತಿರುಗಿ ನೋಡುವಷ್ಟರಲ್ಲಿ ಈ ಮಂಗ್ಯಾಗಳು ನಂಗೆ ಒಂದು ಗತಿ ಕಾಣಸ್ತವೆ ಅನ್ನೋದು ಪಕ್ಕಾ ಆಗಿತ್ತು.

ಸುತ್ತಲೂ ನನ್ನನು ಕಾಪಾಡೋರು ಯಾರು ಇಲ್ವಾ…. ಅಂತ ಗಾಬರಿಯಿಂದ ಪಿಳಿ ಪಿಳಿ ಅಂತ ಕಣ್ಣು ಬಿಟ್ಟು ಸುತ್ತಲೂ ನೋಡಿದೆ, ಅನ್ನೋಷ್ಟರಲ್ಲಿ ಇಪ್ಪತ್ತೈದು ವರ್ಷದ ತರುಣನೊಬ್ಬ ಹೀರೋ ತರ ಓಡಿ ಬಂದ. ‘ಯಾಕ್ರೀ ಮೇಡಂ ಹೆದರ್ತೀರಿ…ಅವು ಏನು ಮಾಡೋಲ್ಲ…ಅವು ನಮ್ಮಂತೆ….ಅವಕ್ಕ್ ತೊಂದರೆ ಕೊಟ್ರ, ಅವು ನಿಮಗ ತೊಂದ್ರೆ ಕೊಡ್ತವಾ…ಸುಮ್ನೆ ಇದ್ರ ಏನು ಮಾಡೋಲ್ಲ ಅವು’…ಅಂತ ನಗುತ್ತಾ ಮಂಗ್ಯಾದ ಹತ್ತಿರನೇ ಹೋದ. ಬಿಸಿ ರಕ್ತ, ನನ್ನ ಮುಂದೆ ಹೀರೋ ಆಗೋಕೆ ಹೋಗಿ ಎಲ್ಲಿ ಚಳ್ಳೆ ಹಣ್ಣು ತಿಂತಾನೋ ಅಂತ ಅವನನ್ನೇ ನೋಡುತ್ತಿದ್ದೆ. ಅವನು ಸೀದಾ ಒಂದು ಮಂಗ್ಯಾ ಪಕ್ಕಕ್ಕೆ ಹೋಗಿ ಕೂತ. ಅದು ಅವನಿಗೆ ಏನು ಮಾಡಲಿಲ್ಲ. ಆ ಧೈರ್ಯದ ಮೇಲೆ ನನಗೆ ಹೇಳಿದ ‘ನೋಡಿದ್ರಾ ಮೇಡಂ, ಇಷ್ಟ. ಅವಕ್ಕ ನಾವು ಗಾಬರಿ ಮಾಡಬಾರದು’…ಅಂತ ನನಗೆ ಉಪದೇಶ ಮಾಡಿದ. ಯಾಕೋ ಈ ಹುಡುಗ ತಲೆ ಗಟ್ಟಿ ಇದೆ ಅಂತ ಬಂಡೆಗಲ್ಲಿಗೆ ಹೊಡ್ಕೋ ತರ ಕಾಣ್ತಿದೆ ಅಂತ ಮನಸ್ಸಲೆ ‘ಓಹ್ ದೇವರೇ… ಅವನಿಗೆ ರಕ್ಷಣೆ ಕೊಡು’…ಅಂತ ಪ್ರಾರ್ಥನೆ ಮಾಡಿ ಮೇಲ್ನೋಟಕ್ಕೆ ಮುಗುಳ್ನಗೆ ಬೀರಿದೆ.
ಮಂಗ್ಯಾಗಳು ಅವನ ಪಕ್ಕದಲ್ಲಿಯೇ ಕೂತರು ಏನು ಮಾಡದೇ ಇದ್ದಾಗ, ಹೆಣ್ಮಗಳ ಮುಂದೆ ಹೀರೊ ಆದೆ ಅಂತ ಹುಡುಗ ಬಲು ಖುಷಿಯಾದ. ತನ್ನ ಶರ್ಟ್ ನ ಜೋಬಿನಿಂದ ಒಂದು ಬಿಸ್ಕೆಟ್ ತಗೆದು ಮಂಗ್ಯಾನ ಮುಂದೆ ಇಟ್ಟ. ಮಂಗ್ಯಾ ಮೊದಲು ಸುಮ್ಮನೆ ಅವನನ್ನೇ ಗುರಾಯಿಸಿ ನೋಡಿ, ನಿಧಾನಕ್ಕೆ ಬಿಸ್ಕೆಟ್ ಕಿತ್ಕೊಂಡು ತಿನ್ನೋಕೆ ಶುರು ಮಾಡ್ತು. ಆಮೇಲೆ ಹುಡುಗ ಇನ್ನಷ್ಟು ಚಿಗುರಿಕೊಂಡ. ನಿಧಾನಕ್ಕೆ ಮಂಗ್ಯಾದ ತಲೆ ಸವರೋಕೆ ಹೋದ ನೋಡಿ… ಅಲ್ಲಿ ಇತ್ತು ಅವನ ಗ್ರಹಚಾರ.. ಸ್ಟೋರಿ ಅಂತ್ಯ ಬಂದು ನಿಂತು. ಮಂಗ್ಯಾ… ಅವನ ಕೈಯಿಂದಲೇ ತಿಂದು, ಅವನ ಕೈಯನ್ನೇ ಗಟ್ಟಿಯಾಗಿ ಹಿಡಿದು.. ಕಚ್ಚೊಕೆ ಶುರು ಮಾಡಿತು. ‘ಅವ್ವಾ…ಯವ್ವಾ…ಲೇ… ಬಿಡಲೇ ಮಂಗ್ಯಾ… ಊರ್ ಮಂಗ್ಯಾ ಬಿಡಲೇ…ನಿಮ್ಮವ್ವನ್ನ… ಉತ್ತರ ಕರ್ನಾಟಕದ ಎಲ್ಲ ಬೈಗುಳಗಳು ಅವನ ಬಾಯಲ್ಲಿ ಹರಿದಾಡಿತು. ಮಂಗ್ಯಾ ಮತ್ತು ಅವನ ಕುಸ್ತಿಯನ್ನು ಅಲ್ಲಿದ್ದವರೆಲ್ಲ ಗಾಬರಿಯಿಂದ ನೋಡುತ್ತಿದ್ದರೇ…ನನಗೆ ಮಾತ್ರ ನಗು ನಿಲ್ಲಲೇ ಇಲ್ಲ. ಕಾಮಿಡಿ ಸಿನಿಮಾ ನೋಡಿದಂತೆ ನಾನು ಜೋರ್ ಜೋರಾಗಿಯೇ ನಗ ತೊಡಗಿದೆ.
ಅಷ್ಟೋತ್ತಿಗೆ ಪದ್ದಣ್ಣ, ಮಕ್ಕಳು ಓಡಿ ಬಂದು ‘ಯಾಕೆ ಹೀಗೆ ನಗ್ತಿದ್ದೀಯಾ..ಅಲ್ಲಿ ಪಾಪ ಮಂಗ್ಯಾ ಅವನಿಗೆ ಕಡೀತಿದೆ. ಕಾಮಿಡಿ ಸೀನ್ ಇದ್ದಾಗ ನಗೋಲ್ಲ, ಸೀರಿಯಸ್ ಸೀನ್ ಇದ್ದಾಗ ನಗ್ತೀಯಾ…ಏನ್ ವಿಚಿತ್ರ ಇದ್ದಿಯಾ’ ಅಂತ ಜೋರ್ ಮಾಡಿದ. ಅಷ್ಟೋತ್ತಿಗಾಗಲೇ ನಕ್ಕು ನಕ್ಕು ನನ್ನ ಕಣ್ಣಲ್ಲಿ ನೀರು ಹರಿಯೋಕೆ ಶುರು ಆಗಿತ್ತು. ಹುಡುಗ ಮಂಗ್ಯಾನ ಕೈಯಲ್ಲಿ ಹೈರಾಣಾಗಿ ಹೋಗಿದ್ದ…ಇನ್ಮೇಲೆ ಯಾವ ಹುಡುಗೀರ ಅಲ್ಲ … ಯಾವ ಹೆಣ್ಮಕ್ಕಳಿಗೂ ಸಹಾಯ ಮಾಡಬಾರದು ಅನ್ನೋ ಪಾಠ ಕಲ್ತು ಶರ್ಟ್ ಹರಕೊಂಡು ಕುಂಟುತ್ತಾ ಆ ಹುಡುಗ ತನ್ನ ಬೈಕ್ ನತ್ತ ಹೋದ. ಚೇಷ್ಟೆ ಇರೋದು ಮಂಗ್ಯಾನಲ್ಲೋ …ಮನುಷ್ಯನಲ್ಲಾ ಅಂತ ನಗುತ್ತಾ ನಾನು ಎರಡನೆಯ ಗುಹೆಯತ್ತ ನಡೆದೆ.
- ಶಾಲಿನಿ ಹೂಲಿ ಪ್ರದೀಪ್
