ಬಬ್ರುವಾಹನನ ನಾಟಕದ ಕಥೆ – (ಭಾಗ ೯)

ಅರ್ಜುನ ತನ್ನ ಪಾಳೆಯದಲ್ಲಿ ಸಿಂಹಾಸನದ ಮೇಲೆ ಕುಳಿತಿದ್ದಾನೆ, ಬ್ರುವಾಹನನು ಜನರ ಮಧ್ಯದಿಂದ ಸ್ಟೇಜಿಗೆ ಬರುವಂತೆ ಯೋಜನೆ ಹಾಕಿದ್ದೆವು. ಪ್ರೇಕ್ಷಕ ಗಣದಲ್ಲಿ ದೇವರಾಜ ಅರಸರು, ಕೆ.ಎಚ್.ಪಾಟೀಲರು ಮೂಲಿಮನಿ ಮಾರ್ತಾಂಡಪ್ಪನವರು, ರಂಗನಗೌಡರು ಮತ್ತಿತರ ಸ್ಥಳೀಯ ಮುಖಂಡರು ಕುಳಿತು ನಾಟಕವನ್ನು ಆಸ್ವಾದಿಸುತ್ತಿದ್ದರು. ಮುಂದೇನಾಯಿತು ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…

ನಾನು ಗದುಗಿನ ರಡ್ಡಿ ಹಾಸ್ಟೇಲಿನಲ್ಲಿದ್ದು ನನ್ನ ಪದವಿ ಮುಗಿಸಿದೆ. ಆಗ ನಮ್ಮ ಹಾಸ್ಟೇಲಿನ ಚೇರಮನ್ನರೂ, ಮಾಜಿ ಮಂತ್ರಿಗಳೂ ಆಗಿದ್ದ ಕೆ.ಎಚ್.ಪಾಟೀಲರು ಗ್ರಾಮೀಣ ಪ್ರದೇಶದಿಂದ ಬಂದ ನಮ್ಮಂಥವರನ್ನು ಪ್ರೀತಿ ವಾತ್ಸಲ್ಯದಿಂದ ಪ್ರೋತ್ಸಾಹಿಸಿ ಬೆಳೆಯಿಸಿದರು ಎಂದು ಹೇಳಬೇಕು. ನಮ್ಮ ಹಾಸ್ಟೇಲಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಲಘು ಮನೋರಂಜನೆಯ ಕಾರ್ಯಕ್ರಮಗಳೂ ಇದ್ದವು. ಮನೋರಂಜನೆ ಕಾರ್ಯಕ್ರಮಗಳನ್ನು ಮಾಡುವಲ್ಲಿ ನಮ್ಮ ಹಾಸ್ಟೇಲು ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಆ ಕಾರ್ಯಕ್ರಮಕ್ಕೆ ನಮ್ಮ ಹಾಸ್ಟೇಲಿನಲ್ಲಿ ಇಲ್ಲದ ವಿದ್ಯಾರ್ಥಿಗಳೂ ಮತ್ತು ನಮ್ಮ ಹಾಸ್ಟೇಲಿಗೆ ಸಮೀಪದಲ್ಲಿರುತ್ತಿದ್ದ ಸಾರ್ವಜನಿಕರೂ ಅಪಾರ ಸಂಖ್ಯೆಯಲ್ಲಿ ಸೇರಿರುತ್ತಿದ್ದರು.ಪ್ರತಿ ವರ್ಷವೂ ನಾನು ನಾಟಕದಲ್ಲಿ ಒಂದಿಲ್ಲೊಂದು ಪಾತ್ರ ಮಾಡುತ್ತಿದ್ದೆ. ಅಲ್ಲದೆ ನಾಟಕಗಳನ್ನು ಆಯ್ಕೆ ಮಾಡುವುದು ಮತ್ತು ಪ್ರಾಕ್ಟಿಸು ಮಾಡುವ ಕಾರ್ಯವನ್ನು ನನಗೆಯೇ ಒಪ್ಪಿಸಿರುತ್ತಿದ್ದರು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)

ಆ ವರ್ಷ ನಾವು ಅರ್ಜುನನ ಗರ್ವಭಂಗವೆನ್ನುವ ಒಂದು ಕಿರು ನಾಟಕವನ್ನು ಮಾಡಿದ್ದೆವು. ಆ ನಾಟಕದಲ್ಲಿ ನಾನು ಬಬ್ರುವಾಹನನ ಪಾತ್ರ ಮಾಡಿದ್ದೆ. ನನ್ನ ಗೆಳೆಯನಾದ ಎನ್.ಎಮ್ ಪಾಟೀಲ ಅರ್ಜುನನ ಪಾತ್ರ ಮಾಡಿದ್ದರು. ಪಾಂಡವರ ಅಶ್ವಮೇಧ ಯಾಗದಲ್ಲಿ ಬಿಟ್ಟ ಕುದುರೆಯನ್ನು ಬಬ್ರುವಾಹನನು ಕಟ್ಟಿ ಅರ್ಜುನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಬಬ್ರುವಾಹನನು ಕುದುರೆಯನ್ನು ಕಟ್ಟಿದ್ದನ್ನು ತಿಳಿದ ಅವನ ತಾಯಿ ಚಿತ್ರಾಂಗದೆ ಆಘಾತವಾಗುತ್ತದೆ. ಆಕೆ ಬಬ್ರುವಾಹನನ ಹತ್ತಿರ ಹೋಗಿ ನೀನು ಮಾಡಿದ್ದು ತಪ್ಪು. ಆ

ಕುದುರೆಯ ಬೆಂಗಾವಲಿಗೆ ಬಂದಿರುವ ಪಾರ್ಥ ಬೇರಾರೂ ಅಲ್ಲ. ಸ್ವತಃ ನಿನ್ನ ತಂದೆ. ಆದ್ದರಿಂದ ಕುದುರೆಯನ್ನು ವಾಪಸ್ಸು ಹೊಡೆದುಕೊಂಡು ಹೋಗಿ ಕಪ್ಪ ಕಾಣಿಕೆಗಳೊಂದಿಗೆ ಪಾರ್ಥನಿಗೆ ಒಪ್ಪಿಸಿ ಆತನಲ್ಲಿ ಕ್ಷಮೆ ಕೇಳು ಎಂದು ಹೇಳುತ್ತಾಳೆ.

ಈ ದೃಶ್ಯವನ್ನು ಮಾತ್ರ ನಾವು ಅಭಿನಯಿಸಬೇಕಾಗಿತ್ತು. ಅರ್ಜುನ ತನ್ನ ಪಾಳೆಯದಲ್ಲಿ ಸಿಂಹಾಸನದ ಮೇಲೆ ಕುಳಿತಿದ್ದಾನೆ, ಆಗ ಬಬ್ರುವಾಹನನ ಪ್ರವೇಶವಾಗುತ್ತದೆ. ಸೀನಿಗೆ ಭವ್ಯತೆಯನ್ನು ತಂದು ಕೊಡುವುದಕ್ಕಾಗಿ, ಬಬ್ರುವಾಹನನು ಜನರ ಮಧ್ಯದಿಂದ ಸ್ಟೇಜಿಗೆ ಬರುವಂತೆ ಯೋಜನೆ ಹಾಕಿದ್ದೆವು. ಪ್ರೇಕ್ಷಕ ಗಣದಲ್ಲಿ ದೇವರಾಜ ಅರಸರು, ಕೆ.ಎಚ್.ಪಾಟೀಲರು ಮೂಲಿಮನಿ ಮಾರ್ತಾಂಡಪ್ಪನವರು, ರಂಗನಗೌಡರು ಮತ್ತಿತರ ಸ್ಥಳೀಯ ಮುಖಂಡರು ಕುಳಿತು ನಾಟಕವನ್ನು ಆಸ್ವಾದಿಸುತ್ತಿದ್ದರು.ಬಬ್ರುವಾಹನ ವೇಷಧಾರಿಯಾದ ನಾನು ಗಂಭೀರವಾಗಿ ಕರದ ಕತ್ತಿಯನ್ನು ತಿರುಗಿಸುತ್ತಾ ಅಂಥ ಪ್ರತಿಷ್ಠಿತ ವ್ಯಕ್ತಿಗಳ ಪಕ್ಕದಲ್ಲಿ ಹಾಯ್ದು, ಅವರ ಸ್ಪಂಧನೆಯನ್ನು ನೋಡುತ್ತಾ ಸ್ಟೇಜಿಗೆ ಬರುತ್ತಿರುವಂತೆಯೇ ಜನರು ಜೋರಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಬಿಟ್ಟರು.ನನಗೋ ಖುಷಿಯೋ ಖುಷಿ. ಹೆಂಗಳೆಯರ ವೇಷದಲ್ಲಿದ್ದ ಹುಡುಗರು ಕಪ್ಪ ಕಾಣಿಕೆಗಳ ತಾಟುಗಳನ್ನು (ಆ ತಾಟುಗಳೆಂದರೆ ನಾವು ಪ್ರತಿ ದಿವಸ ಊಟ ಮಾಡುವ ತಾಟುಗಳಾಗಿದ್ದವು) ನನ್ನ ಮುಖಾಂತರ ಅರ್ಜುನನಿಗೆ ಅರ್ಪಿಸಿದರು.

ಆಗ “ಕ್ಷಮಿಸಬೇಕು ತಂದೆ, ಶಿವನಿಂದ ಪಾಶುಪತಾಸ್ತ್ರ ಪಡೆದು ಜಗತ್ತನ್ನೆ ಜಯಿಸಿದ ಪಾರ್ಥನ ಅಶ್ವಮೇಧ ಕುದುರೆಯನ್ನು ಕಟ್ಟಿದ್ದು ಅಕ್ಷಮ್ಯ ಅಪರಾಧ.ತಾವು ನನ್ನ ಜನಕನೆಂದು ತಿಳಿಯದೇ ಈ ಅಪರಾಧ ಮಾಡಿ ಬಿಟ್ಟೆ. ನೀವು ನನ್ನ ತಂದೆ ಎಂಬ ವಿಷಯವನ್ನು ನನ್ನ ಹಡೆದಮ್ಮನಾದ ಚಿತ್ರಾಂಗದೆಯಿಂದ ತಿಳಿದು, ಕಪ್ಪ ಕಾಣಿಕೆಗಳೊಂದಿಗೆ ಕುದುರೆಯನ್ನು ಹಿಂದಕ್ಕೆ ತಂದಿದ್ದೇನೆ.ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು.” ಎಂದು ಬಾಗಿ ನಮಸ್ಕರಿಸುವಾಗಲು ಚಪ್ಪಾಳೆಗಳು ಬಿದ್ದವು. ಮಹಾಭಾರತ ಓದಿದ ಯಾರಿಗಾದರೂ ಈ ಕತೆ ಗೊತ್ತಿರುತ್ತದೆ. ಆಗ ಅರ್ಜುನ ವೇಷಧಾರಿಯಾದ ಪಾಟೀಲ “ಥೂ ! ಹೇಡಿ.ನೀನು ಅರ್ಜುನನ ಮಗನಾದರೆ ಹೀಗೆ ಹೇಡಿಯಂತೆ ಕಟ್ಟಿದ ಕುದುರೆಯನ್ನು ಕಪ್ಪ ಕಾಣಿಕೆಗಳೊಂದಿಗೆ ಹಿಂದಕ್ಕೆ ತರುತ್ತಿದ್ದೆಯಾ.ಅರ್ಜುನನ ಮಗನೆಂದರೆ ವೈರಿಗಳೊಂದಿಗೆ ರಣ ರಂಗದಲ್ಲಿ ಕಾದು ಸ್ವರ್ಗಕ್ಕೆ

ಹೋದ ಅಭಿಮನ್ಯು ಒಬ್ಬನೆ. ನೀನು ಯಾವಳೋ ಜಾರಿಣಿಯ ಮಗನಾಗಿರಬೇಕು.” ಎಂದು ಮಾತು ಮುಗಿಸುತ್ತಾನೆ. ಆ ಸಂದರ್ಭದಲ್ಲಿ ಬಾಗಿ ನಮಿಸಿದ ಬಬ್ರುವಾಹನನ ತಲೆಗೆ ಅರ್ಜುನನ್ನ ಒದೆಯುವ ದೃಶ್ಯವಿದೆ.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)

ಆದರೆ ನಾನು ಜನರ ಚಪ್ಪಾಳೆಯಿಂದ ಉಬ್ಬಿ ಹೋಗಿ ನನ್ನ ಮಾತು ಮುಗಿಸಿ ಗರ್ವದಿಂದ ಮೀಸೆಯ ಮೇಲೆ ಕೈ ಹಾಕಿ ಎದೆಯುಬ್ಬಿಸಿಕೊಂಡು ನಿಂತು ಬಿಟ್ಟಿದ್ದೆ. ನನ್ನನ್ನು ತಲೆಯ ಮೇಲೆ ಒದೆಯಬೇಕೆಂದು ಕಾತರನಾಗಿದ್ದ ಪಾಟೀಲನಿಗೆ ಸಂಕಟ. ನಾನು ಅವನಿಗಿಂತ ಎತ್ತರದ ವ್ಯಕ್ತಿಯಾಗಿದ್ದುದರಿಂದ ನಾನು ಭೂಮಿಯ ಮೇಲೆ ಬೀಳುವಂತೆ ನನ್ನ ತಲೆಯ ಮೇಲೆ ಒದೆಯುವುದು ಅವನಿಗೆ ಸಾಧ್ಯವಿರಲಿಲ್ಲ. ಅದಕ್ಕೆ ತಲೆಯನ್ನು ಬಾಗಿ ಕೂಡ್ರವಂತೆ ಅವನು ಸನ್ನೆ ಮಾಡಿದ.ನಾನು ಬಹಳ ಚಲೋ ಪಾತ್ರ ಮಾಡುತ್ತೇನೆನ್ನುವ ಹಮ್ಮುನನ್ನಲ್ಲಿ ತುಂಬಿಕೊಂಡಿತ್ತು ನಾನು ಅವನ ಯಾವ ಸನ್ನೆಯನ್ನೂ ಗಮನಿಸಲೇ ಇಲ್ಲ.ನನ್ನನ್ನು ಒದೆದ ಮೇಲೆ ಮುಂದಿನ ಮಾತು ಅವನದೆ ಇತ್ತು. ಒದೆಯದ ಹೊರತು ಅವನಿಗೆ ಆ ಮಾತು ಬರಲಾರದು. ಅದನ್ನು ಉಪಾಯವಾಗಿ ಹೊಂದಿಸಿಕೊAಡು ಮಾತಾಡುವ ಕಲೆಯೂ ಪಾಟೀಲನಿಗೆ ಇರಲಿಲ್ಲ.

“ ಏ! ನಿನ್ನ ತಲಿಗೆ ಒದೆಯೋ ಸೀನೈತೆ ಕುಂದ್ರೋ” ಎಂದು ಅವನು ಸಾವಕಾಶವಾಗಿ ಪಿಸುಗುಟ್ಟಿದ. ನಮ್ಮ ದುರ್ದೈವಕ್ಕೆ ಮೈಕು ಬಹಳ ಸೂಕ್ಷ್ಮವಿದ್ದುದರಿಂದ ಅವನ ಆ ಪಿಸು ಮಾತನ್ನು ಅದು ಹಿಡಿದುಕೊಂಡು “ಎ! ಒದೆಯೋ ಸೀನೈತೆ ಕುಂದ್ರೋ” ಎಂದು ಜನರ ಕಿವಿ ತಮಟೆಗಳಿಗೆಲ್ಲಾ ಮುಟ್ಟಿಸಿ ಬಿಟ್ಟಿತು. ಆ ಡಾಯಲಾಗನ್ನು ಕೇಳಿದ ಪ್ರೇಕ್ಷಕರಲ್ಲಿ ಕುಳಿತಿದ್ದ ಯಾವನೋ ಓರ್ವ ಪಡ್ಡೆ ಹುಡುಗ “ಅವನ್ನ ಕುಂದ್ರಸಿ ಯಾಕ ಒದೀತೀದಿ ನಿಂದ್ರಿಸೇ ಒದ್ದು ಬಿಡು” ಎಂದು ಜೋರಾಗಿ ಕೂಗಿದ್ದುದರಿಂದ ಜನರೆಲ್ಲಾ ಗೊಳ್ಳನೇ ನಕ್ಕು ಬಿಟ್ಟರು. ಪ್ರೇಕ್ಷಕರ ಜೊತೆಯಲ್ಲಿ ಕುಳಿತಿದ್ದ ದೇವರಾಜ ಅರಸರೂ ಚಪ್ಪಾಳೆ ಹೊಡೆದು ನಕ್ಕು ಬಿಟ್ಟರು. ಆ ನಂತರ ನಾನು ಕುಳಿತು ಅವನೊಡನೆ ಒದೆಯಿಸಿಕೊಂಡು ನಾಟಕ ಮುಕ್ತಾಯವಾಯಿತು.

ಸ್ಟೇಜಿನ ಹಿಂದೆ ಹೋಗಿ ಕಿರೀಟ ತೆಗೆದಿಟ್ಟು, ಹಿಂದೆ ಕಟ್ಟಿದ ಗೌನು ಬಿಚ್ಚಿಕೊಳ್ಳುತ್ತಿದ್ದೆ, ಕೆ.ಎಚ್.ಪಾಟೀಲರು ಅಲ್ಲಿಗೆ ಬಂದರು. ಅವರು ನಮ್ಮನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಹಾಸ್ಟೇಲಿಗೆ ಬಂದಾಗಲೆಲ್ಲಾ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರು. ನನ್ನ ಹತ್ತಿರ ಬಂದು ಕೈ ಹಿಡಿದುಕೊಂಡು ಬೆನ್ನು ತಟ್ಟಿದರು. “ಸ್ಟೇಜಿನ ಮ್ಯಾಲಿದ್ರ ಇಂವಗ ಖಬರ ಇರೋದಿಲ್ಲ.

ಮಾತು ಮರೀತಾನ ಮನಸ್ಯರ‍್ನೂ ಮರೀತಾನ” ಎಂದು ಹೇಳುತ್ತಾ ಒಂದು ಕೈ ಎತ್ತಿ ಹೊಡೆಯುವ ನಾಟಕ ಮಾಡಿದರು. ಅವರು ಹಾಗೆ ಮಾಡಿದ್ದರಿಂದ ನಾನು ಹೆದರಿ ಹಿಂದಕ್ಕೆ ಸರಿದು ಗೋಡೆಗೆ ಆತು ನಿಂತುಕೊAಡೆ. ದೇವರಾಜ ಅರಸರು, ಕಣವಿಯವರು, ರಂಗನಗೌಡರು, ಚವಾಣ ಅವರು ಮುಂತಾಗಿ ಊರಿನ ಪ್ರಮುಖರು ಅವರ ಹಿಂದೆ ಬಂದು ಬಬ್ರವಾಹನ ಕೃಷ್ಣನಿಗೆ (ಕೆ.ಎಚ್.ಪಾಟೀಲರಿಗೆ) ಹೆದರಿ ಹಿಂದೆ ಸರಿದು ನಿಂತದ್ದನ್ನು ನೋಡಿ ನಗಲಿಕ್ಕೆ ಶುರು ಮಾಡಿದ್ದರು.

ದೇವರಾಜ ಅರಸರು ಕ್ರಿಷ್ಟಗೌಡರ ಕೈ ಹಿಡಿದುಕೊಂಡು “ಅರ್ಜುನನ್ನಂತಾ ಅರ್ಜುನನ್ನು ಹೊಡೆದು ಕೆಡವಿದ, ಬಬ್ರುವಾಹನನ್ನು ಹೊಡಿಲಿಕ್ಕ ಹೋಗತೀರಲ್ರಿ ಪಾಟೀಲರ.ಆ ಬಬ್ರುವಾಹನನ್ನ ಹೊಡೆದರ ನೀವು ಕೌರವನ ಕಡಿಯವರು ಅಂತಾ ಹೇಳಬೇಕಾಗತ್ತ.” ಎಂದು ಹೇಳಿದಾಗ ಅಲ್ಲಿದ್ದವರೆಲ್ಲಾ ಬಾಯಿ ತುಂಬಾ ನಕ್ಕರು. ಕೆ.ಎಚ್.ಪಾಟೀಲರ ಮುಖದಲ್ಲಿಯೂ ನಗೆ ಉಕ್ಕಿ ಬಂತು.ಆದರೆ ಬಬ್ರುವಾಹನ ಮಾತ್ರ ಹೆದರಿ ಮುಖ ಸಪ್ಪಗೆ ಮಾಡಿಕೊಂಡು ಒಂದು ಮೂಲೆಯಲ್ಲಿ ನಿಂತಿದ್ದ.

“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :


  • ಕೊರಗಲ್ಲ ವಿರೂಪಾಕ್ಷಪ್ಪ – ಹಾವೇರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading