‘ಮುತ್ತನ್ನಿಟ್ಟು, ಕೈತುತ್ತು ನೀಡಿ, ಮಮತೆ ವಾತ್ಸಲ್ಯದ ಮತ್ತೊಂದು ಅರ್ಥವೇ ಇವಳು’…. ಕವಿಯತ್ರಿ ವಿಜಯಲಕ್ಷ್ಮಿ ನಾಗೇಶ್ ಅವರ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ….
ತನ್ನ ಹಡೆದವರ ತನ್ನ ತವರ ತೊರೆವವಳು
ಕನಸ ಕಟ್ಟಿ ಕಾಣದವರ ಕೈ ಹಿಡಿಯುವವಳು
ಭಾವನೆಗಳ ಬಂಧಿಸಿ ಬವಣೆಗಳನ್ನೇ ಹೊತ್ತು
ಬಾಳ ಪಥದಲ್ಲಿ ಬಾಗಿ ಬಾಗಿ ಸಾಗುವವಳು.!!
ನಮ್ಮನ್ನೆಲ್ಲಾ ಹೊತ್ತವಳು, ಸತ್ತು..ಬದುಕಿ
ನಮ್ಮನ್ನು ಹೆತ್ತವಳು ಜನುಮವನ್ನಿತ್ತವಳು.!
ತನ್ನ ನೋವ ಮರೆತು ಅಮೃತವನ್ನುಣಿಸಿದವಳು.!!
ಮುತ್ತನ್ನಿತ್ತು ಕೈತುತ್ತು ನೀಡಿ ಸಾಕಿ ಸಲುಹಿದವಳು
ಕನಸಿನ ಮೂಟೆಯನ್ನೊತ್ತು ಕಡೆಯವರೆಗೂ
ನನಸುಗಳ ನಿರೀಕ್ಷೆಯಲ್ಲೇ ನಡೆಯುವವಳು.!!
ಬಣ್ಣಿಸಲಿವಳ ಬಾರವು ಮಾತುಗಳು
ಇವಳಿಗಿವಳೇ ಸಾಟಿ ಎನಿಸಿದವಳು
ಭೂಮಿಯ ತೂಕದ ಭಗಿನಿ ಇವಳು
ಮಮತೆ ವಾತ್ಸಲ್ಯದ ಮತ್ತೊಂದು ಅರ್ಥವೇ ಇವಳು.!!
- ವಿಜಯಲಕ್ಷ್ಮಿ ನಾಗೇಶ್