‘ಇಬ್ಬನಿಯ ಮಳೆಗೆ ಹೂವು ಮೊಗದೋರಿ ನಲಿದಿತ್ತು ಚೆಲುವಿನ’ ….ಕವಿಯತ್ರಿ ವಿಜಯಲಕ್ಷ್ಮಿ ನಾಗೇಶ್ ಅವರ ಕವನವನ್ನು ತಪ್ಪದೆ ಓದಿ…
ಹೊತ್ತು ಗೊತ್ತಿಲ್ಲದೇ ಬಿತ್ತುವಾಸೆ
ಚಿತ್ತದೊಳು ಮೂಡಿದ ಅಕ್ಷರಗಳ.!
ನಿದಿರೆಯು ಹಾರಿ ಕಣ್ತೆರೆದು ನೋಡಲು
ಕವಿದಿದ್ದ ಮುಂಜಾನೆಯ ಮಬ್ಬುಗತ್ತಲು
ಮಿನುಗಿ ಮರೆಯಾಗುತ್ತಿದ್ದ
ತಾರೆಗಳು
ತೇಲಿ ಸಾಗಿದ್ದ ತಿಳಿಮೋಡಗಳ ಸಾಲು.!
ಮೂಡಣದ ಅಂಗಳವು
ಕೆಂಪೇರಿ
ಬಾನಾಡಿ ಹಾಡಿತ್ತು
ಗಗನದಿ ಹಾರಿ
ಇಬ್ಬನಿಯ ಮಳೆಗೆ ಹೂವು ಮೊಗದೋರಿ
ನಲಿದಿತ್ತು ಚೆಲುವಿನ
ನಗೆಯ ಬೀರಿ.!
ತಮವ ಕಳೆವ ತೇಜೋಮಯನೇ
ಜಗವ ಬೆಳಗ ಬಂದ ನೇಸರನೇ
ಜೀವ ಸಂಕುಲಕೆ ಚೈತನ್ಯವು ನೀನೇ
ನಮಿಸುವೆ ನಿನಗಿದೋ ನಭದೊಡೆಯನೇ!
- ವಿಜಯಲಕ್ಷ್ಮಿ ನಾಗೇಶ್
