ಬೇಡವೆಂದು ಹಣ್ಣು ತಿಂದು ಬಿಸಾಡುವ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಒಂದು ಅದ್ಬುತ ರೆಸಿಪಿ ಮಾಡಬಹುದು. ಅದು ಯಾವ ರೆಸಿಪಿ?… ಮಾಡೋದು ಹೇಗೆ ?…ಅಂತ ವೀಣಾ ಉದಯ ಪಟ್ಟಾಜೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಸಾಮಗ್ರಿಗಳು :
- ಕಿತ್ತಳೆ ಹಣ್ಣಿನ ಸಿಪ್ಪೆ – ಒಂದು ಬಟ್ಟಲು
- ಎಣ್ಣೆ – ಸ್ವಲ್ಪ
- ಬೆಲ್ಲ – ದೊಡ್ಡ ತುಂಡು
- ಹುಣಸೆ ಹುಳಿ – ಸ್ವಲ್ಪ
- ಮೆಣಸಿನ ಹುಡಿ – 2 ಸ್ಪೂನ್
- ಅರಿಶಿನ ಹುಡಿ – ಕಾಲು ಸ್ಪೂನ್
- ಸಾಸಿವೆ, ಮೆಣಸು, ಕರಿಬೇವು – ಒಗ್ಗರಣೆಗೆ
ಮಾಡುವ ವಿಧಾನ :
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ತುಂಡು ಮಾಡಬೇಕು. ನಂತರ ಅದನ್ನು ಕಂದು ಬಣ್ಣ ಬರುವ ತನಕ, ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು.
ಒಂದು ಬಟಲಿನಲ್ಲಿ ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆ ಹುಳಿಯನ್ನು ನೀರಲ್ಲಿ ಹಾಕಿ ರಸ ತೆಗೆದು, ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸ್ವಲ್ಪ ಉಪ್ಪು, ದೊಡ್ಡ ತುಂಡು ಬೆಲ್ಲ, 2 ಸ್ಪೂನ್ ಮೆಣಸಿನ ಹುಡಿ, ಕಾಲು ಸ್ಪೂನ್ ಅರಿಶಿನ ಹುಡಿ, ಎಲ್ಲಾ ಒಟ್ಟಿಗೆ ಹಾಕಿ ಕುದಿಸಬೇಕು.
ಅದಕ್ಕೆ ಹುರಿದಿಟ್ಟುಕೊಂಡ ಕಿತ್ತಳೆ ಸಿಪ್ಪೆಯನ್ನು ಹಾಕಿ ಮತ್ತೆ ಕುದಿಸಬೇಕು. ನಂತರ ಅದಕ್ಕೆ ಸಾಸಿವೆ, ಮೆಣಸು, ಕರಿಬೇವು ಒಗ್ಗರಣೆ ಹಾಕಿ.
ಅನ್ನದ ಜೊತೆಗೆ ಊಟ ಮಾಡಲು ತುಂಬಾ ರುಚಿಯಾಗಿರುತ್ತೆ.
- ವೀಣಾ ಉದಯ ಪಟ್ಟಾಜೆ
